ಲಾಕ್‌ಡೌನ್ ನಿಯಮ ಕಠಿಣವಾಗಿ ಪಾಲಿಸಿದರೆ ಭಾರತದಲ್ಲಿ ಹರಡೋಲ್ಲ ರೋಗ

By Kannadaprabha NewsFirst Published Mar 29, 2020, 7:10 AM IST
Highlights

ಏಪ್ರಿಲ್‌ ಅಂತ್ಯಕ್ಕೆ ಗರಿಷ್ಠ ಕಂಟಕ?| ಏ.25-ಮೇ 5ರ ಮಧ್ಯೆ ಗರಿಷ್ಠ ಪ್ರಮಾಣ| ತೀವ್ರವಾಗಿ ಹಬ್ಬಿದರೆ 24 ಕೋಟಿ, ಸಾಧಾರಣವಿದ್ದರೆ 18 ಕೋಟಿ ಜನಕ್ಕೆ ಸೋಂಕು|  ಜುಲೈವರೆಗೂ ಇರಲಿದೆ ಕೊರೋನಾ ಕಾಟ| ಸೆಪ್ಟೆಂಬರ್‌ನಲ್ಲಿ ಬಹುತೇಕ ನಾಶ| ಅಮೆರಿಕದ ಸಿಡಿಡಿಇಪಿ ಸಂಸ್ಥೆ ಅಧ್ಯಯನ ವರದಿ

ಬೆಂಗಳೂರು(ಮಾ.29): ಭಾರತದಲ್ಲಿ ಈಗ ಪತ್ತೆಯಾಗುತ್ತಿರುವ ಕೊರೋನಾ ವೈರಸ್‌ ಸೋಂಕಿನ ಪ್ರಮಾಣ ಗಮನಿಸಿದರೆ ಏಪ್ರಿಲ್‌ ಕೊನೆಯ ವಾರ ಮತ್ತು ಮೇ ಮೊದಲ ವಾರದಲ್ಲಿ ಇದು ದೊಡ್ಡ ಪ್ರಮಾಣದಲ್ಲಿ ಸ್ಫೋಟಿಸಲಿದೆ. ಜನರು ಎಚ್ಚರಿಕೆಯಿಂದ ಇರಬೇಕೆಂದು, ಇಲ್ಲದಿದ್ದರೆ ಈ ರೋಗದ ಭೀತಿ ಸೆಪ್ಟೆಂಬರ್‌ ಕೊನೆಯ ವಾರದವರೆಗೆ ಕಾಯಬೇಕು, ಎಂದು ಅಮೆರಿಕದ ಸಂಸ್ಥೆಯೊಂದು ಮಾಡಿದೆ ಎನ್ನಲಾದ ವರದಿ ಪ್ರಕಟವಾಗಿದೆ. 

ಈ ಆಘಾತಕಾರಿ ಅಂಕಿಅಂಶಗಳು ಅಮೆರಿಕದ ವಾಷಿಂಗ್ಟನ್‌ ಡಿಸಿ ಹಾಗೂ ನವದೆಹಲಿಯನ್ನು ಕೇಂದ್ರವಾಗಿರಿಸಿಕೊಂಡು ಕಾರ್ಯನಿರ್ವಹಿಸುವ ದಿ ಸೆಂಟರ್‌ ಫಾರ್‌ ಡಿಸೀಸ್‌ ಡೈನಾಮಿಕ್ಸ್‌, ಎಕನಾಮಿಕ್ಸ್‌ ಆ್ಯಂಡ್‌ ಪಾಲಿಸಿ (ಸಿಡಿಡಿಇಪಿ) ಸಂಸ್ಥೆಯು ಅಮೆರಿಕದ ಪ್ರತಿಷ್ಠಿತ ವಿಶ್ವವಿದ್ಯಾಲಯವೊಂದರ ಸಹಯೋಗದಲ್ಲಿ ನಡೆಸಿದ ಅಧ್ಯಯನದಲ್ಲಿ ಕಂಡುಬಂದಿವೆ. ಭಾರತದಲ್ಲಿ ಸದ್ಯ ಸೋಂಕು ಹರಡುತ್ತಿರುವ ಪ್ರಮಾಣ, ಕೊರೋನಾವೈರಸ್‌ ಪತ್ತೆಗೆ ನಡೆಸುತ್ತಿರುವ ಪರೀಕ್ಷೆಗಳು, ನಮ್ಮ ದೇಶದ ಜನಜೀವನ, ಇಲ್ಲಿನ ವೈದ್ಯಕೀಯ ವ್ಯವಸ್ಥೆಯ ಸಾಮರ್ಥ್ಯ, ಚೀನಾ ಮತ್ತು ಇಟಲಿಯಲ್ಲಿ ರೋಗ ಹರಡಿದ ರೀತಿಯನ್ನು ಆಧಾರವಾಗಿರಿಸಿಕೊಂಡು ಈ ಅಧ್ಯಯನ ನಡೆಸಲಾಗಿದೆ.

ಭಾರತದಲ್ಲಿ ಹೆಚ್ಚು ಕೊರೋನಾ ಹಬ್ಬಿಸಿದ್ದು ದುಬೈ; ಅಲ್ಲಿಂದ ಆಗಮಿಸಿದವರಲ್ಲೇ ಹೆಚ್ಚು!

ಮಾ.24ಕ್ಕೆ ಈ ಅಧ್ಯಯನ ವರದಿ ಬಿಡುಗಡೆಯಾಗಿದೆ. ಆದರೆ, ಮಾ.25ರಂದು ಭಾರದಲ್ಲಿ ಸಂಪೂರ್ಣ ಲಾಕ್‌ಡೌನ್‌ ಘೋಷಿಸಲಾಗಿದೆ. ಹೀಗಾಗಿ ಇಡೀ ದೇಶ ಸ್ತಬ್ಧವಾಗಿದ್ದು, ಸೋಂಕು ಹರಡುವಿಕೆ ಕಡಿಮೆಯಾಗಿ ಈ ಅಧ್ಯಯನದ ಅಂಕಿಅಂಶಗಳು ನಿಜವಾಗದೆಯೂ ಹೋಗಬಹುದು. ಅಥವಾ ಲಾಕ್‌ಡೌನ್‌ನಿಂದಾಗಿ ಅನೇಕರು ನಗರಗಳಿಂದ ಹಳ್ಳಿಗಳಿಗೆ ಮರಳಿದ್ದು, ಗ್ರಾಮೀಣ ಪ್ರದೇಶದಲ್ಲಿ ಸೋಂಕು ಹೆಚ್ಚಾಗುವ ಸಾಧ್ಯತೆಯೂ ಉಂಟು.

ಮನುಷ್ಯನಿಗೆ ಕೊರೋನಾ ಸೋಂಕು ತಗಲಿದರೆ ಮೊದಲ ಎರಡು ವಾರ ಅದರ ಲಕ್ಷಣವೇ ಕಾಣಿಸದೆ ಹೋಗಬಹುದು. ಆಗ ಆತ ತನಗೇ ಗೊತ್ತಿಲ್ಲದಂತೆ ಇನ್ನಷ್ಟುಜನರಿಗೆ ಸೋಂಕು ವರ್ಗಾಯಿಸುತ್ತಿರುತ್ತಾನೆ. ಭಾರತ ಸದ್ಯ ಈ ಹಂತದಲ್ಲಿದೆ. ಹೀಗಾಗಿ ಇಲ್ಲಿ ಇನ್ನೂ ಹೆಚ್ಚು ಪ್ರಕರಣಗಳು ವರದಿಯಾಗಿಲ್ಲ. ಆದರೆ, ಕ್ರಮೇಣ ಪರಿಸ್ಥಿತಿ ಕೈಮೀರುತ್ತಾ ಹೋಗಲಿದೆ ಎಂದು ತಜ್ಞರು ಎಚ್ಚರಿಸಿದ್ದಾರೆ.

ಏನಾಗಬಹುದು?

- ಅತ್ಯಂತ ಕೆಟ್ಟ ಪರಿಸ್ಥಿತಿಯಲ್ಲಿ ಏ.25-ಮೇ 25 ನಡುವೆ ಗರಿಷ್ಠ ಮಟ್ಟಕ್ಕೆ ರೋಗ ಹರಡುವ ಭೀತಿ. 

- ಈಗಿನಿಂದಲೇ ಕಟ್ಟುನಿಟ್ಟಾಗಿ ತಡೆದರೆ ಮೇ 15ರ ವೇಳೆಗೆ 12.5 ಕೋಟಿ ಜನರಿಗೆ ಸೋಂಕು. ಆಗಸ್ಟಲ್ಲಿ ನಿಯಂತ್ರಣ.
- ಏನಾದರೂ ಸೆಪ್ಟೆಂಬರ್‌ ತಿಂಗಳ ಅಂತ್ಯದ ವೇಳೆಗೆ ಭಾರತದಲ್ಲಿ ವೈರಸ್‌ ಸಂಪೂರ್ಣ ನಿಯಂತ್ರಣಕ್ಕೆ ಬರಬಹುದು

ಕೊರೋನಾಗೆ ನೂರರಲ್ಲಿ ಇಬ್ಬರು ಸತ್ತರೆ, ಕುಡಿತದ ಹಿಂತೆಗೆತಕ್ಕೆ ಒಬ್ಬರು ಸಾಯಬಹುದು!

ಭಾರತ ಏನು ಮಾಡಬೇಕು?

- ವೃದ್ಧರಿಗೆ ಕೊರೋನಾ ಬಾಧಿಸುವುದು ಹೆಚ್ಚು. ಅವರನ್ನು 3 ವಾರ ಐಸೋಲೇಷನ್‌ನಲ್ಲಿ ಇಡಬೇಕು. ಹಾಗಾದಲ್ಲಿ, ಜುಲೈ ನಂತರ ರೋಗ ಹೆಚ್ಚದಂತೆ ನೋಡಿಕೊಳ್ಳಬಹುದು

- ಸಾಮಾನ್ಯ ಆಸ್ಪತ್ರೆಗೆ ದಾಖಲಿಸಿದರೆ ಇತರರಿಗೆ ಹಬ್ಬುವ ಸಾಧ್ಯತೆ. ಹೀಗಾಗಿ, 3 ತಿಂಗಳ ಕಾಲ ದೊಡ್ಡ ಹಾಗೂ ತಾತ್ಕಾಲಿಕ ಆಸ್ಪತ್ರೆಗಳನ್ನು ಕೊರೋನಾ ಚಿಕಿತ್ಸೆಗೆ ಮೀಸಲಿಡಬೇಕು

- ಭಾರತದಲ್ಲಿ ಉಸಿರಾಟ ಸಮಸ್ಯೆ, ಕೆಮ್ಮು, ನೆಗಡಿ, ಜ್ವರ ಇದ್ದವರನ್ನು ಮಾತ್ರ ಪರೀಕ್ಷಿಸಲಾಗುತ್ತಿದೆ. ಯಾವುದೇ ಲಕ್ಷಣವಿದ್ದರೂ ಪರೀಕ್ಷಿಸಿದರೆ ಸಾವು ತಡೆಗಟ್ಟಲು ಸಹಕಾರಿ

- 5 ವರ್ಷಕ್ಕಿಂತ ಚಿಕ್ಕ ಮಕ್ಕಳು, 60 ವರ್ಷ ಮೇಲ್ಪಟ್ಟವರ ಬಗ್ಗೆ ಹೆಚ್ಚಿನ ಗಮನ ಹರಿಸಬೇಕು. ಇವರಿಗೆ ಆದ್ಯತೆ ಮೇರೆಗೆ ಪರೀಕ್ಷೆ ನಡೆಸಿದರೆ ಸಾವಿನ ಸಂಖ್ಯೆ ಕಡಿಮೆ ಮಾಡಬಹುದು

ಲಾಕ್‌ಡೌನ್‌ನಿಂದಾಗಿ ಕಾರ್ಮಿಕರು ತವರಿಗೆ; ನಗರದಿಂದ ಹಳ್ಳಿಗೆ ವಲಸಿಗರ ಪ್ರವಾಹ!

ಭಾರತಕ್ಕೆ ಅನುಕೂಲ

- ಯುವಜನರ ಸಂಖ್ಯೆ ಹೆಚ್ಚಿರುವ ಕಾರಣ ಸೋಂಕು ಪ್ರಮಾಣ ಕಡಿಮೆ ಆಗಬಹುದು.

- ಈಗ ಬೇಸಿಗೆಯಿರುವುದರಿಂದ ವೈರಸ್‌ ಹರಡುವ ಪ್ರಮಾಣ ಕಡಿಮೆಯಾಗಬಹುದು.

ಭಾರತಕ್ಕೆ ಸಂಕಷ್ಟಕರ

- ಚೀನಾ, ಇಟಲಿಗೆ ಹೋಲಿಸಿದರೆ ನಮ್ಮ ಯುವ ಜನರಲ್ಲಿ ಪೌಷ್ಟಿಕಾಂಶದ ಕೊರತೆಯಿದೆ. ಮಕ್ಕಳಿಗೂ ವೈರಸ್‌ ತಗಲಬಹುದು.

- ಬೇರೆ ದೇಶಗಳಿಗಿಂತ ಜನಸಂಖ್ಯೆ ಮತ್ತು ಜನಸಾಂದ್ರತೆ ಜಾಸ್ತಿಯಿರುವುದರಿಂದ ವೈರಸ್‌ ಹರಡಲು ಅವಕಾಶಗಳು ಹೆಚ್ಚಿವೆ

ಉಷ್ಣತೆ ಹೆಚ್ಚಿದರೆ ಅನುಕೂಲವಾ?

ಚೀನಾದಲ್ಲಿ ಉಷ್ಣತೆ ಹಾಗೂ ಆದ್ರ್ರತೆ ಹೆಚ್ಚುತ್ತಾ ಹೋದಂತೆ ವೈರಸ್‌ ಹರಡುವ ಪ್ರಮಾಣ ಕಡಿಮೆಯಾಗಿದೆ. ಭಾರತದಲ್ಲೀಗ ಉಷ್ಣತೆ ಜಾಸ್ತಿಯಾಗುತ್ತಿರುವುದರಿಂದ ಇಲ್ಲೂ ವೈರಸ್‌ ಸೋಂಕು ಹರಡುವುದು ಕಡಿಮೆಯಾಗಬಹುದು. ಆದರೆ, ಚೀನಾದಲ್ಲಿ ಹಾಗಾಗಿದೆ ಎಂದು ಭಾರತದಲ್ಲೂ ಆಗುತ್ತದೆಯೇ ಎಂಬುದು ಸ್ಪಷ್ಟವಿಲ್ಲ.

ಅಧ್ಯಯನ ನಡೆಸಿದ್ದು ಹೇಗೆ?

ವಿವಿಧ ರೋಗಕ್ಕೆ ಲಸಿಕೆ ತಯಾರಿಸಲು, ಆರೋಗ್ಯ ನೀತಿ ನಿರ್ಧರಿಸಲು ಭಾರತ ಸರ್ಕಾರವು ಬಳಸಿಕೊಳ್ಳುವ ಇಂಡಿಯಾಸಿಮ್‌ ಎಂಬ ಸಂಸ್ಥೆಯ ಅಂಕಿ-ಅಂಶವನ್ನೇ ಉಪಯೋಗಿಸಿ ಸಿಡಿಡಿಇಪಿ ತಜ್ಞರು ಅಧ್ಯಯನ ನಡೆಸಿದ್ದಾರೆ. ಭಾರತದ ಜನಸಂಖ್ಯೆ ಕುರಿತ ಮಾಹಿತಿ, ವಯಸ್ಸು, ಲಿಂಗ, ಸ್ಥಳ, ಸಮಾಜೋ-ಆರ್ಥಿಕ ಸ್ಥಿತಿಗತಿ ವಿವರ, ಜಿಲ್ಲಾವಾರು ಅಂಕಿ-ಅಂಶ ಬಳಸಲಾಗಿದೆ. ಜತೆಗೆ ಚೀನಾ, ಇಟಲಿಯಲ್ಲಿ ಸೋಂಕು ಹರಡಿದ ರೀತಿಗೆ ಸಮೀಕರಿಸಿ ಅಧ್ಯಯನ ನಡೆಸಲಾಗಿದೆ.

"

click me!