ರಾಜ್ಯದ 2637 ಅಂಚೆ ಹುದ್ದೆಗಳಲ್ಲಿ ಭರ್ತಿಯಾದದ್ದು ಕೇವಲ 1646| ನೂರಾರು ಪೋಸ್ಟ್‌ಮ್ಯಾನ್ ಹುದ್ದೆಗಳು ಭರ್ತಿಯಾಗದೆ ಖಾಲಿ ಬಿದ್ದಿವೆ| ರಾಜ್ಯದಲ್ಲಿ 2,243 ಹುದ್ದೆಗಳಿಗೆ ಮತ್ತೆ ಅರ್ಜಿ ಆಹ್ವಾನಿಸಿದ ಅಂಚೆ ಇಲಾಖೆ|
ಸಂದೀಪ್ ವಾಗ್ಲೆ
ಮಂಗಳೂರು(ಡಿ.25):ಜನರ ನಡುವಿನ ಕೊಂಡಿಯಾಗಿರುವ ಅಂಚೆಯಣ್ಣ ಎಂದರೆ ದೇಶಾದ್ಯಂತ ಜನರ ದಶಕಗಳ ನಂಬಿಕೆ. ಈಗಲೂ ಅಂಚೆಯಣ್ಣನ ಮೇಲಿನ ಜನರ ಪ್ರೀತಿ, ವಿಶ್ವಾಸ ಕಡಿಮೆಯಾಗಿಲ್ಲ. ಆದರೆ ಅಂಚೆಯಣ್ಣನ ಕೆಲಸ ಮಾಡಲು ಮಾತ್ರ ಈಗಿನ ಉನ್ನತ ಶಿಕ್ಷಣ ಪಡೆದ ಯುವಜನತೆ ಹಿಂದೇಟು ಹಾಕುತ್ತಿರುವ ಪರಿಣಾಮ ಅಂಚೆ ಇಲಾಖೆಯ ನೂರಾರು ಪೋಸ್ಟ್‌ಮ್ಯಾನ್ ಹುದ್ದೆಗಳು ಭರ್ತಿಯಾಗದೆ ಖಾಲಿ ಬಿದ್ದಿವೆ!
ರಾಜ್ಯದಲ್ಲಿ ಅಂಚೆ ಇಲಾಖೆ ಕಳೆದ ವರ್ಷ ಒಟ್ಟು 2,637 ಶಾಖಾ ಅಂಚೆಪಾಲಕ, ಸಹಾಯಕ ಅಂಚೆಪಾಲಕ, ಡಾಕ್ ಸೇವಕ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿತ್ತು. ಪದವೀಧರರು, ಸ್ನಾತಕೋತ್ತರ ಪದವೀಧರರೂ ಸೇರಿದಂತೆ ಬರೋಬ್ಬರಿ 4 ಲಕ್ಷ ಮಂದಿ ಅರ್ಜಿ ಹಾಕಿದ್ದರು. ನಿಗದಿತ ಅಷ್ಟೂ ಹುದ್ದೆಗಳಿಗೆ ಅರ್ಹರನ್ನು ಗುರುತಿಸಿ ಅವರಿಗೆ ಕೆಲಸವೂ ಸಿಕ್ಕಿತ್ತು. ಆದರೆ ಇದು ‘ಪೋಸ್ಟ್ ಮ್ಯಾನ್’ ಹುದ್ದೆ ಎಂದು ಉನ್ನತ ಶಿಕ್ಷಣ ಪಡೆದ ಅಭ್ಯರ್ಥಿಗಳು ಕೆಲಸಕ್ಕೆ ಸೇರಲು ನಿರಾಕರಿಸಿದ್ದರಿಂದ ಕೇವಲ 1,646 ಹುದ್ದೆಗಳು (ಅಂದರೆ ಶೇ.62ರಷ್ಟು) ಮಾತ್ರ ಭರ್ತಿಯಾಗಿವೆ. ಹೀಗಾಗಿ ನಿಜವಾಗಿಯೂ ಕೆಲಸದ ಅನಿವಾರ್ಯತೆ ಇರುವವರು ಉದ್ಯೋಗ ವಂಚಿತರಾಗಿದ್ದಾರೆ. ಕಳೆದ ವರ್ಷದ ನೇಮಕಾತಿ ಪ್ರಕ್ರಿಯೆ ಇತ್ತೀಚೆಗಷ್ಟೆ ಅಂತಿಮಗೊಂಡಿದ್ದು, ಹುದ್ದೆ ಇನ್ನೂ ಭರ್ತಿಯಾಗದೆ ಇರುವುದರಿಂದ ಮತ್ತೆ ಅಂಚೆ ಇಲಾಖೆ ರಾಜ್ಯದಲ್ಲಿ 2,243 ಹುದ್ದೆಗಳಿಗೆ ಮತ್ತೆ ಅರ್ಜಿ ಆಹ್ವಾನಿಸಿದೆ.
ಕರ್ನಾಟಕ ಅಂಚೆ ವೃತ್ತದಲ್ಲಿ ಹುದ್ದೆಗಳ ನೇಮಕ: SSLC, PUC ಪಾಸ್ ಆದವರು ಅರ್ಜಿ ಸಲ್ಲಿಸಿ
ಏಕೆ ಹೀಗೆ?:
ದಿನಕ್ಕೆ ನಾಲ್ಕೈದು ಗಂಟೆಗಳ ಕೆಲಸವಿರುವ ಶಾಖಾ ಅಂಚೆ ಪಾಲಕ, ಸಹಾಯಕ ಅಂಚೆಪಾಲಕ, ಡಾಕ್ ಸೇವಕ್ ಹುದ್ದೆಗಳಿಗೆ ಬೇಕಾದದ್ದು ಎಸ್ಸೆಸ್ಸೆಲ್ಸಿ ವಿದ್ಯಾರ್ಹತೆ. ನಿಯಮದ ಪ್ರಕಾರ ಎಸ್ಸೆಸ್ಸೆಲ್ಸಿಯಲ್ಲಿ ಅತೀ ಹೆಚ್ಚು ಅಂಕ ಇರುವವರನ್ನು ಇಲಾಖೆ ಪಾರದರ್ಶಕವಾಗಿ ನೇಮಕಗೊಳಿಸುತ್ತದೆ. ಕಳೆದ ಬಾರಿ ನೇಮಕಾತಿ ಪ್ರಕ್ರಿಯೆ ವೇಳೆ ಎಸ್ಸೆಸ್ಸೆಲ್ಸಿಯಲ್ಲಿ ಹೆಚ್ಚು ಅಂಕ ಗಳಿಸಿದ್ದ ಪದವಿ, ಸ್ನಾತಕೋತ್ತರ ಪದವಿ ವಿದ್ಯಾರ್ಹತೆಯ ಅಭ್ಯರ್ಥಿಗಳಿಗೆ ಸಹಜವಾಗಿಯೇ ಈ ಹುದ್ದೆಗಳು ಸಿಕ್ಕಿದ್ದವು. ಇಲಾಖೆ ಅರ್ಜಿ ಆಹ್ವಾನಿಸುವಾಗ ‘ಪೋಸ್ಟ್ ಮ್ಯಾನ್’ ಹುದ್ದೆ ಎಂದು ನಮೂದಿಸುವ ಕ್ರಮ ಇಲ್ಲ. ಆದರೆ ಕೆಲಸಕ್ಕೆ ಸೇರುವಾಗ ಈ ಹುದ್ದೆಗಳು ‘ಪೋಸ್ಟ್ ಮ್ಯಾನ್’, ಅಟೆಂಡರ್ ಬಗೆಯ ಹುದ್ದೆಗಳೆಂದು ತಿಳಿದು ಬಹುತೇಕರು ಕೆಲಸ ಸಿಕ್ಕಿದರೂ ನಿರಾಕರಿಸಿದ್ದಾರೆ. ಹೀಗಾಗಿ ರಾಜ್ಯದಲ್ಲಿ ಬರೊಬ್ಬರಿ 991 ಹುದ್ದೆಗಳು ಭರ್ತಿಯಾಗೇ ಇಲ್ಲ. ಇತರೆ ರಾಜ್ಯಗಳಲ್ಲೂ ಇದೇ ಪರಿಸ್ಥಿತಿಯಿದೆ.
ಹೆಚ್ಚು ಅಂಕ ದೊರೆತ ಅಭ್ಯರ್ಥಿ ಕೆಲಸ ನಿರಾಕರಣೆ ಮಾಡಿದರೆ ಅನಂತರ ಹೆಚ್ಚು ಅಂಕ ಪಡೆದ ಸಮೀಪವರ್ತಿ ಅಭ್ಯರ್ಥಿಗೆ ಕೆಲಸಕ್ಕೆ ಸೇರಲು ನೋಟಿಸ್ ನೀಡಲಾಗಿತ್ತು. ಹೀಗೆ ನಿಯಮ ಪ್ರಕಾರ ಗರಿಷ್ಠ 5 ಮಂದಿಗೆ ಕೆಲಸಕ್ಕೆ ಸೇರಲು ನೋಟಿಸ್ ನೀಡಿದ್ದರೂ ಅವರೆಲ್ಲರೂ ಹುದ್ದೆ ನಿರಾಕರಣೆ ಮಾಡಿರುವುದಾಗಿ ಅಂಚೆ ಅಧಿಕಾರಿಗಳು ತಿಳಿಸಿದ್ದಾರೆ.
ಅಂಚೆ ಇಲಾಖೆಯ ಪ್ರತಿ ಉದ್ಯೋಗವೂ ಘನತೆಯಿಂದ ಕೂಡಿದೆ. ಅದಕ್ಕೆ ತಕ್ಕುದಾಗಿ ಉತ್ತಮ ವೇತನವೂ ಇದೆ. ಈ ಬಾರಿ ಅಭ್ಯರ್ಥಿಗಳು ಅರ್ಜಿ ಹಾಕುವಾಗಲೇ ಕೆಲಸದ ಸ್ವರೂಪವನ್ನು ಸರಿಯಾಗಿ ತಿಳಿದು ಅದಕ್ಕೆ ಬದ್ಧರಾಗಿ ಉಳಿದರೆ, ಉದ್ಯೋಗ ಅವಶ್ಯಕತೆ ಇರುವವರಿಗೆ ಅನುಕೂಲವಾಗುತ್ತದೆ ಎಂದು ಮಂಗಳೂರಿನ ಪ್ರಧಾನ ಅಂಚೆ ಅಧೀಕ್ಷಕ, ಶ್ರೀಹರ್ಷ ತಿಳಿಸಿದ್ದಾರೆ.