
ನವಗದೆಹಲಿ (ಆ.16) ನಿಸ್ಸಾನ್ ಭಾರತದಲ್ಲಿ ಕಾರು ಮಾರಾಟದಲ್ಲಿ ಪ್ರಗತಿ ಕಾಣುತ್ತಿದೆ. ಇದಕ್ಕೆ ಮುಖ್ಯ ಕಾರಣ ನಿಸ್ಸಾನ್ ಹೊರತಂದಿರುವ ಮ್ಯಾಗ್ನೈಟ್ ಎಸ್‌ಯುವಿ ಕಾರು. ಅತೀ ಕಡಿಮೆ ಬೆಲೆಯಲ್ಲಿ ಮ್ಯಾಗ್ನೈಟ್ ಕಾರು ಬಿಡುಗಡೆ ಮಾಡಲಾಗಿತ್ತು. ಬಳಿಕ ಹಂತ ಹಂತವಾಗಿ ಬೆಲೆ ಏರಿಕೆ ಕಂಡರೂ ಸದ್ಯ 6.14 ಲಕ್ಷ ರೂಪಾಯಿಗೆ (ಎಕ್ಸ್ ಶೋ ರೂಂ ಬೆಲೆ) ಲಭ್ಯವಿದೆ. ಆದರೆ ಭಾರತದಲ್ಲಿ ನಿಸ್ಸಾನ್ ಕಂಪನಿಗೆ ತನ್ನ ಎಕ್ಸ್ ಟ್ರೈಲ್ ಕಾರು ತಲೆನೋವು ಹೆಚ್ಚಿಸಿದೆ. ಕಳೆದ 6 ತಿಂಗಳಿನಿಂದ ಎಕ್ಸ್ ಟ್ರೈಲ್ ಕಾರು ಮಾರಾಟ ಕಾಣುತ್ತಿಲ್ಲ. ಒಂದು ಎರಡು ಕಾರು ಮಾರಟವಾಗಿದ್ದೇ ಹೆಚ್ಚು. ಇದೀಗ ಕಳೆದ ಎರಡು ತಿಂಗಳಲ್ಲಿ ಒಂದೇ ಒಂದು ಎಕ್ಸ್ ಟ್ರೈಲ್ ಕಾರು ಮಾರಾಟವಾಗಿಲ್ಲ.
ಭಾರತೀಯ ಮಾರುಕಟ್ಟೆಯಲ್ಲಿ ನಿಸ್ಸಾನ್‌ಗೆ ಏರುಪೇರುಗಳ ಜರ್ನಿ ಮುಂದುವರಿದಿದೆ. ನಿಸ್ಸಾನ್ ಕಾರಿನಿಂದ ಮೈಕೊಡವಿ ನಿಂತರೂ,ಇತರ ನಿಸ್ಸಾನ್ ಕಾರುಗಳು ಮಾರಾಟದಲ್ಲಿ ಪ್ರಗತಿ ಕಾಣುತ್ತಿಲ್ಲ. ಆದ್ರೆ, ದುಬಾರಿ ಕಾರ್ ಎಕ್ಸ್-ಟ್ರೇಲ್‌ಗೆ ಒಬ್ಬ ಗ್ರಾಹಕ ಸಿಕ್ಕಿಲ್ಲ. ಜೂನ್ ಮತ್ತು ಜೂಲೈ ತಿಂಗಳಲ್ಲಿ ಈ ಪ್ರೀಮಿಯಂ ಕಾರಿನ ಒಂದು ಯೂನಿಟ್ ಕೂಡ ಮಾರಾಟ ಆಗಿಲ್ಲ. ಕೇವಲ ಒಂದು ವೇರಿಯಂಟ್‌ನಲ್ಲಿ ಈ ಕಾರು ಲಭ್ಯವಿದ್ದು, ಅದರ ಎಕ್ಸ್‌ಶೋರೂಂ ಬೆಲೆ 49.92 ಲಕ್ಷ ರೂ. 7-ಸೀಟರ್ ಕಾನ್ಫಿಗರೇಶನ್‌ನಲ್ಲಿ ಬರುವ ಈ ಕಾರಿನಲ್ಲಿ 7 ಏರ್‌ಬ್ಯಾಗ್‌ಗಳ ಜೊತೆಗೆ ಹಲವು ಸುರಕ್ಷತಾ ವೈಶಿಷ್ಟ್ಯಗಳಿವೆ.
ಭಾರತೀಯ ಗ್ರಾಹಕರಿಗೆ ಪ್ರೀಮಿಯಂ ಅನುಭವ ನೀಡಲು ನಿಸ್ಸಾನ್ D1-ಸೆಗ್ಮೆಂಟ್ SUV ಎಕ್ಸ್-ಟ್ರೇಲ್ ಅನ್ನು ಪರಿಚಯಿಸಿತು. ಇದರಲ್ಲಿ ಆಧುನಿಕ ಲುಕ್, ಹೈಬ್ರಿಡ್ ತಂತ್ರಜ್ಞಾನ (ಅಂತರರಾಷ್ಟ್ರೀಯ ಆವೃತ್ತಿಯಲ್ಲಿ), ವಿವಿಧ ಡ್ರೈವಿಂಗ್ ಮೋಡ್‌ಗಳು, 4WD ಆಯ್ಕೆಗಳು, ಪ್ರೀಮಿಯಂ ಇಂಟೀರಿಯರ್ ಮತ್ತು ಆಧುನಿಕ ವೈಶಿಷ್ಟ್ಯಗಳಿವೆ. ಈ ಸೆಗ್ಮೆಂಟ್‌ನಲ್ಲಿ ಟೊಯೋಟಾ ಫಾರ್ಚುನರ್, ಎಂಜಿ ಹೆಕ್ಟರ್ ಪ್ಲಸ್ ಮತ್ತು ಹ್ಯುಂಡೈ ಟಕ್ಸನ್‌ನಂತಹ ಪ್ರತಿಸ್ಪರ್ಧಿಗಳಿವೆ.
ಆದರೆ, ನಿರೀಕ್ಷಿತ ಮಟ್ಟದಲ್ಲಿ ಕಾರಿನ ಮಾರಾಟ ಆಗುತ್ತಿಲ್ಲ. ಇತ್ತೀಚಿನ ವರ್ಷಗಳಲ್ಲಿ ನಿಸ್ಸಾನ್ ಹೊಸ ಮಾದರಿಗಳನ್ನು ಬಿಡುಗಡೆ ಮಾಡಿಲ್ಲ. ಇದರಿಂದಾಗಿ ಬ್ರ್ಯಾಂಡ್ ಇಮೇಜ್ ಕುಂಠಿತವಾಗಿದೆ. ಸೀಮಿತ ಡೀಲರ್ ನೆಟ್‌ವರ್ಕ್ ಕೂಡ ಒಂದು ಕಾರಣ. ದೇಶಾದ್ಯಂತ ನಿಸ್ಸಾನ್‌ನ ಮಾರಾಟ ಮತ್ತು ಸೇವಾ ಜಾಲ ಸೀಮಿತವಾಗಿದೆ. ಹೆಚ್ಚಿನ ಬೆಲೆಯೂ ಒಂದು ಅಂಶ. ಎಕ್ಸ್-ಟ್ರೇಲ್ ಒಂದು ಪ್ರೀಮಿಯಂ SUV ಆಗಿದ್ದು, ಅದರ ಬೆಲೆ ಮಟ್ಟವು ಸಂಭಾವ್ಯ ಗ್ರಾಹಕರನ್ನು ಮಾರುತಿ ಗ್ರ್ಯಾಂಡ್ ವಿಟಾರಾ ಅಥವಾ ಟಾಟಾ ಹ್ಯಾರಿಯರ್‌ನಂತಹ ಆಯ್ಕೆಗಳತ್ತ ಸೆಳೆಯುತ್ತಿದೆ.
ನಿಸ್ಸಾನ್ ಎಕ್ಸ್ ಟ್ರೈಲ್ ಕಾರು ಮಾರಾಟ ನಿಸ್ಸಾನ್ ಬ್ರ್ಯಾಂಡ್ ಮೇಲೆ ತೀವ್ರ ಹೊಡೆತ ನೀಡುತ್ತಿದೆ. ಹೀಗಾಗಿ ಭಾರತದಲ್ಲಿ ನಿಸ್ಸಾನ್ ಎಕ್ಸ್ ಟ್ರೈಲ್ ಕಾರು ಸ್ಥಗಿತಗೊಳಿಸುವ ಸಾಧ್ಯತೆ ಇದೆ. ಮಾರಾಟವಾಗದೇ ಭಾರವನ್ನು ಹೊರುತ್ತಿರುವ ನಿಸ್ಸಾನ್‌ಗೆ ಎಕ್ಸ್ ಟ್ರೈಲ್ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಇತ್ತೀಚೆಗಷ್ಟೇ ನಿಸ್ಸಾನ್ ಭಾರತದಲ್ಲಿ ಹೊಸ ನಾಲ್ಕು ಎಸ್‌ಯುವಿ ಕಾರುಗಳನ್ನು ಬಿಡುಗಡೆ ಮಾಡುವುದಾಗಿ ಘೋಷಿಸಿದೆ. ಪ್ರಮುಖವಾಗಿ ಹ್ಯುಂಡೈ ಕ್ರೆಟಾ ಪ್ರತಿಸ್ಪರ್ಧಿ, ಎಲೆಕ್ಟ್ರಿಕ್ ಕಾರು ಸೇರಿದಂತೆ ಪ್ರೀಮಿಯಂ ಎಸ‌್‌ಯುವಿ ಕಾರು ಬಿಡುಗಡೆ ಮಾಡಲು ಸಜ್ಜಾಗಿದೆ. ಹೀಗಾಗಿ ಟ್ರೈಲ್ ಕಾರು ಭಾರತದಲ್ಲಿ ಸ್ಥಗಿತಗೊಂಡರೂ ಅಚ್ಚರಿಯಿಲ್ಲ.