ಲಾಕ್‌ಡೌನ್‌: ಪುಟ್ಟ ಮಕ್ಕಳನ್ನ ನೋಡಲು 400 ಕಿ.ಮೀ. ಕಾಲ್ನಡಿಗೆಯಲ್ಲಿ ಹೊರಟ ದಂಪತಿ

By Kannadaprabha News  |  First Published Apr 2, 2020, 8:13 AM IST

ದಕ್ಷಿಣ ಕನ್ನಡದ ಕಾರ್ಕಳದಲ್ಲಿ ಸಿಲುಕಿಕೊಂಡ ದಂಪತಿ| ಕಾರ್ಕಳದಿಂದ ಸುಮಾರು 400 ಕಿ.ಮೀ. ಕಾಲ್ನಡಿಗೆಯಲ್ಲಿಯೇ ಕೊಪ್ಪಳಕ್ಕೆ ಹೊರಟ ದಂಪತಿ| ವಾಹನ ಇಲ್ಲದ ಕಾರಣ ನಡೆದುಕೊಂಡೇ ಹೊರಟ ದಂಪತಿ| 


ಶಿವಮೊಗ್ಗ(ಏ.02): ಇಡೀ ರಾಜ್ಯ ಲಾಕ್‌ಡೌನ್‌. ಕೆಲಸವಿಲ್ಲ. ಹೋಗಲು ಯಾವುದೇ ವ್ಯವಸ್ಥೆಯಿಲ್ಲ. ದೂರದ ಕೊಪ್ಪಳದಿಂದ ಬಂದು ದಕ್ಷಿಣ ಕನ್ನಡದ ಕಾರ್ಕಳದಲ್ಲಿ ಸಿಲುಕಿಕೊಂಡ ದಂಪತಿಗೆ ಕರುಳಬಳ್ಳಿಯ ಕರೆ ತಡೆಯಲಾಗಲಿಲ್ಲ. ಸುಮಾರು 400 ಕಿ.ಮೀ. ಕಾಲ್ನಡಿಗೆಯಲ್ಲಿಯೇ ಹೊರಟಿದ್ದಾರೆ.

ಹಗಲಿಡೀ ಬಿರು ಬಿಸಿಲಿನಲ್ಲಿ ನಡೆಯುವುದು, ರಾತ್ರಿ ಯಾವುದೋ ಬಸ್‌ ನಿಲ್ದಾಣದಲ್ಲಿ ಮಲಗುವುದು, ಹೃದಯವಂತರು ಕೊಟ್ಟರೆ ಒಂದಿಷ್ಟು ಹೊಟ್ಟೆಗೆ ಊಟ. ಇಲ್ಲದಿದ್ದರೆ ಅದೂ ಇಲ್ಲ. ಹೇಗಾದರೂ ಬೇಗನೆ ಮನೆಗೆ ತಲುಪಬೇಕು. ಮಕ್ಕಳನ್ನು ನೋಡಬೇಕು. ಇಷ್ಟೇ ಅವರ ಗುರಿ.

Tap to resize

Latest Videos

ಕಾರ್ಕಳದಿಂದ ಕಾಲ್ನಡಿಗೆಯಲ್ಲಿ ಹೊರಟ ಕೊಪ್ಪಳದ ಕೂಲಿ ಕಾರ್ಮಿಕ ದಂಪತಿ ತಿರುಪತಿ ಮತ್ತು ಚನ್ನವ್ವ ಬುಧವಾರ ಸಂಜೆ ಶಿವಮೊಗ್ಗಕ್ಕೆ ಆಗಮಿಸಿದ್ದಾರೆ. ಮಾಧ್ಯಮಗಳ ಕಣ್ಣಿಗೆ ಬಿದ್ದ ಇವರನ್ನು ವಿಚಾರಿಸಿದಾಗ ತಮ್ಮ ಕಾಲ್ನಡಿಗೆಯ ‘ಕರುಳ ಕರೆಯ ಕಾಲ್ನಡಿಗೆ ಕತೆ’ಯನ್ನು ಬಿಚ್ಚಿಟ್ಟರು.

ಭಾರತ್‌ ಲಾಕ್‌ಡೌನ್‌: 'ವಲಸೆ ಕಾರ್ಮಿಕರಿಗೆ ತಾತ್ಕಾಲಿಕ ವಸತಿ, ಊಟದ ವ್ಯವಸ್ಥೆ'

ವಾರದ ಹಿಂದೆ ಕಾರ್ಕಳಕ್ಕೆ ಬಂದಿದ್ದ ಈ ದಂಪತಿ ತಮ್ಮ ಮೂವರು ಚಿಕ್ಕ ಮಕ್ಕಳನ್ನು ತಮ್ಮ ಸ್ವಂತ ಊರಾದ ಕೊಪ್ಪಳ ಜಿಲ್ಲೆಯ ಹಿರೇ ಸೂಳೆಕೆರೆ ತಾಂಡಾದಲ್ಲಿಯೇ ಬಿಟ್ಟು ಬಂದಿದ್ದರು. ಕಾರ್ಕಳದಲ್ಲಿ ಕೆಲಸ ಇಲ್ಲ ಎಂಬುದು ಗೊತ್ತಾಗುತ್ತಿದ್ದಂತೆ ಮನೆಯವರು ಮತ್ತು ಮಕ್ಕಳು ವಾಪಸ್‌ ಬರುವಂತೆ ಆಗ್ರಹಪಡಿಸಿದರು. ಮಕ್ಕಳು ಮೊಬೈಲ್‌ ಕರೆ ಮಾಡಿ ಗೋಗರೆದವು. ಇದನ್ನು ಕೇಳಿ ಕರುಳ ಬಳ್ಳಿ ಚುರುಕ್‌ ಎಂದ ದಂಪತಿ ಮನೆಗೆ ಮರಳುವ ನಿರ್ಧಾರಕ್ಕೆ ಬಂದರು. ವಾಹನ ಇಲ್ಲದ ಕಾರಣ ನಡೆದುಕೊಂಡೇ ಹೊರಟಿದ್ದಾರೆ. ಐದು ದಿನಗಳ ಬಳಿಕ ಕಾರ್ಕಳದಿಂದ ಇಲ್ಲಿಗೆ ಬಂದಿದ್ದಾರೆ.

ಶಿವಮೊಗ್ಗದಲ್ಲಿ ಮಾಧ್ಯಮದವರು ವಿವಿಧ ಸಂಘ ಸಂಸ್ಥೆಗಳ ನೆರವಿನೊಂದಿಗೆ ಇವರಿಗೆ ಆಹಾರ ಒದಗಿಸಿದರು. 10 ದಿನ ಇಲ್ಲಿಯೇ ಉಳಿದುಕೊಳ್ಳಲು ವ್ಯವಸ್ಥೆ ಮಾಡುತ್ತೇವೆ. ಆದರೆ ಇದಕ್ಕೆ ಒಪ್ಪದ ದಂಪತಿಗಳು ಏನೇ ಸಂದರ್ಭ ಬಂದರೂ, ಪೊಲೀಸರು ತಡೆದರೂ ನಾವು ಹೋಗಿಯೇ ಹೋಗುತ್ತೇವೆ. 400 ಕಿ. ಮೀ. ದೂರವನ್ನು ನಡೆದುಕೊಂಡು ತಲುಪುತ್ತೇವೆ ಎಂದು ಹೇಳಿದರು.
 

click me!