
ಟಾಟಾ ನ್ಯಾನೋ ಕಾರು ವರ್ಷಗಳ ಹಿಂದೆಯೇ ಶೋರೂಂಗಳಿಂದ ಕಣ್ಮರೆಯಾಗಿರಬಹುದು, ಆದರೆ ಭಾರತದ ಅತ್ಯಂತ ಮಹತ್ವಾಕಾಂಕ್ಷೆಯ ಈ ಸಣ್ಣ ಕಾರಿನ ಹಿಂದಿನ ಪರಿಕಲ್ಪನೆಯು ಇಂದಿಗೂ ಜನರ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದಿದೆ. ಇತ್ತೀಚೆಗೆ ಟಾಟಾ ಮೋಟಾರ್ಸ್ ಸಂಸ್ಥೆಯ ಹಿರಿಯ ಡಿಸೈನ್ ಅಧಿಕಾರಿಯೊಬ್ಬರು ನೀಡಿರುವ ಹೇಳಿಕೆಯು, 'ನ್ಯಾನೋ' ಬ್ರ್ಯಾಂಡ್ ಎಲೆಕ್ಟ್ರಿಕ್ ಚಾಲಿತ ಕಾರಾಗಿ ಮಾರುಕಟ್ಟೆಗೆ ಮರಳಬಹುದು ಎಂಬ ಊಹಾಪೋಹಗಳನ್ನು ಮತ್ತೆ ಮುನ್ನೆಲೆಗೆ ತಂದಿದೆ. ಭಾರತೀಯ ಕಾರು ಖರೀದಿದಾರರಲ್ಲಿ 'ನ್ಯಾನೋ 2.0' ಮರುಪ್ರವೇಶದ ಕುರಿತು ಚರ್ಚೆಗಳು ತೀವ್ರಗೊಂಡಿದ್ದು, ಪ್ರತಿಯೊಂದು ಕುಟುಂಬಕ್ಕೂ ಕಾರು ಮಾಲೀಕತ್ವದ ಕನಸು ನನಸು ಮಾಡಲು ಯತ್ನಿಸಿದ್ದ ಈ ಕಾರನ್ನು ಟಾಟಾ ನಿಜವಾಗಿಯೂ ಮರಳಿ ತರುತ್ತಿದೆಯೇ ಎಂಬ ಪ್ರಶ್ನೆ ಎಲ್ಲರಲ್ಲೂ ಮೂಡಿದೆ.
ಇಂದಿನ ಭಾರತೀಯ ಕಾರು ಮಾರುಕಟ್ಟೆಯ ಚಿತ್ರಣ ಸಂಪೂರ್ಣವಾಗಿ ಬದಲಾಗಿದೆ. ಇಂದಿನ ಗ್ರಾಹಕರು ಕೇವಲ ಸಾರಿಗೆಯನ್ನಷ್ಟೇ ಬಯಸದೆ, ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ವ್ಯವಸ್ಥೆಗಳು, ಸುಧಾರಿತ ಭದ್ರತಾ ಮಾನದಂಡಗಳು, ತಂತ್ರಜ್ಞಾನ ಹಾಗೂ ಎಲೆಕ್ಟ್ರಿಕ್ ವಾಹನಗಳಿಗೆ ಹೆಚ್ಚಿನ ಆದ್ಯತೆ ನೀಡುತ್ತಿದ್ದಾರೆ. ಈ ಬದಲಾದ ಸಂದರ್ಭದಲ್ಲಿ, ಎಬಿಪಿ ಆಟೋ ಲೈವ್ ಜೊತೆಗಿನ ಸಂವಾದದಲ್ಲಿ ಮಾತನಾಡಿದ ಟಾಟಾ ಮೋಟಾರ್ಸ್‌ನ ಭಾರತ ವಿನ್ಯಾಸ ವಿಭಾಗದ ಮುಖ್ಯಸ್ಥ ಅಜಯ್ ಜೈನ್, ನ್ಯಾನೋ ಬ್ರ್ಯಾಂಡ್ ಪುನರುಜ್ಜೀವನದ ಸಾಧ್ಯತೆಯ ಬಗ್ಗೆ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಹೊಸ ಪೀಳಿಗೆಯ ಗ್ರಾಹಕರಿಗೆ ನ್ಯಾನೋವನ್ನು ಮರುಪರಿಚಯಿಸಲು ಎಲೆಕ್ಟ್ರಿಕ್ ಅವತಾರವು ಅತ್ಯುತ್ತಮ ಮಾರ್ಗವಾಗಬಲ್ಲದು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಆದಾಗ್ಯೂ, ಟಾಟಾ ಮೋಟಾರ್ಸ್ ಹೊಸ ನ್ಯಾನೋ ಇವಿ ಅಭಿವೃದ್ಧಿ ಅಥವಾ ಬಿಡುಗಡೆಯ ಕುರಿತು ಯಾವುದೇ ಅಧಿಕೃತ ದೃಢೀಕರಣವನ್ನು ನೀಡಿಲ್ಲವಾದ್ದರಿಂದ, ಈ ಹೇಳಿಕೆಗಳನ್ನು ಭವಿಷ್ಯದ ಆಲೋಚನೆಯ ಸೂಚನೆ ಎಂದು ಮಾತ್ರ ಪರಿಗಣಿಸಬೇಕಾಗಿದೆ.
2009 ರಲ್ಲಿ ಪರಿಚಯಿಸಲಾದ ಟಾಟಾ ನ್ಯಾನೋ, ಭಾರತೀಯ ವಾಹನ ಉದ್ಯಮವು ಕಂಡ ಅತ್ಯಂತ ಸಾಹಸಮಯ ಯೋಜನೆಯಾಗಿತ್ತು. ಮುಖ್ಯವಾಗಿ ದ್ವಿಚಕ್ರ ವಾಹನಗಳನ್ನು ನೆಚ್ಚಿಕೊಂಡಿದ್ದ ಲಕ್ಷಾಂತರ ಮಧ್ಯಮ ವರ್ಗದ ಕುಟುಂಬಗಳಿಗೆ ಸುರಕ್ಷಿತ ನಾಲ್ಕು ಚಕ್ರಗಳ ಪ್ರಯಾಣವನ್ನು ಕೈಗೆಟುಕುವಂತೆ ಮಾಡುವುದು ಈ ಯೋಜನೆಯ ಮೂಲ ಉದ್ದೇಶವಾಗಿತ್ತು. ಆದರೆ "ವಿಶ್ವದ ಅತ್ಯಂತ ಅಗ್ಗದ ಕಾರು" ಎಂಬ ಬ್ರ್ಯಾಂಡಿಂಗ್ ನ್ಯಾನೋ ಪಾಲಿಗೆ ಹಿನ್ನಡೆಯಾಗಿ ಪರಿಣಮಿಸಿತು. ಭಾರತೀಯ ಗ್ರಾಹಕರು ಕಾರನ್ನು ಸಾಮಾಜಿಕ ಅಂತಸ್ತಿನ ಸಂಕೇತವಾಗಿ ನೋಡುತ್ತಿದ್ದರಿಂದ, ಅಗ್ಗದ ಕಾರು ಎಂಬ ಹೂಡಿಕೆಗೆ ಮನಸೋಲದೆ ಹೆಚ್ಚಿನ ಹಣ ನೀಡಿ ಪ್ರೀಮಿಯಂ ಹ್ಯಾಚ್‌ಬ್ಯಾಕ್‌ಗಳನ್ನು ಖರೀದಿಸಲು ಹೆಚ್ಚು ಆಸಕ್ತಿ ತೋರಿದರು. ಹೀಗಾಗಿ ಉತ್ಪಾದನೆ ಸ್ಥಗಿತಗೊಂಡರೂ, ನ್ಯಾನೋ ಎಂಬ ಹೆಸರಿನ ಮೇಲಿನ ಆಕರ್ಷಣೆ ಎಂದಿಗೂ ಕಡಿಮೆಯಾಗಲಿಲ್ಲ.
ಒಂದು ವೇಳೆ ನ್ಯಾನೋ ಕಾರು ಎಲೆಕ್ಟ್ರಿಕ್ ವಾಹನವಾಗಿ ಮರಳಿದರೆ, ಅದು ಇಂದಿನ ನಗರ ಸಾರಿಗೆಗೆ ಅತ್ಯಂತ ಸೂಕ್ತ ವಾಹನವಾಗಲಿದೆ. ಭಾರತದಲ್ಲಿ ಇವಿ ಮಾರುಕಟ್ಟೆ ವೇಗವಾಗಿ ಬೆಳೆಯುತ್ತಿದ್ದು, ಚಾರ್ಜಿಂಗ್ ಮೂಲಸೌಕರ್ಯಗಳು ಸುಧಾರಿಸುತ್ತಿವೆ. ಎಲೆಕ್ಟ್ರಿಕ್ ವಾಹನಗಳ ವಿನ್ಯಾಸ ಶೈಲಿಯು ಸಣ್ಣ ಗಾತ್ರದ ಕಾರುಗಳಲ್ಲೂ ಗರಿಷ್ಠ ಕ್ಯಾಬಿನ್ ಜಾಗವನ್ನು ಒದಗಿಸಲು ಸಹಕಾರಿಯಾಗಿದೆ. ಈ ಹಿಂದೆ ಟಾಟಾ ಮೋಟಾರ್ಸ್ ಮತ್ತು ಕೊಯಮತ್ತೂರು ಮೂಲದ ಜೇಮ್ ಆಟೋಮೋಟಿವ್ಸ್ ಜಂಟಿಯಾಗಿ 'ಜೇಮ್ ನಿಯೋ' ಎಂಬ ಎಲೆಕ್ಟ್ರಿಕ್ ನ್ಯಾನೋ ಮಾದರಿಯನ್ನು ವಾಣಿಜ್ಯ ಬಳಕೆಯ ಉದ್ದೇಶಕ್ಕಾಗಿ ಸಿದ್ಧಪಡಿಸಿದ್ದವು. ಆ ಯೋಜನೆ ಸಾರ್ವಜನಿಕ ಮಾರಾಟಕ್ಕೆ ಬರಲಿಲ್ಲವಾದರೂ, ನ್ಯಾನೋ ವಿನ್ಯಾಸವು ವಿದ್ಯುತ್ ತಂತ್ರಜ್ಞಾನಕ್ಕೆ ಸೂಕ್ತವಾಗಿದೆ ಎಂಬುದನ್ನು ನಿರೂಪಿಸಿತ್ತು.
ಇಂದಿನ ಕಠಿಣ ಅಪಘಾತ ಸುರಕ್ಷತಾ ನಿಯಮಗಳು, ಪಾದಚಾರಿಗಳ ರಕ್ಷಣೆ ಮತ್ತು ಗ್ರಾಹಕರ ತಾಂತ್ರಿಕ ನಿರೀಕ್ಷೆಗಳನ್ನು ಪೂರೈಸಲು ಹಳೆಯ ನ್ಯಾನೋಗೆ ಕೇವಲ ಬ್ಯಾಟರಿ ಜೋಡಿಸಿದರೆ ಸಾಲದು. ಭವಿಷ್ಯದ ನ್ಯಾನೋ ಇವಿ ಸಂಪೂರ್ಣವಾಗಿ ಹೊಸ ವಿನ್ಯಾಸ ಮತ್ತು ತಂತ್ರಜ್ಞಾನವನ್ನು ಹೊಂದಿರಬೇಕಾಗುತ್ತದೆ. ಇಂದಿನ ಬಜೆಟ್ ಕಾರು ಖರೀದಿದಾರರು ಸಹ ಏರ್‌ಬ್ಯಾಗ್‌ಗಳು, ಸ್ಮಾರ್ಟ್‌ಫೋನ್ ಸಂಪರ್ಕ ಮತ್ತು ಆಧುನಿಕ ಇಂಟೀರಿಯರ್‌ಗಳನ್ನು ನಿರೀಕ್ಷಿಸುತ್ತಾರೆ. ಆದ್ದರಿಂದ ಹೊಸ ವಾಹನವು ನ್ಯಾನೋ ತತ್ವಶಾಸ್ತ್ರವನ್ನು ಒಳಗೊಂಡ ಹೊಸ ಪೀಳಿಗೆಯ ಸ್ಮಾರ್ಟ್ ನಗರ ಕಾರಾಗಿ ಮೂಡಿಬರಬೇಕಾಗುತ್ತದೆ.
ಜನನಿಬಿಡ ಭಾರತೀಯ ನಗರಗಳಲ್ಲಿ ಸೀಮಿತ ಪಾರ್ಕಿಂಗ್ ಜಾಗ ಮತ್ತು ಕಡಿಮೆ ದೂರದ ದೈನಂದಿನ ಪ್ರಯಾಣಕ್ಕೆ ಇಂತಹ ಕಾಂಪ್ಯಾಕ್ಟ್ ಇವಿ ಸೂಕ್ತ ಪರಿಹಾರವಾಗಬಲ್ಲದು. ಇದು ಸ್ಕೂಟರ್‌ಗಳಿಂದ ಕಾರಿಗೆ ಬಡ್ತಿ ಪಡೆಯುವ ಮೊದಲ ಬಾರಿಯ ಖರೀದಿದಾರರನ್ನು, ಕುಟುಂಬದ ಎರಡನೇ ಕಾರನ್ನು ಹುಡುಕುತ್ತಿರುವವರನ್ನು ಹಾಗೂ ದಿನನಿತ್ಯದ ನಗರ ಪ್ರಯಾಣಿಕರನ್ನು ಸೆಳೆಯಬಹುದು. ಬ್ಯಾಟರಿ ವೆಚ್ಚಗಳು ಹೆಚ್ಚಿರುವುದರಿಂದ ಹಳೆಯ ಅಗ್ಗದ ಬೆಲೆಯನ್ನು ಮರುಸೃಷ್ಟಿಸುವುದು ಕಷ್ಟವಾದರೂ, ಇದನ್ನು "ಅಗ್ಗದ ಕಾರು" ಎಂದು ಕರೆಯುವ ಬದಲು "ಸ್ಮಾರ್ಟ್ ಅರ್ಬನ್ ಇವಿ" ಎಂದು ಗುರುತಿಸುವುದು ಮಾರುಕಟ್ಟೆಯಲ್ಲಿ ಧನಾತ್ಮಕ ಪರಿಣಾಮ ಬೀರಲಿದೆ.
ಟಾಟಾ ಮೋಟಾರ್ಸ್ ಈಗಾಗಲೇ ಟಿಯಾಗೊ, ಪಂಚ್, ನೆಕ್ಸಾನ್ ಮತ್ತು ಕರ್ವ್‌ನಂತಹ ಎಲೆಕ್ಟ್ರಿಕ್ ಕಾರುಗಳ ಮೂಲಕ ಬಲವಾದ ಇವಿ ಪೋರ್ಟ್‌ಫೋಲಿಯೊ ಹೊಂದಿದೆ. ಒಂದು ವೇಳೆ ನ್ಯಾನೋ ಇವಿ ಸಾಕಾರಗೊಂಡರೆ, ಅದು ಟಿಯಾಗೊ ಇವಿಗಿಂತ ಕೆಳಮಟ್ಟದ ಆರಂಭಿಕ ಕಾರಾಗಿ ಮಾರುಕಟ್ಟೆಯನ್ನು ಪ್ರವೇಶಿಸಬಹುದು. ಸುಮಾರು 180 ರಿಂದ 250 ಕಿಲೋಮೀಟರ್ ಚಾಲನಾ ವ್ಯಾಪ್ತಿ ನೀಡುವ, ವೇಗದ ಚಾರ್ಜಿಂಗ್ ಬೆಂಬಲಿಸುವ ಕಾಂಪ್ಯಾಕ್ಟ್ ಎಲೆಕ್ಟ್ರಿಕ್ ಕಾರು ಇಂದಿನ ಬಹುತೇಕ ನಗರ ಬಳಕೆದಾರರ ಅಗತ್ಯಗಳನ್ನು ಈಡೇರಿಸಬಲ್ಲದು. 'ನ್ಯಾನೋ' ಎಂಬ ಬ್ರ್ಯಾಂಡ್‌ಗೆ ಇರುವ ಜನಪ್ರಿಯತೆಯೇ ಟಾಟಾಗೆ ಇರುವ ಅತಿದೊಡ್ಡ ಶಕ್ತಿಯಾಗಿದ್ದು, ಈ ಬ್ರ್ಯಾಂಡ್ ಅನ್ನು ಇಂದಿನ ಕಾಲಕ್ಕೆ ತಕ್ಕಂತೆ ಮರುಬ್ಯಾಂಡಿಂಗ್ ಮಾಡಿದರೆ ಭಾರತದ ಆಟೋಮೊಬೈಲ್ ರಂಗದಲ್ಲಿ ಮತ್ತೊಂದು ಹೊಸ ಅಧ್ಯಾಯ ಆರಂಭವಾಗುವುದರಲ್ಲಿ ಅನುಮಾನವಿಲ್ಲ.