ಊಟಕ್ಕೆ ಪರದಾಟ, ವಾಪಸ್ಸಾಗಲು ದುಡ್ಡಿನ ಅಭಾವ, ಟ್ಯಾಕ್ಸಿ ಚಾಲಕನಿಂದ ವಂಚನೆ|ಮುಂಬೈ ನಗರದ ಹೋಟೆಲ್‌ನಲ್ಲಿ ಅತಂತ್ರ ಸ್ಥಿತಿಯಲ್ಲಿರುವ ಕನ್ನಡಿಗರು| ಕನ್ನಡಿಗರಿಗೆ ಟ್ಯಾಕ್ಸಿ ಚಾಲಕನಿಂದ ಮೋಸ|
ಗಂಗಾವತಿ(ಮಾ.30): ಅಜ್ಮೀರ ಪ್ರವಾಸಕ್ಕೆ ತೆರಳಿದ್ದ ಗಂಗಾವತಿ ನಗರದ ನಾಲ್ವರು ಅತಂತ್ರ ಸ್ಥಿತಿಯಲ್ಲಿದ್ದಾರೆ. ಭಾರತ್ ಲಾಕ್‌ಡೌನ್ ಆಗಿರುವುದರಿಂದ ಸಂಚಾರಕ್ಕೂ ಸಮಸ್ಯೆಯಾಗಿ ಮುಂಬೈ ನಗರದ ಹೋಟೆಲ್‌ನಲ್ಲಿ ಅತಂತ್ರ ಸ್ಥಿತಿಯಲ್ಲಿದ್ದಾರೆ. ಮುಂಬೈಯಲ್ಲಿ ಕನ್ನಡಿಗರು ಪರದಾಡುತ್ತಿದ್ದರೂ ಯಾರೂ ಸ್ಪಂದಿಸುತ್ತಿಲ್ಲ ಎಂದು ಕೊರಗುತ್ತಿದ್ದಾರೆ.
ಮಾ. 14ರಂದು ಗಂಗಾವತಿಯಿಂದ ಅಜ್ಮೀರಗೆ ತೆರಳಿದ್ದ ಗಂಗಾವತಿ ನಗರದ ಇಂದಿರಾ ನಗರದ ಕಾಸಿಂಸಾಬ್, ಪತ್ನಿ ಅಜಿಬನ್ನಿ, ಮಕ್ಕಳಾದ ರಜಾಕ್, ಚಿಕ್ಕಪ್ಪನ ಮಗ ನೂರುಪಾಷ ಅತಂತ್ರಕ್ಕೆ ಒಳಗಾಗಿದ್ದಾರೆ.
ಮುಂಬೈಯಲ್ಲಿ ವಾಸ್ತವ್ಯ:
ಅಜ್ಮೀರಗೆ ತೆರಳಿದ್ದ ಗಂಗಾವತಿಯ ನಾಲ್ವರು ಕೊರೋನಾ ವೈರಸ್ ಉಲ್ಬಣಗೊಂಡ ಸುದ್ದಿ ಹಬ್ಬುತ್ತಿದ್ದತೆಯೇ ಅಜ್ಮೀರ್‌ದಿಂದ ರೈಲು, ಬಸ್ಸು, ವಿಮಾನ ಸೇರಿದಂತೆ ಎಲ್ಲ ರೀತಿಯ ಸಂಚಾರ ವಾಹನ ಸೌಕರ್ಯ ಕಡಿತಗೊಳಿಸಲಾಯಿತು. ನಾಲ್ವರು ಹೇಗೋ ವಾಹನ ವ್ಯವಸ್ಥೆ ಮಾಡಿಕೊಂಡು ಮುಂಬೈ ಸೇರಿದ್ದಾರೆ. ಆದರೆ ಇಲ್ಲಿಯೂ ಸಹ ಅವರಿಗೆ ಯಾವುದೇ ರೀತಿಯ ವಾಹನಗಳ ವ್ಯವಸ್ಥೆ ಇಲ್ಲದ ಕಾರಣ ಮುಂಬೈ ನಗರದ ಹೋಟೆಲ್ ಒಂದರಲ್ಲಿ ದಿನಕ್ಕೆ ಸಾವಿರ ರುಪಾಯಿ ಬಾಡಿಗೆಯಂತೆ ತಂಗಿದ್ದಾರೆ. ಈಗ 8 ದಿನಗಳಾಗಿದ್ದು ಹೊಟೆಲ್‌ನಲ್ಲಿ ಗ್ಯಾಸ್‌ನಿಂದ ಅಡುಗೆ ಮಾಡಿಕೊಳ್ಳುತ್ತಿದ್ದಾರೆ. ಈಗ ಅವರನ್ನು ಹೊಟೆಲ್ ಮಾಲೀಕರು ಬಾಡಿಗೆ ನೀಡದ ಕಾರಣ ಹೊರ ಹೋಗು ಎಂದು ತಾಕೀತು ಮಾಡುತ್ತಿದ್ದಾರೆ. ಅಲ್ಲದೇ ಅವರಿಗೆ ಹಣದ ಅಭಾವ ಉಂಟಾಗಿದೆ.
ಲಾಕ್‌ಡೌನ್: ಆಂಧ್ರದಲ್ಲಿ ಸಂಕಷ್ಟಕ್ಕೆ ಸಿಲುಕಿದ ರಾಜ್ಯದ ವಿದ್ಯಾರ್ಥಿಗಳು
ಟ್ಯಾಕ್ಸಿ ಚಾಲಕನಿಂದ ವಂಚನೆ:
ಮುಂಬೈಯಲ್ಲಿ ಅತಂತ್ರ ಸ್ಥಿತಿಯಲ್ಲಿದ್ದ ನಾಲ್ವರಗೆ ಅಲ್ಲಿಯ ಟ್ಯಾಕ್ಸಿ ಚಾಲಕ ವಂಚನೆ ಮಾಡಿದ್ದಾನೆ. ಮುಂಬೈಯಿಂದ ಗಂಗಾವತಿಗೆ ಬರಲು ಟ್ಯಾಕ್ಸಿಯಾತ 15 ಸಾವಿರ ನಿಗದಿ ಪಡಿಸಿಕೊಂಡಿದ್ದ. ಇದಕ್ಕೆ ಅಡ್ವಾನ್ಸ್‌ಗಾಗಿ 5 ಸಾವಿರ ಪಡೆದಿದ್ದ. ನಂತರ ಈ ಚಾಲಕ ಟ್ಯಾಕ್ಸಿ ತರದೆ ವಂಚನೆ ಮಾಡಿ ಪರಾರಿಯಾಗಿದ್ದಾನೆ. ಇದರಿಂದ ಗಂಗಾವತಿಯ ನಾಲ್ವರು ಈಗ ಅತಂತ್ರ ಸ್ಥಿತಿಯಲ್ಲಿದ್ದು, ಊಟಕ್ಕೆ ತೊಂದರೆಯಾಗಿದ್ದು, ಗಂಗಾವತಿಗೆ ಬರಲು ಸಾಧ್ಯವಾಗದಂತಾಗಿದೆ.