License expired ಬೆಂಗಳೂರಲ್ಲಿ ಅಗತ್ಯ ಲೈಸೆನ್ಸ್ ಇಲ್ಲದೆ ಕಾರ್ಯನಿರ್ವಹಿಸುತ್ತಿದೆ ಒಲಾ, ಊಬರ್, ಸಾರಿಗೆ ಇಲಾಖೆ ವಾರ್ನಿಂಗ್!

By Suvarna NewsFirst Published Dec 30, 2021, 10:04 PM IST
Highlights

*ಆ್ಯಪ್‌ ಆಧಾರಿತ ವಾಹನಗಳಾದ ಓಲಾ, ಊಬರ್

* ಪ್ರಯಾಣಿಕರಿಗೆ ಸಂಚಾರ ಸೇವೆ ಒದಗಿಸುವ ಕ್ಯಾಬ್‌ಗಳು

* ಬೆಂಗಳೂರಿನಲ್ಲಿ ಇವುಗಳ ಕಾರ್ಯಾಚರಣೆಯ ಅವಧಿ ಪೂರ್ಣ

ಬೆಂಗಳೂರು(ಡಿ.30): ನೀವು ಬೆಂಗಳೂರು ಸೇರಿದಂತೆ ಇತರ ಮೆಟ್ರೋಪಾಲಿಟನ್‌ ನಗರದಲ್ಲಿದ್ದರೆ, ಆ್ಯಪ್‌ ಆಧಾರಿತ ಕ್ಯಾಬ್‌ಗಳಾದ ಓಲಾ (Ola), ಊಬರ್‌ (Uber) ಸೇವೆಯನ್ನು ಒಮ್ಮೆಯಾದರೂ ಬಳಸಿಕೊಂಡಿರುತ್ತೀರಾ. ಅದರಲ್ಲೂ ಬೆಂಗಳೂರು ನಗರದಲ್ಲಿ ಈ ಕ್ಯಾಬ್‌ಗಳ ಬಳಕೆ ಹೆಚ್ಚಾಗಿಯೇ ಇದೆ. ಆದರೆ, ಈ ನಗರದಲ್ಲಿ ಈ ಕ್ಯಾಬ್‌ಗಳ ಕಾರ್ಯನಿರ್ವಹಿಸುವ ಪರವಾನಗಿಯ ಅವಧಿ ಮುಗಿದಿದ್ದು, ಅದನ್ನು ಇನ್ನೂ ನವೀಕರಿಸಿಲ್ಲ ಎಂಬುದು ನಿಮಗೆ ತಿಳಿದಿದೆಯೇ?

ಈ ವಿಷಯವನ್ನು ರಾಜ್ಯ ಸಾರಿಗೆ ಇಲಾಖೆಯೇ (Transport department) ಸ್ಪಷ್ಟಪಡಿಸಿದೆ.  ಈ ಕುರಿತು ಮಾಧ್ಯಮವೊಂದಕ್ಕೆ ಮಾಹಿತಿ ನೀಡಿರುವ ಸಾರಿಗೆ ಮತ್ತು ರಾಜ್ಯ ಸಾರಿಗೆ ಪ್ರಾಧಿಕಾರದ ಹೆಚ್ಚುವರಿ ಆಯುಕ್ತ ಎಲ್‌ ಹೇಮಂತ್‌ಕುಮಾರ್‌, ಈ ಎರಡು ಕಂಪನಿಗಳಿಗೆ ಕರ್ನಾಟಕ ಆನ್‌-ಡಿಮ್ಯಾಂಡ್‌ (On-demand) ಸಾರಿಗೆ ತಂತ್ರಜ್ಞಾನ ಬಳಕೆದಾರರ ನಿಯಮಗಳು-2016ರ ಅಡಿಯಲ್ಲಿ ಪರವಾನಗಿ ನೀಡಲಾಗಿತ್ತು. ಓಲಾ ಕಂಪನಿಗೆ ನೀಡಿದ್ದ ಪರವಾನಗಿ (licence) 2021ರ ಜೂನ್ 19ರಂದು ಮುಕ್ತಾಯಗೊಂಡಿದೆ. ಆದರೆ, ಅವರು ಇನ್ನೂ ಅದರನ್ನು ನವೀಕರಿಸಿಲ್ಲ. ಊಬರ್‌ನ ಪರವಾನಗಿ ಡಿಸೆಂಬರ್ 29ಕ್ಕೆ ಅಂತ್ಯಗೊಂಡಿದೆ. ಊಬರ್‌ ಈಗಾಗಲೇ ಪರವಾನಗಿ ನವೀಕರಣಕ್ಕಾಗಿ ಅರ್ಜಿ ಸಲ್ಲಿಸಿದ್ದು, ಅದನ್ನು ಪರಿಶೀಲಿಸಲಾಗುತ್ತಿದೆ ಎಂದರು,

ಓಲಾ, ಉಬರ್‌, ಸ್ವಿಗ್ಗಿ, ಜೊಮ್ಯಾಟೋ ಸೇವೆ ದುಬಾರಿ: ಜ.1ರಿಂದ ಮಹತ್ವದ ಬದಲಾವಣೆ!

ಪರವಾನಗಿ ಇಲ್ಲದೆ ಕ್ಯಾಬ್‌ಗಳು ರಸ್ತೆಗಳಲ್ಲಿ ಸಂಚರಿಸುತ್ತಿರುವ ಹಾಗೂ ಕಾರ್ಯನಿರ್ವಹಿಸುತ್ತಿರುವ ಓಲಾ ವಿರುದ್ಧ ಅಗತ್ಯ ಕ್ರಮ ಕೈಗೊಳ್ಳುವ ಕುರಿತು ಕಾನೂನು ಇಲಾಖೆಯ ಅಭಿಪ್ರಾಯ ಸಂಗ್ರಹಿಸಲಾಗುತ್ತಿದೆ ಎಂದಿದ್ದಾರೆ. ಓಲಾ ಮತ್ತು ಊಬರ್‌ ಎರಡೂ ಕಂಪನಿಗಳಿಗೆ 2016ರಿಂದ 2021ರ ನಡುವೆ ಬೆಂಗಳೂರು ನಗರದಲ್ಲಿ ಕ್ಯಾಬ್‌ಗಳ ಕಾರ್ಯನಿರ್ವಹಣೆಗೆ ಪರವಾನಗಿ ನೀಡಲಾಗಿತ್ತು.

ಜುಲೈ ತಿಂಗಳಲ್ಲಿ ಸಾರಿಗೆ ಇಲಾಖೆ ಓಲಾ ಹಾಗೂ ಊಬರ್‌ ಕಂಪನಿ ಕಚೇರಿಗಳ ಮೇಲೆ ದಾಳಿ ನಡೆಸಿತ್ತು. ಜೊತೆಗೆ, ಪರವಾನಗಿ ನವೀಕರಿಸಿಕೊಳ್ಳದಿದ್ದರೆ, ಅದರ ದಾಳಿಯನ್ನು ಇನ್ನಷ್ಟು ತೀವ್ರಗೊಳಿಸುವುದಾಗಿ ಎಚ್ಚರಿಕೆ ನೀಡಿತ್ತು. ರಾಜ್ಯದ ಆನ್‌-ಡಿಮ್ಯಾಂಡ್‌ ಸಾರಿಗೆ ಟೆಕ್ನಾಲಜಿ ಅಗ್ರೆಗೇಟರ್ಸ್‌ ರೂಲ್ಸ್‌, 2016ರ ಅನುಸಾರ ಓಲಾ ಮತ್ತು ಊಬರ್ ಆ್ಯಪ್‌ ಆಧಾರಿತ ಸೇವೆ ನೀಡುತ್ತಿರುವ ತಮ್ಮ ವಾಹನಗಳು ಹಾಗೂ ಅದರೊಂದಿಗೆ ಸಂಪರ್ಕ ಹೊಂದಿರುವ ಚಾಲಕರ ವಿವರಗಳನ್ನು ಪ್ರತಿ ತಿಂಗಳು ಒದಗಿಸಬೇಕು. ಇದಕ್ಕೆ ಸಂಬಂಧಿಸಿದ ದಾಖಲೆಗಳನ್ನು ಪರಿಶೀಲಿಸಲು ದಾಳಿ ನಡೆಸಲಾಗಿದೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದರು. ಜೊತೆಗೆ, ಕ್ಯಾಬ್‌ಗಳು ಪ್ರಯಾಣಿಕರಿಂದ ಸಂಗ್ರಹಿಸುವ ಮೊತ್ತ ಮತ್ತು ಚಾಲಕರಿಗೆ ಪಾವತಿಸುವ ಮೊತ್ತದ ಕುರಿತು ಕೂಡ ಮಾಹಿತಿ ಸಂಗ್ರಹಿಸಬೇಕು. ಆದರೆ, ಈ ಕಂಪನಿಗಳು ಈ ಕುರಿತು ಸ್ಪಷ್ಟ ಮಾಹಿತಿ ಒದಗಿಸಿರಲಿಲ್ಲ. ಜೊತೆಗೆ, ಪರವಾನಗಿ ಪಡೆಯುವ ಸಂದರ್ಭದಲ್ಲಿ ಒದಗಿಸಿರುವ ವಿಳಾಸಗಳನ್ನು ಕೂಡ ಯಾವುದೇ ಮಾಹಿತಿ ನೀಡದೆ ಬದಲಿಸಲಾಗಿದೆ ಎಂದು ಅವರು ಆರೋಪಿಸಿದ್ದರು.

Approximate Drop Locations ಕ್ಯಾನ್ಸಲೇಶನ್ ತಪ್ಪಿಸಲು ನಿಗದಿತ ಸ್ಥಳಕ್ಕೆ ಡ್ರಾಪ್ ಮಾಡಲು ಮುಂದಾದ OLA!

ಆದರೆ, ಓಲಾ ಮಾತ್ರ ಬೇರೆಯೇ ರಾಗ ಹಾಡುತ್ತಿದೆ. ಓಲಾ ವಾದವೇನೆಂದರೆ, ಕೋವಿಡ್‌-19ನ (Covid-19) ಸಾಂಕ್ರಮಿಕ ಹಾಗೂ ಇತರ ನಿರ್ಬಂಧಗಳ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಎಲ್ಲಾ ವಾಹನಗಳ ದಾಖಲೆಗಳು ಹಾಗೂ ಪರವಾನಗಿಯನ್ನು ವಿಸ್ತರಿಸಿತ್ತು. ಆದ್ದರಿಂದ ತಾವು ಪರವಾನಗಿಗೆ ಅರ್ಜಿ ಸಲ್ಲಿಸಿರಲಿಲ್ಲ. ಆದರೆ, ನಂತರ ಕೇಂದ್ರ ಸರ್ಕಾರ 2021ರ ಅಕ್ಟೋಬರ್ 31ರ ನಂತರ ಈ ದಾಖಲೆಗಳು ಮತ್ತು ಪರವಾನಗಿಗೆ ವಿನಾಯಿತಿ ಮುಂದುವರಿಸಲು ನಿರಾಕರಿಸಿದೆ.

2019ರ ಮಾರ್ಚ್‌ನಲ್ಲಿ ರಾಜ್ಯ ಸಾರಿಗೆ ಪ್ರಾಧಿಕಾರ ಎಎನ್‌ಐ ಟೆಕ್ನಾಲಜೀಸ್‌ಗೆ ನೋಟಿಸ್‌ ಜಾರಿ ಮಾಡಿ, ನಗರದಲ್ಲಿ ಕ್ಯಾಬ್‌ಗಳನ್ನು ಚಾಲನೆ ಮಾಡಿದ್ದಕ್ಕೆ  ಆರು ತಿಂಗಳ ಅವಧಿಗೆ ಪರವಾನಗಿ ರದ್ದುಗೊಳಿಸಿತ್ತು. ಈ ಕಂಪನಿ ಓಲಾ ಕಾರುಗಳನ್ನು ನಿರ್ವಹಿಸುತ್ತದೆ. ಆದರೆ, ಓಲಾ ದಂಡ ಪಾವತಿಸಿದ ನಂತರ ಎರಡೇ ದಿನಗಳಲ್ಲಿ ಪರವಾನಗಿ ನವೀಕರಣಗೊಂಡಿತ್ತು.

click me!