
ನವದೆಹಲಿ (ಆ.5): ಭಾರತದ ಅತಿದೊಡ್ಡ ವಾಹನ ತಯಾರಿಕಾ ಸಂಸ್ಥೆಗಳಲ್ಲಿ ಒಂದಾದ 'ಟಾಟಾ ಮೋಟಾರ್ಸ್' (Tata Motors) ತನ್ನ ಎಲೆಕ್ಟ್ರಿಕ್ ವಾಹನಗಳಲ್ಲಿ ಚೀನಾ ಮೂಲದ ಬ್ಯಾಟರಿಗಳ ಬಳಕೆಯನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲು ನಿರ್ಧರಿಸಿದೆ. ಚೀನಾ ಸರ್ಕಾರವು ಬ್ಯಾಟರಿ ತಂತ್ರಜ್ಞಾನ ರಫ್ತಿನ ಮೇಲೆ ಕಟ್ಟುನಿಟ್ಟಿನ ನಿರ್ಬಂಧಗಳನ್ನು ಹೇರಿದ ಬೆನ್ನಲ್ಲೇ, ಟಾಟಾ ಗ್ರೂಪ್ ಸ್ವದೇಶಿ ತಂತ್ರಜ್ಞಾನದ ಮೂಲಕ ಎಲ್‌ಎಫ್‌ಪಿ (LFP - Lithium Iron Phosphate) ಬ್ಯಾಟರಿ ಸೆಲ್‌ಗಳನ್ನು ತಯಾರಿಸಲು ಐತಿಹಾಸಿಕ ಹೆಜ್ಜೆ ಇಟ್ಟಿದೆ.
ಬ್ಲೂಮ್‌ಬರ್ಗ್ (Bloomberg) ವರದಿಯ ಪ್ರಕಾರ, ಟಾಟಾ ಸಮೂಹದ ಅಂಗಸಂಸ್ಥೆಯಾದ 'ಅಗ್ರಾಟಾಸ್ ಎನರ್ಜಿ ಸ್ಟೋರೇಜ್ ಸೊಲ್ಯೂಷನ್ಸ್ ಪ್ರೈವೇಟ್ ಲಿಮಿಟೆಡ್' (Agratas Energy Storage Solutions) ಗುಜರಾತ್‌ನ ಸಾನಂದ್‌ನಲ್ಲಿ ನಿರ್ಮಾಣವಾಗುತ್ತಿರುವ ತನ್ನ ಹೊಸ ಘಟಕದಲ್ಲಿ ಸ್ವದೇಶಿ ತಂತ್ರಜ್ಞಾನದ LFP ಬ್ಯಾಟರಿ ಸೆಲ್‌ಗಳ ಪೈಲಟ್ ಪ್ರೊಡಕ್ಷನ್ ಲೈನ್ (ಪರೀಕ್ಷಾರ್ಥ ಉತ್ಪಾದನೆ) ಸಿದ್ಧಪಡಿಸುತ್ತಿದೆ. ಟಾಟಾ ಸಂಸ್ಥೆಯು ತನ್ನದೇ ಆದ ತಂತ್ರಜ್ಞಾನವನ್ನು ಬಳಸಿ LFP ಬ್ಯಾಟರಿ ಸೆಲ್ ಅಭಿವೃದ್ಧಿಪಡಿಸುತ್ತಿರುವುದು ಇದೇ ಮೊದಲು. ಪ್ರಾರಂಭಿಕ ಹಂತದಲ್ಲಿ ಸೀಮಿತ ಪ್ರಮಾಣದಲ್ಲಿ ಬ್ಯಾಟರಿಗಳನ್ನು ತಯಾರಿಸಿ, ಅವುಗಳ ಗುಣಮಟ್ಟ ಮತ್ತು ಕಾರ್ಯಕ್ಷಮತೆಯನ್ನು ಕೂಲಂಕಷವಾಗಿ ಪರೀಕ್ಷಿಸಲಾಗುತ್ತದೆ. ಈ ಪರೀಕ್ಷಾರ್ಥ ಉತ್ಪಾದನೆ ಯಶಸ್ವಿಯಾದ ನಂತರವೇ ಬೃಹತ್ ಮಟ್ಟದಲ್ಲಿ ವಾಣಿಜ್ಯಿಕ ಉತ್ಪಾದನೆ ಆರಂಭವಾಗಲಿದೆ.
ವರದಿಯ ಪ್ರಕಾರ, ಈ ಮಹತ್ವಾಕಾಂಕ್ಷೆಯ ಯೋಜನೆಯಲ್ಲಿ ಭಾರತ, ದಕ್ಷಿಣ ಕೊರಿಯಾ ಮತ್ತು ಚೀನಾದ ನುರಿತ ಇಂಜಿನಿಯರ್‌ಗಳ ತಂಡವು ಒಟ್ಟಾಗಿ ಕೆಲಸ ಮಾಡಲಿದೆ. ಬ್ಯಾಟರಿ ತಯಾರಿಕಾ ಪ್ರಕ್ರಿಯೆಯನ್ನು ಸುಧಾರಿಸುವುದು ಹಾಗೂ ಮೊದಲ ಬ್ಯಾಚ್‌ನ ಬ್ಯಾಟರಿಗಳ ಗುಣಮಟ್ಟವನ್ನು ಪರಿಶೀಲಿಸುವುದು ಈ ತಂಡದ ಪ್ರಮುಖ ಹೊಣೆಗಾರಿಕೆಯಾಗಿದೆ.
ಎಲ್ಲಾ ಪರೀಕ್ಷೆಗಳು ಯಶಸ್ವಿಯಾದ ಬಳಿಕ ಪೂರ್ಣಪ್ರಮಾಣದ ಉತ್ಪಾದನೆಗೆ ಚಾಲನೆ ಸಿಗಲಿದೆ. ಇದರೊಂದಿಗೆ ಬ್ಯಾಟರಿ ಸಂಶೋಧನೆ ಹಾಗೂ ಅಭಿವೃದ್ಧಿಗಾಗಿ (R&D) ಟಾಟಾ ಸಂಸ್ಥೆಯು ಬೆಂಗಳೂರಿನಲ್ಲಿ 400 ಮಿಲಿಯನ್ ಡಾಲರ್‌ಗೂ (ಸುಮಾರು ₹3,300 ಕೋಟಿಗೂ ಹೆಚ್ಚು) ಹೆಚ್ಚಿನ ವೆಚ್ಚದಲ್ಲಿ ಬೃಹತ್ ರಿಸರ್ಚ್ ಸೆಂಟರ್ ಸ್ಥಾಪಿಸುತ್ತಿದೆ.
ಆರಂಭದಲ್ಲಿ ಟಾಟಾ ಗ್ರೂಪ್ ಚೀನಾದ ಕಂಪನಿಯೊಂದರಿಂದ ಬ್ಯಾಟರಿ ತಂತ್ರಜ್ಞಾನವನ್ನು ಪಡೆದುಕೊಳ್ಳಲು ಯೋಜಿಸಿತ್ತು. ಆದರೆ ಚೀನಾ ಸರ್ಕಾರವು ತನ್ನ ನಿರ್ಣಾಯಕ ಬ್ಯಾಟರಿ ತಂತ್ರಜ್ಞಾನವನ್ನು ವಿದೇಶಗಳಿಗೆ ರಫ್ತು ಮಾಡುವುದರ ಮೇಲೆ ಕಟ್ಟುನಿಟ್ಟಿನ ನಿಯಮಗಳನ್ನು ಜಾರಿಗೆ ತಂದಿತು. ಚೀನಾದ ಈ ನೀತಿಯಿಂದಾಗಿ ಟಾಟಾ ಸಂಸ್ಥೆಯು ತನ್ನ ಕಾರ್ಯತಂತ್ರವನ್ನು ಬದಲಾಯಿಸಿ, ಸ್ವಂತ ತಂತ್ರಜ್ಞಾನವನ್ನೇ ಅಭಿವೃದ್ಧಿಪಡಿಸಲು ಮುಂದಾಗಿದೆ. ಚೀನಾದ ಈ ನಿಯಮಗಳಿಂದಾಗಿ ರಿಲಯನ್ಸ್ ಮತ್ತು ಜೆಎಸ್‌ಡಬ್ಲ್ಯೂ (JSW) ಗ್ರೂಪ್‌ನಂತಹ ಇತರ ಭಾರತೀಯ ಪ್ರಮುಖ ಸಂಸ್ಥೆಗಳು ಕೂಡ ಬ್ಯಾಟರಿ ತಂತ್ರಜ್ಞಾನವನ್ನು ಪಡೆಯಲು ತೊಂದರೆ ಎದುರಿಸುತ್ತಿವೆ.
ಟಾಟಾ ಸಂಸ್ಥೆಯು ಸ್ವದೇಶಿ ಬ್ಯಾಟರಿ ತಂತ್ರಜ್ಞಾನ ಅಭಿವೃದ್ಧಿಯಲ್ಲಿ ಯಶಸ್ವಿಯಾದರೆ, ಎಲೆಕ್ಟ್ರಿಕ್ ವಾಹನ ವಲಯದಲ್ಲಿ ಭಾರತವು ವಿದೇಶಗಳ ಹಾಗೂ ವಿಶೇಷವಾಗಿ ಚೀನಾದ ಮೇಲಿನ ಅವಲಂಬನೆಯನ್ನು ಭಾರಿ ಪ್ರಮಾಣದಲ್ಲಿ ಕಡಿಮೆ ಮಾಡಿಕೊಳ್ಳಬಹುದಾಗಿದೆ.
ಇದರಿಂದ ದೇಶಿಯವಾಗಿಯೇ ಇವಿ ಬ್ಯಾಟರಿ ಉತ್ಪಾದನೆ ಹೆಚ್ಚಾಗುವುದಲ್ಲದೆ, ನೂರಾರು ಹೊಸ ಉದ್ಯೋಗಾವಕಾಶಗಳು ಸೃಷ್ಟಿಯಾಗಲಿವೆ. ಜೊತೆಗೆ ಮುಂಬರುವ ದಿನಗಳಲ್ಲಿ ಎಲೆಕ್ಟ್ರಿಕ್ ವಾಹನಗಳ ವೆಚ್ಚವೂ ಗಣನೀಯವಾಗಿ ಕಡಿಮೆಯಾಗುವ ಸಾಧ್ಯತೆಯಿದೆ. ಇದು ಭಾರತವನ್ನು ಜಾಗತಿಕ ಬ್ಯಾಟರಿ ಉತ್ಪಾದನಾ ಹಬ್ ಆಗಿ ಹೊರಹೊಮ್ಮಿಸಲು ಪ್ರಮುಖ ದಾರಿಯಾಗಲಿದೆ.