
ನವದೆಹಲಿ (ಅ.23): ವಿಮಾನ ಅಪಘಾತಕ್ಕೀಡಾದಾಗ ದುರಂತದ ನೈಜ ಕಾರಣವನ್ನು ಕಂಡುಕೊಳ್ಳಲು ತನಿಖಾ ಸಂಸ್ಥೆಗಳು ಬ್ಲ್ಯಾಕ್ ಬಾಕ್ಸ್ (Black Box) ಸಹಾಯ ಪಡೆಯುವುದನ್ನು ನಾವು ನೋಡಿದ್ದೇವೆ. ಇದೀಗ ಇದೇ ಮಾದರಿಯ ಅತ್ಯಾಧುನಿಕ ವ್ಯವಸ್ಥೆ ಕಾರುಗಳಲ್ಲೂ ಕಡ್ಡಾಯವಾಗಲಿದೆ. ಭಾರತ ಸರ್ಕಾರವು ವಾಹನಗಳ ಸುರಕ್ಷತಾ ಮಾನದಂಡಗಳಲ್ಲಿ ಮಹತ್ವದ ಬದಲಾವಣೆಗಳನ್ನು ತಂದಿದ್ದು, ಅದರಲ್ಲಿ 'ಇವೆಂಟ್ ಡೇಟಾ ರೆಕಾರ್ಡರ್' (EDR) ಅಥವಾ ಕಾರಿನ 'ಬ್ಲ್ಯಾಕ್ ಬಾಕ್ಸ್' ನಿಯಮಗಳನ್ನು ಸೇರ್ಪಡೆಗೊಳಿಸಲಾಗಿದೆ. ಅಪಘಾತ ತನಿಖೆಗೆ ನೆರವಾಗುವ ಈ ತಂತ್ರಜ್ಞಾನದ ಜೊತೆಗೆ, ಪಾದಚಾರಿಗಳ ಸಂರಕ್ಷಣೆ, ಡಿಕ್ಕಿಯ ಸಂದರ್ಭದಲ್ಲಿ ಪ್ರಯಾಣಿಕರ ಜೀವ ರಕ್ಷಣೆ ಹಾಗೂ ಕಾರುಗಳ ಕಳವು ತಡೆಯುವ ನಿಟ್ಟಿನಲ್ಲಿಯೂ ಹೊಸ ನಿಯಮಗಳನ್ನು ರೂಪಿಸಲಾಗಿದೆ.
ಇಡಿಆರ್ (EDR) ಎನ್ನುವುದು ಪ್ರತ್ಯೇಕ ಸಾಧನದಂತೆ ಕೇಳಿಸಿದರೂ, ಇದು ಕಾರಿನ ಪ್ರಮುಖ ಕಂಟ್ರೋಲ್ ಸಿಸ್ಟಮ್ ಹಾಗೂ ಏರ್ಬ್ಯಾಗ್ ನಿಯಂತ್ರಣ ವ್ಯವಸ್ಥೆಯೊಂದಿಗೆ ನೇರ ಸಂಪರ್ಕ ಹೊಂದಿರುತ್ತದೆ. ಕಾರು ಭೀಕರವಾಗಿ ಅಪಘಾತಕ್ಕೀಡಾದಾಗ ಅಥವಾ ಏರ್ಬ್ಯಾಗ್ ತೆರೆದುಕೊಂಡಾಗ, ಇಡಿಆರ್ ಅಪಘಾತ ಸಂಭವಿಸುವ ಕೆಲ ಸೆಕೆಂಡುಗಳ ಮುಂಚಿನ ಪ್ರಮುಖ ಮಾಹಿತಿಯನ್ನು ಸ್ವಯಂಚಾಲಿತವಾಗಿ ಸೇವ್ ಮಾಡಿಕೊಳ್ಳುತ್ತದೆ.
ಇದು ಅಪಘಾತದ ಸಮಯದಲ್ಲಿದ್ದ ಕಾರಿನ ವೇಗ, ಚಾಲಕ ಬ್ರೇಕ್ ಬಳಸಿದ್ದನೇ ಅಥವಾ ಇಲ್ಲವೇ, ಪ್ರಯಾಣಿಕರು ಸೀಟ್ ಬೆಲ್ಟ್ ಧರಿಸಿದ್ದರೇ ಮತ್ತು ಏರ್ಬ್ಯಾಗ್ ತೆರೆದುಕೊಂಡ ಕ್ಷಣ ಸೇರಿದಂತೆ ಪ್ರಮುಖ ತಾಂತ್ರಿಕ ವಿವರಗಳನ್ನು ದಾಖಲಿಸುತ್ತದೆ. ಆದರೆ, ಇದು ಪ್ರತಿದಿನದ ಇಡೀ ಡ್ರೈವಿಂಗ್ ಅನ್ನು ರೆಕಾರ್ಡ್ ಮಾಡುವುದಿಲ್ಲ. ಜೊತೆಗೆ ಕಾರಿನೊಳಗಿನ ಪ್ರಯಾಣಿಕರ ಧ್ವನಿ ಅಥವಾ ಮಾತುಕತೆಗಳನ್ನು ಸಹ ಈ ಸಾಧನ ದಾಖಲಿಸಿಕೊಳ್ಳುವುದಿಲ್ಲ.
ಉದಾಹರಣೆಗೆ, ಎರಡು ಕಾರುಗಳು ಡಿಕ್ಕಿಯಾದಾಗ ಅಪಘಾತಕ್ಕೂ ಮುನ್ನ ವಾಹನದ ವೇಗ ಎಷ್ಟಿತ್ತು ಹಾಗೂ ಚಾಲಕ ಬ್ರೇಕ್ ಹಾಕಲು ಯತ್ನಿಸಿದ್ದನೇ ಎನ್ನುವ ಪ್ರಶ್ನೆಗಳಿಗೆ ಇಡಿಆರ್ ನಿಖರ ಉತ್ತರ ನೀಡಲಿದೆ. ಆದರೆ, ರಸ್ತೆಯ ಸ್ಥಿತಿಗತಿ, ಹವಾಮಾನ ಹಾಗೂ ಎದುರಿನ ವಾಹನದ ಪಾತ್ರವನ್ನು ಪ್ರತ್ಯೇಕವಾಗಿ ತನಿಖೆ ಮಾಡಬೇಕಾಗುತ್ತದೆ.
ಬದಲಾದ ಸುರಕ್ಷತಾ ನಿಯಮಗಳು ಕೇವಲ ಅಪಘಾತದ ತನಿಖೆಗೆ ಮಾತ್ರ ಸೀಮಿತವಾಗಿಲ್ಲ. ಕಾರು ಡಿಕ್ಕಿಯಾದ ಸಂದರ್ಭದಲ್ಲಿ ರಸ್ತೆಯಲ್ಲಿ ನಡೆಯುವ ಪಾದಚಾರಿಗಳಿಗೆ ಕನಿಷ್ಠ ಪ್ರಮಾಣದ ಗಾಯಗಳಾಗುವಂತೆ ಕಾರಿನ ಮುಂಭಾಗದ ವಿನ್ಯಾಸವನ್ನು ರೂಪಿಸುವುದು ಕಡ್ಡಾಯವಾಗಿದೆ. ಜೊತೆಗೆ, ಮುಂಭಾಗ ಹಾಗೂ ಸೈಡ್ನಿಂದ (Side Collision) ಆಗುವ ಡಿಕ್ಕಿಗಳ ವೇಳೆ ಒಳಗಿರುವ ಪ್ರಯಾಣಿಕರಿಗೆ ಗರಿಷ್ಠ ಭದ್ರತೆ ಸಿಗುವಂತೆ ಮಾಡಲಾಗಿದೆ.
ಕಾರು ಕಳವು ತಡೆಯಲು 'ಅಲಾರಂ' ಹಾಗೂ 'ಇಮೋಬಿಲೈಜರ್' (Immobilizer) ವ್ಯವಸ್ಥೆಯನ್ನು ಕಡ್ಡಾಯಗೊಳಿಸಲಾಗಿದೆ. ಇಮೋಬಿಲೈಜರ್ ತಂತ್ರಜ್ಞಾನವು ಅಧಿಕೃತ ಕೀ ಹೊರತಾಗಿ ಅಕ್ರಮವಾಗಿ ಕಾರಿನ ಎಂಜಿನ್ ಸ್ಟಾರ್ಟ್ ಆಗುವುದನ್ನು ತಡೆಯುತ್ತದೆ. ಇದರಿಂದ ಕಳ್ಳರು ಕಾರನ್ನು ಕದ್ದೊಯ್ಯುವುದು ಅತ್ಯಂತ ಕಷ್ಟಕರವಾಗಲಿದೆ.
ಸರ್ಕಾರ ಪ್ರಕಟಿಸಿರುವ ಈ ಎಲ್ಲಾ ನಿಯಮಗಳು ಒಂದೇ ಬಾರಿಗೆ ಜಾರಿಯಾಗುವುದಿಲ್ಲ. ವಾಹನ ತಯಾರಿಕಾ ಸಂಸ್ಥೆಗಳಿಗೆ ಅಗತ್ಯ ತಾಂತ್ರಿಕ ಬದಲಾವಣೆ ಮಾಡಿಕೊಳ್ಳಲು ಕಾಲಾವಕಾಶ ನೀಡಲಾಗಿದೆ. ಕೆಲವು ನಿಯಮಗಳಿಗೆ ಅಕ್ಟೋಬರ್ 2027 ರ ಗಡುವು ನೀಡಲಾಗಿದ್ದರೆ, ಇನ್ನು ಕೆಲವು ನಿಯಮಗಳು 2028 ಮತ್ತು 2029 ರಿಂದ ಜಾರಿಗೆ ಬರಲಿವೆ. ಉಳಿದ ಕೆಲವು ಸಂಕೀರ್ಣ ನಿಯಮಗಳು 2031 ಮತ್ತು 2032 ರ ವೇಳೆಗೆ ಪೂರ್ಣ ಪ್ರಮಾಣದಲ್ಲಿ ಜಾರಿಯಾಗಲಿವೆ.
ವಿದೇಶಗಳಲ್ಲಿ ಈಗಾಗಲೇ ಈ ವ್ಯವಸ್ಥೆ ಜಾರಿಯಲ್ಲಿದೆ. ಚೀನಾದಲ್ಲಿ 2022 ರ ಜನವರಿ 1 ರಿಂದಲೇ ಪ್ಯಾಸೆಂಜರ್ ಕಾರುಗಳಲ್ಲಿ ಇಡಿಆರ್ ಕಡ್ಡಾಯವಾಗಿದೆ. ಯುರೋಪ್ನಲ್ಲೂ 2022 ರಿಂದ ನೂತನ ಕಾರುಗಳಿಗೆ ಇದು ಕಡ್ಡಾಯ. ಅಮೆರಿಕದ NHTSA ಸಂಸ್ಥೆಯ ಪ್ರಕಾರ, 2013 ರ ಮಾಡೆಲ್ನ ಶೇ. 96 ರಷ್ಟು ಕಾರುಗಳಲ್ಲೇ ಇಡಿಆರ್ ತಂತ್ರಜ್ಞಾನ ಇತ್ತು.
ಇಡಿಆರ್ನಲ್ಲಿ ದಾಖಲಾಗುವ ಡೇಟಾದ ಖಾಸಗಿತನ (Data Privacy) ಸದ್ಯ ಪ್ರಮುಖ ಚರ್ಚೆಯ ವಿಷಯವಾಗಿದೆ. ಅಮೆರಿಕದಲ್ಲಿ ಈ ಡೇಟಾವನ್ನು ಕಾರಿನ ಮಾಲೀಕನ ವೈಯಕ್ತಿಕ ಆಸ್ತಿ ಎಂದು ಪರಿಗಣಿಸಲಾಗುತ್ತದೆ ಮತ್ತು ಅವರ ಅನುಮತಿಯಿಲ್ಲದೆ ನ್ಯಾಯಾಲಯ ಅಥವಾ ಪೊಲೀಸರು ನೋಡುವಂತಿಲ್ಲ. ಭಾರತದಲ್ಲೂ ಈ ಡೇಟಾವನ್ನು ಯಾರು ಮತ್ತು ಯಾವ ಸಂದರ್ಭದಲ್ಲಿ ನೋಡಬಹುದು ಎಂಬ ಸ್ಪಷ್ಟ ಕಾನೂನು ರೂಪಿಸಬೇಕಿದೆ.
ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರ ಪ್ರಕಾರ, 'ಭಾರತ್ NCAP' ನ 2 ನೇ ಹಂತವು (Phase 2) ಅಕ್ಟೋಬರ್ 2027 ರಿಂದ ಜಾರಿಗೆ ಬರಲಿದೆ. ಇದರಲ್ಲಿ ಒಟ್ಟು 100 ಅಂಕಗಳಲ್ಲಿ 20 ಅಂಕಗಳನ್ನು ಪಾದಚಾರಿಗಳು ಹಾಗೂ ರಸ್ತೆಯಲ್ಲಿ ಚಲಿಸುವ ಬಳಕೆದಾರರ ಸುರಕ್ಷತೆಗಾಗಿ ಮೀಸಲಿಡಲಾಗಿದೆ. 'ಭಾರತ್ NCAP' ಎನ್ನುವುದು ಕಾರುಗಳ ಸುರಕ್ಷತಾ ರೇಟಿಂಗ್ ನೀಡುವ ಪ್ರತ್ಯೇಕ ವ್ಯವಸ್ಥೆಯಾಗಿದ್ದರೆ, ಇಡಿಆರ್ ಕಾರುಗಳಿಗೆ ಅನ್ವಯವಾಗುವ ಕಡ್ಡಾಯ ಸುರಕ್ಷತಾ ನಿಯಮವಾಗಿದೆ. ಒಟ್ಟಾರೆಯಾಗಿ, ವಾಹನ ಸವಾರರು ಹಾಗೂ ಪಾದಚಾರಿಗಳ ಜೀವ ರಕ್ಷಣೆಯ ನಿಟ್ಟಿನಲ್ಲಿ ಕೇಂದ್ರ ಸರ್ಕಾರದ ಈ ಹೆಜ್ಜೆ ಆಟೋಮೊಬೈಲ್ ಕ್ಷೇತ್ರದಲ್ಲಿ ಭಾರಿ ಬದಲಾವಣೆಗೆ ನಾಂದಿ ಹಾಡಲಿದೆ.