ವಿಚಾರಣಾಧೀನ ಕೈದಿಯೋರ್ವ ಕೆರೆಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಪೊಲೀಸರಿಂದ ತಪ್ಪಿಸಿಕೊಂಡು ಹೋಗಿ ಕೆರೆಗೆ ಹಾರಿದ್ದಾನೆ.
ನರಸಿಂಹರಾಜಪುರ [ಅ.18]: ಮೂರು ವರ್ಷಗಳ ಹಿಂದೆ ಪೋಕ್ಸೋ ಕಾಯ್ದೆಯಡಿ ಬಂಧಿತನಾಗಿ ನಂತರ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ ಆರೋಪಿಯನ್ನು ಮತ್ತೆ ನ್ಯಾಯಾಲಯಕ್ಕೆ ಹಾಜರುಪಡಿಸಲು ಪೊಲೀಸರು ಬಂಧಿಸಿದ ವೇಳೆಯಲ್ಲಿ ತಪ್ಪಿಸಿಕೊಂಡು ಓಡಿ ಹೋಗಿ ಕೆರೆಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಬುಧವಾರ ಸಂಜೆ ನಡೆದಿದೆ.
2016 ರಲ್ಲಿ ಪೈಂಟಿಂಗ್ ವೃತ್ತಿ ಮಾಡುತ್ತಿದ್ದ ಪಟ್ಟಣದ ಹಳೇ ಮಂಡಗದ್ದೆ ರಸ್ತೆಯ ಹಿಳುವಳ್ಳಿಯ ಚಿದಂಬರ್ (26) ಎಂಬ ಯುವಕನನ್ನು ಪೋಕ್ಸೋ ಕಾಯ್ದೆಯಡಿ ಪೊಲೀಸರು ಬಂಧಿಸಿದ್ದರು. ಇತ್ತೀಚೆಗೆ ಜಾಮೀನಿನ ಮೇಲೆ ನ್ಯಾಯಾಲಯ ಬಿಡುಗಡೆ ಮಾಡಿ ವಿಚಾರಣೆ ನಡೆಸುತ್ತಿತ್ತು. ವಿಚಾರಣೆಗಾಗಿ ಎರಡು ಬಾರಿ ಚಿಕ್ಕಮಗಳೂರು ಜಿಲ್ಲಾ ನ್ಯಾಯಾಲಯದಿಂದ ನೋಟಿಸ್ ಬಂದರೂ ಚಿದಂಬರ್ ನ್ಯಾಯಾಲಯಕ್ಕೆ ಹಾಜರಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ನ್ಯಾಯಾಲಯ ಆತನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸುವಂತೆ ವಾರೆಂಟ್ ಜಾರಿಮಾಡಿತ್ತು.
undefined
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಪೊಲೀಸರು ಬುಧವಾರ ಸಂಜೆಯ ಹೊತ್ತಿಗೆ ಆರೋಪಿ ಚಿದಂಬರ್ ನನ್ನು ಹಿಳುವಳ್ಳಿಯ ಆತನ ಮನೆಯಲ್ಲಿ ಆರೆಸ್ಟ್ ಮಾಡಿ ಪೊಲೀಸ್ ಠಾಣೆಗೆ ಕರೆ ತಂದಿದ್ದರು. ಇನ್ನಿತರ ಕೈದಿಗಳ ಜತೆ ಚಿಕ್ಕಮಗಳೂರು ಜಿಲ್ಲಾ ನ್ಯಾಯಾಲಯಕ್ಕೆ ಆರೋಪಿಗಳನ್ನು ಕರೆದುಕೊಂಡು ಹೋಗಲು ಪೊಲೀಸ್ ವಾಹನಕ್ಕೆ ಆರೋಪಿಯು ಹತ್ತಿಸುವಾಗ ಇದ್ದಕ್ಕಿದ್ದಂತೆ ಪೊಲೀಸರನ್ನು ತಳ್ಳಿ ಓಡಲು ಪ್ರಾರಂಭಿಸಿದ್ದಾನೆ. ತಕ್ಷಣ ಪೊಲೀಸರು ಬೈಕ್ ನಲ್ಲಿ ಬೆನ್ನಟ್ಟಿದ್ದಾರೆ. ಓಡಿ ಹೋದ ಆರೋಪಿ ಚಿದಂಬರ್ ಡಿಸಿಎಂಸಿ ಕಾಲೇಜಿನ ಸಮೀಪದಲ್ಲಿದ್ದ ಕೆರೆಗೆ ಹಾರಿದ್ದಾನೆ. ತಕ್ಷಣ ಬೈಕ್ ನಲ್ಲಿ ಬಂದ ಪೊಲೀಸ್ ಪೇದೆ ಸುರೇಶ್ ಸಹ ಕೆರೆಗೆ ಹಾರಿ ಆರೋಪಿಯನ್ನು ರಕ್ಷಣೆ ಮಾಡಿದ್ದಾನೆ.
ನಂತರ ಆರೋಪಿ ಚಿದಂಬರ್ ನನ್ನು ಸರ್ಕಾರಿ ಆಸ್ಪತ್ರೆಗೆ ಸೇರಿಸಿ ಪ್ರಥಮ ಚಿಕಿತ್ಸೆ ನೀಡಿ ನಂತರ ಹೆಚ್ಚಿನ ಚಿಕಿತ್ಸೆಗೆ ಶಿವಮೊಗ್ಗ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ನೀಡಲಾಗಿದೆ. ಆರೋಪಿ ಚೇತರಿಸಿಕೊಂಡಿದ್ದು ನರಸಿಂಹರಾಜಪುರ ಪೊಲೀಸ್ ಠಾಣೆಯಲ್ಲಿ ಚಿದಂಬರ್ ವಿರುದ್ಧ ಐಪಿಸಿ 224, 309 ರ ಕಾಯ್ದೆಯಡಿ ಪೊಲೀಸರಿಂದ ತಪ್ಪಿಸಿಕೊಳ್ಳುವ ಪ್ರಯತ್ನ ಹಾಗೂ ಆತ್ಮಹತ್ಯೆಗೆ ಯತ್ನದ ಪ್ರಕರಣ ದಾಖಲಾಗಿದೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರೀಶ್ ಪಾಂಡೆ, ಕೊಪ್ಪ ಡಿವೈಎಸ್‌ಪಿ ರವೀಂದ್ರನಾಥ್ ಜಹಂಗೀರ್ ದಾರ್, ಇನ್ಸಪೆಕ್ಟರ್ ಮಂಜು ಪೊಲೀಸ್ ಠಾಣೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು