
2018 ರಲ್ಲಿ ಲ್ಯಾಂಡ್ ರೋವರ್ ಕಾರಿನ ಮೂಲಕ ಮಾಡಿದ ಸಾಹಸವನ್ನು ಮತ್ತೆ ಮರುಸೃಷ್ಟಿಸಲು ಹೋಗಿ ಚೀನಾದ ವಾಹನ ತಯಾರಕ ಕಂಪನಿಯೊಂದು ಎಡವಟ್ಟು ಮಾಡಿದ್ದು, ಘಟನೆಯ ವೀಡಿಯೋ ವೈರಲ್ ಆಗಿದೆ. ಚೀನಾದ ಟಿಯಾನ್ಮೆನ್ ಪರ್ವತದಲ್ಲಿರುವ ಪ್ರಸಿದ್ಧ ಸ್ವರ್ಗದ ಮೆಟ್ಟಿಲು(Heaven's Staircase) ಎಂದೇ ಕರೆಯಲ್ಪಡುವ ಮೆಟ್ಟಿಲುಗಳನ್ನು ತಮ್ಮ ಸಂಸ್ಥೆ ತಯಾರಿಸಿದ ವಾಹನವೊಂದರಲ್ಲಿ ಏರಲು ಚೀನಾದ ವಾಹನ ತಯಾರಕರೊಬ್ಬರು ಪ್ರಯತ್ನ ಮಾಡಿದರು. ಆದರೆ ಈ ಯತ್ನ ವಿಫಲಗೊಂಡಿದ್ದಲ್ಲದೇ ಈ ಐತಿಹಾಸಿಕ ಮೆಟ್ಟಿಲುಗಳ ಒಂದು ಭಾಗಕ್ಕೆ ಹಾನಿಯಾಯಿತು.
ಚೀನಾದ ಚೆರಿ ಆಟೋಮೊಬೈಲ್ ಸಂಸ್ಥೆ ಎಡವಟ್ಟು: ಐತಿಹಾಸಿಕ ಸ್ವರ್ಗದ ಮೆಟ್ಟಿಲಿಗೆ ಹಾನಿ
ಚೀನಾದ ಚೆರಿ ಆಟೋಮೊಬೈಲ್ ಸಂಸ್ಥೆ ತನ್ನ ಹೊಸ ಎಸ್‌ಯುವಿ ಕಾರು ಫೆಂಗ್ಯುನ್ X3L ಟಿಯಾನ್ಮೆನ್ ಮೌಂಟೇನ್ ನ್ಯಾಷನಲ್ ಫಾರೆಸ್ಟ್ ಪಾರ್ಕ್‌ನಲ್ಲಿರುವ ಸ್ಕೈ ಲ್ಯಾಡರ್ ಎಂದೂ ಕರೆಯಲ್ಪಡುವ 300 ಮೀಟರ್ ಎತ್ತರದ ಮೆಟ್ಟಿಲುಗಳ ಸುಮಾರು 999 ಮೆಟ್ಟಿಲುಗಳನ್ನು ಏರುವ ಪ್ರಯತ್ನ ಮಾಡಿತು. ಈ ಮೆಟ್ಟಿಲುಗಳು ಟಿಯಾನ್ಮೆನ್ ಗುಹೆಗೆ ಕರೆದೊಯ್ಯುತ್ತವೆ. ಇದು ಕೇವಲ 30 ಸೆಂಟಿಮೀಟರ್ ಅಗಲದ ಮೆಟ್ಟಿಲುಗಳಾಗಿದ್ದು, ಇಲ್ಲಿ ಸ್ಥಳಗಳಲ್ಲಿ 60 ಡಿಗ್ರಿಗಿಂತ ಹೆಚ್ಚಿನ ಇಳಿಜಾರುಗಳನ್ನು ಹೊಂದಿದೆ. ಹೀಗಾಗಿ ವಾಹನಗಳಿಗೂ ಸಹ ಇಲ್ಲಿ ಹತ್ತುವುದು ಅತ್ಯಂತ ಸವಾಲಿನ ಸಂಗತಿಯಾಗಿದೆ.
ಮೆಟ್ಟಿಲುಗಳ ಮಧ್ಯೆ ಸಿಲುಕಿ ಹೆಣಗಾಡಿದ ಫೆಂಗ್ಯುನ್ X3L ಕಾರು:
ಹೀಗಿರುವಾಗ ಈ ಚೆರಿ ಸಂಸ್ಥೆಯ ಕಾರು ಫೆಂಗ್ಯುನ್ X3L ಈ ಮೆಟ್ಟಿಲುಗಳ ಮೇಲೆ ಏರುವುದಕ್ಕೆ ಹೋಗಿ ಮೆಟ್ಟಿಲುಗಳ ಮಧ್ಯೆ ಸಿಲುಕಿ ಹೆಣಗಾಡಿದೆ. ಕೆಲ ಸೆಕೆಂಡು ಮೆಟ್ಟಿಲುಗಳ ಮೇಲೆ ಏರಿದ ಈ ಗಾಡಿ ನಂತರ ಮೆಟ್ಟಿಲುಗಳ ಮಧ್ಯೆ ಸಿಲುಕಿ ಹೆಣಗಾಡಿದೆ. ಅಲ್ಲದೇ ನಂತರ ಹಿಂದಕ್ಕೆ ಜಾರಿ ಮೆಟ್ಟಿಲಿನ ಪಕ್ಕದ ತಡೆಗೋಡೆಗೆ (ಗಾರ್ಡ್‌ರೈಲ್‌ಗೆ) ಡಿಕ್ಕಿ ಹೊಡೆದು ಅದರ ಒಂದು ಭಾಗ ಮುರಿದು ಹೋಗಿದೆ. ಈ ವೇಳೆ ಅಲ್ಲಿದ್ದ ಪ್ರವಾಸಿಗರು ಆತಂಕದಿಂದ ಕಿರುಚಿದ್ದಾರೆ. ನಂತರ ಈ ಕಾರು ಎರಡು ಗಂಟೆಗಳ ಕಾಲ ಮೆಟ್ಟಿಲುಗಳ ಮೇಲೆಯೇ ಇತ್ತು ಎಂದು ಪ್ರತ್ಯಕ್ಷದರ್ಶಿಯೊಬ್ಬರು ತಿಳಿಸಿದ್ದಾರೆ .
ಘಟನೆಯಲ್ಲಿ ಯಾರಿಗೂ ಯಾವುದೇ ಗಾಯಗಳಾಗಿಲ್ಲ ಎಂದು ವರದಿಯಾಗಿದೆ. ಆದರೆ ಘಟನೆಯ ನಂತರ ನವೆಂಬರ್ 12 ಮತ್ತು 13 ರಂದು ಮೆಟ್ಟಿಲುಗಳನ್ನು ಪ್ರವಾಸಿಗರಿಗೆ ಮುಚ್ಚಲಾಗಿತ್ತು, ಆದರೆ ಲಿಫ್ಟ್ ಮೂಲಕ ಪರ್ಯಾಯ ವ್ಯವಸ್ಥೆ ಕಲ್ಪಿಸಲಾಗಿತ್ತು ಎಂದು ವರದಿಯಾಗಿದೆ. ಘಟನೆಗೆ ಚೆರಿ ಕಂಪನಿ ಗುರುವಾರ ಸಾರ್ವಜನಿಕವಾಗಿ ಕ್ಷಮೆಯಾಚಿಸಿದೆ. ಕಂಪನಿಯ ಪ್ರಕಾರ, ಸುರಕ್ಷತಾ ಹಗ್ಗದ ಆಂಕರ್ ಪಾಯಿಂಟ್‌ನಲ್ಲಿದ್ದ ಲೋಹದ ಸಂಕೋಲೆ ಅನಿರೀಕ್ಷಿತವಾಗಿ ಬೇರ್ಪಟ್ಟಿದ್ದರಿಂದ ಹಗ್ಗವು ವಾಹನದ ಬಲ ಹಿಂಭಾಗದ ಚಕ್ರದ ಸುತ್ತಲೂ ಸುತ್ತಿಕೊಂಡಿತು, ಇದು ವಿದ್ಯುತ್ ಪ್ರಸರಣವನ್ನು ಅಡ್ಡಿಪಡಿಸಿತು ಮತ್ತು ಜಾರುವಿಕೆಗೆ ಕಾರಣವಾಯಿತು ಎಂದು ಸಂಸ್ಥೆ ಹೇಳಿದೆ.
ಕ್ಷಮೆ ಯಾಚಿಸಿದ ಚೆರಿ:
ಘಟನೆಯಲ್ಲಿ ಅಪಾಯದ ಮೌಲ್ಯಮಾಪನ ಮತ್ತು ಯೋಜನೆಯಲ್ಲಿನ ನ್ಯೂನತೆಗಳ ಅರಿವಾಗಿದೆ. ನಾವು ಪ್ರಸಿದ್ಧ ಪ್ರವಾಸಿ ತಾಣವನ್ನು ಪರೀಕ್ಷಾ ಸ್ಥಳವಾಗಿ ಆಯ್ಕೆ ಮಾಡಿದ್ದಲ್ಲದೆ, ಸಂಭಾವ್ಯ ಅಪಾಯಗಳನ್ನು ಸಾಕಷ್ಟು ನಿರ್ಣಯಿಸುವಲ್ಲಿ ವಿಫಲರಾಗಿದ್ದೇವೆ ಮತ್ತು ವಿವರವಾದ ನಿಯಂತ್ರಣಗಳಲ್ಲಿ ನಿರ್ಲಕ್ಷ್ಯ ವಹಿಸಿದ್ದೇವೆ. ಘಟನೆಯಿಂದಾಗಿ ಹಾನಿಗೊಳಗಾದ ಸ್ಥಳವನ್ನು ಸಂಪೂರ್ಣವಾಗಿ ಪುನಃಸ್ಥಾಪಿಸುತ್ತೇವೆ. ಪರಿಹಾರವನ್ನು ನೀಡುತ್ತೇವೆ ಮತ್ತು ಭವಿಷ್ಯದ ಪರೀಕ್ಷೆಗಳಿಗೆ ಸುರಕ್ಷತಾ ಪ್ರೋಟೋಕಾಲ್‌ಗಳನ್ನು ಬಲಪಡಿಸುತ್ತೇವೆ ಎಂದು ಚೆರಿ ಹೇಳಿದೆ. ಘಟನೆಯಲ್ಲಿ ಉಂಟಾದ ಹಾನಿಗೆ ನಾವು ಸಾರ್ವಜನಿಕರಿಗೆ ಮತ್ತು ಟಿಯಾನ್ಮೆನ್ ಪರ್ವತ ಪ್ರದೇಶಕ್ಕೆ ಪ್ರಾಮಾಣಿಕವಾಗಿ ಕ್ಷಮೆಯಾಚಿಸುತ್ತೇವೆ ಎಂದು ಕಂಪನಿ ಹೇಳಿದೆ.
2018ರಲ್ಲಿ ಈ ಮೆಟ್ಟಿಲು ಏರಿ ಸಾಹಸ ಮಾಡಿದ್ದ ಜಾಗ್ವಾರ್ ಫಾರ್ಮುಲಾ ಇ ರೇಸಿಂಗ್ ತಂಡದ ಚಾಲಕ ತುಂಗ್ ಹೋ ಪಿನ್
ಇಲ್ಲಿ 2018ರಲ್ಲಿ ಜಾಗ್ವಾರ್ ಫಾರ್ಮುಲಾ ಇ ರೇಸಿಂಗ್ ತಂಡದ ಚಾಲಕ ತುಂಗ್ ಹೋ ಪಿನ್ ಅವರು 21 ನಿಮಿಷ 47 ಸೆಕೆಂಡುಗಳಲ್ಲಿ ನ್ಯೂ ರೇಂಜ್ ರೋವರ್ ಸ್ಪೋರ್ಟ್ ಕಾರಿನಲ್ಲಿ ಈ ಬೆಟ್ಟದ ಎಲ್ಲಾ 999 ಮೆಟ್ಟಿಲುಗಳನ್ನು ಹತ್ತಿದರು. ಲ್ಯಾಂಡ್ ರೋವರ್‌ನ ಈ ಸಾಧನೆಯನ್ನು ಡ್ರ್ಯಾಗನ್ ಚಾಲೆಂಜ್ ಎಂದು ಕರೆಯಲಾಯ್ತು. ಇದನ್ನೇ ಕಾಪಿ ಮಾಡುವುದಕ್ಕೆ ಹೋಗಿ ಈಗ ಚೆರಿ ಸಂಸ್ಥೆ ಎಡವಟ್ಟು ಮಾಡಿಕೊಂಡಿದೆ.
ಇದನ್ನೂ ಓದಿ: ಕೃಷಿ ಮೇಳದಲ್ಲಿ ರಾರಾಜಿಸಿದ ದೇಸಿ ಹಸುಗಳು: ಗಮನ ಸೆಳೆದ ಹಳ್ಳಿಕಾರ್, ದೇಸಿ ಗಿರ್, ಪುಂಗನೂರ್
ಇದನ್ನೂ ಓದಿ: ಕತ್ತೆ ಸಾಕಿ ಯಶಸ್ವಿಯಾದ ಉದ್ಯಮಿ: ಜಿಕೆವಿಕೆ ಕೃಷಿ ಮೇಳದಲ್ಲಿ ಕತ್ತೆ ಹಾಲಿನಿಂದ ತಯಾರಿಸಿದ ಸೋಪು ಪ್ರದರ್ಶನ