Semiconductors Shortage: Car Book ಮಾಡಿ ವರ್ಷವಾದರೂ ಪೂರೈಕೆ ಇಲ್ಲ: ಡೆಲಿವರಿಗಾಗಿ ಕಾದಿರುವ 7 ಲಕ್ಷ ಜನ!

By Suvarna News  |  First Published Dec 17, 2021, 11:11 AM IST

*ಕಾರು ಬುಕ್‌ ಮಾಡಿ ವರ್ಷವಾದರೂ ಪೂರೈಕೆ ಇಲ್ಲ
*ಡೆಲಿವರಿಗಾಗಿ ಕಾದಿರುವ 7 ಲಕ್ಷ ಭಾರತೀಯರು
*ಸೆಮಿಕಂಡಕ್ಟರ್‌ ಉತ್ಪಾದನೆಯಲ್ಲಿ ಭಾರತ ಮಹತ್ವದ ಹೆಜ್ಜೆ


ನವದೆಹಲಿ (ಡಿ. 17): 2 ವರ್ಷದ ಹಿಂದೆ ಕಾರು ಕಂಪನಿಗಳೇ (Car Companies) ಮನೆ ಬಾಗಿಲಿಗೆ ನಾನಾ ಆಫರ್‌ ಮುಂದಿಟ್ಟು ಕಾರು ಖರೀದಿಸುವಂತೆ ಗ್ರಾಹಕರಿಗೆ ದುಂಬಾಲು ಬೀಳುತ್ತಿದ್ದವು. ಆದರೆ ಇದೀಗ ಕಾರು ಬುಕ್‌ ಮಾಡಿ ವರ್ಷವಾದರೂ ಕಾರು ಸಿಗುತ್ತಿಲ್ಲ. ಹೀಗೆ ಕಾರು ಬುಕ್‌ ಮಾಡಿ ಕಾಯುತ್ತಿರುವ ಭಾರತೀಯ ಗ್ರಾಹಕರ ಸಂಖ್ಯೆ ಈಗಾಗಲೇ 7 ಲಕ್ಷ ದಾಟಿದೆ. ನಿಜ. ಹೊಸ ಮಾಡೆಲ್‌ಗಳ ಬಿಡುಗಡೆ, ಆರ್ಥಿಕತೆ ಮತ್ತೆ ಕೋವಿಡ್‌ ಪೂರ್ವ ಸ್ಥಿತಿಗೆ ಮರಳಿರುವ ಕಾರಣ, ಹೊಸ ಕಾರಿಗೆ ಬಾರೀ ಬೇಡಿಕೆ ಬರುತ್ತಿದೆ. ಆದರೆ ಚೀನಾದಿಂದ ಪೂರೈಕೆಯಾಗಬೇಕಿದ್ದ ಸೆಮಿ ಕಂಡಕ್ಟರ್‌ಗಳ ಕೊರತೆ (Shortage of Semiconductors) ಸೇರಿದಂತೆ ಕೆಲವೊಂದು ಬಿಡಿಭಾಗಗಳ ಪೂರೈಕೆಯಲ್ಲಿನ ಕೊರತೆ ಕಾರಣ, ಬಹುತೇಕ ಕಂಪನಿಗಳ ಉತ್ಪಾದನೆ ಭಾರೀ ಕುಸಿದಿದೆ. ಹೀಗಾಗಿ ಬುಕ್‌ ಮಾಡಿದ 3,6,9, 12 ತಿಂಗಳ ಬಳಿಕ ಗ್ರಾಹಕರಿಗೆ ಕಾರು ಪೂರೈಕೆ ಮಾಡುವ ಸ್ಥಿತಿಗೆ ಕಂಪನಿಗಳು ತಲುಪಿವೆ.

ಮಾರುತಿ ಇನ್ನೂ 2.5 ಲಕ್ಷ ಬುಕ್ಕಿಂಗ್‌ ಆಗಿರುವ ಕಾರುಗಳನ್ನು ಪೂರೈಕೆ ಮಾಡಬೇಕಿದೆ. ಹ್ಯುಂಡೈ 1 ಲಕ್ಷ, ಟಾಟಾ ಮೋಟರ್ಸ್‌ 1 ಲಕ್ಷ , ಮಹಿಂದ್ರಾ 1 ಲಕ್ಷ, ಕಿಯಾ ಮೋಟರ್ಸ್‌ 75000, ಮರ್ಸಿಡೆಸ್‌ ಇಂಡಿಯಾದ 2800, ಎಂಜಿ ಮೋಟಾರ್ಸ್‌ನ 46000 ಕಾರುಗಳು ಹಾಗೂ ಇತರೆ ಕಾರು ಉತ್ಪಾದಕ ಕಂಪೆನಿಗಳ ಒಟ್ಟು 75,000 ಕಾರುಗಳು ಸೇರಿ 7 ಲಕ್ಷ ಕಾರುಗಳು ಇನ್ನೂ ಗ್ರಾಹಕರು ಕೈ ಸೇರಬೇಕಿವೆ.

Tap to resize

Latest Videos

undefined

ಸೆಮಿಕಂಡಕ್ಟರ್‌ ಉತ್ಪಾದನೆಯಲ್ಲಿ ಭಾರತ ಮಹತ್ವದ ಹೆಜ್ಜೆ
 
ಆದರೆ ಚಿಪ್‌ ಶಾರ್ಟೆಜ್‌ ಬೆನ್ನಲ್ಲೆ ಈವರೆಗೆ ಸೆಮಿಕಂಡಕ್ಟರ್‌ ಸಾಧನಗಳಿಗೆ ಚೀನಾದ ಮೇಲೆ ಅವಲಂಬಿತವಾಗಿದ್ದ ಭಾರತ ಈಗ ಸೆಮಿಕಂಡಕ್ಟರ್‌ (ಮೈಕ್ರೋಚಿಪ್‌) ಉತ್ಪಾದನೆಯಲ್ಲಿ ‘ಆತ್ಮನಿರ್ಭರ’ ಆಗುವತ್ತ ಮಹತ್ವದ ಹೆಜ್ಜೆ ಇರಿಸಿದೆ. ಸೆಮಿಕಂಡಕ್ಟರ್‌ ಕಂಪನಿಗಳಿಗೆ 76 ಸಾವಿರ ಕೋಟಿ ರು. ಮೌಲ್ಯದ ಉತ್ಪಾದನೆ ಆಧರಿತ ಪ್ರೋತ್ಸಾಹಧನ ನೀಡುವ ಮಹತ್ವದ ಯೋಜನೆಗೆ ಕೇಂದ್ರ ಸರ್ಕಾರ ಬುಧವಾರ ಅನುಮೋದನೆ ನೀಡಿದೆ. ಕೇಂದ್ರದ ಈ ಕ್ರಮದಿಂದ ಚೀನಾ ಮೇಲಿನ ಅವಲಂಬನೆ ತಪ್ಪಲಿದ್ದು, ಮುಂದಿನ 5-6 ವರ್ಷದಲ್ಲಿ ಭಾರತ ಸ್ವಾವಲಂಬಿ ಆಗುವ ಸಾಧ್ಯತೆ ಇದೆ.

ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಬುಧವಾರ ಈ ತೀರ್ಮಾನ ಕೈಗೊಳ್ಳಲಾಯಿತು ಎಂದು ಸಭೆಯ ಬಳಿಕ ಕೇಂದ್ರ ಐಟಿ ಸಚಿವ ಅಶ್ವಿನಿ ವೈಷ್ಣವ್‌ ಹಾಗೂ ವಾರ್ತಾ-ಪ್ರಸಾರ ಸಚಿವ ಅನುರಾಗ್‌ ಠಾಕೂರ್‌ ತಿಳಿಸಿದರು.

ಪ್ರೋತ್ಸಾಹಧನ ನೀಡಿಕೆ ಹೇಗೆ?:

ಸೆಮಿಕಂಡಕ್ಟರ್‌ ಫ್ಯಾಬ್‌ ಹಾಗೂ ಡಿಸ್‌ಪ್ಲೇ ಫ್ಯಾಬ್‌ ಸ್ಥಾಪಿಸಲು, ಅರ್ಹ ಕಂಪನಿಗಳ ಬಂಡವಾಳದ ಶೇ.50ರಷ್ಟುಮೊತ್ತಕ್ಕೂ ನೆರವು ಲಭಿಸಲಿದೆ. 2 ಸೆಮಿಕಂಡಕ್ಟರ್‌ ಫ್ಯಾಬ್‌ ಹಾಗೂ 2 ಡಿಸ್‌ಪ್ಲೇ ಫ್ಯಾಬ್‌ ಘಟಕಗಳಿಗೆ ಅನುಮೋದನೆ ನೀಡುವ ಉದ್ದೇಶ ಸರ್ಕಾರದ್ದು. ಇಂಥ ಘಟಕಗಳ ಸ್ಥಾಪನೆಗೆ ರಾಜ್ಯ ಸರ್ಕಾರಗಳೊಂದಿಗೆ ಸಮನ್ವಯ ಸಾಧಿಸಿ ಕೇಂದ್ರ ಕಾರ್ಯನಿರ್ವಹಿಸಲಿದೆ. ಸೆಮಿಕಂಡಕ್ಟರ್‌ ಉತ್ಪಾದನೆ, ಜೋಡಣೆ, ಟೆಸ್ಟಿಂಗ್‌, ಪ್ಯಾಕೇಜಿಂಗ್‌ ಘಟಕದ ಸ್ಥಾಪನೆಗೆ ಬಂಡವಾಳ ವೆಚ್ಚದ ಮೇಲೆ ಶೇ.25ರಷ್ಟುನೆರವು ದೊರಕಲಿದೆ.

ಏನಿದು ಸೆಮಿಕಂಡಕ್ಟರ್‌?

ಸೆಮಿಕಂಡಕ್ಟರ್‌ ಎಂಬುದು ಸ್ಮಾರ್ಟ್‌ಫೋನ್‌, ಲ್ಯಾಪ್‌ಟಾಪ್‌, ಕಾರು ಹಾಗೂ ಇತರ ವಿದ್ಯುತ್‌/ವಿದ್ಯುನ್ಮಾನ ಸಾಧನಗಳಲ್ಲಿ ಬಳಸಲಾಗುವ ಎಲೆಕ್ಟ್ರಾನಿಕ್‌ ಉಪಕರಣ. ಇದಕ್ಕೆ ಮೈಕ್ರೋಚಿಪ್‌ ಎಂದೂ ಕರೆಯುತ್ತಾರೆ.

ಮೋದಿ ಮಾಸ್ಟರ್‌ಸ್ಟ್ರೋಕ್‌

ಭಾರತ ಸೇರಿ ಅನೇಕ ದೇಶಗಳು ಮೈಕ್ರೋಚಿಪ್‌ಗೆ ಚೀನಾ ಮೇಲೆ ಅವಲಂಬಿತವಾಗಿವೆ. ಆದರೆ ಕೊರೋನಾ ಆರಂಭವಾದ ನಂತರ ಹಾಗೂ ಭಾರತದ ಮೇಲೆ ಚೀನಾ ಕಳೆದ ವರ್ಷ ಲಡಾಖ್‌ನಲ್ಲಿ ಸಂಘರ್ಷ ನಡೆಸಿದ ಕಾರಣ, ಭಾರತಕ್ಕೆ ಹಾಗೂ ವಿಶ್ವದ ಇತರ ದೇಶಗಳಿಗೆ ಚೀನಾ ಚಿಪ್‌ಗಳ ಪೂರೈಕೆ ಕುಂಠಿತವಾಗಿತ್ತು. ಪ್ರಧಾನಿ ಮೋದಿ ಸೂಚನೆಯಂತೆ ಜಾರಿಗೊಳಿಸಿದ ಹೊಸ ಪ್ರೋತ್ಸಾಹಧನ ಯೋಜನೆಯಿಂದ ಭಾರತದಲ್ಲಿ ಚಿಪ್‌ ಉತ್ಪಾದನೆ ಹೆಚ್ಚಿ, ಚೀನಾ ಮೇಲಿನ ಅವಲಂಬನೆ ತಗ್ಗಲಿದೆ.

ಇದನ್ನೂ ಓದಿ:

1) ಕೊರೋನಾ ಗಲಾಟೆ ನಡುವೆಯೇ ಚಿಗುರಿಕೊಳ್ಳುತ್ತಿದೆ ಆಟೋಮೊಬೈಲ್ ಕ್ಷೇತ್ರ!

2) Affordable electric cars ಭಾರತದಲ್ಲಿ ಲಭ್ಯವಿರುವ ಕೈಗೆಟುಕುವ ದರದ ಎಲೆಕ್ಟ್ರಿಕ್ ಕಾರು!

3) Celebrities Luxury Cars ಈ ವರ್ಷ ಬಾಲಿವುಡ್ ಸೆಲೆಬ್ರೆಟಿಗಳನ್ನು ಮೋಡಿ ಮಾಡಿದೆ ಈ 2 ಕಾರು!

click me!