ಇನ್ಮುಂದೆ ಸರ್ಕಾರಿ ಕಚೇರಿಗಳಲ್ಲಿ EV ಕಾರುಗಳದ್ದೇ ಹವಾ ! ವಾಹನ ಖರೀದಿಗೆ ಕೇಂದ್ರದ ಹೊಸ ರೂಲ್ಸ್

Published : Nov 13, 2026, 02:25 PM IST
Central Government rules

ಸಾರಾಂಶ

ಕೇಂದ್ರ ಸರ್ಕಾರಿ ನೌಕರರು ಹಾಗೂ ಸಚಿವಾಲಯ ಬಳಸುವ ಕಾರಿನ ನಿಯಮ ಬದಲಾಗಿದೆ. ಕೇಂದ್ರ ಸರ್ಕಾರ, ಸಚಿವಾಲಯ ಹಾಗೂ ಇಲಾಖೆ ಎಷ್ಟು ಬೆಲೆಯ ಕಾರ್‌ ಖರೀದಿ ಮಾಡ್ಬೇಕು ಎಂಬ ಪಟ್ಟಿ ಬಿಡುಗಡೆ ಮಾಡಿದೆ.

ಕೇಂದ್ರ ಸರ್ಕಾರಿ ನೌಕರರು ಮತ್ತು ಅಧಿಕಾರಿಗಳ ಬಳಕೆಗೆ ಖರೀದಿಸುವ ಕಾರುಗಳ ನಿಯಮದಲ್ಲಿ ಮಹತ್ವದ ಬದಲಾವಣೆ ಮಾಡಲಾಗಿದೆ. ಇನ್ಮುಂದೆ ಕೇಂದ್ರ ಸರ್ಕಾರದ ಸಚಿವಾಲಯಗಳು ಮತ್ತು ಇಲಾಖೆ ಬಳಿ ನಾವು ಹೆಚ್ಚಿನ ಮಟ್ಟದಲ್ಲಿ ಎಲೆಕ್ಟ್ರಿಕ್ ಕಾರುಗಳನ್ನು ಕಾಣ್ಬಹುದು. ಎಲೆಕ್ಟ್ರಿಕ್‌ ಕಾರು ಖರೀದಿಗೆ ಗರಿಷ್ಠ 20 ಲಕ್ಷ ರೂಪಾಯಿ ಮಿತಿ ನಿಗದಿಪಡಿಸಲಾಗಿದೆ. ಪೆಟ್ರೋಲ್ ಮತ್ತು ಡೀಸೆಲ್ ಕಾರು ಖರೀದಿಸಲು ಗರಿಷ್ಠ ಮಿತಿ 10 ಲಕ್ಷ ರೂಪಾಯಿಯಾಗಿದೆ.

ಹಣಕಾಸು ಸಚಿವಾಲಯದ ಆದೇಶ

ಹಣಕಾಸು ಸಚಿವಾಲಯದ ವೆಚ್ಚ ಇಲಾಖೆಯು ಅಧಿಕೃತ ಕಚೇರಿ ಮೆಮೊರಾಂಡಂ ಹೊರಡಿಸಿದೆ. ಇದ್ರ ಪ್ರಕಾರ, ಪೆಟ್ರೋಲ್ ಮತ್ತು ಡೀಸೆಲ್ ಕಾರುಗಳಿಗೆ ಹೋಲಿಸಿದರೆ ಎಲೆಕ್ಟ್ರಿಕ್ ಕಾರುಗಳ ಖರೀದಿಗೆ ದುಪ್ಪಟ್ಟು ಬಜೆಟ್ ನೀಡಲಾಗಿದೆ. ಸರ್ಕಾರಿ ವಾಹನಗಳಲ್ಲಿ ಎಲೆಕ್ಟ್ರಿಕ್ ಮೊಬಿಲಿಟಿಗೆ ಉತ್ತೇಜನ ನೀಡುವುದು ಮತ್ತು ಪೆಟ್ರೋಲ್, ಡೀಸೆಲ್ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುವುದು ಈ ನಿರ್ಧಾರದ ಪ್ರಮುಖ ಉದ್ದೇಶವಾಗಿದೆ. ಹೊಸ ಸೂಚನೆಗಳು ತಕ್ಷಣದಿಂದಲೇ ಜಾರಿಗೆ ಬಂದಿವೆ.

ಸರ್ಕಾರಿ ಕಾರುಗಳ ಖರೀದಿಗೆ ಹೊಸ ದರ ಮಿತಿ ಎಷ್ಟು?

ಹಣಕಾಸು ಸಚಿವಾಲಯವು ಸರ್ಕಾರಿ ಸಿಬ್ಬಂದಿ ಕಾರುಗಳ ಖರೀದಿಗೆ ನೆಟ್ ಡೀಲರ್ ಪ್ರೈಸ್ (NDP) ಆಧಾರದ ಮೇಲೆ ಗರಿಷ್ಠ ದರದ ಮಿತಿಯನ್ನು ನಿಗದಿಪಡಿಸಿದೆ. ಅದರಂತೆ ಕಾರುಗಳನ್ನು ಎರಡು ವಿಭಾಗಗಳಾಗಿ ವಿಂಗಡಿಸಲಾಗಿದೆ.

• ಎಲೆಕ್ಟ್ರಿಕ್ ಕಾರು (EV): ಗರಿಷ್ಠ 20 ಲಕ್ಷ ರೂಪಾಯಿ.

• ಪೆಟ್ರೋಲ್ ಮತ್ತು ಡೀಸೆಲ್ ಕಾರು (ICE): ಗರಿಷ್ಠ 10 ಲಕ್ಷ ರೂಪಾಯಿ.

ಇಲ್ಲಿ NDP ಎಂದರೆ ನೆಟ್ ಡೀಲರ್ ಪ್ರೈಸ್. ಅಂದರೆ, ಕಾರು ಖರೀದಿಸುವಾಗ ಡೀಲರ್ ನೀಡುವ ಬೆಲೆಯನ್ನು ಆಧರಿಸಿ ಸರ್ಕಾರ ಈ ಗರಿಷ್ಠ ವೆಚ್ಚದ ಮಿತಿಯನ್ನು ನಿಗದಿಪಡಿಸಿದೆ. ಹೊಸ ನಿಯಮದ ಪ್ರಕಾರ, ಸರ್ಕಾರಿ ಸಚಿವಾಲಯಗಳು ಮತ್ತು ಇಲಾಖೆಗಳು ಪೆಟ್ರೋಲ್ ಅಥವಾ ಡೀಸೆಲ್ ಕಾರುಗಳಿಗೆ ಹೋಲಿಸಿದರೆ ಎಲೆಕ್ಟ್ರಿಕ್ ಕಾರುಗಳ ಖರೀದಿಗೆ ಎರಡು ಪಟ್ಟು ಹಣ ಖರ್ಚು ಮಾಡಬಹುದು.

ಎಲೆಕ್ಟ್ರಿಕ್ ಕಾರು ಖರೀದಿ ಕಡ್ಡಾಯವೇ?

ಸರ್ಕಾರಿ ಇಲಾಖೆಗಳು ಈಗಾಗಲೇ ಬಳಸುತ್ತಿರುವ ಸಿಬ್ಬಂದಿ ಕಾರುಗಳನ್ನು ಬದಲಾಯಿಸುವಾಗ ಅಥವಾ ಹೊಸ ಕಾರು ಖರೀದಿಸುವಾಗ ಸಾಮಾನ್ಯವಾಗಿ ಎಲೆಕ್ಟ್ರಿಕ್ ವಾಹನಗಳಿಗೇ ಆದ್ಯತೆ ನೀಡಬೇಕು ಎಂದು ಹಣಕಾಸು ಸಚಿವಾಲಯ ಸ್ಪಷ್ಟಪಡಿಸಿದೆ. ಅಂದರೆ, ಸರ್ಕಾರಿ ವಾಹನಗಳ ಖರೀದಿಯಲ್ಲಿ ಇನ್ಮುಂದೆ EVಗಳು ಮೊದಲ ಆಯ್ಕೆಯಾಗಿರಲಿವೆ. ಆದರೆ, ಕೆಲವು ಇಲಾಖೆಗಳ ಕಾರ್ಯನಿರ್ವಹಣೆಗೆ ಎಲೆಕ್ಟ್ರಿಕ್ ಕಾರು ಖರೀದಿಸುವುದು ಅಥವಾ ಬಳಸುವುದು ಪ್ರಾಯೋಗಿಕವಾಗಿ ಸಾಧ್ಯವಿಲ್ಲ ಎಂದಾದರೆ, ಪೆಟ್ರೋಲ್ ಅಥವಾ ಡೀಸೆಲ್ ಕಾರು ಖರೀದಿಸಲು ಪ್ರಸ್ತಾವನೆ ಸಲ್ಲಿಸಬಹುದು. ಆದರೆ ಇದಕ್ಕೆ ಸೂಕ್ತ ಕಾರಣಗಳನ್ನು ನೀಡಬೇಕು. ಅಲ್ಲದೆ, ವೆಚ್ಚ ಇಲಾಖೆಯಿಂದ ವಿಶೇಷ ಅನುಮತಿಯನ್ನೂ ಪಡೆಯಬೇಕಾಗುತ್ತದೆ.

ಹೊಸ ನಿಯಮಗಳು ಕೇವಲ ಸರ್ಕಾರಿ ಕಾರುಗಳ ಖರೀದಿಗೆ ಮಾತ್ರ ಸೀಮಿತವಾಗಿಲ್ಲ. ಯಾವುದಾದರೂ ಸಚಿವಾಲಯ ಅಥವಾ ಸರ್ಕಾರಿ ಇಲಾಖೆಗೆ ಪೆಟ್ರೋಲ್ ಅಥವಾ ಡೀಸೆಲ್ ಕಾರುಗಳನ್ನು ಬಾಡಿಗೆಗೆ ಪಡೆಯುವ ಅಗತ್ಯವಿದ್ದರೂ, ಅದಕ್ಕೂ ವೆಚ್ಚ ಇಲಾಖೆಯಿಂದ ವಿಶೇಷ ವಿನಾಯಿತಿ ಪಡೆಯಬೇಕಾಗುತ್ತದೆ. ಕಾರುಗಳ ಖರೀದಿ, ಬಾಡಿಗೆ ಹಾಗೂ ಇತರ ಷರತ್ತುಗಳಿಗೆ ಸಂಬಂಧಿಸಿದಂತೆ ಈ ಹಿಂದೆ ಜಾರಿಯಲ್ಲಿದ್ದ ಉಳಿದ ನಿಯಮಗಳಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ ಎಂದು ಹಣಕಾಸು ಸಚಿವಾಲಯ ತಿಳಿಸಿದೆ. ಸರ್ಕಾರಿ ಇಲಾಖೆಗಳು ಸಾಮಾನ್ಯ ಹಣಕಾಸು ನಿಯಮಗಳು (GFR), 2017 ಮತ್ತು ಕಾಲಕಾಲಕ್ಕೆ ಹೊರಡಿಸುವ ಇತರ ಮಾರ್ಗಸೂಚಿಗಳನ್ನು ಪಾಲಿಸಬೇಕಾಗುತ್ತದೆ. ಈ ಹೊಸ ನಿರ್ಧಾರದಿಂದ ಸರ್ಕಾರಿ ವಾಹನಗಳ ಖರೀದಿಯಲ್ಲಿ ಎಲೆಕ್ಟ್ರಿಕ್ ಕಾರುಗಳ ಪಾಲು ಹೆಚ್ಚಾಗುವ ನಿರೀಕ್ಷೆಯಿದೆ.

PREV
Read more Articles on
click me!

Recommended Stories

ಪರೀಕ್ಷೆಯಲ್ಲಿ ಪಾಸ್ ಆಗಿದ್ದೇ ತಡ, 9ನೇ ಕ್ಲಾಸ್ ಹುಡುಗನಿಗೆ ಅಪ್ಪನಿಂದ ₹1.62 ಕೋಟಿ BMW ಕಾರು ಗಿಫ್ಟ್!
Hero Vida Nex 3 : ಇಬ್ಬರಿಗೆ ಜಾಗ, ಬಾಗಿಲು ಮಾತ್ರ ಮೇಲಕ್ಕೆ! ಹೀರೋ ಹೊಸ ಕಾರಿನ ವಿನ್ಯಾಸ ನೋಡಿ