ಸ್ವಿಫ್ಟ್ ನಾಗಾಲೋಟ ತಡೆಯೋರಿಲ್ಲ; ಟಾಪ್‌ 10 ಪಟ್ಟಿಯಲ್ಲಿ ಮಾರುತಿಯದ್ದೇ ಕಾರ್‌ಬಾರು

By Suvarna NewsFirst Published Apr 3, 2021, 4:54 PM IST
Highlights

ಮಾರ್ಚ್‌ ತಿಂಗಳಲ್ಲಿ ಯಾವ ಕಂಪನಿ ಎಷ್ಟು ಕಾರುಗಳು ಮಾರಾಟವಾಗಿವೆ ಎಂಬ ಮಾಹಿತಿ ಹೊರ ಬಿದ್ದಿದ್ದು, ಎಂದಿನಂತೆ ಮಾರುತಿ ಕಂಪನಿಯ ಕಾರುಗಳು ಅಗ್ರಸ್ಥಾನವನ್ನು ಕಾಯ್ದುಕೊಂಡಿವೆ. ನಂತರದ ಸ್ಥಾನದಲ್ಲಿ ಹುಂಡೈನ್‌ ಕಾರುಗಳಿವೆ. ಸ್ವಿಫ್ಟ್‌ ಅತಿ ಹೆಚ್ಚು ಕಾರುಗಳು ಮಾರಾಟವಾಗುವ ಮೂಲಕ ನಾಗಾಲೋಟವನ್ನು ಮುಂದಿವರಿಸಿದೆ. ಪಟ್ಟಿಯ ಮೊದಲ ನಾಲ್ಕು ಸ್ಥಾನಗಳಲ್ಲಿ ಮಾರುತಿಯ ಕಾರ್‌ಗಳೇ ಇವೆ.

ಭಾರತೀಯ ರಸ್ತೆಗಳಲ್ಲಿ ಮಾರುತಿ ಸುಜುಕಿ ಇಂಡಿಯಾ ಕಂಪನಿಯ ಕಾರುಗಳೇ ಕಿಂಗ್ ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ಮಾರ್ಚ್‌ ತಿಂಗಳ ಕಾರುಗಳ ಮಾರಾಟದ ಮಾಹಿತಿ ಹೊರ ಬಿದ್ದಿದ್ದು, ಟಾಪ್‌ ಟೆನ್ ಪಟ್ಟಿಯಲ್ಲಿ ಮಾರುತಿ ಕಾರುಗಳೇ ಅಗ್ರಸ್ಥಾನದಲ್ಲಿವೆ.

ಸ್ಮಾರ್ಟ್‌ಫೋನ್ ಆಯ್ತು, ಇನ್ನು ಶಿಯೋಮಿಯಿಂದಲೂ ಎಲೆಕ್ಟ್ರಿಕ್ ವೆಹಿಕಲ್?

ಪ್ರಯಾಣಿಕರ ವಾಹನ ವಿಭಾಗದಲ್ಲಿ ಮಾರ್ಚ್‌ ತಿಂಗಳಲ್ಲಿ  3,20,487 ಕಾರುಗಳು ಮಾರಾಟವಾಗಿವೆ. ಈ ಸಂಖ್ಯೆಯು 2020 ಫೆಬ್ರುವರಿಯಲ್ಲಿ ಮಾರಾಟವಾದ ಕಾರು ಸಂಖ್ಯೆಗೆ ತೀರಾ ಹತ್ತಿರವಾಗಿದೆ. ಕಳೆದ ವರ್ಷ ಇದೇ ಸಮಯದಲ್ಲಿ ಹೇರಲಾಗಿದ್ದ ಲಾಕ್‌ಡೌನ್‌ನಿಂದಾಗಿ ಕಾರುಗಳ ಮಾರಾಟದಲ್ಲಿ ಶೂನ್ಯಸಾಧನೆಯಾಗಿತ್ತು. ಹಾಗಾಗಿ, ಈಗಿನ ಕಾರುಗಳ ಮಾರಾಟದ ಪ್ರಮಾಣವನ್ನು ಗಮನಿಸಿದರೆ ಆಟೊಮೊಬೈಲ್ ಉದ್ಯಮ ಮತ್ತ  ಪುಟಿದ್ದೆದಿದೆ ಎನ್ನಬಹುದು.

ವಿಶೇಷ ಎಂದರೆ, ಭಾರತದಲ್ಲಿ ಮಾರಾಟವಾಗುವ ಕಾರುಗಳ ಪೈಕಿ ಮಾರುತಿ ಮತ್ತು ಹುಂಡೈ ಬ್ರಾಂಡ್ ಅಗ್ರಪಾಲು ಪಡೆದುಕೊಂಡಿರುವುದನ್ನು ಮಾರ್ಚ್ ತಿಂಗಳ ಅಂಕಿ ಸಂಖ್ಯೆಗಳು ಹೇಳುತ್ತಿವೆ.

ಮಾರುತಿ ಕಂಪನಿ ಜನಪ್ರಿಯವ ಹ್ಯಾಚ್‌ಬ್ಯಾಕ್ ಆಗಿರುವ ಸ್ವಿಫ್ಟ್ ತನ್ನ ನಾಗಾಲೋಟವನ್ನು ಮುಂದುವರಿಸಿದೆ. ಈ ಸೆಗ್ಮೆಂಟ್‌ನಲ್ಲಿ ಸ್ವಿಫ್ಟ್ ಅನ್ನು ಹಿಂದಿಕ್ಕುವ ಪ್ರಯತ್ನ ಇತರ ಯಾವುದೇ ಕಂಪನಿಗಳಿಂದ ಕಂಡು ಬಂದಿಲ್ಲ. ಮಾರ್ಚ್ ತಿಂಗಳಲ್ಲಿ ಮಾರುತಿ ಕಂಪನಿಯು 21,714 ಸ್ವಿಫ್ಟ್ ಕಾರುಗಳನ್ನು ಮಾರಾಟ ಮಾಡಿದೆ. ಈ ಮೂಲಕ ಅಗ್ರಸ್ಥಾನವನ್ನು ಕಾಯ್ದುಕೊಂಡಿದೆ. 2021ರ ಫೆಬ್ರವರಿಯಲ್ಲಿ ಕಂಪನಿ 20,264 ಸ್ವಿಫ್ಟ್ ಕಾರುಗಳನ್ನು ಮಾರಾಟ ಮಾಡಿತ್ತು.

ಸ್ವಿಫ್ಟ್ ನಂತರದ ಸ್ಥಾನದಲ್ಲಿ ಮಾರುತಿ ಕಂಪನಿಯ ಮತ್ತೊಂದು ಜನಪ್ರಿಯ  ಹ್ಯಾಚ್‌ಬ್ಯಾಕ್ ಬಲೆನೋ ಇದೆ. ಮಾರ್ಚ್ ತಿಂಗಳಲ್ಲಿ 20,217 ಬಲೆನೋ ಕಾರುಗಳು ಮಾರಾಟವಾಗಿವೆ. ಫೆಬ್ರವರಿ ತಿಂಗಳಲ್ಲಿ 20,070 ಕಾರ್ ಮಾರಾಟವಾಗಿದ್ದವು. ವ್ಯಾಗನಾರ್ ಅನ್ನು ಹಿಂದಿಕ್ಕಿ ಎರಡನೇ ಸ್ಥಾನಕ್ಕೇರಿದೆ  ಬಲೆನೋ.

ಬರಲಿದೆ ಜಗತ್ತಿನ ಮೊದಲ ಸೋಲಾರ್ ಆಧರಿತ SUV, ಇದಕ್ಕೆ ಬಿಸಿಲು ಇದ್ದರೆ ಸಾಕಷ್ಟೇ

ಮೂರನೇ ಸ್ಥಾನದಲ್ಲಿ ಮಾರುತಿಯ ಮತ್ತೊಂದು ಫೆಮಸ್ ಕಾರ್ ವಾಗಾನ್ ಆರ್ ಇದೆ. ಕಂಪನಿಯು ಮಾರ್ಚ್ ತಿಂಗಳಲ್ಲಿ 18,757 ಕಾರುಗಳ ಮಾರಾಟ ಮಾಡಿದೆ. ಇನ್ನು ನಾಲ್ಕನೇ ಸ್ಥಾನದಲ್ಲಿ ಮಾರುತಿಯ ಚಿಕ್ಕ ಕಾರ್ ಅಲ್ಟೋ ಗುರುತಿಸಿಕೊಂಡಿದೆ. ಹಾಗೆ ನೋಡಿದರೆ, ಮಾರುತಿ ಅಲ್ಟೋ ಜನಪ್ರಿಯ ಕಾರ್ ಆಗಿ ಉಳಿದುಕೊಂಡಿಲ್ಲ. ಆದರೆ, ಮಾರಾಟದಲ್ಲಿ ಮಾತ್ರ ಅಂಥ ಭಾರೀ ಕುಸಿತವನ್ನು ಅದು ಕಂಡಿಲ್ಲ. ನಾಲ್ಕನೇ ಸ್ಥಾನದಲ್ಲಿರುವ ಅಲ್ಟೋ, ಮಾರ್ಚ್ ತಿಂಗಳಲ್ಲಿ 17,401 ಯುನಿಟ್ಸ್ ಮಾರಾಟ ಕಂಡಿದೆ.

ಐದನೇ ಸ್ಥಾನದಲ್ಲಿ ಹುಂಡೈ ಕಂಪನಿಯ ಕ್ರೆಟಾ ಕಾಣಿಸಿಕೊಂಡಿದೆ. ಮಾರ್ಚ್ ತಿಂಗಳಲ್ಲಿ ಹುಂಡೈ ಕಂಪನಿಯು 12,640 ಕ್ರೆಟಾ ಕಾರುಗಳನ್ನು ಮಾರಾಟ ಮಾಡಿದೆ. ಫೆಬ್ರವರಿ ತಿಂಗಳಲ್ಲಿ ಕಂಪನಿ 12,428 ಕಾರ್‌ಗಳನ್ನು ಮಾರಾಟ ಮಾಡಿತ್ತು. ಭಾರತದಲ್ಲಿ ಸಣ್ಣ ಕಾರು ಮತ್ತು ಹ್ಯಾಚ್‌ಬ್ಯಾಕ್‌ ಕಾರುಗಳೇ ಹೆಚ್ಚಾಗಿ ಮಾರಾಟವಾಗುತ್ತವೆ. ಈ ಸೆಗ್ಮೆಂಟ್‌ನಲ್ಲಿ ಹುಂಡೈನ ಕ್ರೆಟಾ ಐದನೇ ಸ್ಥಾನದಲ್ಲಿ ಕಾಣಿಸಿಕೊಂಡಿರುವುದು ಜನರ ಬದಲಾದ ಅಭಿರುಚಿ ತೋರಿಸುತ್ತಿದೆಯಾ?

6, 7 ಮತ್ತು 8ನೇ ಸ್ಥಾನದಲ್ಲಿ ಮತ್ತೆ ಮಾರುತಿ ಕಂಪನಿಯ ಕ್ರಮವಾಗಿ ಇಕೋ ವ್ಯಾನ್, ಮಾರುತಿ ಡಿಸೈರ್ ಸೆಡಾನ್ ಮತ್ತು ಸಬ್ ಕಾಂಪಾಕ್ಟ್ ಕಾರ್ ವಿಟಾರಾ ಬ್ರೆಜಾ ಕಾಣಿಸಿಕೊಂಡಿದೆ. ಮಾರ್ಚ್‌ ತಿಂಗಳಲ್ಲಿ  ಮಾರುತಿ ಕಂಪನಿಯು 11,547 ಇಕೋ, 11,434 ಡಿಸೈರ್ ಮತ್ತು 11,274 ವಿಟಾರಾ ಬ್ರೆಜಾ ಮಾರಾಟ ಮಾಡಿದೆ. ಸದ್ಯ ದೇಶದಲ್ಲಿ ಸಬ್‌ಕಾಂಪಾಕ್ಟ್ ಎಸ್‌ಯುವಿ ಸೆಗ್ಮೆಂಟ್‌ನಲ್ಲಿ ವಿಟಾರಾ  ಬ್ರೆಜಾ ಅಗ್ರಸ್ಥಾನವನ್ನು ಕಾಯ್ದುಕೊಂಡಿದೆ.

ಕ್ರೆಟಾ, ಸೆಲ್ತೋಸ್‌ಗೆ ಟಕ್ಕರ್ ಕೊಡಲು ಬರ್ತಿದೆ ವೋಕ್ಸ್‌ವಾಗನ್‌ ‘ಟಿಗ್ವಾನ್’ ಎಸ್‌ಯುವಿ.

ಇನ್ನು ಒಂಭತ್ತು ಮತ್ತು ಹತ್ತನೇ ಸ್ಥಾನದಲ್ಲಿ ಕ್ರಮವಾಗಿ ಹುಂಡೈ ಕಂಪನಿಯ ಜನಪ್ರಿಯ ಹ್ಯಾಚ್‌ಬ್ಯಾಕ್ ಆಗಿರುವ ಗ್ರಾಂಡ್ ಐ10 ಮತ್ತು ಸಬ್‌ ಕಾಂಪಾಕ್ಟ್ ಎಸ್‌ಯುವಿ ವೆನ್ಯು ಕಾಣಿಸಿಕೊಂಡಿದೆ. ಮಾರ್ಚ್ ತಿಂಗಳಲ್ಲಿ 11,020 ಗ್ರಾಂಡ್ ಐ10 ಮಾರಾಟವಾಗಿದ್ದರೆ, ವೆನ್ಯು ಕಾರ್‌ಗಳ ಮಾರಾಟ ಸಂಖ್ಯೆ 10,722.

click me!