*ಎಲೆಕ್ಟ್ರಿಕ್ ವಾಹನ ಖರೀದಿಯಲ್ಲೂ ಹೆಚ್ಚಳ
*ಕಳೆದ ಹತ್ತು ವರ್ಷಗಳಲ್ಲೇ ಅತಿ ಕಡಿಮೆ ದಟ್ಟಣೆ ದಾಖಲು
*ಖಾಸಗಿ ವಾಹನಗಳ ಬಳಕೆಯೂ ಹೆಚ್ಚಳ
ಬೆಂಗಳೂರು (ಫೆ. 10): ಸದಾ ವಾಹನ ಸಂಚಾರ ದಟ್ಟಣೆಯಲ್ಲೇ (Traffic)ಮುಳುಗಿರುವ ಬೆಂಗಳೂರು ನಗರ 2021ರ ಸಾಲಿನಲ್ಲಿ ಶೇ.32ರಷ್ಟು ಕಡಿಮೆ ಸಂಚಾರ ದಟ್ಟಣೆ ದಾಖಲಿಸಿದೆ! ಹೌದು, ಈ ಕುರಿತು ಭೌಗೋಳಿಕ ಪ್ರದೇಶ ತಂತ್ರಜ್ಞಾನ ತಜ್ಞ ಸಂಸ್ಥೆಯಾದ "ಟಾಮ್ ಟಾಮ್" (TomTom)ತನ್ನ ವಾರ್ಷಿಕ ವರದಿಯನ್ನು ಬಿಡುಗಡೆ ಮಾಡಿದ್ದು, ಬೆಂಗಳೂರು (Bangalore) ಹಿಂದೆಂದಿಗಿಂತಲೂ ವಾಹನ ದಟ್ಟಣೆಯಲ್ಲಿ ಇಳಿಮುಖ ಕಂಡಿದೆ ಎಂದು ಅಂಕಿ ಅಂಶ ನೀಡಿದೆ.
ಟಾಮ್ ಟಾಮ್ ಸಂಸ್ಥೆಯು ವಿಶ್ವದ ಪ್ರಮುಖ 404 ಮಹಾನಗರಗಳಲ್ಲಿನ ಭೌಗೋಳಿಕ ಅನ್ವೇಷಣೆ (Geographical study) ನಡೆಸಿ, ಅಲ್ಲಿನ ಸಂಚಾರ ದಟ್ಟಣೆ ಬಗ್ಗೆ ಪ್ರತಿ ವರ್ಷ ವರದಿ ಬಿಡುಗಡೆ ಮಾಡುತ್ತದೆ. 11ನೇ ಆವೃತ್ತಿಯಾಗಿ ಬಿಡುಗಡೆ ಮಾಡಿರುವ 2021ರ ವರದಿಯ ಪ್ರಕಾರ ಬೆಂಗಳೂರು ವಾಹನ ಸಂಚಾರ ದಟ್ಟಣೆಯು ಶೇ.31ರಷ್ಟು ಕಡಿಮೆಯಾಗಿದೆ. 2019ರಲ್ಲಿ 6ನೇ ಸ್ಥಾನದಲ್ಲಿದ್ದ ಬೆಂಗಳೂರು 2021ರಲ್ಲಿ 10ನೇ ಸ್ಥಾನ ಪಡೆದುಕೊಂಡಿದೆ.
undefined
ಇದನ್ನೂ ಓದಿ: Traffic Rules Violation: ಸಿಗ್ನಲ್ ಜಂಪ್ ಮಾಡಿದ್ರೆ ವಾಟ್ಸಾಪಲ್ಲೇ ನೋಟಿಸ್
ಇನ್ನು ಮುಂಬೈ 5ನೇ ಸ್ಥಾನ ಪಡೆದುಕೊಂಡಿದ್ದರೆ, ನವದೆಹಲಿ 11 ಹಾಗೂ ಪುಣೆ 21ನೇ ಸ್ಥಾನಕ್ಕೆ ತಲುಪಿದೆ. ಕೋವಿಡ್ ಸಾಂಕ್ರಮಿಕದಿಂದ ಎಲ್ಲಾ ಕಂಪನಿಗಳು ವರ್ಕ್ ಫ್ರಮ್ ಹೋಮ್ (Work from Home) ಮೊರೆ ಹೋದ ಕಾರಣ ಸಾಕಷ್ಟು ಸಂಚಾರ ದಟ್ಟಣೆ ಕಡಿಮೆಯಾಗಿತ್ತು. ಇನ್ನು ಶಾಲಾಕಾಲೇಜುಗಳಲ್ಲಿ ಆನ್ಲೈನ್ ತರಗತಿಗಳು ನಡೆಯುತ್ತಿದ್ದರಿಂದ, ಶಾಲಾ ಬಸ್ಗಳು, ವ್ಯಾನ್ಗಳ ಸಂಚಾರ ಸಂಪೂರ್ಣ ಸ್ಥಗಿತಗೊಂಡಿತ್ತು. ಇದರಿಂದ ರಸ್ತೆಯಲ್ಲಿ ವಾಹನ ಸಂಚಾರ ತೀರ ಇಳಿಮುಖವಾಗಿದೆ.
ಆದರೆ, ಸಾಮಾನ್ಯವಾಗಿ ಬೆಂಗಳೂರಿನಂತಹ ನಗರಗಳಲ್ಲಿ ಮಳೆಯಾದಲ್ಲಿ, ವಾಹನ ದಟ್ಟಣೆ ಏಕಾಏಕಿ ಹೆಚ್ಚತ್ತದೆ. ಮಳೆ ಬಂದಾದ ರಸ್ತೆ ಬದಿಯಲ್ಲಿ ನಿಲ್ಲುವ ದ್ವಿಚಕ್ರ ವಾಹನಗಳ, ಮಳೆ ನಿಂತ ಮೇಲೆ ರೋಡಿಗಿಳಿಯುವುದರಿಂದ ಹಾಗೂ ಮಳೆಯಲ್ಲಿ ವೇಗವಾಗಿ ಚಲಿಸಲಾಗದ ಕಾರಣದಿಂದ ಎಲ್ಲೆಂದರಲ್ಲಿ ವಾಹನಗಳು ಸಾಲುಸಾಲಾಗಿ ನಿಂತಿರುವುದು ಸಾಮಾನ್ಯ ದೃಶ್ಯವಾಗಿರುತ್ತದೆ. ಅದೇ ರೀತಿ 2021ರ ಅಕ್ಟೋಬರ್ 9ರಂದು ಬೆಂಗಳೂರಿನಲ್ಲಿ ಹೆಚ್ಚು ಮಳೆಯಾದ ಕಾರಣದಿಂದ ಈ ಸಂದರ್ಭದಲ್ಲಿ ಸಂಚಾರ ದಟ್ಟಣೆ ಹೆಚ್ಚಿನ ಮಟ್ಟದಲ್ಲಿ ವರದಿಯಾಗಿದೆ.
ಇದನ್ನೂ ಓದಿ: Bengaluru Traffic Police: ಹಾಫ್ ಹೆಲ್ಮೆಟ್ ವಿರುದ್ಧ ಪೊಲೀಸರ ಗದಾ ಪ್ರಹಾರ..!
ಖಾಸಗಿ ವಾಹನ ಹೆಚ್ಚಳ: ಇನ್ನೊಂದೆಡೆ, ಕೋವಿಡ್ ಸಾಂಕ್ರಾಮಿಕ ಹೆಚ್ಚಳದಿಂದ ಜನರು ಸಾಮಾಜಿಕ ಅಂತರ ಕಾಪಾಡಿಕೊಳ್ಳುವ ದೃಷ್ಟಿಯಿಂದ ಸಾರ್ವಜನಿಕ ವಾಹನಗಳ ಬಳಕೆ ಕಡಿಮೆ ಮಾಡಿದ್ದಾರೆ. ಇದರಿಂದ ಸಂಚಾರ ದಟ್ಟಣೆ ಕಡಿಮೆಯಾದರೂ ರಸ್ತೆಗಿಳಿಯುತ್ತಿರುವ ಖಾಸಗಿ ವಾಹನಗಳ ಸಂಖ್ಯೆ ಹಿಂದೆಂದಿಗಿಂತಲು ಹೆಚ್ಚವಾಗಿದೆ. ಲಾಕ್ಡೌನ್ ಪರಿಣಾಮದಿಂದ ಬಹುತೇಕರು ಖಾಸಗಿ ವಾಹನಗಳ ಮೊರೆ ಹೋಗಿದ್ದಾರೆ.
ಇನ್ನೊಂದು ಮಹತ್ವದ ಬೆಳವಣಿಗೆಯೆಂದರೆ, ಖಾಸಗಿ ವಾಹನಗಳ ಮೊರೆ ಹೋಗಿರುವ ಬಹುತೇಕ ಜನರು ಎಲೆಕ್ಟ್ರಿಕ್ ವಾಹನ ಖರೀದಿಗೆ ಆಸಕ್ತಿ ತೋರಿದ್ದಾರೆ ಎನ್ನಲಾಗಿದೆ. ಆರ್ಟಿಒ ಮಾಹಿತಿ ಪ್ರಕಾರ 2018ರಲ್ಲಿ ಕೇವಲ 3,806 ವಿದ್ಯುತ್ ವಾಹನ ನೋಂದಣಿಯಾಗಿತ್ತು, 2021ರ ನವೆಂಬರ್ ವೇಳೆಗೆ ಈ ಪ್ರಮಾಣ 22, 264ಕ್ಕೆ ಏರಿಕೆಯಾಗಿದೆ. ಅದರಲ್ಲೂ 19, 615 ದ್ವಿಚಕ್ರ ವಾಹನ ನೋಂದಣಿಯಾಗಿದೆ. ಪ್ರಸ್ತುತ ಬೆಂಗಳೂರಿನಲ್ಲಿ 163 ಇವಿ ಚಾರ್ಜಿಂಗ್ ಕೇಂದ್ರವನ್ನು ತೆರೆಯಲಾಗಿದೆ.
2019 ರಲ್ಲಿ, ಸಂಚಾರ ದಟ್ಟಣೆಯಲ್ಲಿ ಬೆಂಗಳೂರು ಪ್ರಪಂಚದಾದ್ಯಂತದ ಇತರ ನಗರಗಳಿಗೆ ಹೋಲಿಸಿದರೆ ಅಗ್ರಸ್ಥಾನದಲ್ಲಿದೆ ಎಂದು ವರದಿ ತಿಳಿಸಿತ್ತು. ಮುಂಬೈ, ಪುಣೆ ಮತ್ತು ದೆಹಲಿ ನಗರಗಳು ಕ್ರಮವಾಗಿ 4, 5 ಮತ್ತು 8 ನೇ ಸ್ಥಾನದಲ್ಲಿದ್ದವು. ಜಾಗತಿಕ ಸಂಚಾರ ಸೂಚ್ಯಂಕದ ಹತ್ತನೇ ಆವೃತ್ತಿಯು ಪ್ರಕಾರ, ಮುಂಬೈನಲ್ಲಿ ಒಟ್ಟಾರೆ ಸಂಚಾರ ದಟ್ಟಣೆಯ ಮಟ್ಟವು ಶೇ.53ರಷ್ಟಿದೆ. ಇದು 2019 ಕ್ಕಿಂತ ಶೇ. 12ರಷ್ಟು ಕಡಿಮೆಯಾಗಿದೆ.
ಕೊರೋನಾ ವೈರಸ್ ಹಾಗೂ ಲಾಕ್ಡೌನ್ ಕಾರಣದಿಂದ ಬೆಂಗಳೂರು ಸೇರಿದಂತೆ ಇತರ ನಗರಗಳಲ್ಲಿನ ಸಂಚಾರ ದಟ್ಟಣೆ ಕಳೆದ ಹತ್ತು ವರ್ಷಗಳಲ್ಲೇ ಮೊದಲ ಬಾರಿಗೆ ಅತಿ ಹೆಚ್ಚು ಇಳಿಮುಖವಾಗಿದೆ ಎಂದು ವರದಿ ಉಲ್ಲೇಖಿಸಿದೆ.