ಚಿಕ್ಕಮಗಳೂರು ಜಿಲ್ಲೆಯ ಕಾಫಿ ಮಂಡಳಿ ಸಮೀಪ ಮೇಕೆ ಮರಿ ನುಂಗಿ ಗಡದ್ದಾಗಿ ಮಲಗಿದ್ದ ಸುಮಾರು12 ಅಡಿ ಉದ್ದದ ಹೆಬ್ಬಾವನ್ನು ಸೆರೆ ಹಿಡಿಯಲಾಗಿದೆ.
ವರದಿ : ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್
ಚಿಕ್ಕಮಗಳೂರು (ಎ.29): ಕಾಫಿನಾಡು ಚಿಕ್ಕಮಗಳೂರು (Chikkamagaluru) ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಬಿಸಿಲ ಝಳ ಹೆಚ್ಚಳವಾಗುತ್ತಿದೆ. ಬೇಸಿಗೆ ಧಗೆಯಿಂದ ಆಹಾರ ಅರಸಿ ಪ್ರಾಣಿಗಳು ಮನೆ, ಕೊಟ್ಟಿಗೆ ನುಗ್ಗುತ್ತಿವೆ. ಇದರ ಸಾಲಿಗೆ ಈಗ ಹೆಬ್ಬಾವು (giant python) ಕೂಡ ಸೇರಿಕೊಂಡಿದ್ದು ಮೇಕೆಗಳು (Goat) ಇರುವ ಕೊಟ್ಟಿಗೆ ನುಗ್ಗಿದ ಹೆಬ್ಬಾವು ಮೇಕೆಯನ್ನು ತಿಂದುಹಾಕಿದೆ.
ಮಾಲೀಕನೆದುರೇ ಹೆಬ್ಬಾವುನಿಂದ ಮೇಕೆ ಮರಿ ಗುಳುಂ: ಚಿಕ್ಕಮಗಳೂರು ನಗರದ ಹೊರವಲಯದ ಹೌಸಿಂಗ್ ಬೋರ್ಡ್‌ನ ಕಾಫಿ ಮಂಡಳಿ (Coffee Board) ಸಮೀಪದ ವೆಂಕಟಪ್ಪ ಎಂಬುವವರ ಮೇಕೆ ಶೆಡ್‌ನಲ್ಲಿ ಮಾಲೀಕನೆದುರೇ ಮೇಕೆ ಮರಿಯೊಂದನ್ನು ಬೃಹತ್ ಗಾತ್ರದ ಹೆಬ್ಬಾವು ಗುಳುಂ ಮಾಡಿದ ಘಟನೆ ನಡೆದಿದೆ. ಗುರುವಾರ ಬೆಳಗ್ಗೆ 9 ಗಂಟೆ ಸಮಯದಲ್ಲಿ ಶೆಡ್‌ನಲ್ಲಿದ್ದ ಮೇಕೆಗಳು ಅರಚಾಡುವುದನ್ನು ಕೇಳಿಸಿಕೊಂಡ ವೆಂಕಟಪ್ಪ ಮತ್ತಿತರರು ಮನೆಯಿಂದ ಹೊರಕ್ಕೆ ಓಡಿ ಬಂದಿದ್ದಾರೆ.
ಅಷ್ಟರಲ್ಲಾಗಲೇ ಹೆಬ್ಬಾವು ಮೇಕೆ ಮರಿಯೊಂದನ್ನು ಸುತ್ತಿಕೊಂಡಿರುವುದನ್ನು ಕಂಡು ಬೇಸ್ತುಬಿದ್ದಿದ್ದಾರೆ. ನೋಡ ನೋಡುತ್ತಲೇ ಮೇಕೆಯನ್ನು ಹಾವು ನುಂಗಲಾರಂಭಿಸಿದೆ. ಏನು ಮಾಡಬೇಕೆಂಬುದು ತೋಚದ ಮನೆಯವರು ಉರಗ ಪ್ರಿಯ ಸ್ನೇಕ್ ನರೇಶ್ ಅವರಿಗೆ ಸುದ್ದಿ ಮುಟ್ಟಿಸಿದ್ದಾರೆ.
'ಬಡವರ ಪಾಲಿನ ಅನ್ನದ ಮೂಲ 'ಆರ್ಥಿಕ ನೀತಿ' ಜಾರಿಗೆ ತರುವುದು ಅವಶ್ಯಕ'
ಮೇಕೆಯನ್ನು ಸ್ವಾಹ ಮಾಡಿ ಗಾಢ ನಿದ್ದೆಗೆ ಜಾರಿದ ಹೆಬ್ಭಾವು: ಸ್ನೇಕ್ ನರೇಶ್ ಸ್ಥಳಕ್ಕಾಗಮಿಸುವ ವೇಳೆಗೆ ಮೇಕೆಯನ್ನು ಸಂಪೂರ್ಣ ಸ್ವಾಹ ಮಾಡಿದ ಹಾವು ಸಂದಿಯೊಂದರಲ್ಲಿ ಸರಿದು ಗಾಢನಿದ್ದೆಗೆ ಜಾರಿದೆ. ಸಣ್ಣ ಕೋಣೆಯೊಂದರಲ್ಲಿ ಸೇರಿಕೊಂಡಿದ್ದ ಹೆಬ್ಬಾವನ್ನು ಸ್ನೇಕ್‌ನರೇಶ್ ಸುರಕ್ಷಿತವಾಗಿ ಹಿಡಿದಿದ್ದಾರೆ. ನಂತರ ಅದನ್ನು ಚುರ್ಚೆಗುಡ್ಡದ ಅರಣ್ಯಕ್ಕೆ ಬಿಟ್ಟುಬಂದಿದ್ದಾರೆ. ಮೇಕೆಯನ್ನು ನುಂಗಿರುವ ಹಾವು ನಿಧಾನಕ್ಕೆ ತೆವಳುತ್ತಾ ಗುತ್ತಿಯೊಂದನ್ನು ಸೇರಿಕೊಂಡಿದೆ. ತಿಂಗಳುಗಳ ವರೆಗೆ ಅದಕ್ಕೆ ಆಹಾರದ ಅವಶ್ಯಕತೆ ಬರುವುದಿಲ್ಲ ಎಂದು ಸ್ನೇಕ್ ನರೇಶ್ ಹೇಳಿದರು. ಹೆಬ್ಬಾವು ಸುಮಾರು 12 ಅಡಿ ಇತ್ತು.
ಮೇಕೆ ಮರಿ ಕಳೆದುಕೊಂಡ ನೋವು ಕುಟುಂಬಕ್ಕೆ: ಹಾವು ಕುರಿಯನ್ನು ನುಂಗುವ ಅಪರೂಪದ ದೃಶ್ಯವನ್ನು ಕಣ್ಣಾರೆ ಕಂಡ ವೆಂಕಟಪ್ಪ ಮತ್ತವರ ಕುಟುಂಬಕ್ಕೆ ರೋಮಾಂಚಕಾರಿ ಅನುಭವ ಒಂದೆಡೆಯಾದರೆ, ಸಹಸ್ರಾರು ಬೆಲೆಯ ಮೇಕೆ ಮರಿ ಕಳೆದುಕೊಂಡ ನೋವು ಮತ್ತೊಂದೆಡೆ.
ಈ ಹೆಬ್ಬಾವು ಹೌಸಿಂಗ್ ಬೋರ್ಡ್ ಬಡಾವಣೆಗೆ ಹೊಂದಿಕೊಂಡತಿರುವ ಚುರ್ಚೆಗುಡ್ಡದಿಂದ ಆಹಾರ ಅರಸಿ ಬಂದಿದೆ. ವೆಂಕಟಪ್ಪ ಅವರ ಶೆಡ್ ಸಮೀಪ ಕಾಫಿ ಮಂಡಳಿ ಕಚೇರಿ ಸೇರಿದಂತೆ ಜಿ.ಪಂ.ಗೆ ಸೇರಿದ ವಿವಿಧ ಇಲಾಖೆ ಕಟ್ಟಡಗಳೂ ಇವೆ. ಹತ್ತಿರದಲ್ಲೇ ವಿದ್ಯಾರ್ಥಿ ಹಾಸ್ಟೆಲ್ ಸಹ ಇದೆ. ಈ ಪ್ರದೇಶಕ್ಕೆ ಹಾವು ಪ್ರವೇಶ ಮಾಡಿರುವುದು ಭೀತಿ ಮೂಡಿಸಿದೆ.
Gadaga ಅಪ್ರಾಪ್ತೆಯ ಕಿಡ್ನಾಪ್ ಮಾಡಿ ಅತ್ಯಾಚಾರ, ಬಿಜೆಪಿ ಮುಖಂಡನ ವಿರುದ್ಧ ಆರೋಪ!
ದಿನೇ ದಿನೇ ಬೇಸಿಗೆ ಬಿಸಿಲಿನ ಪ್ರಕರತೆ ಹೆಚ್ಚಾಗ ತೊಡಗಿರುವುದರಿಂದ ಚುರ್ಚೆಗುಡ್ಡದಿಂದ ಕಾಡು ಪ್ರಾಣಿಗಳು ನೀರು, ಆಹಾರ ಅರಸಿ ಜನವಸತಿ ಬಡಾವಣೆಯತ್ತ ಬರಲು ಕಾರಣ ಎನ್ನುವುದು ಸ್ಥಳೀಯರ ಅಭಿಪ್ರಾಯವಾಗಿದೆ. ಸಾಮಾನ್ಯವಾಗಿ ಬೇಸಿಗೆ ದಿನಗಳಲ್ಲಿ ಪ್ರಾಣಿಗಳು, ಸರೀಸೃಪಗಳು ಇತ್ತ ಬರುತ್ತಿರುತ್ತವೆ. ಕೆಲವು ವರ್ಷಗಳ ಹಿಂದೆ ಕಚೇರಿ ಕಟ್ಟಡವೊಂದರ ಬಳಿ ಚಿರತೆಯೊಂದು ಆಗಾಗ ಕಾಣುತ್ತಿತ್ತು. ಇತ್ತೀಚೆಗೆ ಅದರ ದರ್ಶನವಾಗಿಲ್ಲ ಎಂದೂ ಹೇಳಲಾಗುತ್ತಿದೆ.