ಕೊರೋನಾ ಸಮರದಲ್ಲಿ ಒಂದಾದ ಭಾರತ| ಸಮರಕ್ಕೆ ಕೈಲಾದಷ್ಟು ಸಹಾಯ ಮಾಡಲು ಮುಂದಾದ ಜನತೆ| 10 ಸಾವಿರ ಮಂದಿ ಕ್ವಾರಂಟೈನ್ ವ್ಯವಸ್ಥೆಗೆ ಮುಂದಾದ ಜಮೀಯತ್ ಉಲೆಮಾ- ಎ- ಹಿಂದ್!
ನವದೆಹಲಿ(ಮಾ.31): ಕೊರೋನಾ ಹೊಡೆದೋಡಿಸುವ ನಿಟ್ಟಿನಲ್ಲಿ ಇಡೀ ದೇಶವೇ ಒಂದಾಗಿದೆ. ಚಿತ್ರ ನಟರು, ಉದ್ಯಮಿಗಳು, ಜನ ಸಾಮಾನ್ಯರೆಲ್ಲರೂ ಕೊರೋನಾಪಿಡಿತರ ನೆರವಿಗೆ ಧಾವಿಸಿದ್ದಾರೆ. ತಮ್ಮ ಕೈಲಾದಷ್ಟು ಸಹಾಯವನ್ನು ಮಾಡುತ್ತಿದ್ದಾರೆ. ಹೀಗಿರುವಾಗ ಈ ಸಮರಕ್ಕೆ ಸದ್ಯ ಜಮೀಯತ್ ಉಲೆಮಾ ಎ ಹಿಂದ್ ಕೂಡಾ ಕೈ ಜೋಡಿಸಿದೆ.
ಹೌದು ಹತ್ತು ಸಾವಿರ ಮಂದಿಯ ಕ್ವಾರಂಟೈನ್ ವ್ಯವಸ್ಥೆಗೆ ಬೇಕಾದ ಸ್ಥಳವವನ್ನು ನೀಡುವುದಾಗಿ ಜಮೀಯತ್ ಉಲೆಮಾ ಎ ಹಿಂದ್ ಮುಖ್ಯಸ್ಥ ಮೌಲಾನಾ ಮಹಮ್ಮದ್ ಮದ್ನೀ ಪ್ರಧಾನ ಮಂತ್ರಿ ನರೇಂದ್ರ ಮೋದಿಗೆ ಪತ್ರದ ಮೂಲಕ ತಿಳಿಸಿದ್ದಾರೆ.
ತಾವು ಕೇಂದ್ರಕ್ಕೆ ಬರೆದಿರುವ ಪತ್ರದಲ್ಲಿ ಕೊರೋನಾದಿಂದ ದೇಶಕ್ಕೆಎದುರಾಗುವ ಅಪಾಯ ಹಾಗೂ ಎದುರಿಸಬೇಕಾದ ಸವಾಲುಗಳನ್ನು ಉಲ್ಲೇಖಿಸಿರುವ ಮದ್ನೀ, ಎಲ್ಲಾ ವರ್ಗದ ಜನರು ಒಗ್ಗಟ್ಟಿಲ್ಲದೆ ಈ ಸಮರದಲ್ಲಿ ಗೆಲ್ಲುವುದು ಅಸಾಧ್ಯ. ಹೀಗಿರುವಾಗ ಜಮೀಯತ್ ಉಲೆಮಾ ಎ ಹಿಂದ್ ಇಂತಹ ಕಠಿಣ ಪರಿಸ್ಥಿತಿಯಲ್ಲಿ ಸಹಾಯ ಮಾಡುವುದು ದೇಶದ ಪರ ತನ್ನ ಕರ್ತವ್ಯವೆಂದು ಭಾವಿಸುತ್ತದೆ ಎಂದಿದ್ದಾರೆ.
ಅಲ್ಲದೇ ಲಾಕ್‌ಡೌನ್‌ನಿಂದಾಗಿ ಪ್ರಭಾವಿತರಾಗುವ ಲಕ್ಷಾಂತರ ಮಂದಿ ಜನರು ಹಾಗೂ ಕಾರ್ಮಿಕರು ಅನೇಕ ಸಮಸ್ಯೆಗಳನ್ನೆದುರಿಸಬೇಕಾಗಿದೆ. ಹೀಗಿರುವಾಗ ಇವರ ಸಹಾಯಕ್ಕೆ ಜಮೀಯತ್ ಉಲೆಮಾ ಎ ಹಿಂದ್ ದೇಶದಾದ್ಯಂತ ಸಾಮಾಜಿಕ ಪರಿಹಾರ ಸಮಿತಿ ರಚಿಸಿ ಸಹಾಯ ಮಾಡುವುದಾಗಿಯೂ ತಿಳಿಸಿದ್ದಾರೆ.