
ಓಲಾ ಎಲೆಕ್ಟ್ರಿಕ್ ಸ್ಕೂಟರ್ಗಳು ಮಾರುಕಟ್ಟೆಗೆ ಬಂದ ಮೇಲೆ ಒಂದಿಲ್ಲೊಂದು ಸಮಸ್ಯೆ, ಸವಾಲುಗಳನ್ನು ಎದುರಿಸುತ್ತಲೇ ಇದೆ. ಈಗ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಿರುವ ಎಸ್1 ಪ್ರೋ (S1 Pro) ದಲ್ಲಿನ ಪ್ಲಾಸ್ಟಿಕ್ ಸೈಡ್ ಸ್ಟ್ಯಾಂಡ್ ಸ್ಕೂಟರ್ನ ತೂಕವನ್ನು ತೆಗೆದುಕೊಳ್ಳುವಷ್ಟು ಗಟ್ಟಿಮುಟ್ಟಾಗಿಲ್ಲ ಎಂಬ ಟೀಕೆಗಳು ಕೇಳಿಬಂದಿವೆ. ಓಲಾ ಎಸ್1 ಪ್ರೋ (Ola S1 Pro) ನ ಸೈಡ್ ಸ್ಟ್ಯಾಂಡ್ ಕೇವಲ 3 ತಿಂಗಳಲ್ಲಿ ಮುರಿದುಹೋಗಿರುವ ವಿಡಿಯೋ ವೈರಲ್ ಆಗಿದೆ.
ಈ ವಿಡಿಯೋದಲ್ಲಿ ಸ್ಕೂಟರ್ ಅನ್ನು ಗೀರುಗಳಿಂದ ರಕ್ಷಿಸಲು ರಟ್ಟಿನ ತುಂಡಿನ ಮೇಲೆ ಮಲಗಿಸಿರುವುದನ್ನು ನೋಡಬಹುದು. ಸೈಡ್ ಸ್ಟ್ಯಾಂಡ್ ಪ್ಲಾಸ್ಟಿಕ್ನಿಂದ ಮಾಡಲ್ಪಟ್ಟಿದೆ ಮತ್ತು ಅದು ಮುರಿದುಹೋಗಿದೆ ಎಂಬುದು ವಿಡಿಯೋದಲ್ಲಿ ಸ್ಪಷ್ಟವಾಗಿ ಗೋಚರಿಸುತ್ತದೆ. ಆಗ ಸ್ಕೂಟರ್ ಮಾಲೀಕರು ಓಲಾ ರಸ್ತೆ ಬದಿಯ ಸಹಾಯಕ್ಕೆ ಕರೆ ಮಾಡಿದ್ದರು. ಆದರೆ, ನೆರವಿನ ಟ್ರಕ್ ಅವರ ಸ್ಥಳಕ್ಕೆ ತಲುಪಲು 3 ಗಂಟೆ ತೆಗೆದುಕೊಂಡಿತು. ಜೊತೆಗೆ, ಸೈಡ್ ಸ್ಟ್ಯಾಂಡ್ ಸರಿಪಡಿಸಲು 3 ದಿನಗಳು ಬೇಕಾಗುತ್ತದೆ ಎಂದು ಸಿಬ್ಬಂದಿ ಹೇಳಿದ್ದಾರೆ.
ಓಲಾ ಎಲೆಕ್ಟ್ರಿಕ್ ಸ್ಕೂಟರ್ ರಿವರ್ಸಗೇರ್ ಎಡವಟ್ಟು, ವೃದ್ಧನ ತಲೆಗೆ 10 ಹೊಲಿಗೆ!
ಓಲಾ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಮೊದಲ ಬಾರಿಗೆ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿದಾಗಿನಿಂದ ಅದರ ನಿರ್ಮಾಣ ಗುಣಮಟ್ಟಕ್ಕೆ ಸಂಬಂಧಿಸಿದಂತೆ ಸಾಕಷ್ಟು ಹಿನ್ನಡೆಯನ್ನು ಎದುರಿಸುತ್ತಿದೆ. ಸ್ಕೂಟರ್ನ ಪ್ಯಾನಲ್ ಅಂತರಗಳು ಸಮನಾಗಿಲ್ಲ ಎಂಬ ಆರೋಪ ಕೇಳಿಬಂದಿತ್ತು. ಆರಂಭದಲ್ಲಿ, ಕೆಲವು ಗ್ರಾಹಕರು ಕೆಲವು ಸ್ಕ್ರ್ಯಾಚ್ಗಳಿರುವ ಸ್ಕೂಟರ್ಗಳನ್ನು ಸಹ ಪಡೆದಿದ್ದರು. ಇದಲ್ಲದೆ, ಕೆಲವು ಬಳಕೆದಾರರು ತಮ್ಮ ಸ್ಕೂಟರ್ ಹಠಾತ್ ಆಫ್ ಆಗುತ್ತದೆ. ಫಾರ್ವರ್ಡ್ ಮೋಡ್ನಲ್ಲಿದ್ದರೂ ಸ್ಕೂಟರ್ ಹಿಮ್ಮುಖ ದಿಕ್ಕಿನಲ್ಲಿ ಹೋಗುತ್ತದೆ ಎಂಬ ದೂರುಗಳನ್ನು ಸಲ್ಲಿಸಿದ್ದಾರೆ. ಕಂಪನಿ ಗ್ರಾಹಕ ಸೇವೆಯ ಬಗ್ಗೆ ಕೂಡ ಹಲವು ಟೀಕೆಗಳನ್ನು ಎದುರಿಸಿದೆ.
ಸ್ಕೂಟರ್‌ನ ಇತ್ತೀಚಿನ ಸಮಸ್ಯೆಯೆಂದರೆ ಮುಂಭಾಗದ ಸಸ್ಪೆನ್ಷನ್ ಬ್ರೇಕಿಂಗ್. ಈ ಸಮಸ್ಯೆಯನ್ನು ಎದುರಿಸಿದ ಕೆಲವು ಮಾಲೀಕರು ಕಡಿಮೆ ವೇಗದಲ್ಲಿ ಸವಾರಿ ಮಾಡುವಾಗ ಬ್ರೇಕಿಂಗ್ ಮುರಿದುಹೋಗಿದೆ ಎಂದು ವರದಿ ಮಾಡಿದ್ದಾರೆ. ದ್ವಿಚಕ್ರ ವಾಹನದ ಸಸ್ಪೆನ್ಷನ್ ಈ ರೀತಿ ಒಡೆಯುವುದು ಬಹಳ ಅಪರೂಪ. ಚಿತ್ರಗಳಲ್ಲಿ, ಮುಂಭಾಗದ ಟೈರ್ ಮತ್ತು ಚಕ್ರವು ದೇಹದ ಉಳಿದ ಭಾಗಗಳಿಂದ ಬೇರ್ಪಟ್ಟಿರುವುದನ್ನು ನಾವು ನೋಡಬಹುದು. ಹೆಚ್ಚಿನ ವೇಗದಲ್ಲಿ ಸವಾರಿ ಮಾಡುವಾಗ ಈ ರೀತಿಯ ಏನಾದರೂ ಸಂಭವಿಸಿದರೆ ಇದು ತುಂಬಾ ಅಪಾಯಕಾರಿಯಾಗಲಿದೆ.
ಓಲಾ ಸ್ಕೂಟರ್ ಬಗ್ಗೆ ಅಸಮಾಧಾನ: ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಮಾಲೀಕ
ಈ ಬಗ್ಗೆ ಓಲಾ ಅಧಿಕೃತ ಹೇಳಿಕೆ ಬಿಡುಗಡೆ ಮಾಡಿದ್ದು, “ಓಲಾ ವಾಹನ ಸುರಕ್ಷತೆ ಮತ್ತು ಗುಣಮಟ್ಟದ ಮಾನದಂಡಗಳಿಗೆ ಅತ್ಯುನ್ನತ ಪ್ರಾಮುಖ್ಯತೆ ನೀಡಿದೆ. ಓಲಾ ಇಂದು ರಸ್ತೆಯಲ್ಲಿ 50,000 ಕ್ಕೂ ಹೆಚ್ಚು ಸ್ಕೂಟರ್ಗಳನ್ನು ಹೊಂದಿದೆ. ಇಲ್ಲಿಯವರೆಗೆ, ನಮ್ಮ ಸ್ಕೂಟರ್ಗಳು ಭಾರತೀಯ ರಸ್ತೆಗಳಲ್ಲಿ 45 ಮಿಲಿಯನ್ ಕಿ.ಮೀ ಚಲಿಸಿದೆ. ಇತ್ತೀಚೆಗೆ ವರದಿಯಾದ ಮುಂಭಾಗದ ಫೋರ್ಕ್ ಒಡೆಯುವಿಕೆಯ ಘಟನೆಗಳು ಪ್ರತ್ಯೇಕವಾದ ಅಪಘಾತಗಳಿಂದ ಉಂಟಾಗಿದೆ. ಕಂಪನಿಯ ಎಲ್ಲಾ ಸ್ಕೂಟರ್ಗಳು ಭಾರತದಲ್ಲಿನ ವಿವಿಧ ಭೂಪ್ರದೇಶಗಳು ಮತ್ತು ಸವಾರಿ ಪರಿಸ್ಥಿತಿಗಳಲ್ಲಿ ಕಠಿಣ ಗುಣಮಟ್ಟ ಮತ್ತು ಕಾರ್ಯಕ್ಷಮತೆಯ ಮೌಲ್ಯಮಾಪನಕ್ಕೆ ಒಳಗಾಗಿವೆ” ಎಂದು ಸ್ಪಷ್ಟನೆ ನೀಡಿದೆ.
ಈ ಹಿಂದೆ, ಎಲೆಕ್ಟ್ರಿಕ್ ಸ್ಕೂಟರ್ಗಳಲ್ಲಿ ಬೆಂಕಿ ಕಾಣಿಸಿಕೊಂಡಾಗ, ಅದರ ಹಿಂದಿನ ಕಾರಣವನ್ನು ಕಂಡುಹಿಡಿಯಲು ಸರ್ಕಾರ ತನಿಖೆಗೆ ಆದೇಶಿಸಿದೆ. ಈ ಸಂಬಂಧ ಓಲ ಸೇರಿದಂತೆ ಪ್ರತಿ ತಯಾರಕರಿಂದ ಸ್ಕೂಟರ್ ಮಾದರಿಗಳನ್ನು ತೆಗೆದುಕೊಂಡಿತು.
ಆರಂಭಿಕ ಸಂಶೋಧನೆಗಳು ಓಲಾ ಎಲೆಕ್ಟ್ರಿಕ್ನ ಬ್ಯಾಟರಿ ಸೆಲ್ಗಳು ಮತ್ತು ಬ್ಯಾಟರಿ ನಿರ್ವಹಣಾ ವ್ಯವಸ್ಥೆಯು ದೋಷಪೂರಿತವಾಗಿದೆ ಎಂದು ಹೇಳಿದೆ. ಮತ್ತೊಂದು ವರದಿಯು ವೆಚ್ಚವನ್ನು ಕಡಿತಗೊಳಿಸಲು ತಯಾರಕರು ಕಡಿಮೆ-ದರ್ಜೆಯ ವಸ್ತುಗಳನ್ನು ಪಡೆಯುತ್ತಿದ್ದಾರೆ ಎಂದು ಕೂಡ ಆರೋಪಿಸಿದೆ. ಇಂತಹ ಕಡಿಮೆ-ದರ್ಜೆಯ ವಸ್ತುಗಳನ್ನು ಬಳಸುತ್ತಿರುವ ಕಂಪನಿಗಳನ್ನು ಸರ್ಕಾರ ವಿಚಾರಣೆ ನಡೆಸುತ್ತಿದೆ.