ಜ್ಯೋತಿಷಿಗಳು ನುಡಿದಿದ್ದ ಮಾತು ನಿಜವಾಯ್ತು, ಚೆನ್ನಮ್ಮ ಅವರಿಗೆ ಸಿಕ್ಕಿತು ಮುತ್ತೈದೆ ಸಾವು: ವೈಎಸ್‌ವಿ ದತ್ತ

Published : Jul 18, 2026, 10:04 PM IST
ysv datta On Chennamma

ಸಾರಾಂಶ

ಮಾಜಿ ಪ್ರಧಾನಿ ದೇವೇಗೌಡರ ಪತ್ನಿ ಚೆನ್ನಮ್ಮ ಅವರ ನಿಧನಕ್ಕೆ ಕಂಬನಿ ಮಿಡಿದಿರುವ ವೈಎಸ್‌ವಿ ದತ್ತ, ಅವರ ಸಾವಿನ ಕುರಿತು ಜ್ಯೋತಿಷಿಗಳು ನುಡಿದಿದ್ದ ಭವಿಷ್ಯ ನಿಜವಾದ ಬಗ್ಗೆ ಭಾವುಕರಾಗಿ ಮಾತನಾಡಿದ್ದಾರೆ.

ಚಿಕ್ಕಮಗಳೂರು (ಜು.18): ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ಪತ್ನಿ ಚೆನ್ನಮ್ಮ ಅವರ ನಿಧನಕ್ಕೆ ಅವರ ಕುಟುಂಬದ ಆಪ್ತ, ಮಾಜಿ ಶಾಸಕ ವೈಎಸ್‌ವಿ ದತ್ತ ತೀವ್ರ ಕಂಬನಿ ಮಿಡಿದಿದ್ದಾರೆ. ಕಡೂರಿನಲ್ಲಿ ಮಾಧ್ಯಮಗಳೊಂದಿಗೆ ಭಾವುಕರಾಗಿ ಮಾತನಾಡಿದ ಅವರು, ಚೆನ್ನಮ್ಮ ಅವರ ಮುಗ್ಧತೆ, ದಾಂಪತ್ಯ ಮತ್ತು ಅವರ ಧಾರ್ಮಿಕ ಬದುಕಿನ ಹಲವು ರೋಚಕ ಸಂಗತಿಗಳನ್ನು ಬಿಚ್ಚಿಟ್ಟಿದ್ದಾರೆ. ಎಲ್ಲಕ್ಕಿಂತ ಮುಖ್ಯವಾಗಿ ಚೆನ್ನಮ್ಮ ಅವರ ಸಾವಿನ ಕುರಿತು ಜ್ಯೋತಿಷಿಗಳು ಈ ಹಿಂದೆ ನುಡಿದಿದ್ದ ಭವಿಷ್ಯವೊಂದು ಈಗ ನಿಜವಾಗಿರುವ ಮಾಹಿತಿ ನೀಡಿದ್ದಾರೆ.

ಚೆನ್ನಮ್ಮ ಅವರ ನಿಧನದ ಕುರಿತು ಮಾತನಾಡುತ್ತಾ ವೈ.ಎಸ್.ವಿ. ದತ್ತ ಅವರು, ಚೆನ್ನಮ್ಮನವರಿಗೆ ಮುತ್ತೈದೆ ಸಾವು ಬರಲಿದೆ ಎಂದು ಹಿಂದೆ ಜ್ಯೋತಿಷಿಗಳು ಭವಿಷ್ಯ ನುಡಿದಿದ್ದರು.ಇಂದು ಅದೇ ರೀತಿ ದೇವೇಗೌಡರ ಸಮ್ಮುಖದಲ್ಲೇ ಅವರು ಮುತ್ತೈದೆಯಾಗಿಯೇ ಕಣ್ಣು ಮುಚ್ಚಿದ್ದಾರೆ. ಜ್ಯೋತಿಷಿಗಳು ಅಂದು ಹೇಳಿದ್ದ ಮಾತು ಇಂದು ಅಕ್ಷರಶಃ ನಿಜವಾಗಿದೆ ಎಂದಿದ್ದಾರೆ. ಅಲ್ಲದೆ ಶನಿವಾರ ಮಧ್ಯಾಹ್ನ ತಾವೇ ಖುದ್ದಾಗಿ ದೇವೇಗೌಡರನ್ನು ಭೇಟಿಯಾದಾಗ, ಸಂಜೆ ಹೊತ್ತಿಗೆ ಚೆನ್ನಮ್ಮನವರ ಆರೋಗ್ಯ ಸರಿಯಾಗಬಹುದು ಎಂದು ಗೌಡರು ಆಶಾಭಾವನೆ ವ್ಯಕ್ತಪಡಿಸಿದ್ದರು ಎಂದಿದ್ದಾರೆ.

'ನನ್ನ ತಾಯಿಯನ್ನೇ ಕಳೆದುಕೊಂಡಷ್ಟು ದುಃಖವಾಗಿದೆ'

ಚೆನ್ನಮ್ಮ ಅವರೊಂದಿಗಿನ ತಮ್ಮ ಒಡನಾಟವನ್ನು ನೆನೆದ ದತ್ತ, ಅವರ ನಿಧನದಿಂದ ನನಗೆ ನನ್ನ ಸ್ವಂತ ತಾಯಿಯನ್ನೇ ಕಳೆದುಕೊಂಡಷ್ಟು ದುಃಖವಾಗಿದೆ. ನಾನು ಒಂದೆರಡು ತಿಂಗಳು ಬೆಂಗಳೂರಿನ ಅವರ ಮನೆಗೆ ಹೋಗದಿದ್ದರೆ ಸಾಕು, ತಾವೇ ಖುದ್ದಾಗಿ ಫೋನ್ ಮಾಡಿ ಮನೆಗೆ ಬರಲು ಹೇಳುತ್ತಿದ್ದರು. ಮನೆಗೆ ಹೋದ ತಕ್ಷಣ 'ಯಾಕೋ ಇಷ್ಟು ದಿನ ಬರಲಿಲ್ಲ?' ಎಂದು ಪ್ರೀತಿಯಿಂದಲೇ ಗದರುತ್ತಿದ್ದರು. ಕೆಲವೊಮ್ಮೆ 'ಗೌಡರಿಗೆ ಜ್ವರ ಬಂದಿದೆ, ಸ್ವಲ್ಪ ಮಂಕಾಗಿದ್ದಾರೆ. ನೀನು ಬಂದರೆ ಅವರು ಹುಷಾರಾಗುತ್ತಾರೆ, ತಕ್ಷಣ ಬಾ' ಎಂದು ನನ್ನನ್ನು ಕರೆಯುತ್ತಿದ್ದರು" ಎಂದಿದ್ದಾರೆ.

ಯಾರೂ ಹೆದರಿಸಲಾಗದ ದೇವೇಗೌಡರನ್ನು ಉಪವಾಸ ಮಾಡಿಸುತ್ತಿದ್ದ ಶಕ್ತಿ!

ರಾಜಕೀಯದಲ್ಲಿ ಎಚ್.ಡಿ. ದೇವೇಗೌಡರನ್ನು ಹೆದರಿಸಲು ಯಾರಿಂದಲೂ ಸಾಧ್ಯವಿರಲಿಲ್ಲ. ಆದರೆ, ಮನೆಯಲ್ಲಿ ಮಾತ್ರ ಹಬ್ಬ ಹರಿದಿನ ಬಂದರೆ ಸಾಕು, ಗೌಡರು ಚೆನ್ನಮ್ಮನವರ ಜೊತೆ ಮೌನವಾಗಿ ಉಪವಾಸ ಕೂರಬೇಕಿತ್ತು. ಅಷ್ಟರಮಟ್ಟಿಗೆ ಗೌಡರ ಮೇಲೆ ಅವರಿಗೆ ಅಧಿಕಾರವಿತ್ತು. ಚೆನ್ನಮ್ಮನವರ ಇಡೀ ಜಗತ್ತೇ ದೇವೇಗೌಡರಾಗಿದ್ದರು. ಸದಾ ಪೂಜೆ, ಪುನಸ್ಕಾರ, ಉಪವಾಸ ಎಂದು ಕಳೆಯುತ್ತಿದ್ದ ಅಪ್ಪಟ ದೈವಭಕ್ತೆ ಅವರಾಗಿದ್ದರು. ದೇವಸ್ಥಾನಗಳಲ್ಲಿ ಅರ್ಚನೆ ಮಾಡಿಸುವಾಗ ಇಡೀ ದೊಡ್ಡಮನೆ ಕುಟುಂಬದ ಎಲ್ಲ ಸದಸ್ಯರ ರಾಶಿ, ನಕ್ಷತ್ರ, ಕುಲ ಮತ್ತು ಗೋತ್ರಗಳನ್ನು ಪಟಪಟನೆ ಹೇಳುತ್ತಿದ್ದರು. ಅದನ್ನು ಕೇಳಿ ದೇವಸ್ಥಾನದ ಅರ್ಚಕರೆ ಅಚ್ಚರಿಪಡುತ್ತಿದ್ದರು ಎಂದು ದತ್ತ ನೆನಪಿಸಿಕೊಂಡಿದ್ದಾರೆ.

ಸರ್ಕಾರಿ ಬಂಗಲೆಗೆ ಹಾಸನದಿಂದ ಹಸುಗಳನ್ನು ತಂದಿದ್ದ ಮುಗ್ಧ ಹಳ್ಳಿ ಹೆಣ್ಣುಮಗಳು

ಮಾಜಿ ಪ್ರಧಾನಿ ಪತ್ನಿಯಾಗಿದ್ದರೂ ಅವರಲ್ಲಿ ಲವಲೇಶವೂ ಹಮ್ಮು-ಬಿಮ್ಮು ಇರಲಿಲ್ಲ ಎಂದ ದತ್ತ, ಅವರ ಸರಳತೆಗೆ ಸಾಕ್ಷಿಯಾದ ಘಟನೆಯೊಂದನ್ನು ನೆನಪಿಸಿಕೊಂಡರು. 1983ರಲ್ಲಿ ದೇವೇಗೌಡರು ಮಂತ್ರಿಯಾದಾಗ ಬೆಂಗಳೂರಿನಲ್ಲಿ ಸರ್ಕಾರಿ ಬಂಗಲೆ ಸಿಕ್ಕಿತ್ತು. ಹಾಸನದಿಂದ ಬರುವಾಗ ಚೆನ್ನಮ್ಮನವರು ತಮ್ಮ ನೆಚ್ಚಿನ ಹಸುಗಳನ್ನೂ ಬೆಂಗಳೂರಿಗೆ ತಂದಿದ್ದರು. ಅಷ್ಟೇ ಅಲ್ಲ, ಆ ಐಷಾರಾಮಿ ಸರ್ಕಾರಿ ಬಂಗಲೆಯ ಹಿಂಭಾಗದಲ್ಲೇ ಕೊಟ್ಟಿಗೆ ಕಟ್ಟಿಸಿ ಹಸುಗಳನ್ನು ಸಾಕಿದ್ದರು. ಬಟ್ಟೆ, ಸೀರೆ, ಒಡವೆಗಳ ಮೇಲೆ ಅವರಿಗೆ ಯಾವುದೇ ವ್ಯಾಮೋಹವಿರಲಿಲ್ಲ. ಅವರು ಕೊನೆವರೆಗೂ ಅಪ್ಪಟ ಹಳ್ಳಿ ಹೆಣ್ಣುಮಗಳಾಗಿಯೇ ಬದುಕಿದರು ಎಂದಿದ್ದಾರೆ.

ನಜೀರ್ ಸಾಬ್ ಭಟ್ಟರಿಂದ ಪಾಯಸ ಮಾಡೋದನ್ನ ಕಲಿತಿದ್ದರು

ಒಮ್ಮೆ ದೇವೇಗೌಡರು ತಮಗೆ ನಜೀರ್ ಸಾಬ್ ಅವರ ಮನೆಯ ಪಾಯಸ ತುಂಬಾ ಇಷ್ಟ ಎಂದು ಹೇಳಿದ್ದರಂತೆ. ಇದನ್ನು ನೆನಪಿನಲ್ಲಿಟ್ಟುಕೊಂಡ ಚೆನ್ನಮ್ಮನವರು, ನಜೀರ್ ಸಾಬ್ ಅವರ ಮನೆಯ ಅಡುಗೆ ಭಟ್ಟನನ್ನು ತಮ್ಮ ಮನೆಗೆ ಕರೆಸಿಕೊಂಡು, ಅವರಿಂದ ಪಾಯಸ ಮಾಡುವುದನ್ನು ಕಲಿತು ಸ್ವತಃ ತಾವೇ ತಯಾರಿಸಿ ದೇವೇಗೌಡರಿಗೆ ಬಡಿಸಿದ್ದರು! ಇನ್ನು ತಮ್ಮ ಮೇಲಿದ್ದ ಪ್ರೀತಿಯನ್ನು ನೆನೆದ ದತ್ತ, ನನ್ನ ಮಗಳ ಮದುವೆಗೆ ಬರಲು ಅವರಿಗೆ ಸಾಧ್ಯವಾಗಿರಲಿಲ್ಲ. ಆ ಬೇಸರದಲ್ಲೇ ಒಂದು ದಿನ ಬೆಂಗಳೂರಿನಲ್ಲಿ ಯಾರಿಗೂ ಹೇಳದೆ, ಕೇವಲ ಡ್ರೈವರ್‌ ಕರ್ಕೊಂಡು ಸೀದಾ ಕಡೂರಿನಲ್ಲಿದ್ದ ನಮ್ಮ ಮನೆಗೆ ಬಂದು ಸರ್ಪ್ರೈಸ್ ನೀಡಿದ್ದರು" ಎಂದು ಚೆನ್ನಮ್ಮ ಅವರ ಅಪರೂಪದ ಗುಣಗಳನ್ನು ವೈ.ಎಸ್.ವಿ. ದತ್ತ ಕೊಂಡಾಡಿದ್ದಾರೆ.

PREV
Read more Articles on
click me!

Recommended Stories

ಚಿಕ್ಕಮಗಳೂರು: ಹಣಕ್ಕಾಗಿ ಹೆತ್ತ ಮಗಳನ್ನೇ ವಿದೇಶದಲ್ಲಿ ವೇಶ್ಯಾವಾಟಿಕೆಗೆ ಮಾರಿದ ಪೋಷಕರು, ಆಫ್ರೀಕಾದಲ್ಲಿ ಯುವತಿ ಆರ್ತನಾದ!
ಪೌರ ಕಾರ್ಮಿಕರು, ಆಟೋ ಡ್ರೈವರ್, ಗೃಹಿಣಿಯರ ಖಾತೆಯಲ್ಲಿ 34, 29, 26 ಲಕ್ಷ ಹಣ; ಮತ್ತೊಂದು ಬ್ಯಾಂಕ್ ಹಗರಣ ಬಯಲು!