ಚಿತ್ರದುರ್ಗ ಜಿಲ್ಲೆ ಹೊಸದುರ್ಗ ತಾಲ್ಲೂಕಿನ ಶೀರನಕಟ್ಟೆ ಗ್ರಾಮದಲ್ಲಿ ಹಲವು ವರ್ಷಗಳಿಂದ ಅನುಮತಿ ಪಡೆಯದೇ ಅಕ್ರಮವಾಗಿ ಮದ್ಯ ಮಾರಾಟ ಮಾಡಲಾಗುತ್ತಿದೆ. ಈ ಮದ್ಯ ಮಾರಾಟ ತಡೆಯದಿದ್ದರೆ ನಾವು ಅನಿರ್ದಿಷ್ಟಾವಧಿ ಸತ್ಯಾಗ್ರಹ ಮಾಡುತ್ತೇವೆ ಎಂದು ಜಿಲ್ಲಾಧಿಕಾರಿಗಳ ಮುಂದೆ ಗ್ರಾಮದ ಮಹಿಳೆಯರು ಆಕ್ರೋಶ ಹೊರ ಹಾಕಿದ್ದಾರೆ.
ವರದಿ: ಕಿರಣ್ಎಲ್ ತೊಡರನಾಳ್ ಏಷ್ಯಾನೆಟ್ ಸುವರ್ಣ ನ್ಯೂಸ್
ಚಿತ್ರದುರ್ಗ (ನ.27) : ಮದ್ಯ ಮಾರಾಟ ನಿಲ್ಲಿಸಿ ಇಲ್ಲವಾದಲ್ಲಿ ನಾವು ಅನಿರ್ದಿಷ್ಟಾವಧಿ ಸತ್ಯಾಗ್ರಹ ಮಾಡುತ್ತೇವೆ ಎಂದು ಜಿಲ್ಲಾಧಿಕಾರಿಗಳ ಮುಂದೆ ತಮ್ಮ ಆಕ್ರೋಶವನ್ನು ಹೊರ ಹಾಕ್ತಿರುವ ಮಹಿಳೆಯರು. ಚಿತ್ರದುರ್ಗ ಜಿಲ್ಲೆ ಹೊಸದುರ್ಗ ತಾಲ್ಲೂಕಿನ ಶೀರನಕಟ್ಟೆ ಗ್ರಾಮದಲ್ಲಿ ಸುಮಾರು ವರ್ಷಗಳಿಂದ ಅನುಮತಿ ಪಡೆಯದೇ ಅಕ್ರಮವಾಗಿ ಮದ್ಯ ಮಾರಾಟ ಮಾಡಲಾಗುತ್ತಿದೆ. ಆದರೂ ಅಧಿಕಾರಿಗಳು ಕಡಿವಾಣ ಹಾಕದೇ ಬೊಕ್ಕಸ ತುಂಬೋದು ನೋಡ್ಕೊಂಡ್ ಸುಮ್ನೆ ಕೂತಿರೋದು ಖಂಡನೀಯ ಎಂದು ಶೀರನಕಟ್ಟೆ ಗ್ರಾಮದ ಮಹಿಳೆಯರು ತಮ್ಮ ನೋವನ್ನು ಹೊರಹಾಕಿದ್ದಾರೆ.
ನಮ್ಮ ಗ್ರಾಮದಲ್ಲಿ ಸುಮಾರು ವರ್ಷಗಳಿಂದ ಮಧ್ಯ ಮಾರಾಟ ಮಾಡುತ್ತಿದ್ದು, ಗ್ರಾಮದ ಗಂಡಸರು, ವಿದ್ಯಾರ್ಥಿಗಳು ಮಧ್ಯ ಕುಡಿದು ಶಾಲಾ ಕಾಲೇಜು ಮತ್ತು ಕೆಲಸಕ್ಕೆ ಹೋಗದೇ ಹಾಳಾಗುತ್ತಿದ್ದು, ಕೂಡಲೇ ಮಧ್ಯ ಮಾರಾಟ ಮಾಡುವುದನ್ನು ನಿಷೇದಿಸಬೇಕು. ಗ್ರಾಮದಲ್ಲಿರುವ ಬಹುತೇಕರು ಕೂಲಿ ಕೆಲಸ ಮಾಡುತ್ತಿದ್ದು, ಹಿಂದುಳಿದ ಬಡ ಕುಟುಂಬಕ್ಕೆ ಸೇರಿದವರಾಗಿರುತ್ತೇವೆ. ಕಳೆದ ಹಲವು ವರ್ಷಗಳಿಂದ ಮದ್ಯ ಮಾರಾಟ ಮಾಡುತ್ತಿದ್ದು, ಗಂಡಸರು ಕುಡಿದು ಕೆಲಸಕ್ಕೆ ಹೋಗದೇ ನಮ್ಮಗಳ ಮೇಲೆ ಗಲಾಟೆ ಮಾಡಿ ತುಂಬಾ ತೊಂದರೆ ಕೊಡುತ್ತಿದ್ದಾರೆ. ವಿದ್ಯಾರ್ಥಿಗಳು ಮತ್ತು ಹುಡುಗರು ಮದ್ಯ ಸೇವನೆಯಿಂದ ಶಾಲಾ ಕಾಲೇಜಿಗೆ ಹೋಗದಂತೆ ಹಾಳಾಗುತ್ತಿದ್ದು, ಭವಿಷ್ಯ ಹಾಳು ಮಾಡಿಕೊಳ್ಳುತ್ತಿದ್ದಾರೆ ಎಂದು ಆಗ್ರಹಿಸಿದ್ದಾರೆ.
undefined
ಮದ್ಯದಂಗಡಿಗೆ ವಿರೋಧ: ಸುಳ್ಯದಲ್ಲಿ ಕುರ್ಚಿ, ನಾಮಫಲಕ ಕಿತ್ತೆಸೆದು ಪ್ರತಿಭಟನೆ..!
ಒಂದು ಕಾಲೋನಿಯಲ್ಲಿ 5 ಅಕ್ರಮ ಮದ್ಯದಂಗಡಿ: ನಮ್ಮ ಮಕ್ಕಳ ಭವಿಷ್ಯ ಈ ಮದ್ಯದಿಂದ ಹಾಳಾಗುತ್ತಿದೆ. ಈ ಹಿಂದೆ ಹಲವು ಬಾರಿ ಮದ್ಯ ಮಾರಾಟ ತಡೆಯುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಹಾಗೂ ಲಕ್ಕಿಹಳ್ಳಿ ಗ್ರಾಮ ಪಂಚಾಯಿತಿಗೆ ದೂರನ್ನು ನೀಡಿದ್ದೇವೆ. ಆದರೂ ಅಧಿಕಾರಿಗಳು ಮಾತ್ರ ಯಾವುದೇ ಕ್ರಮ ಕೈಗೊಂಡಿಲ್ಲ. ಮದ್ಯ ಮಾರಾಟ ಮಾಡುವವರು ಹಣವಂತರಾಗಿದ್ದು, ನಮ್ಮ ಕಾಲೋನಿಗಳಲ್ಲಿ ಮನೆಗಳಲ್ಲಿಯೇ 4 ರಿಂದ 5 ಕಡೆ ಮದ್ಯ ಮಾರಾಟ ಮಾಡುತ್ತಿದ್ದಾರೆ. ಇದರಿಂದ ನಮ್ಮ ಕಾಲೋನಿಯ ಪುರುಷರು ಮನೆಗಳಿಗೆ ಬಾರದೇ ಕುಡಿದು ಹಾಳಾಗುತ್ತಿದ್ದಾರೆ.
ಕುಟುಂಬಗಳಿಗೆ ಆರ್ಥಿಕ ಸಂಕಷ್ಟ: ಇನ್ನು ಯುವಕರಿಂದ ವೃದ್ಧರವರೆಗೆ ಗ್ರಾಮದ ಬಹುತೇಕ ಪುರುಷರು ಯಾವುದೇ ಕೆಲಸಕ್ಕೂ ಹೋಗದೇ ಆರ್ಥಿಕ ಸಂಕಷ್ಟ ಅನುಭವಿಸುತ್ತಿದ್ದೇವೆ. ದಯಮಾಡಿ ನಮ್ಮ ಗ್ರಾಮದ ದಲಿತ ಕಾಲೋನಿಯಲ್ಲಿ ಇರುವ ಹಾಗೂ ಗ್ರಾಮದಲ್ಲಿ ಇರುವ ಇನ್ನಿತರ ಮದ್ಯ ಮಾರಾಟ ಕೇಂದ್ರಗಳನ್ನು ಮುಚ್ಚಿಸಬೇಕು. ಈ ಬಗ್ಗೆ ಸೂಕ್ತ ಕಾನೂನು ಕ್ರಮ ಕೈಗೊಂಡು ನಮ್ಮಗಳ ಜೀವನಕ್ಕೆ ಅನುಕೂಲ ಮಾಡಿಕೊಡಬೇಕು ಎಂದು ಜಿಲ್ಲಾಧಿಕಾರಿ ದಿವ್ಯಪ್ರಭು ಅವರ ಮುಂದೆ ಮನವಿ ಮಾಡಿಕೊಂಡಿದ್ದಾರೆ.