ಹೋಂಡಾದ ಮೊದಲ ಮೇಡ್-ಇನ್-ಇಂಡಿಯಾ ಎಲೆಕ್ಟ್ರಿಕ್ SUV ಹೊಸ ಟೀಸರ್ ರಿಲೀಸ್‌: ಡಿ.2ಕ್ಕೆ ಮಾರುಕಟ್ಟೆಗೆ ಎಂಟ್ರಿ

Published : Nov 27, 2026, 07:38 PM IST
Honda First Made in India Electric SUV ALPHA Teaser

ಸಾರಾಂಶ

ಹೋಂಡಾ ಕಂಪನಿಯು ತನ್ನ ಹೊಸ ಮೇಡ್-ಇನ್-ಇಂಡಿಯಾ ಎಲೆಕ್ಟ್ರಿಕ್ ಎಸ್‌ಯುವಿ 'ಆಲ್ಫಾ'ದ ಟೀಸರ್‌ ಬಿಡುಗಡೆ ಮಾಡಿದ್ದು, ಡಿಸೆಂಬರ್ 2 ರಂದು ಇದರ ಜಾಗತಿಕ ಅನಾವರಣ ನಡೆಯಲಿದೆ. ರಾಜಸ್ಥಾನದಲ್ಲಿ ಉತ್ಪಾದನೆಯಾಗುವ ಈ ಕಾರು ದೇಶ-ವಿದೇಶಗಳಲ್ಲಿ ಮಾರಾಟವಾಗಲಿದ್ದು, ಗ್ರಾಹಕರಲ್ಲಿ ಭಾರಿ ಕುತೂಹಲ ಮೂಡಿಸಿದೆ.

ಬೆಂಗಳೂರು (ನ.27): ಹೋಂಡಾ (Honda) ಕಂಪನಿಯು ತನ್ನ ಹೊಸ ಎಲೆಕ್ಟ್ರಿಕ್ ಎಸ್‌ಯುವಿ 'ಆಲ್ಫಾ'ದ (ALPHA) ಟೀಸರ್ ಬಿಡುಗಡೆ ಮಾಡಿದೆ. ಮೇಡ್-ಇನ್-ಇಂಡಿಯಾ ಆದ ಈ ಎಸ್‌ಯುವಿಯ ಜಾಗತಿಕ ಅನಾವರಣವು (Global debut) ಡಿಸೆಂಬರ್ 2ರಂದು ನಡೆಯಲಿದ್ದು, ರಾಜಸ್ಥಾನದಲ್ಲಿ ಇದರ ಉತ್ಪಾದನೆ ನಡೆಯಲಿದೆ. ದೇಶೀಯ ಹಾಗೂ ವಿದೇಶಿ ಮಾರುಕಟ್ಟೆಗಳಲ್ಲಿ ಈ ಕಾರನ್ನು ಮಾರಾಟ ಮಾಡಲಾಗುತ್ತದೆ.

ಹೋಂಡಾದ ಮುಂಬರುವ ಎಲೆಕ್ಟ್ರಿಕ್ ಎಸ್‌ಯುವಿ 'ಆಲ್ಫಾ' (ALPHA) ಕುರಿತು ಜನರಲ್ಲಿ ಕುತೂಹಲ ಹೆಚ್ಚಾಗುತ್ತಿದೆ. ಜಾಗತಿಕ ಮಟ್ಟದಲ್ಲಿ ಪರಿಚಯಿಸುವುದಕ್ಕೆ ಮುನ್ನ ಕಂಪನಿಯು ಹೊಸ ಟೀಸರ್ ಅನ್ನು ಬಿಡುಗಡೆ ಮಾಡಿದ್ದು, ಈ ಬಾರಿಯ ಟೀಸರ್‌ನಲ್ಲಿ ವಾಹನದ ಪ್ರೊಡಕ್ಷನ್ ಮಾದರಿಯ ತುಸು ಝಲಕ್ ಕಾಣಿಸಿಕೊಂಡಿದೆ. ಆದರೆ, ಎಸ್‌ಯುವಿಯ ಮುಂಭಾಗವು ಇನ್ನೂ ಬಿಳಿ ಬಟ್ಟೆಯಿಂದ ಮುಚ್ಚಲ್ಪಟ್ಟಿದೆ. ಡಿಸೆಂಬರ್ 2 ರಂದು ಹೋಂಡಾ ಕಂಪನಿಯು ಈ ಎಲೆಕ್ಟ್ರಿಕ್ ಎಸ್‌ಯುವಿಯನ್ನು ಅನಾವರಣಗೊಳಿಸಲಿದೆ.

ಹೊಸ ಟೀಸರ್‌ನಲ್ಲಿ ವಾಹನದ ಫ್ರಂಟ್ ಲೈಟಿಂಗ್, ಬಂಪರ್ ಮತ್ತು ಗ್ರಿಲ್‌ನ ಕೆಲವು ಭಾಗಗಳು ಗೋಚರಿಸಿವೆ. ಇದರ ಜೊತೆಗೆ ನಂಬರ್ ಪ್ಲೇಟ್ ಮೇಲೆ 'ALPHA' ಎಂಬ ಹೆಸರೂ ಕಾಣಿಸಿಕೊಂಡಿದೆ. ಆದರೆ, ಇದರ ಎಂಜಿನ್ (ಮೋಟಾರ್), ಬ್ಯಾಟರಿ ಅಥವಾ ರೇಂಜ್ ಕುರಿತು ಕಂಪನಿಯು ಸದ್ಯಕ್ಕೆ ಯಾವುದೇ ಮಾಹಿತಿ ನೀಡಿಲ್ಲ.

ಹೋಂಡಾ 'ಆಲ್ಫಾ' ವಿನ್ಯಾಸ ಮತ್ತು ಒಳಾಂಗಣದ ನಿರೀಕ್ಷೆಗಳು

ಈ ಹಿಂದೆಯೇ ಹೋಂಡಾ ಕಂಪನಿಯು ಈ ಎಸ್‌ಯುವಿಯ ಹೊರಭಾಗ (Exterior) ಮತ್ತು ಒಳಾಂಗಣ (Interior) ವಿನ್ಯಾಸದ ಸ್ಕೆಚ್‌ಗಳನ್ನು ಬಿಡುಗಡೆ ಮಾಡಿತ್ತು. ಆ ಚಿತ್ರಗಳಲ್ಲಿ ಕಾರಿನ ನೋಟವು ಸಾಕಷ್ಟು ಆಧುನಿಕವಾಗಿ ಮತ್ತು ವಿಭಿನ್ನವಾಗಿ ಕಾಣಿಸಿಕೊಂಡಿತ್ತು. ವಿಶೇಷ ವಿನ್ಯಾಸದ ಲೈಟ್‌ಗಳು, ಉಬ್ಬಿರುವ ಬಾಡಿ ರಚನೆ (Sculpted body) ಹಾಗೂ ಗಟ್ಟಿಮುಟ್ಟಾದ ಎಸ್‌ಯುವಿ ಆಕಾರ ಗಮನಸೆಳೆದಿತ್ತು. ಇದರ ಕ್ಯಾಬಿನ್ ಅನ್ನು ಕೂಡ ಹೊಸ ಕಾಲದ ತಂತ್ರಜ್ಞಾನಕ್ಕೆ ತಕ್ಕಂತೆ ಸಿದ್ಧಪಡಿಸುವ ಸಾಧ್ಯತೆಯಿದೆ. ದೊಡ್ಡ ಇನ್ಫೋಟೈನ್‌ಮೆಂಟ್ ಡಿಸ್‌ಪ್ಲೇ ಮತ್ತು ಹೊಸ ವಿನ್ಯಾಸದ ಡ್ಯಾಶ್‌ಬೋರ್ಡ್ ಸಿಗುವ ನಿರೀಕ್ಷೆಯಿದೆ. ಆದರೆ, ಕ್ಯಾಬಿನ್‌ನ ಎಲ್ಲಾ ಫೀಚರ್‌ಗಳ ಮಾಹಿತಿಯನ್ನು ಕಂಪನಿ ಇನ್ನೂ ಹಂಚಿಕೊಂಡಿಲ್ಲ.

ಭಾರತದಲ್ಲೇ ತಯಾರಾಗಲಿರುವ ಹೋಂಡಾದ ಮೊದಲ ಜಾಗತಿಕ ಎಲೆಕ್ಟ್ರಿಕ್ SUV

ಹೋಂಡಾ 'ಆಲ್ಫಾ'ವನ್ನು ಮೊದಲು 2025ರಲ್ಲಿ ಜಪಾನ್ ಮೊಬಿಲಿಟಿ ಶೋ (Japan Mobility Show) ವೇಳೆ '0 Alpha' ಕಾನ್ಸೆಪ್ಟ್ ರೂಪದಲ್ಲಿ ಪ್ರದರ್ಶಿಸಲಾಗಿತ್ತು. ಇದೀಗ ಇದರ ಪ್ರೊಡಕ್ಷನ್ ಮಾದರಿಯನ್ನು ಸಿದ್ಧಪಡಿಸಲಾಗುತ್ತಿದೆ. ಭಾರತದಲ್ಲಿ ತಯಾರಾಗಿ ವಿಶ್ವದಾದ್ಯಂತದ ಮಾರುಕಟ್ಟೆಗಳಲ್ಲಿ ಮಾರಾಟವಾಗಲಿರುವ ಹೋಂಡಾದ ಮೊದಲ ಎಲೆಕ್ಟ್ರಿಕ್ ಎಸ್‌ಯುವಿ ಇದಾಗಿದೆ. ಈ ಎಸ್‌ಯುವಿಯ ಉತ್ಪಾದನಾ ಕೇಂದ್ರವಾಗಿ ಕಂಪನಿಯು ಭಾರತವನ್ನು ಆಯ್ಕೆ ಮಾಡಿಕೊಂಡಿದೆ. ರಾಜಸ್ಥಾನದ ಟಪೂಕರದಲ್ಲಿರುವ (Tapukara) ಹೋಂಡಾ ಕಾರ್ಖಾನೆಯಲ್ಲಿ ಇದರ ನಿರ್ಮಾಣ ಕಾರ್ಯ ನಡೆಯುವ ನಿರೀಕ್ಷೆಯಿದೆ. ಇಲ್ಲಿ ತಯಾರಾಗುವ ವಾಹನಗಳನ್ನು ಭಾರತೀಯ ಗ್ರಾಹಕರಿಗೆ ಮಾತ್ರವಲ್ಲದೆ, ಇತರ ದೇಶಗಳ ಮಾರುಕಟ್ಟೆಗಳಿಗೂ ರವಾನಿಸಲಾಗುವುದು. ಹೋಂಡಾ ಪಾಲಿಗೆ ಈ ಎಸ್‌ಯುವಿ ಅತ್ಯಂತ ಮಹತ್ವದ್ದಾಗಿದೆ. ಎಲೆಕ್ಟ್ರಿಕ್ ವಾಹನಗಳ ವ್ಯವಹಾರದಲ್ಲಿ ತನ್ನ ಉಪಸ್ಥಿತಿಯನ್ನು ವಿಸ್ತರಿಸಲು ಹಾಗೂ ಭಾರತೀಯ ಮಾರುಕಟ್ಟೆಯಲ್ಲೂ ತನ್ನ ಹಿಡಿತವನ್ನು ಬಲಪಡಿಸಲು ಕಂಪನಿ ಸಜ್ಜಾಗುತ್ತಿದೆ.

ಬ್ಯಾಟರಿ ಮತ್ತು ರೇಂಜ್ ವಿವರಗಳಿಗೆ ಕಾಯುತ್ತಿರುವ ಗ್ರಾಹಕರು

'ಆಲ್ಫಾ' ಮಾದರಿಯ ತಾಂತ್ರಿಕ ಮತ್ತು ಮಾರುಕಟ್ಟೆ ವಿವರಗಳನ್ನು ಕಂಪನಿ ಇನ್ನೂ ಪ್ರಕಟಿಸಿಲ್ಲ. ಹೋಂಡಾ ಕಂಪನಿಯು ಇದುವರೆಗೆ 'ಆಲ್ಫಾ'ದ ಬ್ಯಾಟರಿ ಸಾಮರ್ಥ್ಯ, ಎಲೆಕ್ಟ್ರಿಕ್ ಮೋಟಾರ್, ಡ್ರೈವಿಂಗ್ ರೇಂಜ್ ಮತ್ತು ಚಾರ್ಜಿಂಗ್ ವೇಗವನ್ನು ಬಹಿರಂಗಪಡಿಸಿಲ್ಲ. ಇದರ ಬೆಲೆ ಹಾಗೂ ಭಾರತದಲ್ಲಿ ಮಾರಾಟ ಆರಂಭವಾಗುವ ದಿನಾಂಕವೂ ಇನ್ನೂ ಹೊರಬಿದ್ದಿಲ್ಲ. ಡಿಸೆಂಬರ್ 2ರಂದು ನಡೆಯಲಿರುವ ಜಾಗತಿಕ ಅನಾವರಣದ ವೇಳೆ ಕಂಪನಿ ಈ ಮಾಹಿತಿಗಳಿಂದ ಪರದೆ ಸರಿಸಬಹುದು ಎಂಬ ನಿರೀಕ್ಷೆಯಿದ್ದು, ಅದಾದ ಬಳಿಕವೇ ಹೋಂಡಾದ ಈ ಹೊಸ ಎಲೆಕ್ಟ್ರಿಕ್ ಎಸ್‌ಯುವಿ ಯಾವೆಲ್ಲಾ ವಿಶೇಷತೆಗಳೊಂದಿಗೆ ಮಾರುಕಟ್ಟೆಗೆ ಬರಲಿದೆ ಎಂಬುದು ತಿಳಿಯಲಿದೆ.

PREV
Read more Articles on
click me!

Recommended Stories

ಎಲೆಕ್ಟ್ರಿಕ್ ಅವತಾರದಲ್ಲಿ ಬರುತ್ತಿದೆ ಮಾರುತಿ ಇಗ್ನಿಸ್ ಕಾರು, 310KM ಮೈಲೇಜ್, 25 ನಿಮಿಷದಲ್ಲಿ ಚಾರ್ಜ್
ಹ್ಯುಂಡೈನ ಜನಪ್ರಿಯ SUVಗೆ ಸಿಗಲಿದೆ ಹೊಸ ಸ್ಪೋರ್ಟಿ ಲುಕ್: ಮೊದಲ ಬಾರಿಗೆ ಟೆಸ್ಟಿಂಗ್ ವೇಳೆ ಕಾಣಿಸಿಕೊಂಡ ಹೊಸ ಕ್ರೆಟಾ ಎನ್ ಲೈನ್