Auto Desk: ದೇಶದಲ್ಲಿ ವಾಹನ ಚಾಲಕರು ಹಾಗೂ ಪ್ರಯಾಣಿಕರ ಸುರಕ್ಷತೆಯನ್ನು ಖಾತ್ರಿಪಡಿಸಲು ಕೇಂದ್ರ ಸರ್ಕಾರ ಕಾಲಕಾಲಕ್ಕೆ ಹೊಸ ನಿಯಮಗಳನ್ನು ಜಾರಿ ತರುತ್ತಲೇ ಇದೆ. ಇತ್ತೀಚೆಗಷ್ಟೇ ಕಾರುಗಳಲ್ಲಿ ಆರು ಏರ್ಬ್ಯಾಗ್ಗಳನ್ನು (Airbags) ಕಡ್ಡಾಯಗೊಳಿಸಿ ಕೇಂದ್ರ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ (MoRTH) ಆದೇಶ ಹೊರಡಿಸಿತ್ತು.ಈಗ ಮತ್ತೊಮ್ಮೆ ಸರ್ಕಾರ ಒಂದು ಹೊಸ ನಿಯಮ ತರಲಿದ್ದು, ಶೀಘ್ರದಲ್ಲೇ ವಾಹನ ತಯಾರಕರು ಕಾರಿನ ಎಲ್ಲಾ ಸೀಟ್ಗಳಲ್ಲಿ ಮೂರು-ಪಾಯಿಂಟ್ ಸೀಟ್ಬೆಲ್ಟ್ಗಳನ್ನು (Three-Point Seatbelts) ಮಾತ್ರ ಒದಗಿಸುವುದನ್ನು ಕಡ್ಡಾಯಗೊಳಿಸಲಿದೆ. ಇದರರ್ಥ ಹಿಂಬದಿ ಸೀಟಿನ ಮಧ್ಯದಲ್ಲಿ ಕುಳಿತಿರುವ ಮೂರನೇ ಪ್ರಯಾಣಿಕರಿಗೂ ಮೂರು-ಪಾಯಿಂಟ್ ಸೀಟ್ಬೆಲ್ಟ್ ಬಳಕೆ ಕಡ್ಡಾಯವಾಗಲಿದೆ. ವರದಿಯ ಪ್ರಕಾರ, ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯವು ಶೀಘ್ರದಲ್ಲೇ ಈ ಆದೇಶವನ್ನು ಪ್ರಕಟಿಸಲಿದೆ.
ಪ್ರಸ್ತುತ, ಭಾರತದಲ್ಲಿ ಲಭ್ಯವಿರುವ ಹೆಚ್ಚಿನ ಕಾರುಗಳಲ್ಲಿ ಮುಂಭಾಗದ ಆಸನಗಳು ಮತ್ತು ಎರಡು ಹಿಂದಿನ ಸೀಟುಗಳು ಮೂರು-ಪಾಯಿಂಟ್ ಸೀಟ್ಬೆಲ್ಟ್ಗಳನ್ನು ಹೊಂದಿವೆ. ಇವುಗಳನ್ನು ವೈ-ಆಕಾರದ (Y-shaped) ಸೀಟ್ ಬೆಲ್ಟ್ ಎಂದೂ ಕರೆಯುತ್ತಾರೆ. ಈ ಕಾರುಗಳಲ್ಲಿನ ಹಿಂಬದಿಯ ಮಧ್ಯಭಾಗದ ಆಸನವು ಕೇವಲ ಎರಡು-ಪಾಯಿಂಟ್ ಅಥವಾ ಲ್ಯಾಪ್ ಸೀಟ್ಬೆಲ್ಟ್ನೊಂದಿಗೆ (Lap seatbelt) ಬರುತ್ತದೆ. ಇದು ವಿಮಾನದ ಆಸನಗಳಿಗೆ ಒದಗಿಸುವ ಸೀಟ್ ಬೆಲ್ಟ್ನಂತೆಯೇ ಇರುತ್ತದೆ.
ರಸ್ತೆ ಮತ್ತು ಹೆದ್ದಾರಿ ಸಚಿವಾಲಯ ಮುಂದಿನ ಒಂದು ತಿಂಗಳೊಳಗೆ ಈ ಸಂಬಂಧ ಕರಡು ಅಧಿಸೂಚನೆಯನ್ನು ಹೊರಡಿಸುವ ನಿರೀಕ್ಷೆಯಿದೆ. ಆದರೆ, ಅಂತಿಮ ನಿಯಮವನ್ನು ರೂಪಿಸುವ ಮೊದಲು, ಸರ್ಕಾರ ಸಾರ್ವಜನಿಕ ಸಲಹೆಗಳು ಮತ್ತು ಅಭಿಪ್ರಾಯಗಳನ್ನು ಪಡೆದು, ಆಕ್ಷೇಪಣೆಗಳನ್ನು ಪರಿಗಣಿಸಲಿದೆ.
ಇದನ್ನೂ ಓದಿ: Airbags Mandatory : ಸಣ್ಣ ಕಾರುಗಳಲ್ಲಿ ಕೂಡ 6 ಏರ್‌ಬ್ಯಾಗ್ ಕಡ್ಡಾಯ: ನಿತಿನ್ ಗಡ್ಕರಿ
ಇಂತಹ ಹಲವು ಸುರಕ್ಷತಾ ನಿಯಮಗಳನ್ನು ಜಾರಿಗೊಳಿಸುವ ಮೂಲಕ ಕೇಂದ್ರ ಸರ್ಕಾರ, ಭಾರತದಲ್ಲಿ ತಯಾರಾಗುವ ಪ್ರಯಾಣಿಕ ಕಾರುಗಳ ಒಟ್ಟಾರೆ ಸುರಕ್ಷತೆಯ ರೇಟಿಂಗ್ಗಳನ್ನು (Safety ratings) ಸುಧಾರಿಸಲು ಉದ್ದೇಶಿಸಿದೆ. ಈ ಕ್ರಮವು ಕಾರು ಚಾಲಕರು, ಪ್ರಯಾಣಿಕರ ಸುರಕ್ಷತೆಯನ್ನು ಹೆಚ್ಚಿಸುತ್ತದೆ ಮತ್ತು ಅಪಘಾತಗಳ ಸಂದರ್ಭದಲ್ಲಿ ಗಾಯಗಳು ಮತ್ತು ಸಾವುನೋವುಗಳ ಸಾಧ್ಯತೆಯನ್ನು ಕಡಿಮೆ ಮಾಡುತ್ತದೆ ಎಂದು ನಿರೀಕ್ಷಿಸಲಾಗಿದೆ.
ಮೂರು-ಪಾಯಿಂಟ್ ಸೀಟ್ಬೆಲ್ಟ್ಗಳು ಎರಡು-ಪಾಯಿಂಟ್ ಸೀಟ್ಬೆಲ್ಟ್ಗಳಿಗಿಂತ ಹೆಚ್ಚು ಸುರಕ್ಷಿತವೆಂದು ವೈಜ್ಞಾನಿಕವಾಗಿ ಸಾಬೀತಾಗಿದೆ. ಏಕೆಂದರೆ ಅವು ಅಫಘಾತದ ಸಮಯದಲ್ಲಿ ಎದೆ, ಭುಜಗಳು ಮತ್ತು ಸೊಂಟಕ್ಕೆ ರಕ್ಷಣೆ ನೀಡುತ್ತವೆ. ಇದರಿಂದ ದೇಹದಲ್ಲಿ ಉಂಟಾಗುವ ಗಾಯಗಳ ಪ್ರಮಾಣ ಕಡಿಮೆಯಾಗುತ್ತದೆ. ಇದರಿಂದ ಜೀವಾಪಾಯವಾಗುವ ಸಂದರ್ಭಗಳು ಕೂಡ ಕಡಿಮೆಯಾಗಲಿವೆ.
ಮೂರು-ಪಾಯಿಂಟ್ ಸೀಟ್ಬೆಲ್ಟ್ಗಳನ್ನು 1959 ಆಗಸ್ಟ್ನಲ್ಲಿ ಮೊದಲ ಬಾರಿಗೆ ಸ್ವೀಡಿಷ್ ವಾಹನ ತಯಾರಕ ಕಂಪನಿ ವೋಲ್ವೋ (Volvo) ಪರಿಚಯಿಸಿತು. ಆದರೆ, ಸಾರ್ವಜನಿಕ ಸುರಕ್ಷತೆಯ ಹಿತಾಸಕ್ತಿ ಹಿನ್ನೆಲೆಯಲ್ಲಿ ವೋಲ್ವಾ, ಇದರ ಪೇಟೆಂಟ್ ಅನ್ನು ಇತರ ಕಾರು ತಯಾರಕರಿಗೆ ಮುಕ್ತವಾಗಿ ನೀಡಲು ನಿರ್ಧರಿಸಿತು.
ಇದನ್ನೂ ಓದಿ: ಹಿಂದೆ ಪ್ರಪಾತ ಮುಂದೆ ಬೆಟ್ಟ, ಕಡಿದಾದ ರಸ್ತೆಯಲ್ಲಿ ಚಾಲಕನ ಸಾಹಸ... ವಿಡಿಯೋ ವೈರಲ್
ಸಚಿವಾಲಯ ಅಧಿಕಾರಿಯ ಪ್ರಕಾರ, ದೇಶದಲ್ಲಿ ಚಾಲ್ತಿಯಲ್ಲಿರುವ ವಾಹನಗಳಲ್ಲಿ ಕೆಲವು ಮಾದರಿಗಳನ್ನು ಹೊರತುಪಡಿಸಿ, ಯಾವುದೇ ವಾಹನಗಳು ಹಿಂದಿನ ಮಧ್ಯದ ಸೀಟಿನಲ್ಲಿ ಮೂರು-ಪಾಯಿಂಟ್ ಸೀಟ್ಬೆಲ್ಟ್ಗಳನ್ನು ಹೊಂದಿಲ್ಲ ಎಂಬ ವಿಷಯವನ್ನು ಸಚಿವಾಲಯ ಪತ್ತೆ ಹೆಚ್ಚಿದೆ. ಈ ಸೀಟುಗಳಲ್ಲಿ ಲ್ಯಾಪ್ ಬೆಲ್ಟ್ ಮಾತ್ರ ಲಭ್ಯವಿದೆ. ಇದು ಅಪಘಾತದ ಸಂದರ್ಭದಲ್ಲಿ ಅಷ್ಟೇನೂ ಪರಿಣಾಮಕಾರಿಯಾಗಿರುವುದಿಲ್ಲ.
2022ರ ಜನವರಿ 14ರಂದು ಸಚಿವಾಲಯ ರಸ್ತೆ ಸುರಕ್ಷತೆ ಕುರಿತು ಕರಡು ಅಧಿಸೂಚನೆಯನ್ನು ಹೊರಡಿಸಿದ್ದು, ಎಲ್ಲಾ ಕಾರು ತಯಾರಕರು ತಮ್ಮ ಎಲ್ಲಾ ಶ್ರೇಣಿಯ ಕಾರುಗಳಲ್ಲಿ ಆರು ಏರ್ಬ್ಯಾಗ್ಗಳನ್ನು ಒದಗಿಸುವುದನ್ನು ಕಡ್ಡಾಯಗೊಳಿಸಿದೆ. ಈ ಕುರಿತು ಸಂಗ್ರಹಿಸಿದ ಸಾರ್ವಜನಿಕ ಅಭಿಪ್ರಾಯಗಳ ಆಧಾರದ ಮೇಲೆ ಸರ್ಕಾರ ಈ ಹೊಸ ನಿಯಮ ಜಾರಿಗೆ ತರಲು ಮುಂದಾಗಿದೆ.