SUV cars in India ನಿಸಾನ್ ಮ್ಯಾಗ್ನೈಟ್ ಕಾರಿಗೆ ಭಾರಿ ಬೇಡಿಕೆ, 78 ಸಾವಿರ ಬುಕಿಂಗ್, 15 ರಾಷ್ಟ್ರಗಳಿಗೆ ರಫ್ತು!

By Suvarna NewsFirst Published Jan 28, 2022, 6:07 PM IST
Highlights
  • ಕೈಗೆಟುಕುವ ಬೆಲೆಯ ಸಬ್ ಕಾಂಪಾಕ್ಟ್ SUV ಕಾರು ನಿಸಾನ್ ಮ್ಯಾಗ್ನೈಟ್
  • ಭಾರತದಲ್ಲಿ 78,000 ಬುಕಿಂಗ್ ಕಂಡ ನಿಸಾನ್ ಮ್ಯಾಗ್ನೈಟ್ ಕಾರು
  • ವಿದೇಶ ರಫ್ತು ಇದೀಗ 15 ರಾಷ್ಟ್ರಗಳಿಗೆ ವಿಸ್ತರಣೆ, ಹೊಸ ದಾಖಲೆ

ನವದೆಹಲಿ(ಜ.28): ಭಾರತದಲ್ಲಿ ಸಬ್‌ಕಾಂಪಾಕ್ಟ್ SUV ಕಾರಿಗೆ ಭಾರಿ ಬೇಡಿಕೆ ಇದೆ. ಇದಕ್ಕೆ ತಕ್ಕಂತೆ ಬಹುತೇಕ ಎಲ್ಲಾ ಆಟೋ ಕಂಪನಿಗಳು(Auto Company) ಸಬ್ ಕಾಂಪಾಕ್ಟ್ SUV ಕಾರುಗಳನ್ನು(Car) ಬಿಡುಗಡೆ ಮಾಡಿದೆ. ಭಾರಿ ಪೈಪೋಟಿ ನಡವೆ ನಿಸಾನ್ ಭಾರತದಲ್ಲಿ ಮ್ಯಾಗ್ನೈಟ್ ಕಾರು ಬಿಡುಗಡೆ ಮಾಡಿದೆ. ಕೈಗೆಟುಕುವ ದರದಲ್ಲಿ ಬಿಡುಗಡೆಯಾದ ಮ್ಯಾಗ್ನೈಟ್(Nissan Magnite) ಕಾರಿಗೆ ಭಾರಿ ಬೇಡಿಕೆ ವ್ಯಕ್ತವಾಗಿದೆ. ಇದೀಗ ಭಾರತದಲ್ಲಿ ನಿಸಾನ್ ಮ್ಯಾಗ್ನೈಟ್ 78,000 ಕಾರು ಬುಕಿಂಗ್ ಆಗಿದೆ.

ನಿಸಾನ್ ಮ್ಯಾಗ್ನೈಟ್ ಬಿಡುಗಡೆಯಾಗಿ ಒಂದು ವರ್ಷ ಪೂರೈಸಿದೆ. 2020ರ ಡಿಸೆಂಬರ್ ತಿಂಗಳಲ್ಲಿ ಹೊಚ್ಚ ಹೊಸ ನಿಸಾನ್ ಮ್ಯಾಗ್ನೈಟ್ ಕಾರು ಭಾರತದಲ್ಲಿ ಬಿಡುಗಡೆಯಾಗಿತ್ತು. ಭಾರತದ ಮೂಲಕ ಗ್ಲೋಬಲ್ ಮಾರುಕಟ್ಟೆಗೆ ಬಿಡುಗಡೆಯಾದ ಮ್ಯಾಗ್ನೈಟ್ ಹೊಸ ಇತಿಹಾಸ ರಚಿಸಿದೆ. ಒಂದು ವರ್ಷದಲ್ಲಿ ಮ್ಯಾಗ್ನೈಟ್ ಅತ್ಯುತ್ತಮ ಮಾರಾಟ(Car sales Record) ದಾಖಲೆ ಕಂಡಿದೆ. ಕಾರು ಬುಕ್ ಮಾಡಿದ ಗ್ರಾಹಕರಿಗೆ(Customer) ಇದೀಗ ಕಾಯುವಿಕೆ ಕಾಲವೂ ಹೆಚ್ಚಾಗಿದೆ. ಇನ್ನು ಆರಂಭದಲ್ಲಿ 2 ರಾಷ್ಟ್ರಗಳಿಗೆ ರಫ್ತು ಮಾಡಲಾಗುತ್ತಿದ್ದ ಮ್ಯಾಗ್ನೈಟ್ ಇದೀಗ 15 ರಾಷ್ಟ್ರಗಳಿಗೆ ಕಾರು ರಫ್ತಾಗುತ್ತಿದೆ(Export). ಭಾರತದ ರೀತಿಯಲ್ಲಿ ವಿದೇಶದಲ್ಲೂ ಮ್ಯಾಗ್ನೈಟ್ ಕಾರಿಗೆ ಭಾರಿ ಬೇಡಿಕೆ ವ್ಯಕ್ತವಾಗುತ್ತಿದೆ.

ಬಹು ಬೇಡಿಕೆಯ, ಅಗ್ಗದ ದರದ ನಿಸಾನ್ ಮ್ಯಾಗ್ನೈಟ್ ಕಾರಿನ ಸುರಕ್ಷತಾ ಫಲಿತಾಂಶ ಪ್ರಕಟ!

ನಿಸಾನ್ NEXT ಟ್ರಾನ್ಸ್‌ಫೋರ್ಮೇಶನ್ ಪ್ಲಾನ್ ಅಡಿಯಲ್ಲಿ ಮ್ಯಾಗ್ನೈಟ್ ಡಿಸೈನ್ ಮಾಡಲಾಗಿದೆ. ಆಕರ್ಷಕ ವಿನ್ಯಾಸ, ಕೈಗೆಟುಕುವ ದರದಿಂದ ಮ್ಯಾಗ್ನೈಟ್ ಇದೀಗ ಜನಸಾಮಾನ್ಯರ ನೆಚ್ಚಿನ ಕಾರಾಗಿ ಮಾರ್ಪಟ್ಟಿದೆ. ನಿಸಾನ್ ಮ್ಯಾಗ್ನೈಟ್ ಕಾರಿನ ಬೆಲೆ 5.76 ಲಕ್ಷ ರೂಪಾಯಿಯಿಂದ(ಎಕ್ಸ್ ಶೋ ರೂಂ) ಆರಂಭಗೊಳ್ಳುತ್ತಿದೆ. ಗರಿಷ್ಠ ಬೆಲೆ 10.15 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ).

ಮೇಡ್ ಇನ್ ಇಂಡಿಯಾ ಮ್ಯಾಗ್ನೈಟ್ ಕಾರು ಇಂಡೋನೇಷಿಯಾ, ನೇಪಾಳ, ಭೂತಾನ್, ಬಾಂಗ್ಲಾದೇಶ, ಶ್ರೀಲಂಕಾ, ಬ್ರೂನೈ, ಉಗಾಂಡ, ಕೀನ್ಯಾ, ಮಾರಿಷಸ್, ಆಫ್ರಿಕಾ, ಮಿಡ್ಲ್ ಈಸ್ಟ್, ಯೂರೋಪ್ ಸೇರಿದಂತೆ 15 ರಾಷ್ಟ್ರಗಳಿಗೆ ಇದೀಗ ರಫ್ತಾಗುತ್ತಿದೆ. ತಮಿಳನಾಡಿನ ಚೆನ್ನೈನಲ್ಲಿರುವ ನಿಸಾನ್ ಘಟಕದಲ್ಲಿ ಮ್ಯಾಗ್ನೈಟ್ ಕಾರು ಉತ್ಪಾದನೆಯಾಗುತ್ತಿದೆ. 6,344 ಮ್ಯಾಗ್ನೈಟ್ ಕಾರು ಈಗಾಗಲೇ ವಿದೇಶಗಳಿಗೆ ರಫ್ತಾಗಿದೆ. ಬೇಡಿಕೆ ಹೆಚ್ಚಾಗುತ್ತಲೇ ಇದೆ.

ನಿಸಾನ್ ಮ್ಯಾಗ್ನೈಟ್ ಕಾರಿನ ಅಬ್ಬರಕ್ಕೆ SUV ವಿಭಾಗದ ದಾಖಲೆ ಧೂಳೀಪಟ!

ಚೆನ್ನೈ ಘಟಕದಲ್ಲಿ 42,000 ನಿಸಾನ್ ಮ್ಯಾಗ್ನೈಟ್ ಕಾರು ಉತ್ಪಾದಿಸಲಾಗಿದೆ. ಕೊರೋನಾ ವೈರಸ್, ಲಾಕ್‌ಡೌನ್, ಚಿಪ್ ಕೊರತೆ ಸೇರಿದಂತೆ ಹಲವು ಕಾರಣಗಳಿಂದ ನಿರೀಕ್ಷಿತ ಉತ್ಪಾದನೆ ಕಂಡಿಲ್ಲ. ಹೀಗಾಗಿ ಕಾರು ಡೆಲಿವರಿ ಕೂಡ ವಿಳಂಬವಾಗುತ್ತಿದೆ. ನಿಸಾನ್ ಕಾರುಗಳ ಪೈಕಿ ಭಾರತದಲ್ಲಿ ಅತೀ ಬೇಡಿಕೆ ವ್ಯಕ್ತವಾದ ಕಾರು ಅನ್ನೋ ಹೆಗ್ಗಳಿಕೆಗೆ ಮ್ಯಾಗ್ನೈಟ್ ಪಾತ್ರವಾಗಿದೆ. 

ನಿಸಾನ್ ಮ್ಯಾಗ್ನೇಟ್ ಕಾರು ಎರಡು ಎಂಜಿನ್ ಆಯ್ಕೆ ಹೊಂದಿದೆ. 1.0 ಲೀಟರ್ ನ್ಯಾಚ್ಯುಲರ್ ಪೆಟ್ರೋಲ್ ಎಂಜಿನ್ ಹಾಗೂ 1.0 ಲೀಟರ್ ಟರ್ಬೋ ಪೆಟ್ರೋಲ್ ಎಂಜಿನ್ ಆಯ್ಕೆ ಲಭ್ಯವಿದೆ. 1.0 ಲೀಟರ್ ಪೆಟ್ರೋಲ್ ಎಂಜಿನ್  71 hp ಪವರ್ ಹೊಂದಿದೆ. ಇನ್ನು 1.0 ಲೀಟರ್ ಟರ್ಬೋ ಪೆಟ್ರೋಲ್ ಎಂಜಿನ್ 98 hp ಪವರ್ ಹೊಂದಿದೆ. ಇನ್ನು 5 ಸ್ಪೀಡ್ ಮಾನ್ಯುಯೆಲ್ ಗೇರ್‌ಬಾಕ್ಸ್ ಹಾಗೂ  CVT ಆಯ್ಕೆ ಲಭ್ಯವಿದೆ.

ನಿಸಾನ್ ಮ್ಯಾಗ್ನೈಟ್ ಕಾರು ಭಾರತದಲ್ಲಿ ಜನಪ್ರಿಯ ಸಬ್ ಕಾಂಪಾಕ್ಟ್ SUV ಕಾರುಗಳಿಗೆ ಪ್ರತಿಸ್ಪರ್ಧಿಯಾಗಿದೆ. ಮಾರುತಿ ಸುಜುಕಿ ಬ್ರೆಜಾ, ಟಾಟಾ ನೆಕ್ಸಾನ್, ಹ್ಯುಂಡೈ ವೆನ್ಯೂ, ರೆನಾಲ್ಟ್ ಕಿಗರ್, ಕಿಯಾ ಸೋನೆಟ್ ಸೇರಿದಂತೆ ಹಲವು ಕಾರುಗಳಿಗೆ ಪ್ರತಿಸ್ಪರ್ಧಿಯಾಗಿದೆ. ಭಾರತದಲ್ಲಿ ಮಾರಾಟವಾಗುತ್ತಿರುವ ಸಬ್ ಕಾಂಪಾಕ್ಟ್ ಕಾರುಗಳ ಟಾಪ್ 10 ಪಟ್ಟಿಯಲ್ಲೂ ನಿಸಾನ್ ಮ್ಯಾಗ್ನೈಟ್ ಕಾರು ಕಾಣಿಸಿಕೊಂಡಿದೆ 
 

click me!