ಕೊರೋನಾ: ಕೊಪ್ಪಳದಲ್ಲಿ ಮತ್ತೆ ಮೂವರ ಸ್ಯಾಂಪಲ್‌ ನೆಗೆಟಿವ್‌

By Kannadaprabha NewsFirst Published Apr 8, 2020, 10:33 AM IST
Highlights

ತಬ್ಲೀಘಿ ಪ್ರಕರಣ ಇಬ್ಬರಿಗೆ ಹೋಂ ಕ್ವಾರಂಟೈನ್‌| ಜಿಲ್ಲಾ ಉಸ್ತುವಾರಿ ಸಚಿವ ಸಚಿವ ಲಕ್ಷ್ಮಣ ಸವದಿ ಅಧ್ಯಕ್ಷತೆಯಲ್ಲಿ ಸಭೆ| ಇದುವರೆಗಿನ ಕಾರ್ಯ ಶ್ಲಾಘನೀಯ| ಹಾಗಂತ ಮೈಮರೆಯದೆ ಲಾಕ್‌ಡೌನ್‌ ಕಟ್ಟುನಿಟ್ಟಾಗಿ ಜಾರಿ ಮಾಡಬೇಕು|

ಕೊಪ್ಪಳ(ಏ.08): ಜಿಲ್ಲೆಯಲ್ಲಿ ತಬ್ಲೀಘಿ ಪ್ರಕರಣಗಳು ಇನ್ನು ಪತ್ತೆಯಾಗುತ್ತಲೇ ಇದ್ದು, ಅವರು ಎಷ್ಟಿದ್ದಾರೆ ಎನ್ನುವುದು ಇನ್ನು ಪಕ್ಕಾ ಆಗುತ್ತಿಲ್ಲ. ಮಂಗಳವಾರ ತಬ್ಲೀಘಿ ಪ್ರಕರಣ ಇಬ್ಬರನ್ನು ಹೋಂ ಕ್ವಾರಂಟೈನ್‌ ಮಾಡಲಾಗಿದೆ. ಮತ್ತೆ ಮೂವರ ಸ್ಯಾಂಪಲ್‌ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ವರದಿ ನಗೆಟಿವ್ ಬಂದಿದೆ.

ತಬ್ಲೀಘಿ ಜಮಾತ್‌ನಲ್ಲಿ ಭಾಗವಹಿಸಿದ್ದ 25 ಹಾಗೂ ಅದೇ ಸಮಯದಲ್ಲಿ ದೆಹಲಿಯ ನಿಜಾಮುದ್ದೀನ್‌ ಪ್ರದೇಶ ವ್ಯಾಪ್ತಿಯಲ್ಲಿ ಇದ್ದ 11 ಜನರು ಸೇರಿ ಸುಮಾರು 36 ಜನರು ಪತ್ತೆಯಾಗಿದ್ದಾರೆ. ಇದುವರೆಗೂ 30 ಜನರ ಸ್ಯಾಂಪಲ್‌ ನೆಗಟಿವ್‌ ಎಂದು ಬಂದಿದ್ದು, ಈಗ ಮತ್ತೆ ಮೂವರ ಸ್ಯಾಂಪಲ್‌ ಕಳುಹಿಸಿಕೊಡಲಾಗಿದೆ. ಇವುಗಳು ನೆಗೆಟಿವ್ ಎಂದು ಬಂದಿರುವುದು ಜಿಲ್ಲೆಯ ಜನತೆ ನಿಟ್ಟುಸಿರು ಬಿಡುವಂತಾಗಿದೆ. 

ಲಾಕ್‌ಡೌನ್‌: ಬತ್ತ ಕಟಾವಿಗೂ ಸಮಸ್ಯೆ, ಕಾರ್ಮಿಕರು ಸಿಗದೆ ಕಂಗಾಲಾದ ರೈತ!

ಜಿಲ್ಲೆಯಲ್ಲಿ ಇದುವರೆಗೂ ವಿದೇಶದಿಂದ ಮತ್ತು ಬೇರೆಡೆಯಿಂದ ಬಂದ 80 ಜನರ ಪೈಕಿ ಅಷ್ಟುಜನರು ಹೋಂ ಕ್ವಾರಂಟೈನ್‌ ಅವಧಿ 14 ದಿನ ಮುಗಿದಿದೆ. ಈಗ ತಬ್ಲೀಘಿ ಪ್ರಕರಣಗಳು ಪತ್ತೆಯಾಗುತ್ತಲೇ ಇದ್ದು, ಪ್ರಯೋಗಾಲಯಕ್ಕೆ ಕಳುಹಿಸಿಕೊಡಲಾಗುತ್ತದೆ. ಕೇಂದ್ರ ಸರ್ಕಾರ ನೀಡಿರುವ ಮಾಹಿತಿಯನ್ನಾಧರಿಸಿ ಪೊಲೀಸರು ಹುಡುಕುತ್ತಲೇ ಇದ್ದಾರೆ.

7.65 ಕೋಟಿ ಜಮಾ:

ಜಿಲ್ಲಾದ್ಯಂತ ಜನಧನ ಖಾತೆಗೆ ಇದುವರೆಗೂ 1,53,168 ಖಾತೆಗಳಿಗೆ 142 ಬ್ಯಾಂಕ್‌ ಶಾಖೆಯಿಂದ . 7,65,84,000 ಜಮಾ ಆಗಿದೆ ಎಂದು ಜಿಲ್ಲಾಧಿಕಾರಿ ಪಿ. ಸುನೀಲ್‌ ಕುಮಾರ ಪ್ರಕಟಣೆ ನೀಡಿದ್ದಾರೆ. ಪ್ರತಿಯೊಬ್ಬರ ಖಾತೆಗೂ ಕೇಂದ್ರ ಸರ್ಕಾರ 500 ಜಮೆ ಮಾಡುತ್ತಿದ್ದು, ಇನ್ನು ಜಮೆಯಾಗುತ್ತಲೇ ಇದೆ.

ಕಟ್ಟೆಚ್ಚರಕ್ಕೆ ಸಚಿವರ ಸೂಚನೆ

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಕೋವಿಡ್‌ - 19 ನಿಗ್ರಹ ಕುರಿತ ಸಭೆಯ ಅಧ್ಯಕ್ಷತೆ ವಹಿಸಿದ್ದ ಉಪಮುಖ್ಯಮಂತ್ರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಲಕ್ಷ್ಮಣ ಸವದಿ ಅವರು ಜಿಲ್ಲಾದ್ಯಂತ ಕಟ್ಟೆಚ್ಚರ ವಹಿಸುವ ಮೂಲಕ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಿದರು.

ಇದುವರೆಗಿನ ಕಾರ್ಯ ಶ್ಲಾಘನೀಯವಾಗಿದೆ. ಹಾಗಂತ ಮೈಮರೆಯದೆ ಲಾಕ್‌ಡೌನ್‌ ಕಟ್ಟುನಿಟ್ಟಾಗಿ ಜಾರಿ ಮಾಡಬೇಕು. ಇದುವರೆಗೆ ಕೊಪ್ಪಳ ಸೇಪ್‌ ಎನ್ನಬಹುದಾಗಿದ್ದರು, ಈಗ ಪಕ್ಕದ ಬಳ್ಳಾರಿ ಜಿಲ್ಲೆಯಲ್ಲಿ ಸೋಂಕಿತರು ಪತ್ತೆಯಾಗಿರುವುದರ ಹದ್ದಿನಕಣ್ಣಿಟ್ಟು ಕಾಯಬೇಕು. ಇದುವರೆಗೂ ಇದ್ದ ಸ್ಥಿತಿಗತಿಯೇ ಬೇರೆ, ಈಗ ಪಕ್ಕದ ಜಿಲ್ಲೆಯಲ್ಲಿಯೇ ಬಂದಿರುವುದರಿಂದ ಎಷ್ಟೇ ಎಚ್ಚರವಹಿಸಿದರೂ ಕಡಿಮೆಯೇ ಎಂದು ಜಿಲ್ಲಾಡಳಿತಕ್ಕೆ ಸೂಚನೆ ನೀಡಿದರು.

ಸಂಸದ ಸಂಗಣ್ಣ ಕರಡಿ, ಶಾಸಕ ಹಾಲಪ್ಪ ಆಚಾರ್‌, ರಾಘವೇಂದ್ರ ಹಿಟ್ನಾಳ, ಬಸವರಾಜ ದಡೇಸಗೂರು, ಪರಣ್ಣ ಮುನುವಳ್ಳಿ, ಜಿಪಂ ಅಧ್ಯಕ್ಷ ವಿಶ್ವನಾಥರಡ್ಡಿ, ಜಿಲ್ಲಾಧಿಕಾರಿ ಪಿ. ಸುನೀಲ್‌ಕುಮಾರ, ಸಿಇಒ ರಘುನಂದನ್‌ ಮೂರ್ತಿ, ಎಸ್ಪಿ ಜಿ. ಸಂಗೀತಾ ಮೊದಲಾದವರು ಇದ್ದರು.
 

click me!