ತಿಂಗಳದ ಅಂತ್ಯವರೆಗೆ ಬೆಳಗ್ಗೆ 7 ರಿಂದ ರಾತ್ರಿ 9 ಗಂಟೆವರೆಗೆ ಪಡೆಯಲು ಅವಕಾಶ: ಡಿಸಿ ಕ್ಯಾ.ರಾಜೇಂದ್ರ| ವಿತರಣೆಗೆ ಅಗತ್ಯವಿರುವ ಸೂಕ್ತ ಸ್ಥಳಾವಕಾಶ ಮತ್ತು ಸುಚಿತ್ವ ಕಾಪಾಡಿಕೊಳ್ಳತಕ್ಕದ್ದು| ನ್ಯಾಯಬೆಲೆ ಅಂಗಡಿಕಾರರು ಮಾಸ್ಕ್ ಅಥವಾ ಕರವಸ್ತ್ರ ಹಾಗೂ ಹ್ಯಾಂಡ್ ಸ್ಯಾನಿಟೈಸ್‌ರ್ ಕಡ್ಡಾಯವಾಗಿ ಬಳಸತಕ್ಕದ್ದು|
ಬಾಗಲಕೋಟೆ(ಏ.01): ಕೊರೋನಾ ವೈರಸ್ ಭೀತಿ ಹಿನ್ನೆಲೆಯಲ್ಲಿ ಸಾರ್ವಜನಿಕರ ಹಿತದೃಷ್ಟಿಯಿಂದ ಪಡಿತರ ಚೀಟಿದಾರರಿಗೆ ಏಪ್ರಿಲ್, ಮೇ ಮಾಹೆಯ 2 ತಿಂಗಳ ಪಡಿತರ ಧಾನ್ಯವನ್ನು ಏ.1 ರಿಂದ ತಿಂಗಳದ ಅಂತ್ಯವರೆಗೆ ಬೆಳಗ್ಗೆ 7 ರಿಂದ ರಾತ್ರಿ 9 ಗಂಟೆವರೆಗೆ ವಿತರಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಕ್ಯಾ.ರಾಜೇಂದ್ರ ತಿಳಿಸಿದ್ದಾರೆ.
ಜಿಲ್ಲೆಯಲ್ಲಿರುವ ಒಟ್ಟು 700 ನ್ಯಾಯಬೆಲೆ ಅಂಗಡಿಗಳ ಮೂಲಕ 46,266 ಅಂತ್ಯೋದಯ, 3,66,300 ಬಿಪಿಎಲ್ ಹಾಗೂ 25044 ಎಪಿಎಲ್ ಚೀಟಿದಾರರಿಗೆ ಪಡಿತರ ಧಾನ್ಯವನ್ನು ವಿತರಿಸಲಾಗುತ್ತಿದೆ. ನ್ಯಾಯಬೆಲೆ ಅಂಗಡಿಕಾರರಿಗೆ ಆಹಾರ ಇಲಾಖೆಯಿಂದ ಗುರುತಿನ ಚೀಟಿಯನ್ನು ನೀಡಲಾಗಿದ್ದು, ಪ್ರತಿದಿನ ಬೆಳಗ್ಗೆ 7ರಿಂದ ರಾತ್ರಿ 9 ಗಂಟೆಯವರೆಗೆ ವಿತರಿಸಬೇಕು. ವಿತರಣೆಗೆ ಅಗತ್ಯವಿರುವ ಸೂಕ್ತ ಸ್ಥಳಾವಕಾಶ ಮತ್ತು ಸುಚಿತ್ವ ಕಾಪಾಡಿಕೊಳ್ಳತಕ್ಕದ್ದು. ನ್ಯಾಯಬೆಲೆ ಅಂಗಡಿಕಾರರು ಮಾಸ್ಕ್ ಅಥವಾ ಕರವಸ್ತ್ರ ಹಾಗೂ ಹ್ಯಾಂಡ್ ಸ್ಯಾನಿಟೈಸ್‌ರ್ ಕಡ್ಡಾಯವಾಗಿ ಬಳಸತಕ್ಕದ್ದು. ಪಡಿತರ ಚೀಟಿಯಲ್ಲಿರುವ ಒಬ್ಬ ಸದಸ್ಯರು ಮಾತ್ರ ಬಂದು ಪಡಿತರ ಪಡೆದುಕೊಳ್ಳಬೇಕು. ಪ್ರತಿದಿನ 50ರಿಂದ 70 ಪಡಿತರ ಚೀಟಿದಾರರನ್ನು ಮಾತ್ರ ಕರೆಯಿಸಿ ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ಅಂಗಡಿ ಮುಂದೆ ಚೌಕ್ ಬಾಕ್ಸ್ ಹಾಕಿ ನಿಲ್ಲಿಸಿ ವಿತರಿಸಬೇಕು ಎಂದು ಸೂಚಿಸಿದ್ದಾರೆ.
ಕೊರೋನಾ ಭೀತಿ: ಬಡ ಕುಟುಂಬಗಳಿಗೆ ಉಚಿತ ಆಹಾರ ಕಿಟ್ ವಿತರಣೆ
ಈ ಮಾಹೆಯ ಪಡಿತರ ವಿತರಣೆಯಲ್ಲಿ ಬೆರಳಚ್ಚು ಕಡ್ಡಾಯ ಇರುವುದಿಲ್ಲ. ಪ್ರತಿ ಪಡಿತರ ಚೀಟಿದಾರರು ಕಡ್ಡಾಯವಾಗಿ ಪಡಿತರ ಚೀಟಿಯೊಂದಿಗೆ ಮೊಬೈಲ್ ತೆಗೆದುಕೊಂಡು ಬಂದು ಮೊಬೈಲ್ ಸಂಖ್ಯೆ ನೀಡಿ ತಂತ್ರಾಂಶದಿಂದ ಬಂದ ಒಟಿಪಿಯನ್ನು ಅಂಗಡಿಕಾರರಿಗೆ ನೀಡಿ ಪಡಿತರ ಪಡೆಯಬಹುದಾಗಿದೆ. ಪರಿತರದಾರರು ಕಡ್ಡಾಯವಾಗಿ ಮಾಸ್ಕ್ ಅಥವಾ ಕರವಸ್ತ್ರ ಧರಿಸಿ ಪಡಿತರ ಪಡೆದುಕೊಳ್ಳಬಹುದಾಗಿದೆ ಎಂದು ತಿಳಿಸಿದ್ದಾರೆ.
ವಿತರಣೆ ವಿವರ
ಅಂತ್ಯೋದಯ ಪಡಿತರ ಚೀಟಿದಾರರಿಗೆ 70 ಕೆಜಿ ಅಕ್ಕಿ, ಬಿಪಿಎಲ್ ಕಾರ್ಡ್‌ದರರಿಗೆ ಪ್ರತಿ ಯುನಿಟ್‌ಗೆ 10 ಕೆಜಿ ಅಕ್ಕಿ ಹಾಗೂ 4 ಕೆಜಿ ಗೋಧಿ ಉಚಿತವಾಗಿ ನೀಡಲಾಗುತ್ತಿದೆ. ಎಪಿಎಲ್ ಕಾರ್ಡ್‌ದಾರರಿಗೆ ಏಕ ಸದಸ್ಯತ್ವಕ್ಕೆ 10 ಕೆಜಿ ಅಕ್ಕಿ, 2 ಮತ್ತು ಹೆಚ್ಚಿನ ಸದಸ್ಯತ್ವಕ್ಕೆ 20 ಕೆಜಿ ಅಕ್ಕಿಯನ್ನು ಪ್ರತಿ ಕೆಜಿಗೆ 15ರಂತೆ ವಿತರಿಸಲಾಗುತ್ತಿದೆ. ಗ್ರಾಮೀಣ ಭಾಗದ ಅನಿಲ ರಹಿತ ಅಂತ್ಯೋದಯ ಮತ್ತು ಬಿಪಿಎಲ್ ಕಾರ್ಡ್‌ದಾರರಿಗೆ ಪ್ರತಿ ಲೀಟರ್‌ಗೆ 35 ರಂತೆ 6 ಲೀಟರ್ ಸೀಮೆ ಎಣ್ಣೆ ಹಾಗೂ ಒಪ್ಪಿಗೆ ನೀಡಿದ ಗ್ಯಾಸ್ ಪಡಿತರ ಚೀಟಿದಾರರಿಗೆ 2 ಲೀಟರ್ ಸೀಮೆ ಎಣ್ಣೆ ವಿತರಿಸಲಾಗುತ್ತಿದೆ.