ಅಗತ್ಯ ವಸ್ತುಗಳ ಪೂರೈಕೆ ಮನೆ ಬಾಗಿಲಿಗೆ: ಡಿಸಿಎಂ ಗೋವಿಂದ ಕಾರಜೋಳ ಭರವಸೆ|ಕೃಷಿ ಚಟುವಟಿಕೆಗಳಿಗೆ ಬೇಕಾಗುವ ಬೀಜ ಮತ್ತು ಗೊಬ್ಬರಗಳ ಕೊರತೆಯಾಗದಂತೆ ಗ್ರಾಮಗಳಲ್ಲಿಯೇ ವಿತರಣೆಗೆ ಕ್ರಮ|
ಬಾಗಲಕೋಟೆ(ಮಾ.29): ಬೇರೆ ರಾಜ್ಯ, ಜಿಲ್ಲೆಗಳಿಂದ ಬರುವ ವಾಹನಗಳ ಪರಿಶೀಲನೆಗೆ ಜಿಲ್ಲೆಯಲ್ಲಿ ಚೆಕ್‌ಪೋಸ್ಟ್ ತೆರೆದಿರುವುದು ರಾಜ್ಯದಲ್ಲೇ ಪ್ರಥಮ ಎಂದು ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಹೇಳಿದ್ದಾರೆ.
ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಶನಿವಾರ ಜರುಗಿದ ಕೊರೋನಾ ವೈರಸ್ ಹರಡದಂತೆ ಕೈಗೊಂಡ ಕ್ರಮಗಳ ಕುರಿತ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕೊರೋನಾ ಭೀತಿ ಹಿನ್ನೆಲೆಯಲ್ಲಿ ದೇಶಾದ್ಯಂತ ಲಾಕ್‌ಡೌನ್ ಮಾಡಿದ್ದು, ಸಾರ್ವಜನಿಕರಿಗೆ ಅಗತ್ಯ ವಸ್ತುಗಳ ಪೂರೈಕೆಯಲ್ಲಿ ತೊಂದರೆಯಾಗದಂತೆ ಮನೆ ಬಾಗಿಲಿಗೆ ತಲುಪಿಸುವಲ್ಲಿ ಅಗತ್ಯ ಕ್ರಮಕೈಗೊಳ್ಳುವಂತೆ ಅಧಿಕಾರಿಗಳು ಸೂಚಿಸಿದ್ದಾರೆ.
ಕೊರೋನಾ ತಡೆಯಲು ಸರ್ಕಾರದ ಸೂಚನೆ ಪಾಲಿಸಿ: ಮಲ್ಲಿಕಾರ್ಜುನ ಶ್ರೀಗಳು
ಯಾವುದೇ ರೀತಿಯಲ್ಲಿ ಜನ ಒಟ್ಟಿಗೆ ಕೂಡದಂತೆ ಮಾಡುವ ನಿಟ್ಟಿನಲ್ಲಿ ಹಾಲು, ಕಿರಾಣಿ ಹಾಗೂ ತರಕಾರಿಗಳನ್ನು ಆಯಾ ಓಣಿಗಳಲ್ಲಿ ಮಾರಲು ಹಾಗೂ ಹೋಮ್ ಡಿಲೆವರಿಗೆ ಕ್ರಮ ವಹಿಸಬೇಕು. ಕೃಷಿ ಚಟುವಟಿಕೆಗಳಿಗೆ ಬೇಕಾಗುವ ಬೀಜ ಮತ್ತು ಗೊಬ್ಬರಗಳ ಕೊರತೆಯಾಗದಂತೆ ಗ್ರಾಮಗಳಲ್ಲಿಯೇ ವಿತರಣೆ ಕ್ರಮಕೈಗೊಳ್ಳಬೇಕು. ಈ ಕುರಿತು ಗೊಬ್ಬರ ಅಂಗಡಿಗಳ ಮಾಲೀಕರ ಸಭೆ ಕರೆದು ರೈತರಿಗೆ ಪೂರೈಸಲು ಹಳ್ಳಿಗಳಿಗೆ ಕಳುಹಿಸಲು ಕ್ರಮಕೈಗೊಳ್ಳಲು ಉಪ ಮುಖ್ಯಮಂತ್ರಿಗಳು ಅಧಿಕಾರಿಗಳಿಗೆ ಸೂಚಿಸಿದರು.
ಸಭೆಯಲ್ಲಿ ಸಂಸದ ಪಿ.ಸಿ.ಗದ್ದಿಗೌಡರ, ಶಾಸಕ ವೀರಣ್ಣ ಚರಂತಿಮಠ, ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ.ಕೆ.ರಾಜೇಂದ್ರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲೋಕೇಶ ಜಗಲಾಸರ, ಜಿಪಂ ಸಿಇಒ ಗಂಗೂಬಾಯಿ ಮಾನಕರ, ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ, ಜಿಪಂ ಉಪಕಾರ್ಯದರ್ಶಿ ಎ.ಜಿ.ತೋಟದ, ಉಪವಿಭಾಗಾಧಿಕಾರಿ ಎಂ.ಗಂಗಪ್ಪ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎ.ಎನ್.ದೇಸಾಯಿ, ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ಪ್ರಕಾಶ ಬಿರಾದಾರ ಸೇರಿದಂತೆ ಇತರೆ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.