ಕೇರಳ ಎನ್‌ಕೌಂಟರ್: ಬಲಿ ಆದವರು ಕರ್ನಾಟಕದ ನಕ್ಸಲ್‌ ಅಲ್ಲ

By Web Desk  |  First Published Oct 30, 2019, 8:07 AM IST

ಚಿಕ್ಕಮಗಳೂರಿನ ಇಬ್ಬರು ಹತ್ಯೆ ಕುರಿತ ಗೊಂದಲಕ್ಕೆ ತೆರೆ|ಕೇರಳದ ಪಾಲಕ್ಕಾಡ್‌ ಜಿಲ್ಲೆಯಲ್ಲಿ ನಕ್ಸಲ್‌ ನಿಗ್ರಹ ಪಡೆ ಎನ್‌ಕೌಂಟರ್‌ ನಡೆಸಿತ್ತು| ನಾಲ್ವರು ನಕ್ಸಲರು ಹತರಾಗಿದ್ದರು |ಎಸ್ಪಿ ಅವರೇ ಖಚಿತ ಪಡಿಸಿ ಗೊಂದಲಗಳಿಗೆ ತೆರೆ ಎಳೆದರು|


ಚಿಕ್ಕಮಗಳೂರು[ಅ.30]:  ಕೇರಳದ ಪಾಲಕ್ಕಾಡ್‌ ಜಿಲ್ಲೆಯಲ್ಲಿ ನಕ್ಸಲ್‌ ನಿಗ್ರಹ ಪಡೆ ನಡೆಸಿದ ಎನ್‌ಕೌಂಟರ್‌ಗೆ ನಾಲ್ವರು ಬಲಿಯಾಗಿದ್ದು, ಇವರಲ್ಲಿ ಚಿಕ್ಕಮಗಳೂರು ಜಿಲ್ಲೆಯ ನಕ್ಸಲರಿಬ್ಬರೂ ಸೇರಿದ್ದಾರೆಂಬ ಸುದ್ದಿ ಮಂಗಳವಾರ ಆತಂಕ ಹಾಗೂ ಗೊಂದಲಗಳಿಗೆ ಕಾರಣವಾಯಿತು.

ಕೇರಳದಲ್ಲಿ ಮೂವರು ನಕ್ಸಲರ ಹತ್ಯೆ: ಕರ್ನಾಟಕದ ಇಬ್ಬರು ನಕ್ಸಲರ ಸಾವು

Tap to resize

Latest Videos

ನಕ್ಸಲಿಸಂನತ್ತ ಆಕರ್ಷಿತರಾಗಿ ಭೂಗತರಾಗಿದ್ದ ಜಿಲ್ಲೆಯ ಸುರೇಶ್‌ ಹಾಗೂ ಶ್ರೀಮತಿ ಕೂಡ ಎನ್‌ಕೌಂಟರ್‌ನಲ್ಲಿ ಹತರಾಗಿದ್ದಾರೆಂದು ಬೆಳಗ್ಗೆ ಚಿಕ್ಕಮಗಳೂರು ಎಸ್ಪಿ ಅವರೇ ಹೇಳಿದ್ದರಾದರೂ ಆ ಬಳಿಕ ಈ ಕುರಿತು ಖಚಿತ ಮಾಹಿತಿ ಸಿಗದೆ ಗೊಂದಲ ಸೃಷ್ಟಿಯಾಗಿತ್ತು. ನಂತರ ಸಂಜೆ ವೇಳೆಗೆ ಕೇರಳದಿಂದ ಬಂದ ಖಚಿತ ಮಾಹಿತಿಯನ್ನು ಆಧರಿಸಿ ಮೃತರಲ್ಲಿ ನಮ್ಮವರಾರ‍ಯರೂ ಇಲ್ಲ ಎಂದು ಸ್ವತಃ ಎಸ್ಪಿ ಅವರೇ ಖಚಿತ ಪಡಿಸಿ ಗೊಂದಲಗಳಿಗೆ ತೆರೆ ಎಳೆದರು.

ಆಗಿದ್ದೇನು?:

ಎನ್‌ಕೌಂಟರ್‌ ಸುದ್ದಿ ತಿಳಿಯುತ್ತಿದಂತೆ ನಕ್ಸಲ್‌ ಪೀಡಿತ ರಾಜ್ಯಗಳ ಪೊಲೀಸ್‌ ಇಲಾಖೆಗಳು ಅಲರ್ಟ್‌ ಆಗಿದ್ದವು. ಅದರಲ್ಲಿ ಕರ್ನಾಟಕವೂ ಒಂದು. ಮಲೆನಾಡಿನ ಕೆಲ ನಕ್ಸಲೀಯರು ಕೇರಳದಲ್ಲಿ ಆಶ್ರಯ ಪಡೆದಿರುವ ಹಿನ್ನೆಲೆಯಲ್ಲಿ ತಕ್ಷಣ ಪೊಲೀಸ್‌ ಪಡೆ ಮಾಹಿತಿ ಸಂಗ್ರಹಕ್ಕಿಳಿದಿತ್ತು. ಅದರಂತೆ ಪ್ರಾಥಮಿಕ ಮಾಹಿತಿಗಳನ್ನು ಆಧರಿಸಿ ಮಂಗಳವಾರ ಬೆಳಗ್ಗೆ ಸುದ್ದಿಗಾರರಿಗೆ ಮಾಹಿತಿ ನೀಡಿದ ಎಸ್ಪಿ ಹರೀಶ್‌ ಪಾಂಡೆ, ಕೇರಳದ ಮಂಚಕಟ್ಟಿ ಅರಣ್ಯದಲ್ಲಿ ಸೋಮವಾರ ನಡೆಸಿದ ಕಾರ್ಯಾಚರಣೆ ವೇಳೆ ಚಿಕ್ಕಮಗಳೂರು ಜಿಲ್ಲೆಯ ಸುರೇಶ್‌ ಹಾಗೂ ಶ್ರೀಮತಿ ಸೇರಿ ನಾಲ್ವರು ಮೃತಪಟ್ಟಿದ್ದಾರೆ ಎಂದಿದ್ದರು.

ಈ ವಿಚಾರ ತಿಳಿಯುತ್ತಿದ್ದಂತೆ ಮಾಧ್ಯಮದವರು ಸುರೇಶ್‌ ಮನೆಗೆ ತೆರಳಿ ಪೋಷಕರನ್ನು ಮಾತನಾಡಿಸಿದ್ದರು. ನಂತರ ಸುರೇಶ್‌ ಸಹೋದರ ಮಂಜುನಾಥ್‌, ಸ್ನೇಹಿತರು ಮೂಡಿಗೆರೆಯ ಡಿವೈಎಸ್ಪಿ ಸಂಪರ್ಕಿಸಿ ಕೇರಳಕ್ಕೆ ಹೊರಡಲು ಸಿದ್ಧತೆ ಮಾಡಿಕೊಳ್ಳುತ್ತಿದ್ದರು. ಅಷ್ಟೊತ್ತಿಗಾಗಲೇ ರಾಜ್ಯದ ನಕ್ಸಲ್‌ ನಿಗ್ರಹ ದಳದ ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿ ಮೃತರಲ್ಲಿ ಯಾರೂ ಕರ್ನಾಟಕದವರಿಲ್ಲ ಎನ್ನುವುದನ್ನು ಖಚಿತಪಡಿಸಿಕೊಂಡರು. ಏತನ್ಮಧ್ಯೆ, ಸಾವಿನ ಕುರಿತು ಗೊಂದಲ ಶುರುವಾದಾಗ ಎಸ್ಪಿ ಪಾಂಡೆ ಕೂಡ ಪಾಲಕ್ಕಾಡ್‌ ಎಸ್ಪಿ ಸಂಪರ್ಕಿಸಿ ಮೃತಪಟ್ಟವರೆಲ್ಲ ತಮಿಳುನಾಡಿನವರು ಎಂಬುದು ಸ್ಪಷ್ಟವಾಯಿತು.

ಯಾರು ಈ ಸುರೇಶ್‌, ಶ್ರೀಮತಿ?

ಎನ್‌ಕೌಂಟರ್‌ನಲ್ಲಿ ಬಲಿಯಾಗಿದ್ದಾರೆಂದು ಭಾವಿಸಲಾಗಿದ್ದ ಸುರೇಶ್‌ ಮತ್ತು ಶ್ರೀಮತಿ ಕೇರಳದ ಭವಾನಿ ದಳಂ ನಕ್ಸಲ್‌ ತಂಡದ ಸದಸ್ಯರು. ಸುರೇಶ್‌ ಮೂಡಿಗೆರೆಯ ಅಂಗಡಿ ಗ್ರಾಮದವರಾದರೆ, ಶ್ರೀಮತಿ ಶೃಂಗೇರಿಯ ಬೆಳಗೋಡು ಕೂಡಿಗೆ ನಿವಾಸಿ. ಸುರೇಶ್‌ 2004ರಿಂದಲೇ ನಕ್ಸಲಿಸಂನತ್ತ ಆಕರ್ಷಿತರಾಗಿ ಮನೆ ತೊರೆದಿದ್ದರೆ, ಶ್ರೀಮತಿ 2008ರಿಂದ ನಕ್ಸಲ್‌ ಚಳವಳಿಯಲ್ಲಿ ಸಕ್ರಿಯಳಾಗಿದ್ದಾಳೆ. ಇವರ ವಿರುದ್ಧ ಜಿಲ್ಲೆಯಲ್ಲಿ ಕ್ರಮವಾಗಿ 21, 9 ಪ್ರಕರಣಗಳು ದಾಖಲಾಗಿವೆ.

ರಾಜ್ಯದಲ್ಲಿ ಕೂಂಬಿಂಗ್‌

ಚಿಕ್ಕಮಗಳೂರಲ್ಲಿ ಕೂಂಬಿಂಗ್‌ ಕೇರಳದಲ್ಲಿ ಎನ್‌ಕೌಂಟರ್‌ ನಡೆಯುತ್ತಿದ್ದಂತೆ ಚಿಕ್ಕಮಗಳೂರು ಮತ್ತು ಶಿವಮೊಗ್ಗದ ನಕ್ಸಲ್‌ ಪೀಡಿತ ಪ್ರದೇಶದಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಮಂಗಳವಾರ ಕೂಂಬಿಂಗ್‌ ಕಾರ್ಯಾಚರಣೆ ನಡೆಯಿತು.

click me!