ದೇಶದಲ್ಲಿ ಕೊರೋನಾ ಹಿಂದೆ ಜಿಹಾದಿ ವಾಸನೆ: ಶೋಭಾ ಟೀಕೆ| ಸಮಾವೇಶಕ್ಕೆ ಹೋಗಿದ್ದವರು ತಾವಾಗಿ ಮುಂದೆ ಬಂದು ಪೊಲೀಸರ ಗಮನಕ್ಕೆ ತಂದು ಕ್ವಾರಂಟೈನ್ ನಲ್ಲಿದ್ದು ಚಿಕಿತ್ಸೆ ಪಡೆಯಬೇಕು
ಚಿಕ್ಕಮಗಳೂರು(ಏ.04): ದೇಶದಲ್ಲಿ ಕೋವಿಡ್-19 ವೈರಸ್ ಹರಡಿರುವ ಹಿಂದೆ ಕೊರೋನಾ ಜಿಹಾದಿ ವಾಸನೆ ಬಡಿಯುತ್ತಿದೆ ಎಂದು ಸಂಸದೆ ಶೋಭಾ ಕರಂದ್ಲಾಜೆ ಸಂಶಯ ವ್ಯಕ್ತಪಡಿಸಿದ್ದಾರೆ.
ದೆಹಲಿ ನಿಜಾಮುದ್ದೀನ್ ಮರ್ಕಜ್ ಮಸೀದಿಯ ತಬ್ಲಿಘಿ ಸಭೆಯಲ್ಲಿ ಯಾರಾರಯರು ಭಾಗವಹಿಸಿದ್ದರೋ ಅಂಥವರನ್ನು ಪತ್ತೆ ಹಚ್ಚುವ ಕೆಲಸ ಪೊಲೀಸರು ಮಾಡುತ್ತಿದ್ದಾರೆ. ಆದರೆ, ಅದಕ್ಕೆ ಒಂದು ಜನಾಂಗದ ಜನ ಸಹಕರಿಸುತ್ತಿಲ್ಲ ಎಂಬುದು ಸಾಬೀತಾಗುತ್ತಿದೆ. ಸಮಾವೇಶಕ್ಕೆ ಹೋಗಿದ್ದವರು ತಾವಾಗಿ ಮುಂದೆ ಬಂದು ಪೊಲೀಸರ ಗಮನಕ್ಕೆ ತಂದು ಕ್ವಾರಂಟೈನ್ ನಲ್ಲಿದ್ದು ಚಿಕಿತ್ಸೆ ಪಡೆಯಬೇಕು ಎಂದು ಶನಿವಾರ ಸುದ್ದಿಗಾರರೊಂದಿಗೆ ಮಾತನಾಡುವಾಗ ಹೇಳಿದರು.
'ಕೊರೋನಾ ನಿಯಂತ್ರಿಸಿ, ನಂತ್ರ ರಾಜಕೀಯ ಮಾಡೋಣ'..!
ಚಿಕಿತ್ಸೆ ಪಡೆಯಲು ಮುಂದಾಗದಿದ್ದರೆ, ಸರ್ಕಾರವೇ ಅಂಥವರನ್ನು ಪತ್ತೆಹಚ್ಚಿ ಜೀವಾವಧಿ ಶಿಕ್ಷೆ ನೀಡಬೇಕು. ಆ ರೀತಿಯ ಆಗ್ರಹ ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಮಾಡಲಾಗಿದೆ. ಕಾನೂನಿನ ಕೈ ಹೇಗಿದೆ ಎಂಬ ರುಚಿಯನ್ನು ಅವರಿಗೆ ತೋರಿಸಬೇಕಾಗಿದೆ. ಈ ನೆಲದ ಕಾನೂನು ಪಾಲನೆ ಮಾಡುತ್ತಿಲ್ಲವೆಂದರೆ ಅದರ ಹಿಂದೆ ಯಾವುದೋ ಷಡ್ಯಂತ್ರ ಇದೆ ಎಂದರ್ಥ ಎಂದು ಹೇಳಿದರು.
ನಿಜವಾದ ನಾಗರಿಕರಾದರೆ, ತಮ್ಮಿಂದ ಬೇರೆಯವರಿಗೆ ಕೊರೋನಾ ವೈರಸ್ ಹರಡಬಾರದು, ಕ್ವಾರಂಟೈನ್‌ನಲ್ಲಿ ಇರಬೇಕೆಂದು ಮುಂದೆ ಬರಬೇಕು. ಯಾರೂ ಬರುವುದಿಲ್ಲವೋ ಅಂಥವರಿಗೆ ಶಿಕ್ಷೆಯಾಗಬೇಕು ಎಂದರು.