ಬೀಜಿಂಗ್(ಮಾ.27): ಎಲೆಕ್ಟ್ರಿಕ್ ವಾಹನಗಳು ನಗರದ ವಾಹನಗಳಾಗಿ ಹೆಚ್ಚಾಗಿ ಬಳಕೆಯಾಗುತ್ತಿದೆ. ದೂರ ಪ್ರಯಾಣಕ್ಕೆ ಮೈಲೇಜ್ ರೇಂಜ್, ಚಾರ್ಜಿಂಗ್, ಅದಕ್ಕಾಗಿ ಒಂದಷ್ಟು ಸಮಯ ಮೀಸಲಿಡಬೇಕಾದ ಅನಿವಾರ್ಯತೆ ಇದೆ. ಈ ಕಾರಣಗಳಿಂದ ಹಲವರು ಎಲೆಕ್ಟ್ರಿಕ್ ಕಾರು ಖರೀದಿಯಿಂದ ದೂರವಿದ್ದಾರೆ. ಆದರೆ ಈ ಸಮಸ್ಯೆಗೆ ಚೀನಾದಲ್ಲಿ ಪರಿಹಾರ ಕಂಡುಕೊಳ್ಳಲು ಚೀನಾ ಮುಂದಾಗಿದೆ. ಕಾರಿನಲ್ಲೂ ಸ್ವ್ಯಾಪ್ ಬ್ಯಾಟರಿ ತಂತ್ರಜ್ಞಾನ ಬಳಕೆ ಮಾಡುವ ಪ್ರಯತ್ನ ನಡೆಯುತ್ತಿದೆ.
ಬೆಂಗಳೂರಿನ ಬೌನ್ಸ್ ಸ್ಕೂಟರ್ ಭಾರತದಲ್ಲಿ ಸ್ವ್ಯಾಪ್ ಬ್ಯಾಟರಿ ಸ್ಕೂಟರ್ ಮೂಲಕ ಭಾರಿ ಸಂಚಲನ ಸೃಷ್ಟಿಸಿದೆ. ಇದೀಗ ಇದೇ ರೀತಿಯ ತಂತ್ರಜ್ಞಾನ ಕಾರಿನಲ್ಲೂ ಚೀನಾ ಅಳವಡಿಸಲು ಮುಂದಾಗಿದೆ. ಕಾರಿನಲ್ಲೂ ಬ್ಯಾಟರಿ ಸ್ವ್ಯಾಪ್ ಮಾಡಬಲ್ಲ ತಂತ್ರಜ್ಞಾನ ಬಳಕೆ ಮಾಡಲಾಗುತ್ತಿದೆ. ಇದರಿಂದ ಚಾರ್ಜಿಂಗ್ ಸಮಸ್ಯೆ ಇಲ್ಲ. ಪ್ರಯಾಣಿಕರು ಪೆಟ್ರೋಲ್ ಡೀಸೆಲ್ ತುಂಬಿಸುವ ರೀತಿಯಲ್ಲಿ ಸ್ವ್ಯಾಪ್ ಕೇಂದ್ರಕ್ಕೆ ತೆರಳಿ ಚಾರ್ಜ್ ಖಾಲಿಯಾಗಿರುವ ಬ್ಯಾಟರಿ ತೆಗೆದು, ಸಂಪೂರ್ಣ ಚಾರ್ಜ್ ಆಗಿರುವ ಬ್ಯಾಟರಿ ಸ್ವ್ಯಾಪ್ ಮಾಡಬಹುದು.
undefined
ಭಾರತದಲ್ಲಿ ಬ್ಯಾಟರಿ ವಿನಿಮಯ ಕೇಂದ್ರ ಸ್ಥಾಪಿಸಲು ಹೋಂಡಾ, HPCL ಒಪ್ಪಂದ!
ಚೀನಾದ ನಿಯೋ ಹಾಗೂ ಗೀಲೆ ಆಟೋಮೊಬೈಲ್ ಕಂಪನಿ ಈ ರೀತಿಯ ಸ್ವ್ಯಾಪ್ ಬ್ಯಾಟರಿ ಕೇಂದ್ರಗಳನ್ನು ಸ್ಥಾಪಿಸುತ್ತಿದೆ. ಸಾಮಾನ್ಯವಾಗಿ ಕಾರಿನಲ್ಲಿ ಅತೀ ದೊಡ್ಡ ಬ್ಯಾಟರಿ ಪ್ಯಾಕ್ ಬಳಸಲಾಗುತ್ತಿದೆ. ಆದರೆ ಸ್ವ್ಯಾಪ್ ಕಾರಣಕ್ಕಾಗಿ ಸಣ್ಣ ಸಣ್ಣ ಬ್ಯಾಟರಿಗಳಾಗಿ ಮಾಡಿ ಕಾರಿನಲ್ಲಿ ಜೋಡಿಸಲಾಗುತ್ತದೆ. ಇದನ್ನು ಸುಲಭವಾಗಿ ತೆಗೆಯುವಂತೆ ಹಾಗೂ ಜೋಡಿಸಲು ಸಾಧ್ಯವಾಗವಂತೆ ವಿನ್ಯಾಸ ಮಾಡಲಾಗಿದೆ.
ಕೆಲ ವರ್ಷಗಳ ಹಿಂದೆ ಚೀನಾದಲ್ಲಿ ಸ್ಪ್ಯಾಪ್ ಬ್ಯಾಟರಿ ಕಾರುಗಳ ಪ್ರಸ್ತಾವನೆ ಭಾರಿ ಚರ್ಚೆಯಾಗಿತ್ತು. ಈ ವೇಳೆ ಟೆಸ್ಲಾ ಎಲೆಕ್ಟ್ರಿಕ್ ಕಾರು ಕಂಪನಿ ಈ ಪ್ರಸ್ತಾವನೆಯನ್ನು ತಿರಸ್ಕರಿಸಿತ್ತು. ಇದೀಗ ಚೀನಾದ ಆಟೋಮೊಬೈಲ್ ಕಂಪನಿ ಇದನ್ನು ಸಾಧ್ಯವಾಗಿಸಿದೆ. ಈ ತಂತ್ರಜ್ಞಾನ ಯಶಸ್ವಿಯಾದರೆ ಕೈಗೆಟುಕುವ ದರದಲ್ಲಿ ಎಲೆಕ್ಟ್ರಿಕ್ ಕಾರುಗಳು ಲಭ್ಯವಾಗಲಿದೆ. ಜೊತೆಗೆ ದೂರ ಪ್ರಯಾಣ, ಚಾರ್ಜಿಂಗ್ ಸಮಸ್ಯೆಗಳು ಅಂತ್ಯವಾಗಲಿದೆ.
ಸದ್ಯ ಚೀನಾದಲ್ಲಿ 1,400 ಬ್ಯಾಟರಿ ಸ್ವ್ಯಾಪ್ ಕೇಂದ್ರಗಳಿವೆ. ಇದನ್ನು ಶೀಘ್ರದಲ್ಲೇ 24,000ಕ್ಕೆ ಹೆಚ್ಚಿಸಲು ನಿರ್ಧರಿಸಲಾಗಿದೆ. ಇನ್ನು ಇತರ ಎಲೆಕ್ಟ್ರಿಕ್ ವಾಹನ ಉತ್ಪಾದನಾ ಕಂಪನಿಗಳು ಕೂಡ ಸ್ವ್ಯಾಪ್ ಬ್ಯಾಟರಿ ಕಾರುಗಳನ್ನು ಬಿಡುಗಡೆ ಮಾಡಲು ಮುಂದಾಗಿದೆ.
ಬಜೆಟ್‌ನ ಸ್ಯ್ವಾಪ್ ನೀತಿ ಬೆನ್ನಲ್ಲೇ ಬೌನ್ಸ್ ಹೊಸ ದಾಖಲೆ, 10 ಲಕ್ಷ ಬ್ಯಾಟರಿ ಸ್ವ್ಯಾಪ್ ರಿಜಿಸ್ಟ್ರೇಶನ್!
ಸ್ವ್ಯಾಪ್ ಬ್ಯಾಟರಿ ಕಾರುಗಳು ಬಿಡುಗಡೆಯಾದರೆ ಅತೀ ಕಡಿಮೆ ಬೆಲೆಯಲ್ಲಿ ಕಾರುಗಳು ಲಭ್ಯವಾಗಲಿದೆ. ಕಾರಣ ಬ್ಯಾಟರಿ ಬದಲು ಕೇವಲ ಕಾರು ಮಾತ್ರ ಖರೀದಿಸಿದರೆ ಸಾಕು. ಬ್ಯಾಟರಿಯನ್ನು ಬಾಡಿಗೆ ರೂಪದಲ್ಲಿ ಪಡೆಯಬಹುದು. ಎಲೆಕ್ಟ್ರಿಕ್ ವಾಹನಗಳಳಲ್ಲಿ ಹೆಚ್ಚಿನ ಹಣ ಬ್ಯಾಟರಿಗೆ ನೀಡಲಾಗುತ್ತದೆ. ಇನ್ನು ಮೈಲೇಜ್ ಸಮಸ್ಯೆ ಎದುರಾಗುವುದಿಲ್ಲ. ಹೆದ್ದಾರಿ, ಪಟ್ಟಣ, ಹಳ್ಳಿ, ನಗರ ಸೇರಿದಂತೆ ಎಲ್ಲಾ ಕಡೆ ಬ್ಯಾಟರಿ ಸ್ವ್ಯಾಪ್ ಕೇಂದ್ರಗಳಲ್ಲಿ ಬ್ಯಾಟರಿ ಬದಲಾಯಿಸಿಕೊಳ್ಳಬಹುದು.
2025ರಲ್ಲಿ ಚೀನಾದಲ್ಲಿ ಎಲೆಕ್ಟ್ರಿಕ್ ಕಾರುಗಳ ಮಾರಾಟವನ್ನು ಶೇಕಡಾ 25ಕ್ಕೆ ಹೆಚ್ಚಿಸಲು ತಯಾರಿ ನಡೆಯುತ್ತಿದೆ. ಚೀನಾ ಸರ್ಕಾರ ಕೂಡ ಸ್ವ್ಯಾಪ್ ಬ್ಯಾಟರಿ ಕಾರುಗಳಿಗೆ ಹೆ್ಚ್ಚಿನ ಒತ್ತು ನೀಡಲು ಮುಂದಾಗಿದೆ. ಸದ್ಯ ಪ್ರಾಯೋಗಿಕ ಹಂತದಲ್ಲಿರುವ ಸ್ಪ್ಯಾಪ್ ಬ್ಯಾಟರಿ ಕಾರುಗಳು ಯಶಸ್ವಿಯಾದರೆ, ವಿಶ್ವದಲ್ಲೇ ಎಲೆಕ್ಟ್ರಿಕ್ ಕಾರುಗಳ ಸ್ವರೂಪ ಬದಲಾಗಲಿದೆ.