Murugha Mutt POCSO case: ಮುರುಘಾ ಮಠದ ಶ್ರೀಗಳ ನ್ಯಾಯಾಂಗ ಬಂಧನವನ್ನು ಚಿತ್ರದುರ್ಗ ಜಿಲ್ಲಾ ನ್ಯಾಯಾಲಯ ಮುಂದುವರೆಸಿದೆ. ಈ ಮೂಲಕ ಇನ್ನೂ ನವೆಂಬರ್ 3ರವರೆಗೆ ಜೈಲು ವಾಸ ಮುಂದುವರೆಯಲಿದೆ.
ಚಿತ್ರದುರ್ಗ: ಒಂದಾದ ನಂತರ ಪ್ರಕರಣಗಳು ಮುರುಘಾ ಮಠದ ಶ್ರೀಗಳ ವಿರುದ್ಧ ದಾಖಲಾಗುತ್ತಲೇ ಇವೆ. ಮತ್ತೊಂದೆಡೆ ಅವರ ಜಾಮೀನು ಅರ್ಜಿ ಮತ್ತೆ ಮತ್ತೆ ವಜಾಗೊಳ್ಳುತ್ತಿದ್ದು ನ್ಯಾಯಾಂಗ ಬಂಧನ ವಿಸ್ತರಣೆಯಾಗುತ್ತಲೇ ಇದೆ. ಇಂದು ಮುರುಘಾ ಶ್ರೀ ನ್ಯಾಯಾಂಗ ಬಂಧನದ ಅವಧಿ ಮುಗಿದ ಹಿನ್ನೆಲೆಯಲ್ಲಿ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿತ್ತು. ನ್ಯಾಯಾಲಯ ನವೆಂಬರ್ 3ರ ವರೆಗೆ ನ್ಯಾಯಾಂಗ ಬಂಧನ ವಿಸ್ತರಿಸಿ ಆದೇಶಿಸಿದೆ. ಈ ಹಿಂದೆ ಮುರುಘಾ ಶ್ರೀಗಳು ಹಲವು ಬಾರಿ ಜಾಮೀನು ಅರ್ಜಿ ಸಲ್ಲಿಸಿದ್ದರೂ ನ್ಯಾಯಾಲಯ ಪೋಕ್ಸೊ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಜಾಮೀನು ನಿರಾಕರಿಸಿದೆ.
ಪೂಜೆ ಕೈಂಕರ್ಯಕ್ಕೆ ಉತ್ತರಾಧಿಕಾರಿ:
ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ ಆರೋಪ ಎದುರಿಸುತ್ತಿರುವ ಮುರುಘಾ ಶ್ರೀ ವಿರುದ್ಧದ ಫೋಕ್ಸೊ ಪ್ರಕರಣ ಸಂಬಂಧಿಸಿದಂತೆ ದಿನಕ್ಕೊಂದು ತಿರುವು ಪಡೆಯುತ್ತಿದೆ. ಇಂದು ಪೂಜಾ ಕೈಂಕರ್ಯ ಉಸ್ತುವಾರಿಯನ್ನು ಅಧಿಕೃತವಾಗಿ ನೇಮಿಸುವ ಮೂಲಕ ಮುರುಘಾ ಶ್ರೀ ಆದೇಶ ಹೊರಡಿಸಿದ್ದಾರೆ. ಇದರ ಜೊತೆ ಜೊತೆಗೆ ಮುರುಘಾ ಶರಣರ ಪೀಠತ್ಯಾಗಕ್ಕೂ ಒತ್ತಡ ಹೆಚ್ಚು ಮುನ್ನೆಲೆಗೆ ಬರ್ತಿದೆ. ಮುರುಘಾ ಶರಣರ ವಿರುದ್ಧ ಫೋಕ್ಸೊ ಪ್ರಕರಣ ದಾಖಲಾದ ನಂತರ ಬೆಳವಣಿಗೆಗಳು ಗರಿಗೆದರಿವೆ. ಇಂದು ಬೆಳಿಗ್ಗೆ ಚಿತ್ರದುರ್ಗ ವೀರಶೈವ ಮಹಾಸಭಾ ಜಿಲ್ಲಾ ಘಟಕದಿಂದ ಸಭೆ ನಡೆಸಲಾಯಿತು. ವೀರಶೈವ ಮಹಾಸಭಾ ಅಧ್ಯಕ್ಷರಿಗೆ ಪತ್ರ ಬರೆದಿರುವ ಲಿಂಗಾಯತ ಮುಖಂಡರು ಮುರುಘಾ ಶ್ರೀ ನ್ಯಾಯಾಂಗ ಬಂಧನದಲ್ಲಿರುವ ಹಿನ್ನೆಲೆ ಮಠದ ಆಡಳಿತ, ಧಾರ್ಮಿಕ ಆಚರಣೆಗೆ ಧಕ್ಕೆಯುಂಟಾಗಿದೆ. ಮಠದ ಪೂಜಾ ಕೈಂಕರ್ಯಕ್ಕಾಗಿ ಹೆಬ್ಬಾಳು ಮಹಾಂತ ರುದ್ರೇಶ್ವರ ಸ್ವಾಮೀಜಿಗೆ ಮೌಖಿಕವಾಗಿಯಷ್ಟೇ ಸೂಚಿಸಲಾಗಿದೆ. ಮಠಕ್ಕೆ ಹೊಸ ಪೀಠಾಧಿಕಾರಿ ಆಯ್ಕೆ ಆಗಬೇಕು. ಈಗಾಗಲೇ ಸಿಎಂ ಬೊಮ್ಮಾಯಿ, ಮಾಜಿ ಸಿಎಂ ಬಿಎಸ್ವೈ ಅವರಿಗೆ ಭೇಟಿಯಾಗಿ ಮನವರಿಕೆ ಮಾಡಿದ್ದೇವೆ. ಸಿಎಂ, ಮಾಜಿ ಸಿಎಂ ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದ್ದಾರೆ ಎಂದರು.
ಇನ್ನು ವೀರಶೈವ ಮಹಾಸಭಾ ಮುಖ್ಯಸ್ಥರ ಹೇಳಿಕೆಯ ಕೆಲವೇ ಗಂಟೆಗಳಲ್ಲಿ ಮುರುಘಾಮಠದ ಪೂಜಾ ಉಸ್ತುವಾರಿಗಾಗಿ ದಾವಣಗೆರೆ ವಿರಕ್ತ ಮಠದ ಬಸವಪ್ರಭು ಶ್ರೀ ಅವರನ್ನು ಅಧಿಕೃತವಾಗಿ ಕಾನೂನಿನ ನಡೆಯಂತೆ ನೇಮಿಸಲಾದ ಬಗ್ಗೆ ಮಠದಿಂದ ಮಾಹಿತಿ ಹೊರಬಿತ್ತು. ಉಸ್ತುವಾರಿಯಾಗಿ ನೇಮಕವಾಗುತ್ತಿದ್ದಂತೆ ಬಸವಪ್ರಭು ಶ್ರೀ ಮುರುಘಾ ಪರಂಪರೆಯ ಸ್ಥಾಪಕರಾದ ಶಾಂತವೀರ ಸ್ವಾಮಿಗಳ ಗದ್ದುಗೆ ದರ್ಶನ ಪಡೆದು ಪೂಜೆ ಸಲ್ಲಿಸಿದರು. ಇನ್ನು ಪೂಜೆಯ ಬಳಿಕ ಮಾತನಾಡಿದ ಬಸವಪ್ರಭು ಶ್ರೀ ಮುರುಘಾ ಶರಣರು ಆದೇಶ ಮಾಡಿದ್ದಾರೆ. ಶ್ರೀಮಠದ ಪೂಜೆ, ಅನ್ನದಾಸೋಹ, ಕೆಲಸ ಕಾರ್ಯಗಳನ್ನು ನೋಡಲು ಆದೇಶ ನೀಡಿದಾರೆ. ನಿಷ್ಟೆ ಭಕ್ತಿಯಿಂದ ಸೇವೆ ಮಾಡುತ್ತೇನೆ ಎಂದರು.
ಮುರುಘಾ ಶ್ರೀ ಜಾಮೀನು ಅರ್ಜಿ: ಸಂತ್ರಸ್ತೆಯರಿಗೆ ಹೈಕೋರ್ಟ್ ನೋಟಿಸ್
ಇತ್ತ ಬಸವಪ್ರಭು ಶ್ರೀಗಳು ಪೂಜಾ ಉಸ್ತುವಾರಿಯಾಗಿ ನೇಮಕವಾಗುತ್ತಲೇ ಹೆಬ್ಬಾಳು ಶಿವರುದ್ರ ಸ್ವಾಮೀಜಿ ಮುರುಘಾ ಮಠದಲ್ಲಿ ಕಾಣಿಸಿಕೊಂಡಿಲ್ಲ. ಬಸವಪ್ರಭು ಶ್ರೀ ನೇಮಕಕ್ಕೆ ಅವರು ಅಸಮಾಧಾನ ಸೂಚಿಸಿದ್ದಾರೆ ಎನ್ನಲಾಗುತ್ತಿದೆ. ಮುರುಘಾ ಶ್ರೀ ನ್ಯಾಯಾಂಗ ಬಂಧನಕ್ಕೊಳಗಾದ ನಂತರ ಮಠದ ಪೂಜಾ ಕೈಂಕರ್ಯಗಳನ್ನು ಶಿವರುದ್ರ ಸ್ವಾಮೀಜಿ ನೆರವೇರಿಸಿದ್ದರು. ಆ ಹಿನ್ನೆಲೆಯಲ್ಲಿ ಅವರು ಅಸಮಾಧಾನಗೊಂಡಿದ್ದಾರೆ ಎನ್ನಲಾಗಿದೆ.
ಮಠದಲ್ಲಿ ಪತ್ತೆಯಾದ ಮಗು ಮುರುಘಾ ಶ್ರೀಗಳದ್ದಾ?: DNA ಟೆಸ್ಟ್'ಗೆ ಒತ್ತಾಯ!
ನವೆಂಬರ್ 3 ರ ನಂತರ ಮತ್ತೆ ಮುರುಘಾ ಶರಣರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಿದ್ದು ಅವರು ಮತ್ತೆ ಜಾಮೀನಿಗಾಗಿ ಮನವಿ ಮಾಡುವ ಸಾಧ್ಯತೆಯಿದೆ.