ಹಿಟ್ ಅಂಡ್ ರನ್‌ ಕೇಸ್‌ಗೆ ರೋಚಕ ಟ್ವಿಸ್ಟ್.. ಆಪ್ತಮಿತ್ರನ ಸದ್ದಿಲ್ಲದೇ ಮುಗಿಸಿಬಿಟ್ಟಿದ್ದ ಸ್ನೇಹಿತ..!

Published : Jul 24, 2026, 11:08 AM IST
chikkamagaluru hit and run case

ಸಾರಾಂಶ

ಒಂದೂವರೆ ತಿಂಗಳ ಹಿಂದೆ ನಡೆದ ಆ ಘಟನೆಯನ್ನು ಎಲ್ಲರೂ ಒಂದು ಭೀಕರ ರಸ್ತೆ ಅಪಘಾತ ಎಂದೇ ಭಾವಿಸಿದ್ದರು. ಅಪಘಾತ ನಡೆದ ಜಾಗದಲ್ಲಿ ಪಲ್ಟಿಯಾಗಿದ್ದ ಗೂಡ್ಸ್ ಆಟೋ ಆ ಅನುಮಾನವನ್ನು ಮತ್ತಷ್ಟು ಪುಷ್ಟೀಕರಿಸಿತ್ತು. ಪೊಲೀಸರ ಹದ್ದಿನ ಕಣ್ಣು ಈ ಅಪಘಾತದ ಹಿಂದಿದ್ದ ಕರಾಳ ಕೊಲೆಯ ರಹಸ್ಯವನ್ನು ಬಯಲಿಗೆಳೆದಿದೆ.

ಚಿಕ್ಕಮಗಳೂರು: ಒಂದೂವರೆ ತಿಂಗಳ ಹಿಂದೆ ನಡೆದ ಆ ಘಟನೆಯನ್ನು ಎಲ್ಲರೂ ಒಂದು ಭೀಕರ ರಸ್ತೆ ಅಪಘಾತ ಎಂದೇ ಭಾವಿಸಿದ್ದರು. ಅಪಘಾತ ನಡೆದ ಜಾಗದಲ್ಲಿ ಪಲ್ಟಿಯಾಗಿದ್ದ ಗೂಡ್ಸ್ ಆಟೋ ಆ ಅನುಮಾನವನ್ನು ಮತ್ತಷ್ಟು ಪುಷ್ಟೀಕರಿಸಿತ್ತು. ಪೊಲೀಸರ ಹದ್ದಿನ ಕಣ್ಣು ಈ ಅಪಘಾತದ ಹಿಂದಿದ್ದ ಕರಾಳ ಕೊಲೆಯ ರಹಸ್ಯವನ್ನು ಬಯಲಿಗೆಳೆದಿದೆ. ಹಣದ ಹಪಾಹಪಿಗೆ ತನ್ನ ಪ್ರಾಣ ಸ್ನೇಹಿತನನ್ನೇ ಕೊಂದು, ಏನೂ ತಿಳಿಯದವನಂತೆ ನಟಿಸುತ್ತಿದ್ದ ಖತರ್ನಾಕ್ ಕಿಲಾಡಿಯೀಗ ಪೊಲೀಸರ ಅತಿಥಿಯಾಗಿದ್ದಾನೆ.

ಏನಿದು ಪ್ರಕರಣ?

ಹಾಸನ ನಗರದ ವಿಜಯನಗರ ನಿವಾಸಿಗಳಾಗಿದ್ದ ಯಶವಂತ್ (26) ಮತ್ತು ಸಚಿನ್ ಪರಸ್ಪರ ಸ್ನೇಹಿತರು. ಕಳೆದ ಜೂನ್ 12ರಂದು ಇಬ್ಬರೂ ಬೈಕಿನಲ್ಲಿ ಅಜ್ಜಂಪುರಕ್ಕೆ ತೆರಳಿದ್ದರು. ಅಂದು ರಾತ್ರಿ ಚಿಕ್ಕಮಗಳೂರು ತಾಲೂಕಿನ ಹಿರೇಗೌಜ ಸಮೀಪ ರಾಷ್ಟ್ರೀಯ ಹೆದ್ದಾರಿಯಲ್ಲಿ ಯಶವಂತ್ ಶವ ಪತ್ತೆಯಾಗಿತ್ತು. ಯಶವಂತ್ ಶವ ಬಿದ್ದಿದ್ದ ಜಾಗದಲ್ಲೇ ಗೂಡ್ಸ್ ಆಟೋವೊಂದು ಪಲ್ಟಿಯಾಗಿತ್ತು. ಇದನ್ನು ನೋಡಿದ ಸ್ಥಳೀಯರು ಹಾಗೂ ಪೊಲೀಸರು ಆಟೋ ಡಿಕ್ಕಿಯಾಗಿ ಯಶವಂತ್ ಮೃತಪಟ್ಟಿದ್ದಾರೆ ಎಂದು ಪ್ರಾಥಮಿಕವಾಗಿ ಊಹಿಸಿದ್ದರು. ಇದನ್ನು ‘ಹಿಟ್ ಅಂಡ್ ರನ್’ ಪ್ರಕರಣವೆಂದೇ ದಾಖಲಿಸಲಾಗಿತ್ತು.

ಪೊಲೀಸರಿಗೆ ಸುಳಿವು ನೀಡಿದ ಆ ‘ಒಂದು’ ಬೈಕ್!

ಮೇಲ್ನೋಟಕ್ಕೆ ಅಪಘಾತದಂತೆ ಕಂಡರೂ ಸಖರಾಯಪಟ್ಟಣ ಪೊಲೀಸರಿಗೆ ಒಂದು ಅನುಮಾನ ಕಾಡುತ್ತಿತ್ತು. ಅದೇನಪ್ಪಾ ಅಂದರೆ ಯಶವಂತ್ ಅಂದು ಸವಾರಿ ಮಾಡುತ್ತಿದ್ದ ಬೈಕ್ ಮಾತ್ರ ಘಟನಾ ಸ್ಥಳದಲ್ಲಿ ಎಲ್ಲೂ ಪತ್ತೆಯಾಗಿರಲಿಲ್ಲ. ಶವ ಸಿಕ್ಕರೂ ಬೈಕ್ ನಾಪತ್ತೆಯಾಗಿದ್ದೇ ತನಿಖೆಯ ದಿಕ್ಕು ಬದಲಿಸಲು ಕಾರಣವಾಯಿತು. ನಿರಂತರ ಒಂದೂವರೆ ತಿಂಗಳ ಕಾಲ ತನಿಖೆ ನಡೆಸಿದ ಪೊಲೀಸರಿಗೆ, ಗೆಳೆಯ ಸಚಿನ್‌ನ ಮೇಲೆ ಅನುಮಾನ ವ್ಯಕ್ತವಾಯಿತು.

ಪೊಲೀಸರು ಸಚಿನ್‌ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕೊಲೆಯ ಸತ್ಯ ಹೊರಬಿದ್ದಿದೆ. ಕಾರು ಮಾರಾಟ ಮಾಡಿದ ಹಣದ ವಿಚಾರವಾಗಿ ಯಶವಂತ್ ಮತ್ತು ಸಚಿನ್ ನಡುವೆ ಗಲಾಟೆ ನಡೆದಿತ್ತು. ಜೂನ್ 12ರ ರಾತ್ರಿ ಹಿರೇಗೌಜ ಬಳಿ ಹಣದ ವಿಚಾರಕ್ಕೆ ಶುರುವಾದ ಜಗಳ ವಿಕೋಪಕ್ಕೆ ಹೋಗಿದೆ. ಹಳೆಯ ದ್ವೇಷವೂ ಇದ್ದ ಕಾರಣ, ಸಚಿನ್ ತನ್ನ ಸ್ನೇಹಿತ ಯಶವಂತ್‌ನನ್ನು ಕೊಂದು ಅಲ್ಲಿಂದ ಎಸ್ಕೇಪ್ ಆಗಿದ್ದ.

ಸಚಿನ್ ಕೊಲೆ ಮಾಡಿ ಪರಾರಿಯಾದ ಅದೇ ಜಾಗದಲ್ಲೇ ಗೂಡ್ಸ್ ಆಟೋವೊಂದು ಪಲ್ಟಿಯಾಗಿ ಬಿದ್ದಿತ್ತು. ಇದನ್ನೇ ಬಂಡವಾಳ ಮಾಡಿಕೊಂಡ ಸಚಿನ್, ತನ್ನ ಗೆಳೆಯ ಆಟೋ ಡಿಕ್ಕಿಯಾಗಿ ಸತ್ತಿದ್ದಾನೆ ಎಂದು ಬಿಂಬಿಸಲು ಯತ್ನಿಸಿದ್ದ. ತಾನು ಕೊಲೆ ಮಾಡಿ ಒಂದೂವರೆ ತಿಂಗಳ ಕಾಲ ಯಾವುದೂ ಗೊತ್ತಿಲ್ಲದವನಂತೆ ನಾಟಕವಾಡುತ್ತಿದ್ದ. ಆದರೆ ಸಖರಾಯಪಟ್ಟಣ ಪೊಲೀಸರ ಚಾಣಾಕ್ಷತನದಿಂದ ಸಚಿನ್ ಈಗ ಜೈಲು ಪಾಲಾಗಿದ್ದಾನೆ.

PREV
Read more Articles on
click me!

Recommended Stories

ಪುನರ್ವಸು ಮಳೆಗೆ ತುಂಗಾ ನದಿಯಲ್ಲಿ ನೀರಿನ ಮಟ್ಟ ಹೆಚ್ಚಳ; ಕೃಷಿ ಚುಟುವಟಿಕೆ ಚುರುಕು
ಶಿವಮೊಗ್ಗ-ನರಸಿಂಹರಾಜಪುರ- ಕೊಪ್ಪ ಮಾರ್ಗವಾಗಿ ಶೃಂಗೇರಿ ರೇಲ್ವೆ ಮಾರ್ಗ; ಆಗುಂಬೆ ಸುರಂಗ ಮಾರ್ಗ