
ನವದೆಹಲಿ (ಅ.12): ದೇಶಾದ್ಯಂತ ಉದ್ಯೋಗಾಕಾಂಕ್ಷಿ ಪದವೀಧರರಿಗೆ ಭಾರತೀಯ ರೈಲ್ವೆಯು ಭಾರಿ ಸಿಹಿ ಸುದ್ದಿ ನೀಡಿದೆ. ರೈಲ್ವೆ ನೇಮಕಾತಿ ಮಂಡಳಿಯು (RRB) 2026 ರ ಸಾಲಿನ 'ನಾನ್-ಟೆಕ್ನಿಕಲ್ ಪಾಪ್ಯುಲರ್ ಕ್ಯಾಟಗರೀಸ್' (NTPC–Graduate) ಅಡಿಯಲ್ಲಿ ಒಟ್ಟು 3,548 ಹುದ್ದೆಗಳ ಭರ್ತಿಗೆ ಅಧಿಕೃತ ನೇಮಕಾತಿ ಪ್ರಕಟಣೆ ಹೊರಡಿಸಿದೆ. ಕೇಂದ್ರೀಕೃತ ಉದ್ಯೋಗ ಅಧಿಸೂಚನೆ (CEN No. 06/2026) ಮೂಲಕ ಈ ಹುದ್ದೆಗಳನ್ನು ಪ್ರಕಟಿಸಲಾಗಿದ್ದು, ರೈಲ್ವೆಯ ವಾಣಿಜ್ಯ ಸೇವೆಗಳು, ರೈಲು ಕಾರ್ಯಾಚರಣೆ, ಲೆಕ್ಕಪತ್ರ ಹಾಗೂ ಆಡಳಿತ ವಿಭಾಗಗಳಲ್ಲಿ ಈ ಭರ್ತಿ ನಡೆಯಲಿದೆ.
ಈ ನೇಮಕಾತಿಯಲ್ಲಿ ಅತ್ಯಂತ ಹೆಚ್ಚು ಅಂದರೆ ಬರೋಬ್ಬರಿ 2,750 ಗೂಡ್ಸ್ ಟ್ರೇನ್ ಮ್ಯಾನೇಜರ್ (Goods Train Manager) ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ. ಉಳಿದಂತೆ ಸೀನಿಯರ್ ಕ್ಲರ್ಕ್ ಕಮ್ ಟೈಪಿಸ್ಟ್ ಸ್ಥಾನಕ್ಕೆ 371 ಹುದ್ದೆಗಳು, ಜೂನಿಯರ್ ಅಕೌಂಟ್ಸ್ ಅಸಿಸ್ಟೆಂಟ್ ಕಮ್ ಟೈಪಿಸ್ಟ್ ಸ್ಥಾನಕ್ಕೆ 300 ಹುದ್ದೆಗಳು ಹಾಗೂ ಚೀಫ್ ಕಮರ್ಷಿಯಲ್ ಕಮ್ ಟಿಕೆಟ್ ಸೂಪರ್‌ವೈಸರ್‌ಗೆ 127 ಹುದ್ದೆಗಳನ್ನು ಘೋಷಿಸಲಾಗಿದೆ.
7 ನೇ ಕೇಂದ್ರ ವೇತನ ಆಯೋಗದ (7th CPC) ನಿಯಮಾವಳಿಗಳಂತೆ ಈ ಕೆಳಗಿನಂತೆ ಮೂಲ ವೇತನ ನಿಗದಿಯಾಗಿದೆ. ಚೀಫ್ ಕಮರ್ಷಿಯಲ್ ಕಮ್ ಟಿಕೆಟ್ ಸೂಪರ್‌ವೈಸರ್‌ಗೆ 'ಪೇ ಲೆವೆಲ್ 6' ಅಡಿಯಲ್ಲಿ ಆರಂಭಿಕ ಮೂಲ ವೇತನ ತಿಂಗಳಿಗೆ ₹35,400 ಆಗಿರಲಿದೆ. ಗೂಡ್ಸ್ ಟ್ರೇನ್ ಮ್ಯಾನೇಜರ್, ಜೂನಿಯರ್ ಅಕೌಂಟ್ಸ್ ಅಸಿಸ್ಟೆಂಟ್ ಕಮ್ ಟೈಪಿಸ್ಟ್ ಹಾಗೂ ಸೀನಿಯರ್ ಕ್ಲರ್ಕ್ ಕಮ್ ಟೈಪಿಸ್ಟ್: 'ಪೇ ಲೆವೆಲ್ 5' ಅಡಿಯಲ್ಲಿ ಆರಂಭಿಕ ಮೂಲ ವೇತನ ತಿಂಗಳಿಗೆ ₹29,200 ಇರಲಿದೆ. ಇದರ ಜೊತೆಗೆ ಕೇಂದ್ರ ನಿಯಮಾವಳಿಗಳಂತೆ ನೀಡಲಾಗುವ ತುಟ್ಟಿಭತ್ಯೆ ಹಾಗೂ ಇತರ ಸೇವಾ ಭತ್ಯೆಗಳು ಲಭ್ಯವಿರಲಿವೆ.
ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಯಾವುದೇ ಪದವಿ (Degree) ಅಥವಾ ತತ್ಸಮಾನ ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅರ್ಹರಾಗಿದ್ದಾರೆ. 2027 ರ ಜನವರಿ 1 ರ ಅನ್ವಯ ಅಭ್ಯರ್ಥಿಯ ವಯಸ್ಸು 18 ರಿಂದ 33 ವರ್ಷಗಳ ಒಳಗಿರಬೇಕು. ಸರ್ಕಾರದ ನಿಯಮಗಳ ಪ್ರಕಾರ ಅರ್ಹ ಅಭ್ಯರ್ಥಿಗಳಿಗೆ ವಯೋಸಹಜ ಸಡಲಿಲಿಕೆ (Age Relaxation) ಲಭ್ಯವಿರಲಿದೆ.
ನೇಮಕಾತಿಯು ಒಟ್ಟು 4 ಹಂತಗಳಲ್ಲಿ ನಡೆಯಲಿದೆ:
ಪ್ರಮುಖ ಬದಲಾವಣೆ: ನೂತನ ಅಧಿಸೂಚನೆಯ ಪ್ರಕಾರ, ಜೂನಿಯರ್ ಅಕೌಂಟ್ಸ್ ಅಸಿಸ್ಟೆಂಟ್ ಕಮ್ ಟೈಪಿಸ್ಟ್ ಹಾಗೂ ಸೀನಿಯರ್ ಕ್ಲರ್ಕ್ ಕಮ್ ಟೈಪಿಸ್ಟ್ ಹುದ್ದೆಗಳಿಗೆ ಈ ಹಿಂದೆ ಇರುತ್ತಿದ್ದ 'ಕಂಪ್ಯೂಟರ್ ಆಧಾರಿತ ಟೈಪಿಂಗ್ ಸ್ಕಿಲ್ ಟೆಸ್ಟ್' (CBTST) ಅನ್ನು ಸಂಪೂರ್ಣವಾಗಿ ರದ್ದುಗೊಳಿಸಲಾಗಿದೆ. ಆದರೆ, ಅಭ್ಯರ್ಥಿಗಳು ಮೂಲಭೂತ ಕಂಪ್ಯೂಟರ್ ಹಾಗೂ ಟೈಪಿಂಗ್ ಜ್ಞಾನವನ್ನು ಹೊಂದಿರಬೇಕಿದ್ದು, ಹುದ್ದೆಗೆ ಆಯ್ಕೆಯಾಗಿ ಸೇರ್ಪಡೆಗೊಂಡ ನಂತರ ಅದನ್ನು ಮೌಲ್ಯಮಾಪನ ಮಾಡಲಾಗುತ್ತದೆ. ಅಂಗವಿಕಲ (PwBD) ಅಭ್ಯರ್ಥಿಗಳಿಗೆ ನಿಯಮಾವಳಿಗಳ ಪ್ರಕಾರ ಸ್ಕ್ರೈಬ್ (ಬರಹಗಾರರ) ನೆರವು ಹಾಗೂ ಹೆಚ್ಚುವರಿ ಪರೀಕ್ಷಾ ಸಮಯದ ಸೌಲಭ್ಯ ದೊರೆಯಲಿದೆ.
ಅಭ್ಯರ್ಥಿಗಳು ಹೆಚ್ಚಿನ ವಿವರಗಳು, ಮೀಸಲಾತಿ ಹಂಚಿಕೆ ಹಾಗೂ ಆನ್‌ಲೈನ್ ಅರ್ಜಿ ಸಲ್ಲಿಕೆಗಾಗಿ ರೈಲ್ವೆ ನೇಮಕಾತಿ ಮಂಡಳಿಯ ಅಧಿಕೃತ ವೆಬ್‌ಸೈಟ್‌ಗಳಾದ rrb.indianrailways.gov.in ಅಥವಾ rrbapply.gov.in ಗೆ ಭೇಟಿ ನೀಡಬಹುದು.