ಮಾರುಕಟ್ಟೆಯಲ್ಲಿ ಮತ್ತೆ ಸಾಮ್ರಾಜ್ಯ ಸ್ಥಾಪಿಸಲು ಬರುತ್ತಿದೆ ಹೊಸ ತಲೆಮಾರಿನ ಹ್ಯುಂಡೈ ಕ್ರೆಟಾ: ಟೆಸ್ಟಿಂಗ್ ವೇಳೆ ಬಯಲಾಯ್ತು ಭರ್ಜರಿ ಫೀಚರ್ಸ್

Published : Nov 14, 2026, 11:00 PM IST
New-Gen Hyundai Creta Spotted Testing

ಸಾರಾಂಶ

ಹ್ಯುಂಡೈ ತನ್ನ ಜನಪ್ರಿಯ ಎಸ್‌ಯುವಿ ಕ್ರೆಟಾವನ್ನು ಸಂಪೂರ್ಣ ಹೊಸ ಅವತಾರದಲ್ಲಿ ಬಿಡುಗಡೆ ಮಾಡಲು ಸಿದ್ಧತೆ ನಡೆಸಿದೆ. ಟೆಸ್ಟಿಂಗ್‌ ವೇಳೆ ಇದರ ಒಳಾಂಗಣ ಮತ್ತು ಅತ್ಯಾಧುನಿಕ ವೈಶಿಷ್ಟ್ಯಗಳ ಕುರಿತು ಮಾಹಿತಿ ಹೊರಬಿದ್ದಿದೆ.

ಮುಂಬೈ (ನ.14): ಭಾರತೀಯ ಮಾರುಕಟ್ಟೆಯಲ್ಲಿ 'ಹ್ಯುಂಡೈ ಬಯಾನ್' (Hyundai Bayon) ಪರಿಚಯಿಸಿದ ಬೆನ್ನಲ್ಲೇ, ದಕ್ಷಿಣ ಕೊರಿಯಾದ ವಾಹನ ತಯಾರಕ ದಿಗ್ಗಜ ಹ್ಯುಂಡೈ ತನ್ನ ಅತ್ಯಂತ ಜನಪ್ರಿಯ ಎಸ್‌ಯುವಿ 'ಕ್ರೆಟಾ'ವನ್ನು (Hyundai Creta) ಸಂಪೂರ್ಣ ಹೊಸ ಹಾಗೂ ಆಕರ್ಷಕ ಅವತಾರದಲ್ಲಿ ಮಾರುಕಟ್ಟೆಗೆ ತರಲು ಸಿದ್ಧತೆ ನಡೆಸಿದೆ. ಇತ್ತೀಚೆಗಷ್ಟೇ ಹೊಸ ತಲೆಮಾರಿನ ಕ್ರೆಟಾ ರಸ್ತೆಗಳಲ್ಲಿ ಟೆಸ್ಟಿಂಗ್‌ ನಡೆಸುತ್ತಿರುವುದು ಕಂಡುಬಂದಿದ್ದು, ಹಿಂದಿಗಿಂತಲೂ ದೊಡ್ಡದಾಗಿ ಹಾಗೂ ಬಲಿಷ್ಠವಾಗಿ ಗೋಚರಿಸುತ್ತಿದೆ. ಟೆಸ್ಟಿಂಗ್‌ ವೇಳೆ ಕಾರನ್ನು ಸಂಪೂರ್ಣವಾಗಿ ಕವರ್‌ನಿಂದ ಮುಚ್ಚಲಾಗಿದ್ದರೂ, ಇದರ ಒಳಾಂಗಣ (Interior), ಆರಾಮದಾಯಕ ಸೌಲಭ್ಯಗಳು ಮತ್ತು ಅತ್ಯಾಧುನಿಕ ವೈಶಿಷ್ಟ್ಯಗಳ ಕುರಿತು ಹಲವು ಕುತೂಹಲಕಾರಿ ಮಾಹಿತಿಗಳು ಹೊರಬಿದ್ದಿವೆ.

ಹೊಸ ಕ್ಯಾಬಿನ್ ಮತ್ತು ಆಕರ್ಷಕ ಡ್ಯಾಶ್‌ಬೋರ್ಡ್ ವಿನ್ಯಾಸ

ಮಾಧ್ಯಮ ವರದಿಗಳ ಪ್ರಕಾರ, ನೂತನ ಕ್ರೆಟಾದ ಒಳಾಂಗಣವನ್ನು ಸಂಪೂರ್ಣವಾಗಿ ಬದಲಾಯಿಸಲಾಗಿದೆ. ಕಾರಿನಲ್ಲಿ ಹೊಸ ವಿನ್ಯಾಸದ ಸ್ಟೀರಿಂಗ್ ವೀಲ್, ದೊಡ್ಡದಾದ 'ಪ್ಲೆಯೋಸ್' (Pleos) ಇನ್ಫೋಟೈನ್‌ಮೆಂಟ್ ಸ್ಕ್ರೀನ್ ಹಾಗೂ ನಯವಾದ (Sleek) ಡ್ರೈವರ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ನೀಡಲಾಗಿದೆ. ಕ್ಯಾಬಿನ್ ಒಳಗೆ ತಿಳಿ ಬಣ್ಣಗಳಾದ ಆಫ್-ವೈಟ್ ಮತ್ತು ಗ್ರೇ (Off-white & Grey) ಥೀಮ್ ಬಳಸಲಾಗಿದ್ದು, ಇದು ಸೀಟುಗಳು, ಬಾಗಿಲುಗಳು ಮತ್ತು ಸೆಂಟರ್ ಕನ್ಸೋಲ್‌ಗೆ ಐಷಾರಾಮಿ ಲುಕ್ ನೀಡಿದೆ. ಪ್ರಯಾಣವನ್ನು ಮತ್ತಷ್ಟು ಆರಾಮದಾಯಕವಾಗಿಸಲು ಸೆಂಟರ್ ಕನ್ಸೋಲ್‌ನಲ್ಲಿ ಕಪ್-ಹೋಲ್ಡರ್‌ಗಳೊಂದಿಗೆ ಆರ್ಮ್‌ರೆಸ್ಟ್ ಸಹ ನೀಡಲಾಗಿದೆ.

ಇನ್ನು ಕ್ರೆಟಾದಲ್ಲೂ ಸಿಗಲಿದೆ 'ಎಲೆಕ್ಟ್ರಿಕ್ ಬಾಸ್ ಮೋಡ್'!

ಹೊಸ ಕ್ರೆಟಾದ ಅತ್ಯಂತ ದೊಡ್ಡ ವಿಶೇಷತೆ ಎಂದರೆ ಅದರ ಸೀಟುಗಳ ವಿನ್ಯಾಸ. ಈ ಬಾರಿ ಮುಂಭಾಗದ ಎರಡೂ ಸೀಟುಗಳು ಎಲೆಕ್ಟ್ರಿಕಲಿ ಅಡ್ಜಸ್ಟಬಲ್ (Electrically adjustable) ಆಗಿರಲಿವೆ. ವಿಶೇಷವೆಂದರೆ, ಸಹ-ಪ್ರಯಾಣಿಕರ ಸೀಟನ್ನು ಹಿಂಬದಿಯಿಂದಲೇ ನಿಯಂತ್ರಿಸುವ 'ಎಲೆಕ್ಟ್ರಿಕ್ ಬಾಸ್ ಮೋಡ್' (Electric Boss Mode) ಇದರಲ್ಲಿ ಸಿಗುವ ನಿರೀಕ್ಷೆಯಿದೆ. ಸಾಮಾನ್ಯವಾಗಿ ಇಂತಹ ಫೀಚರ್ ದೊಡ್ಡ ಐಷಾರಾಮಿ ಕಾರುಗಳು ಅಥವಾ ಹ್ಯುಂಡೈ ಅಲ್ಕಾಜರ್‌ನಂತಹ ಎಸ್‌ಯುವಿಗಳಲ್ಲಿ ಮಾತ್ರ ಕಂಡುಬರುತ್ತದೆ. ಇದಲ್ಲದೆ, ಹಿಂಬದಿ ಪ್ರಯಾಣಿಕರಿಗಾಗಿ ರಿಯರ್ ಎಸಿ ವೆಂಟ್‌ಗಳು, ಕಪ್-ಹೋಲ್ಡರ್ ಹೊಂದಿರುವ ಆರ್ಮ್‌ರೆಸ್ಟ್ ಮತ್ತು ವೈರ್‌ಲೆಸ್ ಫೋನ್ ಚಾರ್ಜರ್ ಸೌಲಭ್ಯಗಳು ಇರಲಿವೆ.

ಗ್ಲೋಬಲ್ K3 ಪ್ಲಾಟ್‌ಫಾರ್ಮ್ ಮತ್ತು ಲೆವೆಲ್-2 ADAS ಸುರಕ್ಷತೆ

ಈ ನೂತನ ಎಸ್‌ಯುವಿಯನ್ನು ಗ್ಲೋಬಲ್ K3 ಪ್ಲಾಟ್‌ಫಾರ್ಮ್ (Global K3 Platform) ಮೇಲೆ ನಿರ್ಮಿಸಲಾಗುತ್ತಿದೆ. ಸುರಕ್ಷತೆ ಮತ್ತು ಸೌಕರ್ಯಗಳ ಪಟ್ಟಿ ಹೀಗಿದೆ. ಮುಂಭಾಗ ಮತ್ತು ಹಿಂಭಾಗ ಎರಡೂ ಕಡೆ ವೆಂಟಿಲೇಟೆಡ್ ಸೀಟುಗಳು (Ventilated seats), ಕಾರಿನ ಸುತ್ತಲೂ ಎಲ್‌ಇಡಿ (LED) ಲೈಟ್‌ಗಳು ಮತ್ತು ದೊಡ್ಡದಾದ ಸ್ಟೈಲಿಶ್ ಅಲಾಯ್ ವೀಲ್‌ಗಳು, 360-ಡಿಗ್ರಿ ಕ್ಯಾಮೆರಾ ಹಾಗೂ ಚಾಲನೆಯನ್ನು ಅತ್ಯಂತ ಸುರಕ್ಷಿತಗೊಳಿಸುವ ಲೆವೆಲ್-2 ADAS (Advanced Driver Assistance System) ತಂತ್ರಜ್ಞಾನ., ಬ್ಲೈಂಡ್‌ಸ್ಪಾಟ್ ಅಲರ್ಟ್, ವಿಶಾಲವಾದ ಬೂಟ್ ಸ್ಪೇಸ್ ಮತ್ತು ಒರಗಿಸಬಹುದಾದ (Reclining) ಸೀಟುಗಳು ಪ್ರಯಾಣದ ಮಜಾವನ್ನು ದುಪ್ಪಟ್ಟುಗೊಳಿಸಲಿವೆ.

ಹೊಸ ಹೈಬ್ರಿಡ್ ಎಂಜಿನ್ ಸೇರ್ಪಡೆ – 2027ರಲ್ಲಿ ಬಿಡುಗಡೆ

ಎಂಜಿನ್ ಸಾಮರ್ಥ್ಯದ ವಿಷಯಕ್ಕೆ ಬಂದರೆ, ಪ್ರಸ್ತುತ ಚಾಲ್ತಿಯಲ್ಲಿರುವ ಜನಪ್ರಿಯ 1.5-ಲೀಟರ್ ಪೆಟ್ರೋಲ್, ಟರ್ಬೋ-ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಆಯ್ಕೆಗಳು ಮುಂದುವರಿಯುವ ಸಾಧ್ಯತೆಯಿದೆ. ಇವುಗಳ ಜೊತೆಗೆ, ಗ್ರಾಹಕರಿಗೆ ಉತ್ತಮ ಮೈಲೇಜ್ ನೀಡುವ ಉದ್ದೇಶದಿಂದ ಹ್ಯುಂಡೈ ಇದರಲ್ಲಿ ಹೊಸ ಹೈಬ್ರಿಡ್ ಎಂಜಿನ್ (Hybrid Engine) ಆಯ್ಕೆಯನ್ನೂ ಸೇರಿಸಬಹುದು ಎನ್ನಲಾಗಿದೆ. ಗೇರ್‌ಬಾಕ್ಸ್‌ಗಾಗಿ ಮ್ಯಾನುವಲ್, iVT ಮತ್ತು 7-ಸ್ಪೀಡ್ DCT ಆಯ್ಕೆಗಳು ಲಭ್ಯವಿರಲಿವೆ. ಬಹುನಿರೀಕ್ಷಿತ ಈ ನೂತನ ಹ್ಯುಂಡೈ ಕ್ರೆಟಾ 2027ರಲ್ಲಿ ಭಾರತೀಯ ಮಾರುಕಟ್ಟೆಗೆ ಬಿಡುಗಡೆಯಾಗುವ ನಿರೀಕ್ಷೆಯಿದೆ.

PREV
Read more Articles on
click me!

Recommended Stories

Kia Seltos ಸದ್ದು ಮಾಡುತ್ತಿದ್ದರೆ ಮಾರಾಟದಲ್ಲಿ ಕಿಂಗ್ ಬೇರೆಯೇ! ಮೊದಲ ಸ್ಥಾನ ಪಡೆದ ಕಾರು ಯಾವುದು?
ಕಾರು ಮಾರಾಟ ಭರ್ಜರಿ ಏರಿಕೆ ಕಂಡಿದ್ದರೂ ಟಾಟಾ ಮೋಟಾರ್ಸ್‌ಗೆ ಆಘಾತ, 5500 ಕೋಟಿಗೂ ಹೆಚ್ಚು ನಷ್ಟ ಕಂಡ ಕಂಪನಿ