ಇಂದಿನ ಸೈಕಲ್ ವೇಗದಲ್ಲಿ ಅಂದಿನ ಕಾರು ! ಇತಿಹಾಸದ ಮೊದಲ ಪೆಟ್ರೋಲ್ ಕಾರಿನಲ್ಲಿದ್ದ ಚಕ್ರಗಳೆಷ್ಟು?

Published : Nov 20, 2026, 02:49 PM IST
Karl Benz

ಸಾರಾಂಶ

ಇತಿಹಾಸವನ್ನು ಕೆದಕಿದಾಗ ಅನೇಕ ಆಸಕ್ತಿ ವಿಷ್ಯಗಳು ಬಹಿರಂಗಗೊಳ್ತವೆ. ಈಗ ಐಷಾರಾಮಿ ಸೌಲಭ್ಯಗಳನ್ನು ಹೊಂದಿರುವ ಕಾರು ಹಿಂದೆ ಹೀಗಿರಲಿಲ್ಲ. ವಿಶ್ವದ ಮೊದಲ ಕಾರ್ ಯಾವ್ದು, ಅದ್ರ ವಿಶೇಷತೆ ಏನು ?

ಇಂದು ಜಗತ್ತಿನಲ್ಲಿ ಸಾಕಷ್ಟು ವೆರೈಟಿ ವಾಹನಗಳಿವೆ. ಗಂಟೆಗೆ 150ರಿಂದ 200 ಕಿಲೋಮೀಟರ್ ವೇಗದಲ್ಲಿ ಚಲಿಸುವ ಕಾರುಗಳು ಮಾರುಕಟ್ಟೆಯಲ್ಲಿವೆ. ಅತ್ಯಾಧುನಿಕ ತಂತ್ರಜ್ಞಾನ, ಶಕ್ತಿಶಾಲಿ ಎಂಜಿನ್ ಹಾಗೂ ಐಷಾರಾಮಿ ಸೌಲಭ್ಯಗಳಿರುವ ಕಾರುಗಳು ಇಂದು ಎಲ್ಲರ ಗಮನ ಸೆಳೆಯುತ್ತಿವೆ. ಆದ್ರೆ ವಿಶ್ವದ ಮೊದಲ ಆಧುನಿಕ ಕಾರು ಹೇಗಿತ್ತು ಗೊತ್ತಾ? ಅದರಲ್ಲಿ ಎಷ್ಟು ಚಕ್ರ ಇತ್ತು, ಸ್ಪೀಡ್ ಹೇಗಿತ್ತು? ಮಾಹಿತಿ ಇಲ್ಲಿದೆ.

ವಿಶ್ವದ ಮೊದಲ ಕಾರ್ ಯಾವುದು?

ಜರ್ಮನ್ ಎಂಜಿನಿಯರ್ ಕಾರ್ಲ್ ಬೆಂಜ್ (Karl Benz) ನಿರ್ಮಿಸಿದ ಬೆಂಜ್ ಪೇಟೆಂಟ್-ಮೋಟರ್ವಾಗನ್ (Benz Patent-Motorwagen) ಅನ್ನು ಇತಿಹಾಸದ ಮೊದಲ ಪೆಟ್ರೋಲ್ ಚಾಲಿತ ಕಾರು ಎಂದು ಪರಿಗಣಿಸಲಾಗುತ್ತದೆ. 1886ರಲ್ಲಿ ಈ ಕಾರಿಗೆ ಪೇಟೆಂಟ್ ದೊರಕಿತ್ತು.

ಮೂರೇ ಚಕ್ರದ ಕಾರು

ವಿಶ್ವದ ಮೊದಲ ಪೆಟ್ರೋಲ್ ಕಾರು ಬೆಂಜ್ ಪೇಟೆಂಟ್-ಮೋಟರ್ವಾಗನ್ನಲ್ಲಿ ಕೇವಲ ಮೂರು ಚಕ್ರಗಳನ್ನು ಅಳವಡಿಸಲಾಗಿತ್ತು. ನಾಲ್ಕು ಚಕ್ರಗಳ ಬದಲಿಗೆ ಮೂರು ಚಕ್ರಗಳ ವಿನ್ಯಾಸವನ್ನು ಕಾರ್ಲ್ ಬೆಂಜ್ ಆಯ್ಕೆ ಮಾಡಿಕೊಂಡಿದ್ದರು. ಇದರಿಂದ ವಾಹನದ ತೂಕ ಕಡಿಮೆಯಾಗುವುದರ ಜೊತೆಗೆ ತಿರುಗಿಸುವುದು ಸುಲಭವಾಗುತ್ತದೆ ಎಂಬುದು ಅವರ ಲೆಕ್ಕಾಚಾರವಾಗಿತ್ತು. ಈ ಕಾರಿನ ಮುಂಭಾಗದಲ್ಲಿ ಒಂದು ಚಿಕ್ಕ ಸ್ಟೀರಿಂಗ್ ಚಕ್ರವಿದ್ದರೆ, ಹಿಂಭಾಗದಲ್ಲಿ ಸೈಕಲ್ನಲ್ಲಿರುವಂತೆ ಸ್ಪೋಕ್ಗಳನ್ನು ಹೊಂದಿರುವ ಎರಡು ದೊಡ್ಡ ಚಕ್ರಗಳಿದ್ದವು. ಈ ಚಕ್ರಗಳಿಗೆ ಘನ ರಬ್ಬರ್ ಟೈರ್ಗಳನ್ನು ಅಳವಡಿಸಲಾಗಿತ್ತು.

ಗರಿಷ್ಠ ವೇಗ ಗಂಟೆಗೆ ಕೇವಲ 16 ಕಿ.ಮೀ

ಇಂದಿನ ಕಾರುಗಳ ವೇಗಕ್ಕೆ ಹೋಲಿಸಿದರೆ ಮೊದಲ ಕಾರಿನ ವೇಗ ತುಂಬಾ ಕಡಿಮೆ. ಬೆಂಜ್ ಮೋಟರ್ವಾಗನ್ನ ಆರಂಭಿಕ ಮಾದರಿಯ ಗರಿಷ್ಠ ವೇಗ ಗಂಟೆಗೆ ಸುಮಾರು 16 ಕಿಲೋಮೀಟರ್. ನಂತ್ರ ಸುಧಾರಿತ ಮಾದರಿಗಳಲ್ಲಿ ಈ ವೇಗ ಗಂಟೆಗೆ ಸುಮಾರು 19 ರಿಂದ 20 ಕಿಲೋಮೀಟರ್ಗೆ ಏರಿಕೆಯಾಗಿತ್ತು.ಇಂದಿನ ಸೈಕಲ್ ವೇಗದಲ್ಲಿ ಅಂದಿನ ಕಾರು ಚಲಿಸ್ತಿತ್ತು.

ವಿಶ್ವದ ಮೊದಲ ಪೆಟ್ರೋಲ್ ಕಾರಿನಲ್ಲಿ 954 ಸಿಸಿ ಸಾಮರ್ಥ್ಯದ ಸಿಂಗಲ್ ಸಿಲಿಂಡರ್, ಫೋರ್ ಸ್ಟ್ರೋಕ್ ಪೆಟ್ರೋಲ್ ಎಂಜಿನ್ ಅಳವಡಿಸಲಾಗಿತ್ತು. ವಿಶೇಷವೆಂದರೆ, ಈ ಎಂಜಿನ್ ಕೇವಲ 0.67ರಿಂದ 0.75 ಹಾರ್ಸ್ಪವರ್ (HP) ಶಕ್ತಿಯನ್ನು ಉತ್ಪಾದಿಸುತ್ತಿತ್ತು. ಅಂದರೆ ಒಂದು ಕುದುರೆಯ ಶಕ್ತಿಗಿಂತಲೂ ಕಡಿಮೆ ಸಾಮರ್ಥ್ಯವನ್ನು ಈ ಎಂಜಿನ್ ಹೊಂದಿತ್ತು. ಎಂಜಿನ್ ಅನ್ನು ಕಾರಿನ ಹಿಂಭಾಗದಲ್ಲಿ ಅಳವಡಿಸಲಾಗಿತ್ತು. ವಾಹನದ ತೂಕ ಕಡಿಮೆ ಇರುವಂತೆ ನೋಡಿಕೊಳ್ಳಲು ಅದರ ರಚನೆಯನ್ನು ಹಗುರವಾದ ಸ್ಟೀಲ್ ಟ್ಯೂಬ್ಗಳಿಂದ ನಿರ್ಮಿಸಲಾಗಿತ್ತು.

ಈ ಐತಿಹಾಸಿಕ ಕಾರಿನಲ್ಲಿ ಇಂದಿನ ವಾಹನಗಳಲ್ಲಿರುವಂತೆ ದುಂಡನೆಯ ಸ್ಟೀರಿಂಗ್ ವೀಲ್ ಇರಲಿಲ್ಲ. ಬದಲಾಗಿ ಮಧ್ಯದಲ್ಲಿ ನೇರವಾದ ರಾಡ್ಗೆ ಟಿಲ್ಲರ್ ಮಾದರಿಯ ಹ್ಯಾಂಡಲ್ ಅಳವಡಿಸಲಾಗಿತ್ತು. ಈ ಹ್ಯಾಂಡಲ್ ಮೂಲಕ ಮುಂಭಾಗದಲ್ಲಿದ್ದ ಒಂದೇ ಚಕ್ರವನ್ನು ತಿರುಗಿಸಿ ಕಾರನ್ನು ನಿಯಂತ್ರಿಸಲಾಗುತ್ತಿತ್ತು. ಈಗಿನ ಆಟೋದಂತೆ ಸ್ಟೀರಿಂಗ್ ಇರ್ತಿತ್ತು. 1888ರಲ್ಲಿ ಕಾರ್ಲ್ ಬೆಂಜ್ ಅವರ ಪತ್ನಿ ಬರ್ಥಾ ಬೆಂಜ್ (Bertha Benz) ಇದೇ ಕಾರಿನ ಸುಧಾರಿತ ಮಾದರಿಯನ್ನು ಬಳಸಿಕೊಂಡು 100 ಕಿಲೋಮೀಟರ್ಗೂ ಹೆಚ್ಚು ದೂರದ ಪ್ರಯಾಣ ಕೈಗೊಂಡಿದ್ದರು. ಈ ಮೂಲಕ ಪೆಟ್ರೋಲ್ ಕಾರು ಕೇವಲ ಪ್ರಯೋಗಕ್ಕೆ ಸೀಮಿತವಾಗದೆ, ದೀರ್ಘ ಪ್ರಯಾಣಕ್ಕೂ ಉಪಯುಕ್ತವಾಗಬಲ್ಲದು ಎಂಬುದನ್ನು ಜಗತ್ತಿಗೆ ತೋರಿಸಿಕೊಟ್ಟರು.

PREV
Read more Articles on
click me!

Recommended Stories

ಕಾರು ಖರೀದಿಯಲ್ಲಿ ಮಹಾರಾಷ್ಟ್ರವೇ ನಂ.1, ಟಾಪ್ 5 ಪಟ್ಟಿಯಲ್ಲಿ ಕರ್ನಾಟಕಕ್ಕೂ ಸ್ಥಾನ
PUC ಸರ್ಟಿಫಿಕೇಟ್ ನಿಯಮಗಳಲ್ಲಿ ಭಾರಿ ಬದಲಾವಣೆ: BS-VI ಖಾಸಗಿ ವಾಹನಗಳಿಗೆ 3 ವರ್ಷಗಳ ಭರ್ಜರಿ ರಿಲೀಫ್