ಬಾಗೇಪಲ್ಲಿಯಲ್ಲಿ ಧುಮ್ಮಿಕ್ಕುತ್ತಿರುವ ಜಲಪಾತ

By Web DeskFirst Published Oct 9, 2019, 1:07 PM IST
Highlights

ಉತ್ತಮ ಮಳೆಯಾಗಿರುವ ಪರಿಣಾಮ ತಾಲೂಕಿನ ಪಾತಪಾಳ್ಯ ಹೋಬಳಿಯ ಗುಡಿಪಲ್ಲಿ ಬಳಿ ಇರುವ ಬೆಟ್ಟಗಳ ನಡುವೆ ಜಲಪಾತ ಧುಮ್ಮಿಕ್ಕುತ್ತಿದೆ| ಪಾತಪಾಳ್ಯ ಹೋಬಳಿ ವ್ಯಾಪ್ತಿಯಲ್ಲಿ ಸುರಿದ ಭಾರಿ ಮಳೆಯಿಂದ ಜಡಮಡಗು ಜಲಪಾತ ತುಂಬಿ ಹರಿಯುತ್ತಿದ್ದು, ತಾಲೂಕು ಸೇರಿದಂತೆ ನೆರೆಯ ಆಂಧ್ರ ಮತ್ತು ಜಿಲ್ಲೆಯ ನಾನಾ ಪ್ರದೇಶಗಳ ಜನರನ್ನು ಕೈಬೀಸಿ ಕರೆಯುತ್ತಿದೆ| ಸುಮಾರು 30 ಅಡಿಗಳ ಎತ್ತರದಿಂದ ಧುಮುಕುತ್ತಿರುವ ಜಲಧಾರೆ ಬಂಡೆಗಳ ಮೇಲಿನಿಂದ ಜಾರುವುದು ವಿಶೇಷ| 

ಬಾಗೇಪಲ್ಲಿ(ಅ.9): ಬರದ ನಾಡಲ್ಲಿ ಬೆಟ್ಟ ಗುಡ್ಡಗಳ ನಡುವೆ ಮಳೆಯ ನೀರು ಹರಿಯುತ್ತಿದ್ದು, ಅಪರೂಪದ ಜಲಪಾತ ಜನರನ್ನು ಕೈಬೀಸಿ ಕರೆಯುತ್ತಿದೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಸತತ ಬರಕ್ಕೆ ತುತ್ತಾಗಿರುವ ಈ ಭಾಗದಲ್ಲಿ ಸಮಯಕ್ಕೆ ಸರಿಯಾಗಿ ಮಳೆ ಬಾರದ ಪರಿಣಾಮ ಕೆರೆ ಕುಂಟೆಗಳು ಖಾಲಿಯಾಗಿ, ಜನರು ಸೇರಿದಂತೆ ಪ್ರಾಣಿ ಪಕ್ಷಿಗಳಿಗೂ ಕುಡಿಯುವ ನೀರಿಗಾಗಿ ಪರದಾಡುವ ಸ್ಥಿತಿ ನಿರ್ಮಾಣವಾಗಿತ್ತು. ಅಂತರ್ಜಲಮಟ್ಟ ಪಾತಾಳಕ್ಕೆ ಕುಸಿದು ನೀರಿನ ಅಭಾವ ಎದುರಾಗಿತ್ತು. ಆದರೆ ಪ್ರಸ್ತುತ ಉತ್ತಮ ಮಳೆಯಾಗಿರುವ ಪರಿಣಾಮ ತಾಲೂಕಿನ ಪಾತಪಾಳ್ಯ ಹೋಬಳಿಯ ಗುಡಿಪಲ್ಲಿ ಬಳಿ ಇರುವ ಬೆಟ್ಟಗಳ ನಡುವೆ ಜಲಪಾತ ಧುಮ್ಮಿಕ್ಕುತ್ತಿದ್ದು, ಜನರ ಆರ್ಕಣೆಯ ಕೇಂದ್ರಬಿಂದುವಾಗಿದೆ.

30 ಅಡಿ ಎತ್ತರದ ಜಲಪಾತ

ಪಾತಪಾಳ್ಯ ಹೋಬಳಿ ವ್ಯಾಪ್ತಿಯಲ್ಲಿ ಸುರಿದ ಭಾರಿ ಮಳೆಯಿಂದ ಜಡಮಡಗು ಜಲಪಾತ ತುಂಬಿ ಹರಿಯುತ್ತಿದ್ದು, ತಾಲೂಕು ಸೇರಿದಂತೆ ನೆರೆಯ ಆಂಧ್ರ ಮತ್ತು ಜಿಲ್ಲೆಯ ನಾನಾ ಪ್ರದೇಶಗಳ ಜನರನ್ನು ಕೈಬೀಸಿ ಕರೆಯುತ್ತಿದೆ. ಸುಮಾರು 30 ಅಡಿಗಳ ಎತ್ತರದಿಂದ ಧುಮುಕುತ್ತಿರುವ ಜಲಧಾರೆ ಬಂಡೆಗಳ ಮೇಲಿನಿಂದ ಜಾರುವುದು ವಿಶೇಷ.

ಉತ್ತಮ ರಸ್ತೆ ಮಾರ್ಗ

ಬಾಗೇಪಲ್ಲಿ ತಾಲೂಕು ಕೇಂದ್ರದಿಂದ ಪಾತಪಾಳ್ಯ ಮಾರ್ಗವಾಗಿ 18 ಕಿಮೀ ಕ್ರಮಿಸಿದರೆ ಪಾತಕೋಟೆ ಕ್ರಾಸ್‌ ಮೂಲಕ ಗೊಂದಿಪಲ್ಲಿ, ಗುಜ್ಜೆಪಲ್ಲಿ ಗ್ರಾಮಗಳ ಮೂಲಕ ಕೇವಲ 4 ಕಿಮೀ ದೂರದಲ್ಲಿ ಜಡಮಡುಗು ಜಲಪಾತ ಸಿಗುತ್ತೆ. ಉತ್ತಮ ರಸ್ತೆ ಹೊಂದಿರುವ ಹಿನ್ನೆಲೆಯಲ್ಲಿ ಇಲ್ಲಿಗೆ ಬರುವ ಪ್ರವಾಸಿಗರಿಗೆ ಅನುಕೂಲವಾಗಿದೆ. ಜಲಪಾತದ ಸ್ಥಳದಲ್ಲಿ ಹೋಟೆಲ್‌ ಇಲ್ಲ, ಇಲ್ಲಿಗೆ ಆಗಮಿಸುವ ಪ್ರವಾಸಿಗರು ಊಟ ಮತ್ತು ಕುಡಿಯುವ ನೀರು ತಪ್ಪದೆ ತಮ್ಮೊಂದಿಗೆ ತೆಗೆದುಕೊಂಡು ಹೋಗಬೇಕಾಗುತ್ತದೆ.
 

click me!