ಬಾಲಮಂದಿರ ಮಕ್ಕಳಿಂದ ಮಾಸ್ಕ್ ತಯಾರಿಕೆ| ಘಂಟಿಕೇರಿಯ ಬಾಲಕಿಯರ ಬಾಲಮಂದಿರದ 18 ಮಕ್ಕಳಿಂದ 300ಕ್ಕೂ ಹೆಚ್ಚು ಮಾಸ್ಕ್| ಮಾಸ್ಕ್ ತಯಾರಿಕೆಗೆ ಬಾಲಮಂದಿರ ಮಕ್ಕಳ ಅಳಿಲು ಸೇವೆ|
ಮಯೂರ ಹೆಗಡೆ
ಹುಬ್ಬಳ್ಳಿ(ಏ.05): ಕೊರೋನಾ ಭೀತಿ ಹಿನ್ನೆಲೆಯಲ್ಲಿ ಎಲ್ಲ ಶಾಲಾ-ಕಾಲೇಜುಗಳಿಗೆ ರಜೆ ನೀಡಲಾಗಿದೆ. ಆದರೆ ನಗರದ ಬಾಲ ಮಂದಿರದಲ್ಲಿ ಇರುವ ಮಕ್ಕಳು ಮಾತ್ರ ಕೊರೋನಾ ವಿರುದ್ಧದ ಹೋರಾಟಕ್ಕೆ ಕೈ ಜೋಡಿಸಿದ್ದಾರೆ.
undefined
ಇಲ್ಲಿನ ಘಂಟಿಕೇರಿ ಸರ್ಕಾರಿ ಬಾಲಕಿಯರ ಬಾಲಮಂದಿರದಿಂದ ಸಾಧ್ಯವಿರುವಷ್ಟು ಮಕ್ಕಳನ್ನು ಮನೆಗೆ ಕಳುಹಿಸಲಾಗಿದೆ. ಆದರೆ ಉಳಿದಿರುವ 18 ಮಕ್ಕಳಲ್ಲಿ ಸ್ಟಿಚ್ಚಿಂಗ್ ಬಲ್ಲವರು ಕೊರೋನಾದಿಂದ ಸುರಕ್ಷತೆ ನೀಡುವ ಮಾಸ್ಕ್ ತಯಾರಿಕೆಯಲ್ಲಿ ತೊಡಗಿದ್ದಾರೆ. ಕಳೆದ ಎರಡು- ಮೂರು ದಿನದಲ್ಲಿ 300ಕ್ಕೂ ಹೆಚ್ಚು ಮಾಸ್ಕ್‌ಗಳನ್ನು ತಯಾರಿಸಿದ್ದು, ಕಾರ್ಯ ಮುಂದುವರಿಸಿದ್ದಾರೆ.
ಇದರ ಹಿಂದಿರುವುದು ಧಾರವಾಡದಲ್ಲಿನ ಮೃಣಾಲ್ ಜೋಶಿ ಅವರ ಬಾಲವಿಕಾಸ ಸೊಸೈಟಿ ಹಾಗೂ ಸಾಫಲ್ಯ ಪ್ರತಿಷ್ಠಾನ. ಇವೆರಡು ಸಂಸ್ಥೆಗಳು ಇಸ್ಫೋಸಿಸ್ ಸಹಯೋಗದಲ್ಲಿ ಕೊರೋನಾ ಸಂಬಂಧ ಸಾಕಷ್ಟು ಕಾರ್ಯದಲ್ಲಿ ತೊಡಗಿದ್ದು, ಅದರಲ್ಲಿ ಒಂದಾದ ಮಾಸ್ಕ್ ತಯಾರಿಕೆಗೆ ಬಾಲಮಂದಿರ ಮಕ್ಕಳು ಅಳಿಲು ಸೇವೆ ಸಲ್ಲಿಸುತ್ತಿದ್ದಾರೆ.
ಕೊರೋನಾ ವಿರುದ್ಧದ ಹೋರಾಟಕ್ಕೆ ಆರ್ಥಿಕವಾಗಿ ಕೈಜೋಡಿಸಿದ ಸಿದ್ದಗಂಗಾ ಮಠ
ಸಂಸ್ಥೆಯ ಪ್ರಮುಖ ಹಾಗೂ ಧಾರವಾಡ ಹೈಕೋರ್ಟ್ ಸಹಾಯಕ ಸಾಲಿಸಿಟರ್ ಜನರಲ್ ಅರುಣ ಜೋಶಿ ಮಾತನಾಡಿ, ಬೆಳಗಾವಿ, ಗೋಕಾಕಿನಿಂದ ಬಟ್ಟೆತರಿಸಲಾಗಿದೆ. ಒಂದು ಮೀಟರ್ ಬಟ್ಟೆಯಲ್ಲಿ 22-24 ಮಾಸ್ಕ್ ಸಿದ್ಧಪಡಿಸಬಹುದು. ವಿವಿಧ ಸಂಘಟನೆ, ಸ್ವಯಂ ಸೇವಕರು ಸೇರಿ 600ಕ್ಕೂ ಹೆಚ್ಚು ಹೊಲಿಗೆಯವರು ಇದರಲ್ಲಿ ತೊಡಗಿದ್ದಾರೆ. ಹು-ಧಾ ಹಾಗೂ ಶಿಗ್ಗಾಂವಿ ಪೊಲೀಸರು, ವೈದ್ಯರು, ಪತ್ರಕರ್ತರು, ಕಾರ್ಮಿಕರು, ಬಡವರು ಸೇರಿ ಇಲ್ಲಿವರೆಗೆ 12 ಸಾವಿರ ಮಾಸ್ಕ್ ಹಂಚಲಾಗಿದೆ. ಹೊಲಿದವರಿಗೆ ಒಂದು ಮಾಸ್ಕ್ . 3ರಿಂದ . 5 ನೀಡಲಾಗಿದೆ. ಆದರೆ ಹಲವರು ಹಣ ಪಡೆದಿಲ್ಲ ಎಂದರು.
ಬಾಲಮಂದಿರದ ಅಧೀಕ್ಷಕಿ ಅನ್ನಪೂರ್ಣ ಸಂಗಳದ ಮಾತನಾಡಿ, ಬಾಲಕಿಯರ ಬಾಲಮಂದಿರದಲ್ಲಿ ಮಕ್ಕಳು ಮಾಸ್ಕ್ ತಯಾರಿಕೆಗೆ ಸಹಯೋಗ ನೀಡುವ ಮೂಲಕ ಕೊರೋನಾ ವಿರುದ್ಧದ ಹೋರಾಟದಲ್ಲಿ ತಾವು ಭಾಗಿಯಾಗಿದ್ದಾರೆ. ಇಲ್ಲಿ ಉಳಿದಿರುವ ಮಕ್ಕಳಿಗೆ ಸ್ಯಾನಿಟೈಸರ್, ಮಾಸ್ಕ್ ವ್ಯವಸ್ಥೆ ಇದೆ. ಊಟದಲ್ಲೂ ಅಗತ್ಯ ಕ್ರಮವಹಿಸಲಾಗಿದೆ. ಯೋಗ, ಕೊರೋನಾ ಜಾಗೃತಿ ಪ್ರಬಂಧ ಸ್ಪರ್ಧೆ, ಅಂತರ ಕಾಯ್ದುಕೊಂಡು ಸಾಮೂಹಿಕ ಪ್ರಾರ್ಥನೆ ಕೂಡ ನಡೆಸುತ್ತಿದ್ದೇವೆ. ಸೋಶಿಯಲ್ ಡಿಸ್ಟೆನ್ಸ್ ಕಾಪಾಡಿಕೊಳ್ಳಲು ತಿಳಿಸಿದ್ದೇವೆ ಎಂದರು.