ಲಾಕ್‌ಡೌನ್‌: ನೊಂದ ಕುಟುಂಬಗಳ ಹಸಿವು ನೀಗಿಸುವ ಕಾರ್ಯಕ್ಕೆ ಮುಂದಾದ HDK

By Kannadaprabha NewsFirst Published Apr 2, 2020, 12:20 PM IST
Highlights

ನಿರಾಶ್ರಿತರಿಗೆ ಎಚ್‌ಡಿಕೆ ಜನತಾ ದಾಸೋಹ|ಲಾಕ್‌ಡೌನ್‌ ಮುಗಿಯುವವರೆಗೆ ಸಾವಿರ ಮಂದಿಗೆ ಪ್ರತಿದಿನ ಊಟ|ಲಾಕ್‌ಡೌನ್‌ ಅವಧಿಯಲ್ಲಿ ನಿತ್ಯ ಆಹಾರ ಪೂರೈಸುವುದು ‘ಎಚ್‌ಡಿಕೆ ಜನತಾ ದಾಸೋಹ’ದ ಗುರಿ|

ಚನ್ನಪಟ್ಟಣ(ಏ.02): ಲಾಕ್‌ಡೌನ್‌ನಿಂದಾಗಿ ಸಂಕಷ್ಟಕ್ಕೆ ಸಿಲುಕಿರುವ ತಾಲೂಕಿನ ಸಾವಿರಾರು ವಲಸೆ ಕೂಲಿ ಕಾರ್ಮಿಕರ ನೆರವಿಗೆ ಕ್ಷೇತ್ರದ ಶಾಸಕರೂ ಆಗಿರುವ ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ ಸಹಾಯ ಹಸ್ತ ಚಾಚಿದ್ದು, ಎಚ್‌ಡಿಕೆ ಜನತಾ ದಾಸೋಹದ ಮೂಲಕ ನೊಂದ ಕುಟುಂಬಗಳ ಹಸಿವು ನೀಗಿಸುವ ಕಾರ್ಯಕ್ಕೆ ಚಾಲನೆ ನೀಡಿದ್ದಾರೆ.

ಬುಧವಾರ ತಾಲೂಕು ಜೆಡಿಎಸ್‌ ಮುಖಂಡರು ಎಚ್‌ಡಿಕೆ ಜನತಾ ದಾಸೋಹಕ್ಕೆ ಚಾಲನೆ ನೀಡಿ, ನಗರದ ಕೆಎಚ್‌ಬಿ ಬಡಾವಣೆಯ ಆಸುಪಾಸಿನಲ್ಲಿರುವ ರಾಯಚೂರು, ಬಳ್ಳಾರಿ, ಗುಲ್ಬರ್ಗಾ, ಆಂಧ್ರ ಮೂಲದ ಸಾವಿರಾರು ಕಾರ್ಮಿಕರಿಗೆ ಊಟ ವಿತರಣೆ ಮಾಡುವ ಮೂಲಕ ದಾಸೋಹವನ್ನು ಪ್ರಾರಂಭಿಸಿದ್ದಾರೆ.

ಈ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ತಾಲೂಕು ಜೆಡಿಎಸ್‌ ಅಧ್ಯಕ್ಷ ಎಚ್‌.ಸಿ.ಜಯಮುತ್ತು, ಲಾಕ್‌ಡೌನ್‌ನಿಂದಾಗಿ ಇಡೀ ದೇಶ ಸಂಕಷ್ಟಕ್ಕೆ ಸಿಲುಕಿದೆ. ಈ ಸಮಯದಲ್ಲಿ ಬಡವರು, ವಲಸೆ ಕಾರ್ಮಿಕರು, ನಿರ್ಗತಿಕರು, ದುರ್ಬಲರು ಹಸಿವಿನಿಂದ ಬಳಲುವಂತಾಗಿದೆ. ಯಾರೂ ಹಸಿವಿನಿಂದ ಇರ ಬಾರದು ಎಂಬ ಕಾರಣಕ್ಕೆ ಕುಮಾರಸ್ವಾಮಿ ಅವರು ಸೂಚನೆ ನೀಡಿದ್ದು ಅದರಂತೆ ಎಚ್‌ಡಿಕೆ ಜನತಾ ದಾಸೋಹ ಆರಂಭಿಸಲಾಗಿದೆ ಎಂದರು.

'ಜೀವದ ಹಂಗು ತೊರೆದು ಕೊರೋನಾ ವಿರುದ್ಧ ವೈದ್ಯರ ಹೋರಾಟ: ಡಾಕ್ಟರ್ಸ್‌ಗೆ ಶೀಘ್ರ ಸುರಕ್ಷತಾ ಕಿಟ್‌'

ಲಾಕ್‌ಡೌನ್‌ ಅವಧಿಯಲ್ಲಿ ನಿತ್ಯ ಆಹಾರ ಪೂರೈಸುವುದು ‘ಎಚ್‌ಡಿಕೆ ಜನತಾ ದಾಸೋಹ’ದ ಗುರಿಯಾಗಿದೆ. ಇದರ ಅಡಿಯಲ್ಲಿ ಬೆಳಗ್ಗೆ, ಮಧ್ಯಾಹ್ನ ಮತ್ತು ರಾತ್ರಿ ಪ್ರತಿ ಅವಧಿಯಲ್ಲೂ ಸಾವಿರ ಮಂದಿಗೆ ಊಟ ನೀಡಲಾಗುತ್ತದೆ. ಈಗಾಗಲೇ ಕೂಲಿ ಇಲ್ಲದೆ, ಹೊತ್ತು ಹೊತ್ತಿಗೆ ಊಟವೂ ಇಲ್ಲದೆ ಸಂಕಷ್ಟದಲ್ಲಿರುವ ಜನತೆಗೆ ಈ ಯೋಜನೆ ನೆರವಾಗಲಿದೆ ಎಂದು ಅಭಿಪ್ರಾಯಪಟ್ಟರು.

ಎಚ್‌ಡಿಕೆಯಿಂದ ದಿನಸಿ:

ಜನತಾ ದಾಸೋಹಕ್ಕೆ ಬೇಕಾದ ದಿನಸಿ ಪದಾರ್ಥಗಳನ್ನು ಕುಮಾರಸ್ವಾಮಿ ಅವರೇ ಪೂರೈಕೆ ಮಾಡಲಿದ್ದು, ಸ್ಥಳೀಯ ಮುಖಂಡರು ಸಂಗ್ರಹಿಸಿ, ಅಡುಗೆ ಮಾಡಿಸಿ ಬಡವರಿಗೆ ವಿತರಣೆ ಮಾಡುವ ಕೆಲಸ ಮಾಡಲಿದ್ದಾರೆ. ತಾಲೂಕು ಜೆಡಿಎಸ್‌ನ ಎಲ್ಲಾ ಮುಖಂಡರು ಮತ್ತು ಕಾರ್ಯಕರ್ತರು ಕೊರೋನಾ ಮುನ್ನೆಚ್ಚರಿಕೆಗೆ ಅನುಗುಣವಾಗಿ ಜನತಾ ದಾಸೋಹ ಕಾರ್ಯಕ್ರಮಕ್ಕೆ ಕೈ ಜೋಡಿಸಿದ್ದಾರೆ.

ಪಿಎಲ್‌ಡಿ ಬ್ಯಾಂಕ್‌ ಅಧ್ಯಕ್ಷ ಗೋವಿಂದಹಳ್ಳಿ ನಾಗರಾಜು, ಮುಖಂಡರಾದ ಕರಿಯಪ್ಪ, ಕುಕ್ಕೂರುದೊಡ್ಡಿ ಜಯರಾಂ, ಎಂಜಿಕೆ ಪ್ರಕಾಶ್‌, ನಗರಸಭಾ ಮಾಜಿ ಸದಸ್ಯರಾದ ಜೆಸಿಬಿ ಲೋಕೇಶ್‌, ಉಮಾಶಂಕರ್‌, ಜಬಿವುಲ್ಲಖಾನ್‌ ಘೋರಿ, ಮಧು ಉಪಸ್ಥಿತರಿದ್ದರು.
 

click me!