ಶೃಂಗೇರಿ ಕಾಂಗ್ರೆಸ್ ಶಾಸಕ ಟಿ.ಡಿ.ರಾಜೇಗೌಡ ಮತ್ತೆ ಸಂಕಷ್ಟ
123 ಕೋಟಿ ರೂ. ಅಕ್ರಮದ ಬಗ್ಗೆ ಲೋಕಾಯುಕ್ತದಲ್ಲಿ ದೂರು ದಾಖಲು
ಕೊಪ್ಪ ಮೂಲದ ದಿನೇಶ್ ಹೊಸೂರು ಎಂಬುವರಿಂದ ಮತ್ತೆ ದೂರು
ವರದಿ : ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್
ಚಿಕ್ಕಮಗಳೂರು (ನ.30): ಜಿಲ್ಲೆಯ ಶೃಂಗೇರಿ ಕ್ಷೇತ್ರದ ಟಿ.ಡಿ. ರಾಜೇಗೌಡ ಅವರಿಗೆ ಮತ್ತೆ ಸಂಕಷ್ಟ ಎದುರಾಗಿದೆ. ಶಬಾನಾ ರಂಜಾನ್ ಟ್ರಸ್ಟ್ ಹೆಸರಿನಲ್ಲಿ ಶಾಸಕ ಟಿ.ಡಿ. ರಾಜೇಗೌಡ ಅಕ್ರಮ ಆಸ್ತಿ ಖರೀದಿಸಿದ್ದಾರೆ ಎಂದು ರಾಜ್ಯ ಸಹಕಾರ ಮಹಾಮಂಡಲದ ನಿರ್ದೇಶಕ ದಿನೇಶ್ ಹೊಸೂರು ಲೋಕಾಯುಕ್ತಕ್ಕೆ ದೂರು ಸಲ್ಲಿಸಿದ್ದಾರೆ.
ಈ ಕುರಿತು ಚಿಕ್ಕಮಗಳೂರು ನಗರದ ಲೋಕಾಯುಕ್ತ ಇನ್ಸ್ಪೆಕ್ಟರ್ ಕಚೇರಿಗೆ ದಾಖಲೆಗಳ ಸಮೇತ ದೂರು ದಾಖಲಿಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ದಿನೇಶ್, ಅಕ್ರಮ ಆಸ್ತಿ ಖರೀದಿ ಸಂಬಂಧ ಟಿ.ಡಿ.ರಾಜೇಗೌಡ ಅವರ ವಿರುದ್ಧ ತಕ್ಷಣ ಎಫ್ಐಆರ್ ದಾಖಲಿಸಿ ತನಿಖೆ ಮಾಡುವಂತೆ ಮನವಿ ಮಾಡಿದ್ದೇನೆ. ೨೦೧೮ರಲ್ಲಿ ಶಾಸಕರಾದ ವೇಳೆ ಅವರ ವಾರ್ಷಿಕ ಆದಾಯ 34 ಲಕ್ಷ ರೂ. ಎಂದು ಘೋಷಿಸಿಕೊಂಡಿದ್ದರು. ಈಗ 2022ರಲ್ಲಿ ಕೃಷಿ ಮತ್ತು ಅವರ ವೈಯಕ್ತಿಕ ಆದಾಯ ಸೇರಿ 40 ಲಕ್ಷ ರೂ.ಗಳಾಗಿದೆ. ಹೀಗಿದ್ದರೂ 123 ಕೋಟಿ ರೂ. ಸಾಲ ತೀರಿಸಿ ಶಬಾನಾ ರಂಜಾನ್ ಎನ್ನುವ ಟ್ರಸ್ಟ್ ಹೆಸರಿನಲ್ಲಿ 266 ಎಕರೆ ಜಮೀನನ್ನು ಖರೀದಿ ಮಾಡಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತಕ್ಕಾಗಲಿ, ಚುನಾವಣಾ ಆಯೋಗಕ್ಕಾಗಲಿ ಮಾಹಿತಿ ನೀಡಿರುವುದಿಲ್ಲ ಎಂದು ಆರೋಪಿಸಿದರು.
ಬಿಜೆಪಿ ಜನಸಂಕಲ್ಪ ಯಾತ್ರೆ ನನ್ನನ್ನು ಟಾರ್ಗೆಟ್ ಮಾಡಿದ ಯಾತ್ರೆಯಾಗಿತ್ತು: ಶಾಸಕ ರಾಜೇಗೌಡ ಆರೋಪ
ಎಲ್ಲಿಂದ 123 ಕೋಟಿ ರೂ. ಸಾಲ ಪಡೆಯಲಾಗಿದೆ: ಈಗ ಖರೀದಿಸಿದ ಆಸ್ತಿ ಮೇಲೆ ಸ್ಟಾಂಡರ್ಡ್ ಚಾರ್ಟೆಡ್ ಬ್ಯಾಂಕ್, ಬ್ಯಾಂಕ್ ಆಫ್ ಬರೋಡ, ಕರ್ನಾಟಕ ಬ್ಯಾಂಕ್ ಹಾಗೂ ಕೆನರಾ ಬ್ಯಾಂಕ್ಗಳಲ್ಲಿ ಸಾಲ ಇತ್ತು. ಇದೀಗ ಶಾಸಕರ ಪತ್ನಿ ಡಿ.ಕೆ. ಪುಷ್ಪ, ಮಕ್ಕಳಾದ ರಾಜ್‌ದೇವ್ ಹಾಗೂ ಅರ್ಪಿತಾ ಯುವರಾಜ್ ಸೇರಿ ಮೂವರು ತಲಾ ಶೇ.33 ರಷ್ಟು ಶೇರು ಹಂಚಿಕೊಂಡಿದ್ದಾರೆ. ಟ್ರಸ್ಟ್‌ನ ಭೂಮಿಯ ಮೇಲಿರುವ 123ಕೋಟಿ ರೂ. ಸಾಲವನ್ನು ತೀರಿಸಿರುವುದಾಗಿ ನ.ರಾ.ಪುರ ಉಪ ನೊಂದಣಾಧಿಕಾರಿಗಳ ಕಚೇರಿಯಲ್ಲಿ ಆಧಾರ ಖುಲಾಸೆ ಮಾಡಿಸಿದ್ದಾರೆ. ಭೂಮಿ ಖರೀದಿಗೆ 123 ಕೋಟಿ ರೂ. ಹಣ ಅವರಿಗೆ ಎಲ್ಲಿಂದ ಬಂತು? ಅದರ ಮೂಲ ಯಾವುದು? ಯಾವುದಾದರೂ ಬ್ಯಾಂಕ್‌ನಲ್ಲಿ ಸಾಲ ಮಾಡಲಾಗಿದೆಯೋ ಅಥವಾ ಇನ್ನಾವುದೋ ಮೂಲದ್ದೋ ಬಹಿರಂಗಪಡಿಸುವಂತೆ ಲೋಕಾಯುಕ್ತದಲ್ಲಿ ಸಲ್ಲಿಸಿರುವ ದೂರಿನಲ್ಲಿ ಕೋರಿದ್ದೇವೆ ಎಂದರು.
ಈಗಾಗಲೇ ಅಕ್ರಮ ಆಸ್ತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತಕ್ಕೆ ದೂರು ನೀಡಿದವರ ಅದನ್ನು ಹಿಂದಕ್ಕೆ ಪಡೆದಿದ್ದಾರೆ. ಆದರೆ, ಯಾವ ಕಾರಣಕ್ಕೆ ಹಿಂತೆಗೆದುಕೊಂಡಿದ್ದಾರೋ ಅವರಿಗೆ ಒಳ್ಳೆಯದಾಲಿ. ನಾವು ಕೊಟ್ಟಿರುವ ದೂರನ್ನು ಯಾವ ಕಾರಣಕ್ಕೂ ಹಿಂದೆ ಪಡೆಯುವುದಿಲ್ಲ. ಇದರಲ್ಲಿ ಭ್ರಷ್ಟಾಚಾರ ನಡೆದಿರುವುದು ನೂರಕ್ಕೆ ನೂರರಷ್ಟು ನಿಜವಾಗಿದೆ. ಈ ಬಗ್ಗೆ ತನಿಖೆಯಾಗಿ ಶಿಕ್ಷೆಯಾಬೇಕು ಎಂದು ಕೇಳಿದ್ದೇವೆ. ರಾಜೇಗೌಡರು 2013 ರಲ್ಲಿ ಚುನಾವಣಾ ಆಯೋಗಕ್ಕೆ ಮತ್ತು ಲೋಕಾಯುಕ್ತಕ್ಕೆ ನೀಡಿದ್ದ ಅಫಿಡವಿಟ್ ಸೇರಿ, 2018 ವರೆಗೆ ಎಷ್ಟು ಸಲ್ಲಿಸಿದ್ದಾರೆ. ಅವರು ಖರೀದಿಸಿರುವ ಆಸ್ತಿ ಹಿಂದೆ ಯಾರ ಹೆಸರಲ್ಲಿತ್ತು ಎಲ್ಲದಕ್ಕೂ ಸಂಬಂದಿಸಿದಂತೆ ದಾಖಲೆಗಳನ್ನು ಲೋಕಾಯುಕ್ತಕ್ಕೆ ಸಲ್ಲಿಸಿದ್ದೇವೆ ಎಂದು ಮಾಹಿತಿ ನೀಡಿದರು.
ಶಾಸಕರ ಅಕ್ರಮ ಆಸ್ತಿಗಳ ಬಗ್ಗೆ ತನಿಖೆ ಕೈಗೊಳ್ಳಿ: ಮಾಜಿ ಸಚಿವ ಜೀವರಾಜ್ ಆಗ್ರಹ
ದೂರು ವಾಪಸ್ ಪಡೆದಿದ್ದ ವಿಜಯಾನಂದ: ಈ ಹಿಂದೆ ನ.18ರಂದು ಕೊಪ್ಪ ಮೂಲದ ವಿಜಯಾನಂದ ಅವರು, ಅಕ್ರಮ ಆಸ್ತಿ ಖರೀದಿ ಕುರಿತು ರಾಜೇಗೌಡ ಅವರ ವಿರುದ್ಧ ದೂರು ದಾಖಲಿಸಿ 4-5 ದಿನದಲ್ಲಿ ಕೇಸ್ ಹಿಂಪಡೆದಿದ್ದರು. ವಾರ್ಷಿಕ 35 ಲಕ್ಷ ಆದಾಯ ತೋರಿಸಿದ್ದ ರಾಜೇಗೌಡ, 123 ಕೋಟಿ ಆಸ್ತಿ ಖರೀದಿ ಹೇಗೆ ಮಾಡಿದ್ದರು ಎಂದು ಪ್ರಶ್ನಿಸಿದ್ದರು. ಈಗ ದಿನೇಶ್ ನೀಡಿರುವ ದೂರು ರಾಜೇಗೌಡ ಅವರ ರಾಜಕೀಯ ಭವಿಷ್ಯದ ಮೇಲೆ ಮುಳ್ಳಾಗುವ ಸಾಧ್ಯತೆ ಕಂಡುಬರುತ್ತಿದೆ. ಶಬಾನ ರಂಜಾನ್ ಸಂಸ್ಥೆ ತರಾಜೇಗೌಡ ಅವರಿಗೆ ಮಗ್ಗಲ -ಮುಳ್ಳಾಗುತ್ತಾ ಎಂದು ಅನುಮಾನ ಕಂಡುಬರುತ್ತಿದೆ.