
ಬೆಂಗಳೂರು (ಜು.7): ಕಾರ್ ಸೀಟ್ ಕೊಳಕಾಗಬಾರದು ಮತ್ತು ವಾಹನಕ್ಕೆ ಆಕರ್ಷಕ ಲುಕ್ ಸಿಗಬೇಕು ಎನ್ನುವ ಕಾರಣಕ್ಕೆ ಅನೇಕರು ಮಾರುಕಟ್ಟೆಯಲ್ಲಿ ಸಿಗುವ ಫ್ಯಾನ್ಸಿ ಸೀಟ್ ಕವರ್‌ಗಳನ್ನು ಅಳವಡಿಸುತ್ತಾರೆ. ಆದರೆ, ಸೀಟ್ ಕವರ್‌ಗಳನ್ನು ಆಯ್ಕೆ ಮಾಡುವಾಗ ಮಾಡುವ ಒಂದು ಸಣ್ಣ ತಪ್ಪು, ಅಪಘಾತದ ಸಮಯದಲ್ಲಿ ನಿಮ್ಮ ಜೀವವನ್ನೇ ಅಪಾಯಕ್ಕೆ ತಳ್ಳಬಹುದು! ಮಾರುಕಟ್ಟೆಯಲ್ಲಿ ಸಿಗುವ ಹಲವು ಫ್ಯಾನ್ಸಿ ಕವರ್‌ಗಳು ಕಾರಿನ ಏರ್‌ಬ್ಯಾಗ್‌ಗಳು ತೆರೆದುಕೊಳ್ಳದಂತೆ ತಡೆಯುತ್ತವೆ. ಇದು ಪ್ರಯಾಣಿಕರ ಸುರಕ್ಷತೆಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ.
ಹೊಸ ಸೀಟ್ ಕವರ್‌ಗಳನ್ನು ಖರೀದಿಸುವಾಗ ಅವು ಕಾರಿನ ‘ಸೈಡ್ ಏರ್‌ಬ್ಯಾಗ್’ (Side Airbags) ಕಾರ್ಯನಿರ್ವಹಣೆಗೆ ಅಡ್ಡಿಪಡಿಸುವುದಿಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳುವುದು ಅತ್ಯಂತ ಅಗತ್ಯ. ಕವರ್‌ಗಳ ಅಂದದ ಜೊತೆಗೆ, ಅವು ಸುರಕ್ಷತೆಯ ಮಾನದಂಡಗಳಿಗೆ ಅನುಗುಣವಾಗಿವೆಯೇ ಎಂಬುದನ್ನು ಪರಿಶೀಲಿಸಬೇಕು. ಸುರಕ್ಷಿತ ಪ್ರಯಾಣಕ್ಕಾಗಿ ಮತ್ತು ಏರ್‌ಬ್ಯಾಗ್‌ಗಳು ಸರಿಯಾದ ಸಮಯಕ್ಕೆ ತೆರೆದುಕೊಳ್ಳಲು ಸೀಟ್ ಕವರ್ ತೆಗೆದುಕೊಳ್ಳುವಾಗ ಯಾವ ಮುನ್ನೆಚ್ಚರಿಕೆಗಳನ್ನು ವಹಿಸಬೇಕು ಎಂಬುದರ ವಿವರ ಇಲ್ಲಿದೆ.
ಪ್ರತಿಯೊಬ್ಬ ಕಾರು ಮಾಲೀಕನಿಗೂ ತನ್ನ ವಾಹನವನ್ನು ಚಂದವಾಗಿ ಇಟ್ಟುಕೊಳ್ಳುವುದು ಮತ್ತು ಅದಕ್ಕೊಂದು ವೈಯಕ್ತಿಕ ಸ್ಪರ್ಶ ನೀಡುವುದು ಇಷ್ಟದ ಕೆಲಸ. ಸ್ಟೈಲಿಶ್ ಅಲಾಯ್ ವೀಲ್ಸ್, ಅತ್ಯುತ್ತಮ ಸೌಂಡ್ ಸಿಸ್ಟಮ್‌ನಿಂದ ಹಿಡಿದು ಆಕರ್ಷಕ ಸೀಟ್ ಕವರ್‌ಗಳವರೆಗೆ ತಮ್ಮ ಕಾರಿಗೆ ವಿಭಿನ್ನ ಲುಕ್ ನೀಡಲು ಜನರು ಲಕ್ಷಾಂತರ ರೂಪಾಯಿ ಖರ್ಚು ಮಾಡುತ್ತಾರೆ. ಇದೇ ಕಾರಣಕ್ಕೆ ಜಾಗತಿಕವಾಗಿ ಕಾರ್ ಆಕ್ಸೆಸರೀಸ್‌ಗಳಿಗೆ ಕೋಟ್ಯಂತರ ರೂಪಾಯಿ ಮೌಲ್ಯದ ಮಾರುಕಟ್ಟೆ ಇದೆ. ಹೆಚ್ಚಿನ ಆಕ್ಸೆಸರೀಸ್‌ಗಳು ಕಾರಿನ ಪರ್ಫಾರ್ಮೆನ್ಸ್ ಮೇಲೆ ಪರಿಣಾಮ ಬೀರುವುದಿಲ್ಲ. ಆದರೆ, ಸೀಟ್ ಕವರ್ ಆಯ್ಕೆಯಲ್ಲಿನ ನಿರ್ಲಕ್ಷ್ಯ ಪ್ರಾಣಕ್ಕೆ ಸಂಚಕಾರ ತರಬಲ್ಲದು.
'ಇನ್ಶೂರೆನ್ಸ್ ಇನ್‌ಸ್ಟಿಟ್ಯೂಟ್ ಫಾರ್ ಹೈವೇ ಸೇಫ್ಟಿ' (IIHS) ವರದಿಯ ಪ್ರಕಾರ, ಮಾರುಕಟ್ಟೆಯಲ್ಲಿ ಲಭ್ಯವಿರುವ ಹೆಚ್ಚಿನ ಫ್ಯಾನ್ಸಿ ಸೀಟ್ ಕವರ್‌ಗಳನ್ನು ಕಾರಿನ ಸುರಕ್ಷತಾ ವ್ಯವಸ್ಥೆಯನ್ನು ಗಮನದಲ್ಲಿಟ್ಟುಕೊಂಡು ಸಿದ್ಧಪಡಿಸಿರುವುದಿಲ್ಲ.
ಅಪಾಯವೇನು?: ಇಂದಿನ ಆಧುನಿಕ ಕಾರುಗಳಲ್ಲಿ ಸೀಟುಗಳು ಕೇವಲ ಕುಳಿತುಕೊಳ್ಳಲು ಮಾತ್ರ ಇರುವುದಿಲ್ಲ. ಬದಲಿಗೆ ಅವುಗಳ ಒಳಭಾಗದಲ್ಲಿ 'ಸೈಡ್ ಏರ್‌ಬ್ಯಾಗ್'ಗಳನ್ನು ಅಳವಡಿಸಲಾಗಿರುತ್ತದೆ. ನೀವು ಸೀಟಿನ ಮೇಲೆ ಯಾವುದೇ ಸಾಮಾನ್ಯ ಅಥವಾ ಕಸ್ಟಮೈಸ್ಡ್ ಸೀಟ್ ಕವರ್ ಹಾಕಿದರೆ, ಅವು ಅಪಘಾತದ ಸಮಯದಲ್ಲಿ ಏರ್‌ಬ್ಯಾಗ್ ಹೊರಬರುವ ಮಾರ್ಗವನ್ನು ತಡೆಯುತ್ತವೆ ಅಥವಾ ಅದರ ದಿಕ್ಕನ್ನು ಬದಲಾಯಿಸುತ್ತವೆ.
ಏರ್‌ಬ್ಯಾಗ್ ಮಹತ್ವ: ಅಮೆರಿಕದ ಪ್ರಸಿದ್ಧ ಸಂಸ್ಥೆ 'NHTSA' ಪ್ರಕಾರ, ಏರ್‌ಬ್ಯಾಗ್‌ಗಳಿಂದಾಗಿ ಇದುವರೆಗೆ 70,000 ಕ್ಕೂ ಹೆಚ್ಚು ಜನರ ಪ್ರಾಣ ಉಳಿದಿದೆ. ಅಪಘಾತವಾದ ಕ್ಷಣಾರ್ಧದಲ್ಲಿ ಇವು ತೆರೆದುಕೊಳ್ಳುತ್ತವೆ, ಆದರೆ ತಪ್ಪು ಸೀಟ್ ಕವರ್‌ಗಳು ಅವುಗಳನ್ನು ಹೊರಬರಲು ಬಿಡುವುದಿಲ್ಲ.
ನಿಮ್ಮ ಕಾರಿಗೆ ಸೂಕ್ತವಾದ ಸೀಟ್ ಕವರ್ ಆಯ್ಕೆ ಮಾಡಲು ಈ ಕೆಳಗಿನ ಪ್ರಮುಖ ಅಂಶಗಳನ್ನು ಗಮನದಲ್ಲಿಟ್ಟುಕೊಳ್ಳಿ
ಏರ್‌ಬ್ಯಾಗ್ ಲೋಗೋ ಪರಿಶೀಲಿಸಿ: ಮೊದಲನೆಯದಾಗಿ, ನಿಮ್ಮ ಕಾರಿನ ಸೀಟಿನ ಎಡ್ಜ್‌ಗಳನ್ನು ಜಾಗರೂಕತೆಯಿಂದ ಗಮನಿಸಿ. ಅಲ್ಲಿ ಏನಾದರೂ ‘SRS Airbag’ ಅಥವಾ ‘Airbag’ ಟ್ಯಾಗ್ ಅಥವಾ ಲೋಗೋ ಇದ್ದರೆ, ಆ ಸೀಟಿನ ಒಳಗಡೆ ಏರ್‌ಬ್ಯಾಗ್ ಅಡಗಿದೆ ಎಂದರ್ಥ.
ವಿಶೇಷ ಸ್ಟಿಚ್ (ಹೊಲಿಗೆ) ಕವರ್‌ಗಳು: ಸೀಟಿನ ಒಳಗಿರುವ ಏರ್‌ಬ್ಯಾಗ್‌ಗಳು ಅತ್ಯಂತ ಹಗುರವಾದ ಹೊಲಿಗೆಯನ್ನು ಸೀಳಿಕೊಂಡು ಹೊರಬರುವಂತೆ ವಿನ್ಯಾಸಗೊಳಿಸಲಾಗಿರುತ್ತದೆ. ಆದ್ದರಿಂದ ಯಾವಾಗಲೂ 'ಏರ್‌ಬ್ಯಾಗ್ ಕಾಂಪಾಟಿಬಲ್' (Airbag Compatible) ಆಗಿರುವ ಸೀಟ್ ಕವರ್‌ಗಳನ್ನೇ ಖರೀದಿಸಿ. ಈ ಕವರ್‌ಗಳಲ್ಲಿ ಏರ್‌ಬ್ಯಾಗ್ ಇರುವ ಜಾಗದಲ್ಲಿ ವಿಶೇಷವಾದ ದಾರವನ್ನು ಬಳಸಿ ಹೊಲಿಗೆ ಹಾಕಲಾಗಿರುತ್ತದೆ, ಇದು ಏರ್‌ಬ್ಯಾಗ್‌ನ ಒತ್ತಡಕ್ಕೆ ತಕ್ಷಣವೇ ಕಟ್ ಆಗುತ್ತದೆ.
ಯುನಿವರ್ಸಲ್ ಕವರ್‌ಗಳನ್ನು ತಪ್ಪಿಸಿ: ಎಲ್ಲಾ ಕಾರುಗಳಿಗೂ ಫಿಟ್ ಆಗುತ್ತದೆ ಎಂದು ಹೇಳುವ ಯಾವುದೇ ಸಾಮಾನ್ಯ ಅಂಗಡಿಯ 'ಯುನಿವರ್ಸಲ್ ಸೀಟ್ ಕವರ್'ಗಳನ್ನು ಖರೀದಿಸಬೇಡಿ. ಯಾವಾಗಲೂ ನಿಮ್ಮ ಕಾರಿನ ನಿರ್ದಿಷ್ಟ ಮಾಡೆಲ್‌ಗೆಂದೇ ಪ್ರತ್ಯೇಕವಾಗಿ ತಯಾರಿಸಲಾದ ವಿಶೇಷ ಕವರ್‌ಗಳನ್ನು ಮಾತ್ರ ಆಯ್ಕೆ ಮಾಡಿ.