
Business Desk:ಬಿಹಾರದ ಯೂಟ್ಯೂಬರ್ ಮನೀಶ್ ಕಶ್ಯಪ್ ಇತ್ತೀಚಿನ ದಿನಗಳಲ್ಲಿ ಭಾರೀ ಚರ್ಚೆಯಲ್ಲಿದ್ದಾರೆ. ತಮಿಳುನಾಡಿನಲ್ಲಿ ಬಿಹಾರದ ವಲಸೆ ಕಾರ್ಮಿಕರ ಮೇಲೆ ದಾಳಿ ನಡೆಸಲಾಗುತ್ತಿದೆ ಎಂಬ ನಕಲಿ ವಿಡಿಯೋ ಸೃಷ್ಟಿಸಿ ಅದನ್ನು ಮನೀಶ್ ತಮ್ಮ ಯೂಟ್ಯೂಬ್ ಚಾನೆಲ್ 'ಸಚ್ ತಕ್' ನಲ್ಲಿ ಅಪ್ ಲೋಡ್ ಮಾಡಿದ್ದಾರೆ. ಇದಾದ ಬಳಿಕ ಪೊಲೀಸರು ಇವರ ವಿರುದ್ಧ ಸುಳ್ಳು ಸುದ್ದಿ ಹಬ್ಬಿಸಿದ ಹಾಗೂ ಎರಡೂ ರಾಜ್ಯಗಳ ನಡುವೆ ವೈಷಮ್ಯದ ಕಿಡಿ ಹತ್ತಿಸಿದ ವಿಚಾರವಾಗಿ ದೂರು ದಾಖಲಿಸಿದ್ದರು. ಕೆಲವು ದಿನಗಳ ಕಾಲ ಪೊಲೀಸರ ಕೈಗೆ ಸೆರೆಸಿಕ್ಕದೆ ತಲೆಮರೆಸಿಕೊಂಡಿದ್ದ ಕಶ್ಯಪ್ ಆ ಬಳಿಕ ಖುದ್ದಾಗಿ ಬಿಹಾರ ಪೊಲೀಸರ ಮುಂದೆ ಶರಣಾಗಿದ್ದರು. ಆರ್ಥಿಕ ಅಪರಾಧ ಘಟಕದ (ಇಒಯು) ಪೊಲೀಸರು ಈ ಪ್ರಕರಣದ ಸಂಬಂಧ ಮನೀಶ್ ಕಶ್ಯಪ್ ಅವರ ವಿಚಾರಣೆ ನಡೆಸುತ್ತಿದ್ದಾರೆ. ಇಂಜಿನಿಯರಿಂಗ್ ಪದವಿ ಪಡೆದಿರುವ ಕಶ್ಯಪ್, ಬಹುರಾಷ್ಟ್ರೀಯ ಕಂಪನಿಗಳಲ್ಲಿ ಕೆಲಸ ಮಾಡೋದನ್ನು ಬಿಟ್ಟು ಯೂಟ್ಯೂಬ್ ಮೂಲಕ ಪತ್ರಕರ್ತನ ಕಾರ್ಯ ಮಾಡುತ್ತಿದ್ದಾರೆ. ಈ ಮೂಲಕ ಅವರು ಲಕ್ಷಾಂತರ ರೂಪಾಯಿ ಆದಾಯ ಗಳಿಸುತ್ತಿದ್ದಾರೆ. ಮನೀಶ್ ವಿರುದ್ಧ ಪ್ರಕರಣ ದಾಖಲಾದ ಹಿನ್ನೆಲೆಯಲ್ಲಿ ಅವರ ಖಾತೆಗಳನ್ನು ಪರಿಶೀಲಿಸಿದಾಗ 40ಲಕ್ಷ ರೂ. ಪತ್ತೆಯಾಗಿದೆ.
ಯಾರು ಈ ಮನೀಶ್ ಕಶ್ಯಪ್?
ಪಶ್ಚಿಮ ಚಂಪಾರಣ ಜಿಲ್ಲೆಯ ಸಣ್ಣ ಹಳ್ಳಿ ಡೂಮ್ರಿ ಮಹನವಾದಲ್ಲಿ ಜನಿಸಿದ ಮನೀಶ್ ಕಶ್ಯಪ್ ಅವರ ನಿಜ ನಾಮ ತ್ರಿಪುರಾರಿ ಕುಮಾರ್ ತಿವಾರಿ. ಅವರ ತಂದೆ ಉದಿತ್ ಕುಮಾರ್ ತಿವಾರಿ ಭಾರತೀಯ ಸೇನೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಗ್ರಾಮದಲ್ಲೇ ಆರಂಭಿಕ ಶಿಕ್ಷಣ ಪೂರ್ಣಗೊಳಿಸಿದ ಬಳಿಕ ಹೆಚ್ಚಿನ ಶಿಕ್ಷಣಕ್ಕಾಗಿ ಕಶ್ಯಪ್ ಮಹಾರಾಷ್ಟ್ರಕ್ಕೆ ತೆರಳಿದರು. 2016ರ್ಲಿ ಮಹಾರಾಷ್ಟ್ರದ ಪುಣೆ ಸಾವಿತ್ರಿಭಾಯಿ ಫುಲೆ ವಿಶ್ವವಿದ್ಯಾಲಯದಲ್ಲಿ ಸಿವಿಲ್ ಇಂಜಿನಿಯರಿಂಗ್ ಪದವಿ ಪೂರ್ಣಗೊಳಿಸಿದರು. ಶಿಕ್ಣ ಪೂರ್ಣಗೊಳಿಸಿದ ಬಳಿಕ ಉದ್ಯೋಗ ಮಾಡುವ ಬದಲು ಮನೀಶ್ ಮರಳಿ ತಮ್ಮ ಗ್ರಾಮಕ್ಕೆ ಹಿಂತಿರುಗಿದರು.
Success Story: ಶಿಕ್ಷಕಿಯಾಗಿ ವೃತ್ತಿ ಶುರು ಮಾಡಿದ ಮಹಿಳೆ ಈಗ ಲಕ್ಷಾಂತರ ರೂ ಗಳಿಸ್ತಾರೆ
ವಿಡಿಯೋ ಮಾಡಲು ಪ್ರಾರಂಭಿಸಿದ್ದು ಹೇಗೆ?
ಇಂಜಿನಿಯರಿಂಗ್ ಪದವಿ ಬಳಿಕ ಉದ್ಯೋಗ ಹುಡುಕುವ ಬದಲು ಗ್ರಾಮಕ್ಕೆ ಹಿಂತಿರುಗಿದ ಮನೀಶ್ ಫೇಸ್ ಬುಕ್ ಹಾಗೂ ಯೂಟ್ಯೂಬ್ ನಲ್ಲಿ ಸ್ಥಳೀಯ ಸುದ್ದಿಗಳ ವಿಡಿಯೋ ಮಾಡಿ ಅಪ್ಲೋಡ್ ಮಾಡಲು ಪ್ರಾರಂಭಿಸಿದರು. ಸರ್ಕಾರದ ತಪ್ಪುಗಳು, ಭ್ರಷ್ಟಾಚಾರದ ಕುರಿತು ವಿಡಿಯೋಗಳನ್ನು ಕೂಡ ಮಾಡಲು ಪ್ರಾರಂಭಿಸಿದರು. 'ಸಚ್ ತಕ್' ಎಂಬ ಹೆಸರಿನ ಯೂಟ್ಯೂಬ್ ಚಾನೆಲ್ ಪ್ರಾರಂಭಿಸಿದ ಮನೀಶ್, ಅದರ ಮೂಲಕ ವಿಡಿಯೋಗಳನ್ನು ಹರಿಬಿಡತೊಡಗಿದರು. 2019ರಲ್ಲಿ ಬಿಹಾರದ ವೈದ್ಯಕೀಯ ಕಾಲೇಜಿನಲ್ಲಿ ಕಿಂಗ್ ಎಡ್ವರ್ಡ್ -7 ಪ್ರತಿಮೆಯನ್ನು ಧ್ವಂಸ ಮಾಡಲಾಗಿತ್ತು. ಈ ಕೃತ್ಯದಲ್ಲಿ ಮನೀಶ್ ಕೂಡ ಶಾಮೀಲಾಗಿದ್ದರು. ಈ ಪ್ರಕರಣದ ಬಳಿಕ ಮನೀಶ್ ಬಗ್ಗೆ ಹೆಚ್ಚಿನ ಚರ್ಚೆಗಳು ನಡೆಯಲು ಪ್ರಾರಂಭವಾದವು. ಮನೀಶ್ ಯೂಟ್ಯೂಬ್ ಚಾನೆಲ್ ಗೆ 63ಲಕ್ಷಕ್ಕಿಂತಲೂ ಅಧಿಕ ಸಬ್ ಸ್ಕ್ರೈಬರ್ ಇದ್ದಾರೆ. ಇನ್ನು ಇನ್ ಸ್ಟ್ರಾಗ್ರಾಮ್ ನಲ್ಲಿ ಮನೀಶ್ ಅವರಿಗೆ 1.6ಲಕ್ಷ ಫಾಲೋವರ್ಸ್ ಇದ್ದಾರೆ. ಹಾಗೆಯೇ ಫೇಸ್ ಬುಕ್ ನಲ್ಲಿ ಮನೀಶ್ 4 ಕೋಟಿಗಿಂತಲೂ ಅಧಿಕ ಫಾಲೋವರ್ಸ್ ಹೊಂದಿದ್ದಾರೆ.
ಯೂಟ್ಯೂಬ್ ಮೂಲಕವೇ ಕೋಟ್ಯಧೀಶೆಯಾದ ಪ್ರಾಜಕ್ತಾ ಕೋಲಿ; ಈಕೆ ತಿಂಗಳ ಆದಾಯ ಕೇಳಿದ್ರೆ ಶಾಕ್ ಆಗ್ತೀರಾ!
ಗಳಿಕೆ ಎಷ್ಟು?
ಯೂಟ್ಯೂಬ್ ಮೂಲಕ ಮನೀಶ್ ಕಶ್ಯಪ್ ಲಕ್ಷಾಂತರ ರೂಪಾಯಿ ಗಳಿಸಿದ್ದಾರೆ. ಮನೀಶ್ ವಿರುದ್ಧ ಪ್ರಕರಣ ದಾಖಲಾದ ಹಿನ್ನೆಲೆಯಲ್ಲಿ ಅವರ ಬ್ಯಾಂಕ್ ಖಾತೆಗಳನ್ನು ಪೊಲೀಸರು ಜಪ್ತಿ ಮಾಡಿದಾಗ ಸುಮಾರು 42ಲಕ್ಷ ರೂ. ಇರುವುದು ಪತ್ತೆಯಾಗಿದೆ. ಮನೀಶ್ ತಮ್ಮ ವಿಡಿಯೋಗಳು, ಅವುಗಳ ವೀಕ್ಷಣೆ ಹಾಗೂ ಜಾಹೀರಾತುಗಳ ಮೂಲಕ 10ರಿಂದ 19.32 ಲಕ್ಷ ರೂ. ಗಳಿಸುತ್ತಾರೆ. ಮನೀಶ್ ಕಶ್ಯಪ್ ಅವರ ಒಟ್ಟು ಸಂಪತ್ತು 63 ಲಕ್ಷ ರೂ. ಇದೆ ಎಂಬ ಅನುಮಾನವನ್ನು ಕೂಡ ಪೊಲೀಸರು ವ್ಯಕ್ತಪಡಿಸಿದ್ದಾರೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.