ನಿಜಾಮುದ್ದೀನ್‌ಗೆ ತೆರಳಿದ್ದವರು ಕೂಡಲೇ ತಿಳಿಸಿ, ಇಲ್ಲಿದೆ ಸಹಾಯವಾಣಿ ಸಂಖ್ಯೆ

By Kannadaprabha News  |  First Published Apr 1, 2020, 11:31 AM IST

ನಿಜಾಮುದ್ದೀನ್‌ಗೆ ತೆರಳಿದ್ದವರು ಕೂಡಲೇ ತಿಳಿಸಿ| ಮರ್ಕಾಜ್‌ನಲ್ಲಿ ಭಾಗವಹಿಸಿದ್ದವರು ಸಹಾಯವಾಣಿ- 080-29711171ಗೆ ಕರೆ ಮಾಡಿ


ಬೆಂಗಳೂರು(ಏ.01): ದೆಹಲಿಯ ನಿಜಾಮುದ್ದೀನ್‌ನಲ್ಲಿ ನಡೆದ ಮರ್ಕಾಜ್‌ನಲ್ಲಿ ಭಾಗವಹಿಸಿದ್ದ ವಿವಿಧ ರಾಜ್ಯಗಳ ಅನೇಕರಲ್ಲಿ ಕೊರೋನಾ ಸೋಂಕು ದೃಢಪಟ್ಟಿರುವ ಹಿನ್ನೆಲೆಯಲ್ಲಿ ಮರ್ಕಾಜ್‌ನಲ್ಲಿ ಭಾಗವಹಿಸಿದ್ದ ರಾಜ್ಯದ ಜನತೆಯೂ ಸ್ವಯಂ ಪ್ರೇರಿತವಾಗಿ ಆಗಮಿಸಿ ವೈದ್ಯಕೀಯ ಪರೀಕ್ಷೆಗೆ ಒಳಪಡುವಂತೆ ಆರೋಗ್ಯ ಇಲಾಖೆ ಮನವಿ ಮಾಡಿದೆ.

ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಇಲಾಖೆ ಹೆಚ್ಚುವರಿ ಮುಖ್ಯಕಾರ್ಯದರ್ಶಿ ಜಾವೇದ್‌ ಅಖ್ತರ್‌, ಮಾ.8 ರಿಂದ 28ರವರೆಗೆ ನಡೆದ ಸಮಾವೇಶದಲ್ಲಿ ಭಾಗವಹಿಸಿದ್ದವರು ಎನ್ನಲಾದ 78 ಮಂದಿಯನ್ನು ಈಗಾಗಲೇ ಗುರುತಿಸಲಾಗಿದೆ. ಜೊತೆಗೆ ಇವರೊಂದಿಗೆ ಸಂಪರ್ಕ ಹೊಂದಿದ್ದವರನ್ನು ಪತ್ತೆ ಹಚ್ಚಿ ಎಲ್ಲರಿಗೂ ಕಡ್ಡಾಯವಾಗಿ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗುವುದು. ರಾಜ್ಯದಲ್ಲಿ ತಂಗಿರುವ ತಬ್ಲೀಕ್‌ ಜಮಾತ್‌ನ ವಿದೇಶಿ ಸದಸ್ಯರನ್ನೂ ಸಹ ಪತ್ತೆ ಮಾಡಿ ಪ್ರತ್ಯೇಕ ನಿಗಾ ವಹಿಸಲಾಗುವುದು. ಹೀಗಾಗಿ ಇಂತಹವರು ಸ್ವಯಂ ಪ್ರೇರಿತವಾಗಿ 080-29711171 ಸಂಖ್ಯೆ ಸಹಾಯವಾಣಿಗೆ ಸಂಪರ್ಕಿಸುವಂತೆ ಮನವಿ ಮಾಡಿದರು.

Tap to resize

Latest Videos

50 ಸದಸ್ಯರ ಕ್ವಾರಂಟೈನ್‌: ಈಗಾಗಲೇ ಮುನ್ನೆಚ್ಚರಿಕಾ ಕ್ರಮವಾಗಿ ರಾಜ್ಯದ ವಿವಿಧ ಭಾಗಗಳಲ್ಲಿ ತಂಗಿರುವ ತಬ್ಲೀಕ್‌ ಜಮಾತ್‌ನ 50 ವಿದೇಶಿ ಸದಸ್ಯರನ್ನು ಅವರು ವಾಸವಿರುವ ಸ್ಥಳಗಳಲ್ಲೇ ಪ್ರತ್ಯೇಕವಾಗಿಡಲಾಗಿದೆ. ಈ ಪೈಕಿ 19 ಮಂದಿ ಕಿರ್ಗಿಸ್ತಾನ್‌, 20 ಮಂದಿ ಇಂಡೋನೇಷ್ಯಾ, 4 ಮಂದಿ ದಕ್ಷಿಣ ಆಫ್ರಿಕಾ, 3 ಮಂದಿ ಗ್ಯಾಂಬಿಯಾ ಹಾಗೂ ಅಮೇರಿಕಾ, ಯುಕೆ, ಫ್ರಾನ್ಸ್‌, ಕೀನಾ ದೇಶದ ತಲಾ ಇಬ್ಬರು ಇದ್ದಾರೆ. ಇವರಲ್ಲಿ ಕೆಲವರು ನಿಜಾಮುದ್ದೀನ್‌ನಲ್ಲಿ ನಡೆದ ಮರ್ಕಾಜ್‌ನಲ್ಲಿ ಹಾಜರಾಗಿದ್ದರು ಎಂಬ ಮಾಹಿತಿ ಇದೆ.

ದೆಹಲಿಯ ನಿಜಾಮುದ್ದೀನ್‌ನಲ್ಲಿ ನಡೆದ ಮರ್ಕಾಜ್‌ಗೆ ಹಾಜರಾಗಿದ್ದ ಕರ್ನಾಟಕದ ವಿವಿಧ ಜಿಲ್ಲೆಗಳಿಗೆ ಸೇರಿದ ಸುಮಾರು 300 ನಿವಾಸಿಗಳನ್ನು ಕ್ವಾರೆಂಟೈನ್‌ ಮಾಡಲಾಗುತ್ತಿದೆ. ವೈದ್ಯಕೀಯ ತಪಾಸಣೆಗೂ ಒಳಪಡಿಸಲಾಗುತ್ತದೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ದೆಹಲಿಯ ಜಮಾತ್‌ ಮಸೀದಿಯಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮದಲ್ಲಿ ರಾಜ್ಯದ ಸುಮಾರು 50ಕ್ಕೂ ಹೆಚ್ಚು ಮಂದಿ ಭಾಗವಹಿಸಿರುವುದು ಖಚಿತವಾಗಿದೆ. ಬೆಂಗಳೂರು, ಬೀದರ್‌, ಗುಲ್ಬರ್ಗಾ, ಬಳ್ಳಾರಿ ಭಾಗದವರು ಎಂದು ತಿಳಿದು ಬಂದಿದ್ದು, ಈಗಾಗಲೇ ಹಲವು ಮಂದಿಯನ್ನು ಕ್ವಾರೆಂಟೈನ್‌ ಮಾಡಲಾಗಿದೆ.

- ಬಿ.ಶ್ರೀರಾಮುಲು, ಆರೋಗ್ಯ ಸಚಿವ

click me!