ಲಾಕ್‌ಡೌನ್‌ ಮುಗಿಯುವವರೆಗೂ ಕಂಟ್ರೋಲ್‌ ಮಾಡಿಕೊಳ್ಳದ ಕುಡುಕರು: ಮದ್ಯದಂಗಡಿಗೆ ಕನ್ನ!

By Kannadaprabha NewsFirst Published Apr 6, 2020, 10:46 AM IST
Highlights

ಕೋಲಾರ, ಕೊಪ್ಪಳದಲ್ಲಿ ಮದ್ಯದಂಗಡಿಗೆ ಕನ್ನ|ಕೊಪ್ಪಳದಲ್ಲಿ 50 ಸಾವಿರಕ್ಕೂ ಹೆಚ್ಚು ಮೌಲ್ಯದ ಮದ್ಯ ಕಳ್ಳತನ|  ದುಬಾರಿ ಮದ್ಯವಿದ್ದರೂ ಅದನ್ನು ಮುಟ್ಟದೇ 8 ಪಿಎಂ ಮತ್ತು ಕಿಂಗ್‌ಫಿಶರ್‌ ಮದ್ಯ ಮಾತ್ರ ಕದ್ದೊಯ್ದ ಮದ್ಯ ಪ್ರಿಯರು|

ಕೊಪ್ಪಳ/ಕೋಲಾರ(ಏ.06): ಲಾಕ್‌ಡೌನ್‌ ನಂತರ ಮದ್ಯದಂಗಡಿ ಕಳ್ಳತನ ಪ್ರಕರಣಗಳು ರಾಜ್ಯದಲ್ಲಿ ಹೆಚ್ಚುತ್ತಿವೆ. ಶನಿವಾರ ರಾತ್ರಿ ಕೊಪ್ಪಳ ಮತ್ತು ಕೋಲಾರದಲ್ಲಿ ಮದ್ಯದಂಗಡಿ ಕಳ್ಳತನ ಮಾಡಲಾಗಿದೆ. 

ಕೊಪ್ಪಳ ನಗರದ ಗವಿಮಠ ರಸ್ತೆಯಲ್ಲಿರುವ ಮದ್ಯದ ಅಂಗಡಿ ಸಾಯಿ ಟ್ರೇಡರ್ಸ್‌ ಬಾಗಿಲನ್ನು ಮುರಿದು, ವಿವಿಧ ಮದ್ಯದ ಬಾಟಲಿಗಳನ್ನು ಕಳ್ಳತನ ಮಾಡಲಾಗಿದೆ. ಮೋಹನಗೌಡ ಎನ್ನುವರಿಗೆ ಸೇರಿದ ಈ ಅಂಗಡಿಯಲ್ಲಿ .50 ಸಾವಿರಕ್ಕೂ ಹೆಚ್ಚು ಮೌಲ್ಯದ ಮದ್ಯ ಕದ್ದೊಯ್ದಿದ್ದಾರೆ. ಅಚ್ಚರಿ ಎಂದರೆ ಗಲ್ಲೆಪೆಟ್ಟಿಗೆಯಲ್ಲಿದ್ದ ಹಣ ಮುಟ್ಟಿಲ್ಲ. ದುಬಾರಿ ಮದ್ಯವಿದ್ದರೂ ಅದನ್ನು ಮುಟ್ಟದೇ ತಮಗೆ ಬೇಕಾಗಿರುವ 8 ಪಿಎಂ ಮತ್ತು ಕಿಂಗ್‌ಫಿಶರ್‌ ಮದ್ಯ ಮಾತ್ರ ಕದ್ದೊಯ್ದಿದ್ದಾರೆ.

ಕೊರೋನಾ ಶಂಕಿತನಿಂದ ಆಸ್ಪತ್ರೆ ಸಿಬ್ಬಂದಿಗೆ ಕಿರಿಕ್‌: ಹೈರಾಣಾದ ವೈದ್ಯರು!

ಕೋಲಾರದಲ್ಲಿ ಮತ್ತೊಂದು ಬಾರ್‌ ಕಳ್ಳತನ ಮಾಡಲಾಗಿದೆ. ಶೀನಿವಾಸಪುರ ತಾಲೂಕಿನ ರೋಜರನಹಳ್ಳಿ ಕ್ರಾಸ್‌ ಬಳಿ ಇರುವ ಲಕ್ಷ್ಮೇ ಬಾರ್‌ ಅಂಡ್‌ ರೆಸ್ಟೋರೆಂಟ್‌ನಲ್ಲಿ ಕಳ್ಳರು ಬಾಗಿಲು ಮುರಿದು ಕಳ್ಳತನ ಮಾಡಿದ್ದಾರೆ. ಬಾರ್‌ನಲ್ಲಿದ್ದ ಹಣವನ್ನು ಮುಟ್ಟದೇ ಒಂದು ಲಕ್ಷ ರು. ಮೌಲ್ಯದ ಮದ್ಯವನ್ನು ಮಾತ್ರ ಕಳ್ಳತನ ಮಾಡಿದ್ದಾರೆ. ಸ್ಥಳಕ್ಕೆ ಪೊಲೀಸರು ಭೇಟಿ ಮಾಡಿ ಪರಿಶೀಲನೆ ನಡೆಸಿದ್ದಾರೆ. ಇತ್ತೀಚೆಗಷ್ಟೇ ಬಂಗಾರಪೇಟೆಯಲ್ಲಿ ಬಾರ್‌ವೊಂದರಲ್ಲಿ ಕಳ್ಳತನ ಮಾಡಲಾಗಿತ್ತು.
 

click me!