ರಾಜ್ಯದ ಪ್ರಸಿದ್ಧ ಪ್ರವಾಸಿ ತಾಣವಾದ ಸಿರಿಮನೆ ಜಲಪಾತದ ಬಳಿಕ ಅಪಾಯವೊಂದು ಆಹ್ವನಿಸುತ್ತಿದೆ. ಎಚ್ಚರದಿಂದ ಪ್ರಯಾಣಿಸಿ
ಶೃಂಗೇರಿ [ಅ.19]: ಜಿಲ್ಲೆಯ ಪ್ರಸಿದ್ಧ ಪ್ರವಾಸಿ ತಾಣ ಸಿರಿಮನೆಯಲ್ಲಿ ಅನೇಕ ವರ್ಷಗಳಿಂದ ವಿದ್ಯುತ್ ಕಂಬ ಮುರಿದು ಅಪಾಯಕ್ಕೆ ಕಾದಿದೆ. ಸ್ಥಳೀಯರು ಮುರಿದು ಹೋಗಿರುವ ಈ ವಿದ್ಯುತ್ ಕಂಬಕ್ಕೆ ಮರದ ಕಂಬಗಳನ್ನು ನಿಲ್ಲಿಸಿದ್ದಾರೆ. ಕಂಬ ಇವತ್ತೋ ನಾಳೆಯೋ ಯಾವುದೇ ಕ್ಷಣದಲ್ಲಿ ಮುರಿದು ಬೀಳುವ ಹಂತದಲ್ಲಿದೆ. ಆದರೂ ಕೂಡ ಮೆಸ್ಕಾಂನವರು ಇನ್ನೂ ಸರಿಪಡಿಸದೇ ನಿರ್ಲಕ್ಷ್ಯ ವಹಿಸಿದ್ದಾರೆ.
ಶೃಂಗೇರಿಯಿಂದ ಸುಮಾರು 10 ಕಿಲೋ ಮೀಟರ್ ದೂರದಲ್ಲಿರುವ ಜಿಲ್ಲೆಯ ಪ್ರಸಿದ್ಧ ಪ್ರವಾಸಿ ತಾಣಗಳಲ್ಲಿ ಒಂದಾಗಿರುವ ಸಿರಿಮನೆ ರಾಜ್ಯದಲ್ಲಿಯೇ ಪ್ರಸಿದ್ಧಿ ಪಡೆದಿದೆ. ಇಲ್ಲಿಗೆ ಪ್ರತಿನಿತ್ಯ ಸಾಕಷ್ಟುಸಂಖ್ಯೆಯಲ್ಲಿ ರಾಜ್ಯದ ವಿವಿಧೆಡೆಗಳಿಂದ ಪ್ರವಾಸಿಗರು, ಚಾರಣಪ್ರಿಯರು, ಪರಿಸರ ಪ್ರೇಮಿಗಳು ಭೇಟಿ ನೀಡುತ್ತಾರೆ. ಮುರಿದು ಬೀಳುವ ಹಂತದಲ್ಲಿರುವ ವಿದ್ಯುತ್ ಕಂಬದ ಬುಡದಲ್ಲಿಯೇ ಪ್ರವಾಸಿಗರು ಓಡಾಡುವುದರ ಜೊತೆಗೆ, ವಾಹನಗಳನ್ನು ನಿಲ್ಲಿಸುತ್ತಾರೆ. ಯಾವುದೇ ಕ್ಷಣದಲ್ಲಿ ಅಪಾಯ ಕಟ್ಟಿಟ್ಟಬುತ್ತಿ ಎಂದು ಯಾರು ಬೇಕಾದರೂ ಹೇಳಬಹುದು.
undefined
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಸಿ
ಸಾವಿರಾರು ಪ್ರವಾಸಿಗರು ಭೇಟಿ ನೀಡುವಂತಹ ಇಂತಹ ಪ್ರಸಿದ್ಧ ಪ್ರವಾಸಿ ತಾಣದಲ್ಲಿ ಇಂತಹದೊಂದು ಅಪಾಯದ ಸ್ಥಿತಿಯನ್ನು ಕಂಡು ಯಾವುದೇ ಕ್ರಮವನ್ನು ಕೈಗೊಳ್ಳದಿರುವುದು ಜನರಲ್ಲಿ ಅಚ್ಚರಿ ಮೂಡಿಸಿದೆ. ಇನ್ನಾದರೂ ಮಸ್ಕಾಂ ಕೂಡಲೇ ಇಲ್ಲಿಗೊಂದು ಹೊಸ ವಿದ್ಯುತ್ ಕಂಬ ಅಳವಡಿಸಿ ಅಪಾಯವನ್ನು ತಪ್ಪಿಸಲು ಮುಂದಾಗಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.
ಈ ಬಗ್ಗೆ ಸಿಂದೋಡಿ ಗ್ರಾಮ ಅರಣ್ಯ ಸಮಿತಿಯ ದೇವರಹಕ್ಲು ಸುಬ್ರಮಣ್ಯ ಪತ್ರಿಕೆಯೊಂದಿಗೆ ಮಾತನಾಡಿ, ಕಳೆದ ಅನೇಕ ವರ್ಷಗಳಿಂದ ಈ ಕಂಬ ಮುರಿದು ಕುಸಿಯುವ ಹಂತದಲ್ಲಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಇಂದೋ ನಾಳೆಯೋ ಇದು ಕುಸಿದು ಬೀಳುವುದರಲ್ಲಿ ಅನುಮಾನವಿಲ್ಲ. ನಾವು ಮರದ ಕಂಬ ನಿಲ್ಲಿಸಿ ತಡೆದಿದ್ದೇವೆ. ಆದರೆ ಇದು ಶಾಶ್ವತವಲ್ಲ. ಮೆಸ್ಕಾಂ ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ಇದೊಂದು ಪ್ರವಾಸಿ ತಾಣವಾಗಿರುವುದರಿಂದ ಇಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಬರುತ್ತಾರೆ. ಹೆಂಗಸರು, ಮಕ್ಕಳು ಈ ಕಂಬದ ಅಡಿಯಲ್ಲಿಯೇ ಓಡಾಡುತಾರೆ. ಕೂಡಲೇ ಇಲ್ಲಿಗೊಂದು ವಿದ್ಯುತ್ ಕಂಬ ಅಳವಡಿಸಿ ಅಪಾಯ ತಪ್ಪಿಸಬೇಕು ಎಂದು ಒತ್ತಾಯಿಸಿದ್ದಾರೆ.