ರಾಜ್ಯದಿಂದ ಕೊರೋನಾ ಮಾಹಿತಿ ಕೇಳಿದ ನಡ್ಡಾ!

By Kannadaprabha NewsFirst Published Mar 29, 2020, 8:26 AM IST
Highlights

ರಾಜ್ಯದಿಂದ ಕೊರೋನಾ ಮಾಹಿತಿ ಕೇಳಿದ ನಡ್ಡಾ| ಬಿಜೆಪಿ ನಾಯಕರು, ಸಚಿವರ ಜೊತೆ ವಿಡಿಯೋ ಕಾನ್ಫರೆನ್ಸ್‌| ರಾಜ್ಯಕ್ಕೆ ಅಗತ್ಯ ನೆರವು ನೀಡುವ ಭರವಸೆ

ಬೆಂಗಳೂರು(ಮಾ.29): ಕೋವಿಡ್‌-19 ತಡೆಗಟ್ಟಲು ಕೈಗೊಂಡಿರುವ ಕ್ರಮಗಳ ಕುರಿತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರು ರಾಜ್ಯ ಸರ್ಕಾರದಿಂದ ಮಾಹಿತಿ ಪಡೆದುಕೊಂಡಿದ್ದು, ರಾಜ್ಯಕ್ಕೆ ಅಗತ್ಯ ನೆರವು ಒದಗಿಸುವ ಭರವಸೆ ನೀಡಿದ್ದಾರೆ.

ಶನಿವಾರ ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್‌.ಸಂತೊಷ್‌ ಅವರು ಸ್ಕೈಪ್‌ ಮೂಲಕ ಆಯೋಜಿಸಿದ್ದ ಸಭೆಯಲ್ಲಿ ಉಪಮುಖ್ಯಮಂತ್ರಿ ಡಾ.ಸಿ.ಎನ್‌.ಅಶ್ವತ್ಥನಾರಾಯಣ, ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್‌ ಹಾಗೂ ಕಂದಾಯ ಸಚಿವ ಆರ್‌.ಅಶೋಕ್‌ ಅವರಿಂದ ಕೊರೋನಾ ಹರಡದಂತೆ ತಡೆಗಟ್ಟಲು ಸರ್ಕಾರ ಕೈಗೊಂಡಿರುವ ಕ್ರಮಗಳ ಬಗ್ಗೆ ಮಾಹಿತಿ ಪಡೆದುಕೊಂಡರು.

ಸಂಕಷ್ಟದ ಸಂದರ್ಭದಲ್ಲಿ ಎಲ್ಲಾ ಸವಾಲುಗಳನ್ನು ಯಶಸ್ವಿಯಾಗಿ ನಿಭಾಯಿಸಲಾಗುತ್ತಿದೆ. ಆರೋಗ್ಯ ಸಿಬ್ಬಂದಿಗೆ ಆಲ್‌ಲೈನ್‌ ತರಬೇತಿ ನೀಡಲಾಗುತ್ತಿದೆ. ವೆಂಟಿಲೇಟರ್‌ ಮತ್ತು ಐಸಿಯು ನಿರ್ವಹಣೆಗೆ ತಾಂತ್ರಿಕ ತರಬೇತಿ ನೀಡಲಾಗಿದೆ. ವೈದ್ಯರು ಸೇರಿ 27 ಸಾವಿರ ಆರೋಗ್ಯ ಸಿಬ್ಬಂದಿ ತುರ್ತು ಸೇವೆಗೆ ಸಜ್ಜಾಗಿದ್ದಾರೆ. ರಾಜ್ಯದಲ್ಲಿ ಕೊರೋನಾ ಚಿಕಿತ್ಸೆಗೆ 1300 ಹಾಸಿಗೆಯ ಆಸ್ಪತ್ರೆ ಸಿದ್ಧವಾಗಿದೆ ಎಂದು ಸರ್ಕಾರ ಕೈಗೊಂಡಿರುವ ಕ್ರಮಗಳ ಕುರಿತು ವಿವರಿಸಲಾಯಿತು.

ಬೆಂಗಳೂರು ನಗರ ಸೇರಿದಂತೆ ರಾಜ್ಯದ ಪ್ರಮುಖ ಪ್ರದೇಶಗಳನ್ನು ಸೋಂಕು ರಹಿತವಾಗಿಸಲು ಕ್ರಮ ಕೈಗೊಳ್ಳಲಾಗಿದೆ. ಬ್ಲೀಚಿಂಗ್‌ ಪೌಡರ್‌ ಅನ್ನು ನೀರಿನೊಂದಿಗೆ ಬೆರೆಸಿ ಸ್ಪ್ರೇ ಮಾಡಲಾಗುತ್ತಿದೆ. ನಿರಾಶ್ರಿತರಿಗೆ ಆಶ್ರಯ ಕಲ್ಪಿಸಿ, ಊಟದ ವ್ಯವಸ್ಥೆ ಕಲ್ಪಿಸಲಾಗಿದೆ. ಮುಖ್ಯವಾಗಿ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಅಗತ್ಯ ಕ್ರಮ ಕೈಗೊಂಡಿರುವ ಜತೆಗೆ ಸೋಂಕಿತರ ಪತ್ತೆಗೆ ಕಾರ್ಯಾಚರಣೆ ಚುರುಕುಗೊಳಿಸಲಾಗಿದೆ ಎಂದು ಮಾಹಿತಿ ನೀಡಲಾಯಿತು.

ರಾಜ್ಯಕ್ಕೆ ನಡ್ಡಾ ನೆರವಿನ ಭರವಸೆ:

ಈ ವೇಳೆ ರಾಜ್ಯದಲ್ಲಿ ಕೊರೋನಾ ಟೆಸ್ಟ್‌ ಕಿಟ್‌, ರಕ್ಷಣಾತ್ಮಕ ಉಪಕರಣಗಳು, ಎನ್‌-95 ಮಾಸ್ಕ್‌, ವೆಂಟಿಲೇಟರ್‌ ಮುಂತಾದ ವೈದ್ಯ ಉಪಕರಣಗಳ ಕೊರತೆ ಎದುರಾಗಿದೆ. ಅವುಗಳ ಪೂರೈಕೆಗೆ ನೆರವಾಗುವಂತೆ ಸರ್ಕಾರದ ಪರವಾಗಿ ಮನವಿ ಮಾಡಿಕೊಳ್ಳಲಾಯಿತು. ಸರ್ಕಾರದ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ ಜೆ.ಪಿ.ನಡ್ಡಾ ಅವರು ಅಗತ್ಯ ನೆರವು ಒದಗಿಸುವ ಭರವಸೆ ನೀಡಿದರು.

ಕೊರೋನಾ ವಿರುದ್ಧ ಕರ್ನಾಟಕ ಸರ್ಕಾರ ಕೈಗೊಂಡಿರುವ ಕ್ರಮಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ನಡ್ಡಾ, ಕಾರ್ಮಿಕರು, ದಿನಗೂಲಿ ನೌಕರರು, ಕಟ್ಟಡ ಕಾರ್ಮಿಕರು ವಲಸೆ ಹೋಗದಂತೆ ತಡೆಯಬೇಕು. ಇರುವಲ್ಲಿಯೇ ಅವರಿಗೆ ಎಲ್ಲಾ ಸೌಲಭ್ಯಗಳನ್ನು ಕಲ್ಪಿಸಬೇಕು ಎಂದು ಸೂಚಿಸಿದರು. ಈ ವೇಳೆ ಸಚಿವರಾದ ಕೆ.ಗೋಪಾಲಯ್ಯ, ಬೈರತಿ ಬಸವರಾಜ್‌, ಶಾಸಕರಾದ ಅರವಿಂದ ಲಿಂಬಾವಳಿ, ಸತೀಶ್‌ ರೆಡ್ಡಿ, ಎಸ್‌.ಆರ್‌.ವಿಶ್ವನಾಥ್‌, ಉಪಸ್ಥಿತರಿದ್ದರು.

click me!