
ನವದೆಹಲಿ (ನ.17) ಭಾರತದಲ್ಲಿ ಮಾರುತಿ ಸುಜುಕಿ ಕಾರು ಮಾರುಕಟ್ಟೆಯಲ್ಲಿ ಅಗ್ರಸ್ಥಾನದಲ್ಲಿದೆ. ಮಾರುತಿ ಸುಜುಕಿ ಕಾರುಗಳೇ ಗರಿಷ್ಠ ಮಾರಾಟ ಪಟ್ಟಿಯಲ್ಲಿ ಸ್ಥಾನ ಪಡೆದಿದೆ.ಕೈಗೆಟುಕುವ ಬೆಲೆ, ಕಡಿಮೆ ನಿರ್ವಹಣಾ ವೆಚ್ಚ ಸೇರಿದಂತೆ ಹಲವು ಕಾರಣಗಳಿಂದ ಅತೀ ಹೆಚ್ಚು ಮಂದಿ ಮಾರುತಿ ಸುಜುಕಿ ಕಾರುಗಳನ್ನೇ ಬಯಸುತ್ತಾರೆ. ಈ ಪೈಕಿ ಮಾರುತಿ ಸುಜತಿ ಬಿಡುಗಡೆ ಮಾಡಿದ ಗ್ರ್ಯಾಂಡ್ ವಿಟಾರ ಕಾರು ಭಾರಿ ಬೇಡಿಕೆ ಪಡೆದುಕೊಂಡಿದೆ. 2022ರಲ್ಲಿ ಗ್ರ್ಯಾಂಡ್ ವಿಟಾರ ಕಾರು ಲಾಂಚ್ ಮಾಡಲಾಗಿದೆ. ಬಳಿಕ ದಾಖಲೆ ಸಂಖ್ಯೆಯಲ್ಲಿ ಕಾರು ಮಾರಾಟವಾಗಿದೆ. ಇದೀಗ ಗ್ರ್ಯಾಂಡ್ ವಿಟಾರ ಕೆಲ ಮಾಡೆಲ್ ಕಾರುಗಳಲ್ಲಿ ತಾಂತ್ರಿಕ ದೋಷವೊಂದು ಕಾಣಿಸಿಕೊಂಡಿದೆ. ಹೀಗಾಗಿ 39,506 ಗ್ರ್ಯಾಂಡ್ ವಿಟಾರಾ ಕಾರುಗಳನ್ನು ಹಿಂಪಡೆಯಲು ಮಾರುತಿ ಸುಜುಕಿ ಮುಂದಾಗಿದೆ.
ಕೆಲ ನಿರ್ದಿಷ್ಟ ವರ್ಷದ ಮಾಡೆಲ್ ಗ್ರ್ಯಾಂಡ್ ವಿಟಾರ ಕಾರುಗಳಲ್ಲಿ ಇಂಧನದ ಲೆವಲ್ ಇಂಡಿಕೇಟರ್ ಹಾಗೂ ಸ್ಪೀಡೋಮೀಟರ್‌ನಲ್ಲಿರುವ ವಾರ್ನಿಂಗ್ ಲೈಟ್ ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲದ ಕಾರಣ ವಿಟಾರ ಕಾರುಗಳನ್ನು ಹಿಂಪಡೆಯಲು ಮಾರುತಿ ಸುಜುಕಿ ಮುಂದಾಗಿದೆ. ಈ ತಾಂತ್ರಿಕ ದೋಷ ಇರುವ ಕಾರುಗಳನ್ನು ಮಾತ್ರ ಹಿಂಪಡೆಯಲು ನಿರ್ಧರಿಸಲಾಗಿದೆ.
ಮಾರುತಿ ಸುಜುಕಿ ಗ್ರ್ಯಾಂಡ್ ವಿಟಾರ ಎಲ್ಲಾ ಕಾರುಗಳಲ್ಲಿ ಈ ಸಮಸ್ಯೆ ಇಲ್ಲ. ನಿರ್ದಿಷ್ಟವಾಗಿ ಡೆಸೆಂಬರ್ 9, 2024ರಿಂದದ ಎಪ್ರಿಲ್ 29, 2025ರ ವರೆಗೆ ಉತ್ಪಾದನೆಗೊಂಡ ಕಾರುಗಳಲ್ಲಿ ಮಾತ್ರ ಈ ತಾಂತ್ರಿಕ ಸಮಸ್ಯೆ ಕಾಣಿಸಿಕೊಂಡಿದೆ. ಹೀಗಾಗಿ ಸ್ವಯಂಪ್ರೇರಿತರಾಗಿ ಗ್ರಾಹಕರು ಹತ್ತಿರದ ಡೀಲರ್ ಬಳಿ ಕಾರು ತಂದು ದೋಷ ಸರಿಪಡಿಸಿಕೊಳ್ಳಲು ಮಾರುತಿ ಸುಜುಕಿ ಸೂಚಿಸಿದೆ.
ಈ ಕುರಿತು ಮಾರುತಿ ಸುಜುಕಿ ಪ್ರಕಟಣೆ ಹೊರಡಿಸಿದೆ. ಗ್ರಾಹಕರು ಯಾವ ಡೀಲರ್ ಬಳಿಯಿಂ ಕಾರು ಖರೀದಿಸಿದ್ದೀರೋ, ಅವರು ತಾಂತ್ರಿಕ ದೋಷ ಇರುವ ಕಾರುಗಳ ಮಾಲೀಕರಿಗೆ ಸಂದೇಶ ನೀಡಲಿದ್ದಾರೆ. ತಾಂತ್ರಿಕ ದೋಷ ಇರುವ ಕಾರು ಮಾಲೀಕರು ತಮ್ಮ ಡೀಲರ್ ಬಳಿ ತೆರಳಿ ದೋಷ ಸರಿಪಡಿಸಿಕೊಳ್ಳಲು ಸೂಚಿಸಲಾಗಿದೆ. ಕಾರಿನಲ್ಲಿರುವ ತಾಂತ್ರಿಕ ದೋಷ ಪರಿಶೀಲಿಸಿ, ಅಗತ್ಯವಿದ್ದರೆ ಹೊಸ ಸೆನ್ಸರ್ ಸೇರಿದಂತೆ ಇತರ ಆ್ಯಕ್ಸಸರಿ ಬದಲಿಸಲಾಗುತ್ತದೆ. ಇದು ಸಂಪೂರ್ಣ ಉಚಿತ ಎಂದು ಮಾರುತಿ ಸುಜುಕಿ ಹೇಳಿದೆ.
ಮಾರುತಿ ಸುಜುಕಿ ಗ್ರ್ಯಾಂಡ್ ವಿಟಾರ ಕಾರಿನ ಬೆಲೆ 10.76 ಲಕ್ಷ ರೂಪಾಯಿಯಿಂದ 18.73 ಲಕ್ಷ ರೂಪಾಯಿ (ಎಕ್ಸ್ ಶೋ ರೂಂ). ಪೆಟ್ರೋಲ್, ಸ್ಟ್ರಾಂಗ್ ಹೈಬ್ರಿಡ್ ವೇರಿಯೆಂಟ್‌ಗಳಲ್ಲಿ ಲಭ್ಯವಿದೆ. ಹ್ಯುಂಡೈ ಕ್ರೆಟಾ, ಕಿಯಾ ಸೆಲ್ಟೋಸ್, ಸ್ಕೋಡಾ ಕುಶಾಕ್, ಎಂಜಿ ಎಸ್ಟರ್ ಸೇರಿದಂತೆ ಪ್ರೀಮಿಯಂ ಎಸ್‌ಯುವಿ ಕಾರುಗಳಿಗೆ ಪ್ರತಿಸ್ಪರ್ಧಿಯಾಗಿದೆ.