ಚಿಕ್ಕಮಗಳೂರಿನ ರಸ್ತೆಗಳು ಅಪಾಯಕ್ಕೆ ಆಹ್ವಾನ ನೀಡುವಂತೆ ಇದ್ದು ಯುವತಿಯೋರ್ವಳು ರಸ್ತೆ ಗುಂಡಿಗೆ ಬಲಿಯಾಗಿದ್ದಳು. ಈ ಸಂಬಂಧ ಇಲ್ಲಿನ ಜನರು ಸಚಿವ ಸಿ.ಟಿ.ರವಿ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ.
ಚಿಕ್ಕಮಗಳೂರು [ನ.05]: ಜಿಲ್ಲಾ ಕೇಂದ್ರದಲ್ಲಿ ರಸ್ತೆಗಳು ಸಂಪೂರ್ಣ ಹಾಳಾಗಿ ಎಲ್ಲೆಂದರಲ್ಲಿ ಗುಂಡಿ ಬಿದ್ದಿದ್ದು, ಈ ಗುಂಡಿಗಳು ಓರ್ವ ಯುವತಿ ಸಾವಿಗೀಡಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿವ ಸಿ.ಟಿ.ರವಿ ವಿರುದ್ಧ ಜನರ ಆಕ್ರೋಶ ವ್ಯಕ್ತವಾಗಿದೆ.
ಗುಂಡಿ ಬಿದ್ದಿರುವ ರಸ್ತೆಗಳನ್ನು ಕೂಡಲೇ ಮುಚ್ಚಬೇಕೆಂದು ಆಗ್ರಹಿಸಿ ಕಾಂಗ್ರೆಸ್ ಕಾರ್ಯಕರ್ತರು ನಗರದ ಕೆ.ಎಂ. ರಸ್ತೆಯಲ್ಲಿ ಬಾಳೆ ಗಿಡ ನೆಟ್ಟು, ಸಚಿವ ಸಿ.ಟಿ. ರವಿ ಅವರ ಭಾವಚಿತ್ರ ಅದರಡಿಯಲ್ಲಿಟ್ಟು ಪ್ರತಿಭಟನೆ ನಡೆಸಿದರು.
ಜೀವನದ ಬಗ್ಗೆ ಮಹಾದಾಸೆಯನ್ನು ಹೊಂದಿದ್ದ ಯುವತಿ ವಿದೇಶಕ್ಕೆ ತೆರಳಲು ಅಪೇಕ್ಷೆ ಪಟ್ಟಿದ್ದಳು, ಅದಕ್ಕೆ ಪಾಸ್ ಪೋರ್ಟ ಮಾಡಿಸಲು ಅರ್ಜಿಯನ್ನು ಹಾಕಿದ್ದಳು, ಅದರ ಪರಿಶೀಲನೆಗಾಗಿ ಬೆಂಗಳೂರಿನಿಂದ ಬಂದಿದ್ದ ಸಿಂಧೂಜಾ (23), ತಂದೆ ಕುಮಾರಪ್ಪ ಅವರೊಂದಿಗೆ ಬೈಕಿನಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಗೆ ತೆರಳುತ್ತಿದ್ದಳು. ಈ ವೇಳೆ ಇಲ್ಲಿನ ದಂಟರಮಕ್ಕಿ ರಸ್ತೆಯಲ್ಲಿ ಬಿದ್ದಿರುವ ಗುಂಡಿಯಲ್ಲಿ ಬೈಕ್ ಆಯತಪ್ಪಿ ಬಿದ್ದು ಅಪಘಾತ ಸಂಭವಿಸಿದೆ. ತೀವ್ರವಾಗಿ ಗಾಯಗೊಂಡಿದ್ದ ಸಿಂಧೂಜಾ ಹಾಗೂ ಕುಮಾರಪ್ಪ ಅವರನ್ನು ಕೂಡಲೇ ಆಸ್ಪತ್ರೆಗೆ ಸೇರಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಸಿಂಧೂಜಾ ಮೃತಪಟ್ಟಿದ್ದಾರೆ. ನಗರ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ವಿಡಿಯೋ ವೈರಲ್ : ಇನ್ನು ಸಚಿವರ ವಿರುದ್ಧ ಧ್ವನಿಯೆತ್ತಿ ಮಹಿಳೆಯೊಬ್ಬರು ಮಾಡಿರೋ ವಿಡಿಯೋ ವೈರಲ್ ಆಗಿದ್ದು, ಸಚಿವರ ಬೇಜವಾಬ್ದಾರಿತನವನ್ನು ಪ್ರಶ್ನೆ ಮಾಡಿದ್ದಾರೆ. ನಿಮಗೆ ಜೀವದ ಬೆಲೆ ಗೊತ್ತಿದ್ಯಾ ಎಂದು ಪ್ರಶ್ನೆ ಮಾಡಿದ್ದು, ನೀವು ನಿಮ್ಮ ಕ್ಷೇತ್ರದಲ್ಲಿ ಸರಿಯಾಗಿ ಕೆಲಸ ಮಾಡಿದ್ದರೆ ಈ ರೀತಿಯ ಘಟನೆ ನಡೆಯುತ್ತಿರಲಿಲ್ಲ ವೆಂದು ತರಾಟೆಗೆ ತೆಗೆದುಕೊಂಡಿದ್ದಾರೆ.