ಮಂಗಳೂರು: ಮೀನು, ಮಾಂಸ, ಮೊಟ್ಟೆಸಾಗಾಟಕ್ಕೆ ಅನುಮತಿ

By Kannadaprabha NewsFirst Published Mar 29, 2020, 8:21 AM IST
Highlights

ಮೀನು, ಮಾಂಸ, ಮೊಟ್ಟೆಹಾಗೂ ಪಶು ಆಹಾರಗಳು ಅಗತ್ಯ ವಸ್ತುಗಳ ಪಟ್ಟಿಯಲ್ಲಿ ಇರುವುದರಿಂದ ಇವುಗಳ ಸಾಗಾಟಕ್ಕೆ ಮುಕ್ತ ಅವಕಾಶ ನೀಡುವಂತೆ ರಾಜ್ಯ ಪಶುಸಂಗೋಪನಾ ಇಲಾಖೆ ಸುತ್ತೋಲೆ ಹೊರಡಿಸಿದೆ.

ಮಂಗಳೂರು(ಮಾ.29): ಮೀನು, ಮಾಂಸ, ಮೊಟ್ಟೆಹಾಗೂ ಪಶು ಆಹಾರಗಳು ಅಗತ್ಯ ವಸ್ತುಗಳ ಪಟ್ಟಿಯಲ್ಲಿ ಇರುವುದರಿಂದ ಇವುಗಳ ಸಾಗಾಟಕ್ಕೆ ಮುಕ್ತ ಅವಕಾಶ ನೀಡುವಂತೆ ರಾಜ್ಯ ಪಶುಸಂಗೋಪನಾ ಇಲಾಖೆ ಸುತ್ತೋಲೆ ಹೊರಡಿಸಿದೆ. ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಕೋಳಿ ಮೊಟ್ಟೆಅಲ್ಲದೆ ಪಶು ಆಹಾರ ಸಾಗಾಟಕ್ಕೆ ಸಂಕಷ್ಟಬಂದಿರುವ ಹಿನ್ನೆಲೆಯಲ್ಲಿ ಇಲಾಖಾ ಕಾರ್ಯದರ್ಶಿ ಎ.ಬಿ. ಇಬ್ರಾಹಿಂ ಈ ಆದೇಶ ಹೊರಡಿಸಿದ್ದಾರೆ. ಆದ್ದರಿಂದ ಇವುಗಳು ಅಗತ್ಯ ವಸ್ತುಗಳಂತೆ ಮುಕ್ತವಾಗಿ ಸಾಗಾಟವಾಗಲಿದೆ.

ಮದ್ಯ ಸಾಗಾಟ, ಮಾರಾಟ ತಡೆಗೆ ತಂಡ:

ಕೊರೋನಾ ಬಂದ್‌ ವೇಳೆ ನಡೆಯಬಹುದಾದ ನಕಲಿ ಮದ್ಯ ಹಾವಳಿ, ಮದ್ಯ ಸಾಗಾಟ ಹಾಗೂ ಮಾರಾಟ ತಡೆಗೆ ಅಬಕಾರಿ ಇಲಾಖೆ ವಿಶೇಷ ತಂಡವನ್ನು ರಚಿಸಿದೆ. ಈ ತಂಡ ಪ್ರತಿ ತಾಲೂಕಿನಲ್ಲೂ ನಿಗಾ ಇರಿಸಲಿದ್ದು, ಮದ್ಯ ಹಾವಳಿ ಪತ್ತೆಯಾದರೆ ಕಠಿಣ ಕ್ರಮ ಕೈಗೊಳ್ಳಲಿದೆ ಎಂದು ಪ್ರಕಟಣೆ ತಿಳಿಸಿದೆ.

ಕಳ್ಳಮಾರ್ಗ ಮೂಲಕ ಕೇರಳದಿಂದ ಪ್ರವೇಶ?

ಕರ್ನಾಟಕ-ಕೇರಳ ಗಡಿ ಪ್ರದೇಶದ ಎಲ್ಲ ರಸ್ತೆಗಳನ್ನು ಬಂದ್‌ ಮಾಡಿರುವುದನ್ನು ತೆರವುಗೊಳಿಸುವಂತೆ ಕೇರಳ ಸರ್ಕಾರ ಒತ್ತಡ ಹಾಕುತ್ತಿದೆ. ಈ ನಡುವೆ ಗಡಿ ಭಾಗದ ರೈಲ್ವೆ ಕೆಳಸೇತುವೆ ಹಾಗೂ ಸಮುದ್ರ ಕಿನಾರೆ ಮೂಲಕ ಕೇರಳದಿಂದ ಕರ್ನಾಟಕ ಪ್ರವೇಶಿಸಲು ಮುಂದಾಗುತ್ತಿರುವ ವಿದ್ಯಮಾನ ಶನಿವಾರ ಬೆಳಕಿಗೆ ಬಂದಿದೆ.

ಮಂಗಳೂರಲ್ಲಿ ಕೊರೋನಾ ಸೋಂಕಿತರ ಆರೋಗ್ಯ ಸ್ಥಿರ

ಈ ರೀತಿ ಕಳ್ಳ ಮಾರ್ಗ ಬಳಸಿ ಕರ್ನಾಟಕ ಪ್ರವೇಶಿಸುತ್ತಿರುವುದು ಇಲ್ಲಿನ ಮಂದಿಯನ್ನು ಕೊರೋನಾ ಸೋಂಕಿನ ಭೀತಿಯನ್ನು ತಂದಿಟ್ಟಿದೆ. ನೆರೆಯ ಕಾಸರಗೋಡಿನಲ್ಲಿ ಕೊರೋನಾ ಸೋಂಕು ಪ್ರಕರಣ ಹೆಚ್ಚುತ್ತಿರುವ ಆತಂಕದ ನಡುವೆಯೇ ಈ ರೀತಿ ಒಳನುಸುಳುವಿಕೆ ಕಂಗೆಡುವಂತೆ ಮಾಡಿದೆ. ಈ ಕುರಿತ ಎಚ್ಚರಿಕೆ ಬರಹಗಳು ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಈ ಹಿನ್ನೆಲೆಯಲ್ಲಿ ಮಂಗಳೂರಿನ ಕುಡುಪಾಡಿ ರೈಲ್ವೆ ಕೆಳಸೇತುವೆಯನ್ನು ಸ್ಥಳೀಯರೇ ಸೇರಿ ಮುಚ್ಚಿದ್ದಾರೆ.

ಪತ್ರಿಕಾ ವಾಹನಗಳಿಗೆ ಪಾಸ್‌ಗೆ ತೊಂದರೆ

ದ.ಕ. ಜಿಲ್ಲೆಯಲ್ಲಿ ಪತ್ರಿಕಾ ವಾಹನಗಳಿಗೆ ಲಾಕ್‌ಡೌನ್‌ ಸಂದರ್ಭದ ಪಾಸ್‌ ಇಲ್ಲದೆ ತೊಂದರೆಯಾಗಿದೆ. ಅಲ್ಲದೆ ಗ್ರಾಮಾಂತರ ಪ್ರದೇಶದ ಸುದ್ದಿಗಾರರಿಗೂ ಅಗತ್ಯ ಪಾಸ್‌ ಪೂರೈಕೆಯಾಗಿಲ್ಲ. ಇದಕ್ಕೆ ಕಾರಣ ಪಾಸ್‌ ಮುದ್ರಿಸುವ ಪ್ರೆಸ್‌ ಬಂದ್‌ ಆಗಿರುವುದು.

ಬಸ್ ಇಲ್ಲ, ಕೆಲಸವೂ ಇಲ್ಲ; ಮಂಗಳೂರಿನಿಂದ ಕೊಪ್ಪಳಕ್ಕೆ ಪಾದಯಾತ್ರೆ ಹೊರಟ ಕುಟುಂಬ!

ಪತ್ರಿಕಾ ಸಾಗಾಟ ವಾಹನಗಳಿಗೆ ಪಾಸ್‌ ನೀಡುವ ಅಧಿಕಾರವನ್ನು ಆಯಾ ಸಹಾಯಕ ಕಮಿಷನರ್‌ಗಳಿಗೆ ಜಿಲ್ಲಾಡಳಿತ ವಹಿಸಿದೆ. ಆದರೆ ಇಲ್ಲಿಯೂ ಪಾಸ್‌ ಮುದ್ರಿಸಲು ಯಾರೂ ಸಿಗದ ಪರಿಸ್ಥಿತಿ ತಲೆದೋರಿದೆ. ಇದರಿಂದಾಗಿ ಪಾಸ್‌ ಇಲ್ಲದೆ ಗುರುತಿನ ಚೀಟಿ ತೋರಿಸಿ ಸಂಚರಿಸುವಂತೆ ಜಿಲ್ಲಾಡಳಿತ ಹಾಗೂ ಪೊಲೀಸ್‌ ಇಲಾಖೆ ಸೂಚನೆ ನೀಡಿದರೂ, ದಾರಿ ಮಧ್ಯೆ ಪೊಲೀಸರು ಮಾತ್ರ ಪತ್ರಿಕಾ ಸಾಗಾಟ ವಾಹನಕ್ಕೆ ಕೆಲವು ಕಡೆ ತಡೆ ಮಾಡುವುದು ತಪ್ಪುತ್ತಿಲ್ಲ. ಅಲ್ಲದೆ ನಗರ ಪ್ರದೇಶಗಳಲ್ಲಿ ಪತ್ರಿಕಾ ಬಂಡಲ್‌ಗಳನ್ನು ಹಾಕಲೂ ಪೊಲೀಸರು ಅಡ್ಡಿಪಡಿಸುತ್ತಿರುವ ಬಗ್ಗೆ ವಿತರಕರಿಂದ ದೂರುಗಳು ಬರುತ್ತಿವೆ.

click me!