ತಬ್ಲೀಘಿ ಸದಸ್ಯರಿಗಾಗಿ ತೀವ್ರ ಶೋಧ, ವಿದೇಶಿಗರ ಗಡೀಪಾರು!

Published : Apr 02, 2020, 08:14 AM ISTUpdated : Apr 02, 2020, 08:59 AM IST
ತಬ್ಲೀಘಿ ಸದಸ್ಯರಿಗಾಗಿ ತೀವ್ರ ಶೋಧ, ವಿದೇಶಿಗರ ಗಡೀಪಾರು!

ಸಾರಾಂಶ

ತಬ್ಲೀಘಿ ಜಮಾತ್‌ ಸದಸ್ಯರ ಪತ್ತೆಗೆ ಯುದ್ಧೋಪಾದಿ ಕಾರ್ಯಾಚರಣೆ| ಎಲ್ಲ ರಾಜ್ಯಗಳ ಸಿಎಸ್‌, ಡಿಜಿಪಿಗಳಿಗೆ ಕೇಂದ್ರದ ಸೂಚನೆ| ಎಲ್ಲೇ ಇದ್ದರೂ ಪತ್ತೆ ಮಾಡಿ ಕ್ವಾರಂಟೈನ್‌ಗೆ ಕಳುಹಿಸಿ| ವಿದೇಶದಿಂದ ಬಂದವರನ್ನೆಲ್ಲ ಗಡೀಪಾರು ಮಾಡಿ

ನವದೆಹಲಿ(ಏ.02): ಇತಿಹಾಸ ಪ್ರಸಿದ್ಧ ನಿಜಾಮುದ್ದೀನ್‌ ಮಸೀದಿಯಲ್ಲಿ ತಬ್ಲೀಘಿ ಜಮಾತ್‌ನ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗವಹಿಸಿದವರು ದೇಶದಲ್ಲಿ ಎಲ್ಲೇ ಇದ್ದರೂ ಅವರನ್ನು ಪತ್ತೆಹಚ್ಚಿ ಕ್ವಾರಂಟೈನ್‌ಗೆ ಕಳುಹಿಸಬೇಕೆಂದು ಎಲ್ಲ ರಾಜ್ಯ ಸರ್ಕಾರಗಳಿಗೆ ಕೇಂದ್ರ ಸರ್ಕಾರ ಸೂಚನೆ ನೀಡಿದೆ.

ಈ ಕಾರ್ಯಕ್ರಮದಲ್ಲಿ ಭಾಗವಹಿಸಿದವರಿಂದ ದೊಡ್ಡ ಪ್ರಮಾಣದಲ್ಲಿ ದೇಶಾದ್ಯಂತ ಕೊರೋನಾವೈರಸ್‌ ಹರಡುತ್ತಿರುವುದು ಬೆಳಕಿಗೆ ಬಂದಿರುವ ಹಿನ್ನೆಲೆಯಲ್ಲಿ ಬುಧವಾರ ವಿಡಿಯೋ ಕಾನ್ಫರೆನ್ಸ್‌ನಲ್ಲಿ ಎಲ್ಲ ರಾಜ್ಯಗಳ ಪೊಲೀಸ್‌ ಮುಖ್ಯಸ್ಥರು ಮತ್ತು ಮುಖ್ಯ ಕಾರ್ಯದರ್ಶಿಗಳ ಜೊತೆ ಸಭೆ ನಡೆಸಿದ ಕೇಂದ್ರ ಸಂಪುಟ ಕಾರ್ಯದರ್ಶಿ ರಾಜೀವ್‌ ಗೌಬಾ, ಮರ್ಕಜ್‌ ನಿಜಾಮುದ್ದೀನ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಾಲ್ಗೊಂಡವರನ್ನೆಲ್ಲ ಪತ್ತೆಹಚ್ಚಬೇಕೆಂದು ಸೂಚನೆ ನೀಡಿದರು.

ಅಲ್ಲದೆ, ಅವರಲ್ಲಿ ಮಲೇಷ್ಯಾ, ಇಂಡೋನೇಷ್ಯಾ ಸೇರಿದಂತೆ ಬೇರೆ ಬೇರೆ ದೇಶಗಳಿಂದ ಬಂದ ವಿದೇಶಿಗರಿದ್ದರೆ ಅವರ ವಿರುದ್ಧ ವೀಸಾ ನಿಯಮ ಉಲ್ಲಂಘನೆಯ ಪ್ರಕರಣ ದಾಖಲಿಸಿ ಯುದ್ಧೋಪಾದಿಯಲ್ಲಿ ಕ್ರಮ ಜರುಗಿಸಬೇಕೆಂದು ತಿಳಿಸಿದರು.

ಸಭೆ ಸೇರಬಾರದೆಂದು ಗೊತ್ತಿರಲಿಲ್ಲ: ಜಮಾತ್‌ನಲ್ಲಿ ಪಾಲ್ಗೊಂಡ ಹುಬ್ಬಳ್ಳಿ ಯುವಕನ ಮಾತು!

ವಿದೇಶಿಗರನ್ನು ಗಡೀಪಾರು ಮಾಡಿ:

ನಿಜಾಮುದ್ದೀನ್‌ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಏಳು ಮಂದಿ ಕೊರೋನಾವೈರಸ್‌ನಿಂದ ಸಾವನ್ನಪ್ಪಿದ ಹಾಗೂ 130ಕ್ಕೂ ಹೆಚ್ಚು ಮಂದಿ ಕೊರೋನಾವೈರಸ್‌ ಸೋಂಕಿಗೆ ತುತ್ತಾದ ಹಿನ್ನೆಲೆಯಲ್ಲಿ ಮಾಚ್‌ರ್‍ 28ರಂದೇ ಕೇಂದ್ರ ಗೃಹ ಸಚಿವಾಲಯವು ಎಲ್ಲ ರಾಜ್ಯಗಳಿಗೆ ಪತ್ರ ಕೂಡ ಬರೆದಿದೆ. ಅದರಲ್ಲಿ, ಜಮಾತ್‌ನ ಕಾರ್ಯಕ್ರಮಕ್ಕೆ ಬಂದ ವಿದೇಶಿಗರೆಲ್ಲ ಧಾರ್ಮಿಕ ಉದ್ದೇಶಕ್ಕಾಗಿ ಭಾರತಕ್ಕೆ ಆಗಮಿಸುವುದನ್ನು ಮುಚ್ಚಿಟ್ಟು ಪ್ರವಾಸಿ ವೀಸಾದಲ್ಲಿ ಬಂದಿದ್ದಾರೆ. ಇದು ವೀಸಾ ನಿಯಮದ ಉಲ್ಲಂಘನೆಯಾಗಿದ್ದು, ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ ವಿದೇಶಿಗರು ದೇಶದಲ್ಲಿ ಎಲ್ಲೇ ಪತ್ತೆಯಾದರೂ ಅವರನ್ನು ಮುಂದೆ ಲಭ್ಯವಾಗುವ ಮೊದಲ ವಿಮಾನದಲ್ಲೇ ಗಡೀಪಾರು ಮಾಡಬೇಕು. ಅಲ್ಲಿಯವರೆಗೆ ಅವರನ್ನು ಕ್ವಾರಂಟೈನ್‌ನಲ್ಲಿ ಇರಿಸಬೇಕು ಎಂದು ಸೂಚಿಸಿದೆ.

ಗೃಹ ಸಚಿವಾಲಯಕ್ಕಿರುವ ಮಾಹಿತಿಯ ಪ್ರಕಾರ ಜನವರಿ 1ರ ನಂತರ ದೇಶದ ಬೇರೆ ಬೇರೆ ಕಡೆ ಇರುವ ತಬ್ಲೀಘಿ ಜಮಾತ್‌ಗಳಿಗೆ 2100 ವಿದೇಶಿಗರು ಆಗಮಿಸಿದ್ದಾರೆ. ಅವರಲ್ಲಿ ಅನೇಕರಿಗೆ ಕೊರೋನಾವೈರಸ್‌ ಸೋಂಕು ತಗುಲಿದೆ. ಧರ್ಮಪ್ರಸಾರಕ್ಕಾಗಿ ಭಾರತಕ್ಕೆ ಆಗಮಿಸಿದವರು ದೇಶಾದ್ಯಂತ ಪ್ರಯಾಣ ಮಾಡಿದ್ದಾರೆ. ಅವರೆಲ್ಲ ಸಂಭಾವ್ಯ ಕೊರೋನಾ ಸೋಂಕು ಪೀಡಿತರಾಗಿರಬಹುದು. ಹೀಗಾಗಿ ಎಲ್ಲರನ್ನೂ ಪತ್ತೆ ಮಾಡಿ ಪರೀಕ್ಷೆಗೆ ಒಳಪಡಿಸಬೇಕು ಎಂದು ಕಟ್ಟಪ್ಪಣೆ ಮಾಡಿದೆ.

ಇನ್ನಷ್ಟು ಮಸೀದಿಗಳಲ್ಲಿ ದೆಹಲಿ ವೈರಸ್‌ ಹಬ್ಬುವ ಅಪಾಯ!

70 ದೇಶಗಳಿಂದ ತಬ್ಲೀಘಿ ಟೀಂ ಆಗಮನ:

ಗೃಹ ಸಚಿವಾಲಯದ ಮಾಹಿತಿ ಪ್ರಕಾರ 70 ದೇಶಗಳಿಂದ ತಬ್ಲೀಘಿ ಕೆಲಸಕ್ಕಾಗಿ ಧಾರ್ಮಿಕ ಮುಖಂಡರು ಭಾರತಕ್ಕೆ ಬಂದಿದ್ದಾರೆ. ಅವರಲ್ಲಿ 493 ಬಾಂಗ್ಲಾದೇಶಿಗರು, 472 ಇಂಡೋನೇಷ್ಯಾದವರು, 150 ಮಲೇಷ್ಯನ್ನರು ಹಾಗೂ 142 ಥಾಯ್ಲೆಂಡಿಗರಿದ್ದಾರೆ. ಅವರಿಗೆ ದೊರೆತ ವೀಸಾದಲ್ಲಿ 6 ತಿಂಗಳು ಭಾರತದಲ್ಲಿ ನೆಲೆಸಲು ಅವಕಾಶವಿದೆ. ಆದರೆ, ದೆಹಲಿಯ ನಿಜಾಮುದ್ದೀನ್‌ನಲ್ಲಿರುವ ತಬ್ಲೀಘಿ ಮುಖ್ಯ ಕಚೇರಿಯು ಬೇರೆ ಬೇರೆ ರಾಜ್ಯಗಳಿಗೆ ತೆರಳಿದ ವಿದೇಶಿ ತಬ್ಲೀಘಿ ತಂಡಗಳನ್ನು ಮರಳಿ ಕರೆಸಿ ಅವರವರ ದೇಶಕ್ಕೆ ಕಳುಹಿಸುವ ಪ್ರಕ್ರಿಯೆ ಆರಂಭಿಸಿದೆ ಎಂದು ಪತ್ರದಲ್ಲಿ ತಿಳಿಸಿದೆ.

PREV
click me!

Recommended Stories

ಅಕ್ಷಯ್ ಕುಮಾರ್ ರಾಮಸೇತು ಚಿತ್ರದ 45 ಕಿರಿಯ ಕಲಾವಿದರಿಗೂ ಕೊರೊನಾ ಪಾಸಿಟಿವ್!
ಕೊರೋನಾ ಅಟ್ಟಹಾಸ; 3 ರಾಜ್ಯಗಳಿಗೆ ತಜ್ಞರ ತಂಡ ಕಳುಹಿಸಿದ ಮೋದಿ!