ಜಪಾನಿನ ವಾಹನ ತಯಾರಕರು ಭಾರತದಲ್ಲಿ ಇವಿ ಸ್ಥಾವರ ಮತ್ತು ಉತ್ಪಾದನೆಗಾಗಿ ಸುಮಾರು 104 ಶತಕೋಟಿ ರೂ. ಹೂಡಿಕೆ ಮಾಡಲಿದೆ.
Auto Desk: ಎಲೆಕ್ಟ್ರಿಕ್ ವಾಹನಗಳು (ಇವಿ-EV) ಮತ್ತು ಬ್ಯಾಟರಿಗಳನ್ನು ತಯಾರಿಸಲು ಗುಜರಾತ್ನಲ್ಲಿ ಹೊಸ ಕಾರ್ಖಾನೆಯನ್ನು ನಿರ್ಮಿಸುವುದಾಗಿ ಸುಜುಕಿ ಮೋಟಾರ್ ಭಾನುವಾರ ತಿಳಿಸಿದೆ, ಜಪಾನಿನ ವಾಹನ ತಯಾರಕ ಭಾರತದಲ್ಲಿ ಇವಿ ಸ್ಥಾವರ ಮತ್ತು ಉತ್ಪಾದನೆಗಾಗಿ ಸುಮಾರು 104 ಶತಕೋಟಿ ರೂ. ಹೂಡಿಕೆ ಮಾಡಲಿದೆ. ಭಾರತದ ಅತಿದೊಡ್ಡ ಕಾರು ತಯಾರಕ ಮಾರುತಿ ಸುಜುಕಿ (Maruti Suzuki) ಪೋಷಕ ಸಂಸ್ಥೆಯಾಗಿರುವ ಸುಜುಕಿ (Suzuki),ದೇಶದಲ್ಲಿ ಪ್ರತಿ ಎರಡು ಕಾರುಗಳಲ್ಲಿ ಒಂದನ್ನು ಮಾರಾಟ ಮಾಡುತ್ತದೆ.
ಈ ಹಿಂದೆ ಇವಿ (EV) ಮಾರುಕಟ್ಟೆಯತ್ತ ಅಷ್ಟೇನು ಗಮನ ಹರಿಸದ ಮಾರುತಿ ಸುಜುಕಿ, ಭಾರತೀಯ ಮಾರುಕಟ್ಟೆ ಇವಿಗೆ ಸಿದ್ಧವಾಗಿಲ್ಲ ಎಂದು ಸಮರ್ಥಿಸಿಕೊಂಡಿತ್ತು. ಇದರ ಪ್ರತಿಸ್ಪರ್ಧಿಗಳಾದ ಹ್ಯುಂಡೈ (Hyundai) ಮತ್ತು ಟಾಟಾ ಮೋಟಾರ್ಸ್(Tata Motors) ಎಲೆಕ್ಟ್ರಿಕ್ ವಾಹನಗಳ ಬಿಡುಗಡೆಯನ್ನು ಘೋಷಿಸಿವೆ. 2021ರಲ್ಲಿ ಭಾರತದಲ್ಲಿ ಕೊರೋನವೈರಸ್ ಸಾಂಕ್ರಾಮಿಕದ ನಡುವೆಯೂ ನಾಲ್ಕು ಚಕ್ರಗಳ ಇವಿಗಳ ಮಾರಾಟ ಏರಿಕೆಯಾಗಿದೆ.
ಇದನ್ನೂ ಓದಿ: ಸುಜುಕಿ ಇಂಡಿಯಾ ಮೈಲಿಗಲ್ಲು; 10 ಲಕ್ಷ ಸಿಎನ್‌ಜಿ ಕಾರು ಮಾರಾಟ
ಈ ವಿಭಾಗವು ಕಳೆದ ಹಣಕಾಸು ವರ್ಷದಲ್ಲಿ 5,500-6,000 ವಾಹನಗಳ ಮಾರಾಟವನ್ನು ವರದಿ ಮಾಡಿದೆ ಮತ್ತು 2020ಕ್ಕೆ ಹೋಲಿಸಿದರೆ ಈ ವಿಭಾಗವು 3,400 ವಾಹನಗಳಷ್ಟು ಹೆಚ್ಚಿನ ಮಾರಾಟ ವರದಿ ಮಾಡಿದೆ. ಇದರರ್ಥ ಒಟ್ಟು ಮಾರಾಟ ಶೇ.60-75ರಷ್ಟು ಏರಿಕೆಯಾಗಿದೆ.
ಟೊಯೊಟಾದೊಂದಿಗಿನ ಜಾಗತಿಕ ಒಪ್ಪಂದದ ಮೂಲಕ ಸುಜುಕಿ, ನಾನ್-ಐಸಿ ಎಂಜಿನ್ ವಾಹನ ಮಾರುಕಟ್ಟೆ ಪ್ರವೇಶಿಸಲು ಸಜ್ಜಾಗುತ್ತಿದೆ ಮತ್ತು ಭಾರತವು ಈ ಯೋಜನೆಯ ಪ್ರಮುಖ ಭಾಗವಾಗಲಿದೆ. ಸುಜುಕಿ ಮೋಟಾರ್ ಕಾರ್ಪೊರೇಷನ್ (ಮಾರುತಿ ಸುಜುಕಿ) ಮತ್ತು ಟೊಯೊಟಾ ಮೋಟಾರ್ ಕಾರ್ಪೊರೇಷನ್ (ಟೊಯೊಟಾ ಕಿರ್ಲೋಸ್ಕರ್ ಮೋಟಾರ್ಸ್) ಭಾರತೀಯ ಅಂಗಸಂಸ್ಥೆಗಳು ಸಾಮೂಹಿಕ ಇವಿ ಉತ್ಪನ್ನದಲ್ಲಿ ಕಾರ್ಯನಿರ್ವಹಿಸುತ್ತಿವೆ, ಇದನ್ನು ಭಾರತದಲ್ಲಿ ಮಾರಾಟ ಮಾಡಲಾಗುವುದು ಮತ್ತು ಯುರೋಪಿಯನ್ ಮತ್ತು ದಕ್ಷಿಣ ಏಷ್ಯಾದ ದೇಶಗಳಿಗೆ ರಫ್ತು ಮಾಡಲಾಗುವುದು ಎಂದು ಮೂಲಗಳು ತಿಳಿಸಿವೆ.
ಭಾರತೀಯ ಮಾರುಕಟ್ಟೆಗಾಗಿಯೇ ಒಟ್ಟು ಮೊತ್ತವನ್ನು ಹೂಡಿಕೆ ಮಾಡುವುದು ಸಮರ್ಥನೀಯವಲ್ಲ. ಏಕೆಂದರೆ EV ಗಳಿಗೆ ದೇಶೀಯ ಮಾರುಕಟ್ಟೆಯು ಎಷ್ಟು ಬೆಳೆಯುತ್ತದೆ ಎಂಬ ಅನುಮಾನಗಳು ಇನ್ನೂ ಇವೆ. ಆದ್ದರಿಂದ ರಫ್ತಿಗಾಗಿಯೂ ನಿರ್ದಿಷ್ಟ ಪ್ರಮಾಣದ ವಾಹನಗಳನ್ನು ತಯಾರಿಸಬೇಕು ಎಂದು ಕಂಪನಿ ಹೇಳಿದೆ.
ಇದನ್ನೂ ಓದಿ: ಬಂದಿದೆ 8 ಆಸನಗಳ ಮಾರುತಿ 800: ಹೀಗೊಂದು ವಿಚಿತ್ರ ಮಾಡಿಫಿಕೇಷನ್!
"ಸಣ್ಣ ಕಾರುಗಳೊಂದಿಗೆ ಇಂಗಾಲದ ತಟಸ್ಥತೆಯನ್ನು ಸಾಧಿಸುವುದು ಸುಜುಕಿಯ ಭವಿಷ್ಯದ ಉದ್ದೇಶವಾಗಿದೆ" ಎಂದು ಸುಜುಕಿ ಮೋಟಾರ್ ಕಾರ್ಪೊರೇಷನ್ ಅಧ್ಯಕ್ಷ ತೋಶಿರಿ ಸುಜುಕಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಮಾರುತಿಗೆ ಸರಬರಾಜು ಮಾಡುವ ಸುಜುಕಿ ಮೋಟಾರ್ ಕಾರ್ಪೊರೇಶನ್ನ 100 ಪ್ರತಿಶತ ಅಂಗಸಂಸ್ಥೆಯಾದ ಸುಜುಕಿ ಮೋಟಾರ್ ಗುಜರಾತ್ (SMG) ಒಡೆತನದ ಸುಜುಕಿ ಕಾರ್ಖಾನೆಯ ಬಳಿ ಬ್ಯಾಟರಿ ಘಟಕವನ್ನು ಸ್ಥಾಪಿಸಲಾಗುವುದು. ವಾರ್ಷಿಕ ಉತ್ಪಾದನೆಯನ್ನು 7.50 ಲಕ್ಷ ಯೂನಿಟ್ಗಳಿಗೆ ಹೆಚ್ಚಿಸಲು ಇದು ಇತ್ತೀಚೆಗೆ ಹೊಸ ಉತ್ಪಾದನೆಯನ್ನು ಆರಂಭಿಸಿತ್ತು.
2021 ರಿಂದ 2025 ರವರೆಗೆ, ಸುಜುಕಿ ಸಂಶೋಧನೆ ಮತ್ತು ಅಭಿವೃದ್ಧಿ ಮತ್ತು ಬಂಡವಾಳ ಹೂಡಿಕೆಯಲ್ಲಿ ಒಟ್ಟು 2.2 ಟ್ರಿಲಿಯನ್ ಯೆನ್ ಅನ್ನು ಖರ್ಚು ಮಾಡಲು ಉದ್ದೇಶಿಸಿದೆ. ಒಟ್ಟಾರೆಯಾಗಿ, ಸುಮಾರು 1 ಟ್ರಿಲಿಯನ್ ಯೆನ್ ಸಂಶೋಧನೆ ಮತ್ತು ಅಭಿವೃದ್ಧಿ (R&D)ಗಾಗಿ ಹೋಗುತ್ತದೆ, ಅದರಲ್ಲಿ ಹೆಚ್ಚಿನ ಮೊತ್ತವನ್ನು EV ಗಳ ಅಭಿವೃದ್ಧಿಗೆ ಮೀಸಲಿಡಲಾಗುತ್ತದೆ.
ಸುಜುಕಿ 2025 ರ ಆರಂಭದಲ್ಲಿ ಜಪಾನ್ ಮತ್ತು ಭಾರತ ಎರಡರಲ್ಲೂ ಕೈಗೆಟುಕುವ ಬೆಲೆಯ EV ಮಾದರಿಗಳನ್ನು ಹೊರತರುವ ಯೋಜನೆ ಹೊಂದಿದೆ. ಜಪಾನ್ ಪ್ರಧಾನಿ ಫ್ಯೂಮಿಯೊ ಕಿಶಿಡಾ ಅವರು ಶನಿವಾರ ಭಾರತಕ್ಕೆ ಭೇಟಿ ನೀಡಿದ್ದು, ಭಾರತದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿದ್ದಾರೆ. ಈ ಪ್ರವಾಸ ವೇಳೆ ಇವಿ ವಲಯದ ಹೂಡಿಕೆ ಕುರಿತು ಚರ್ಚೆ ನಡೆಸಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.