
ಲಂಡನ್[ಜು.೩೧]: ಬ್ಯಾಂಕುಗಳಿಗೆ ಸಾವಿರಾರು ಕೋಟಿ ರೂಪಾಯಿ ವಂಚಿಸಿ ಲಂಡನ್‌ಗೆ ಪರಾರಿಯಾಗಿರುವ ಮದ್ಯದ ದೊರೆ ವಿಜಯ್ ಮಲ್ಯ ವರಿಗೆ ಲಂಡನ್ ನ್ಯಾಯಾಲಯ ಜಾಮೀನು ನೀಡಿದೆ.
ಮಲ್ಯ ಅವರನ್ನು ಭಾರತಕ್ಕೆ ಹಸ್ತಾಂತರಿಸುವ ಕುರಿತು ವಿಚಾರಣೆ ನಡೆಸಿದ ಇಲ್ಲಿನ ವೆಸ್ಟ್ ಮಿನಿಸ್ಟರ್ ನ್ಯಾಯಾಲಯ, ಮಲ್ಯ ಅವರಿಗೆ ಜಾಮೀನು ಮಂಜೂರು ಮಾಡಿದ್ದಲ್ಲದೇ , ವಿಚಾರಣೆಯನ್ನು ಸೆಪ್ಟೆಂಬರ್ 12 ಕ್ಕೆ ಮುಂದೂಡಿದೆ.
ಹಸ್ತಾಂತರ ವಾರೆಂಟ್‌ನಲ್ಲಿ ಬಂಧನಕ್ಕೊಳಗಾದ ನಂತರ ಜಾಮೀನು ಪಡೆದು ಕಳೆದ ವರ್ಷದ ಏಪ್ರಿಲ್ ತಿಂಗಳಿನಿಂದ ವಿಜಯ್ ಮಲ್ಯ ಲಂಡನ್‌ನಲ್ಲಿಯೇ ನೆಲೆಸಿದ್ದಾರೆ. 9 ಸಾವಿರ ಕೋಟಿ ರೂಪಾಯಿಗಳ ಹಣ ವರ್ಗಾವಣೆ ಹಾಗೂ ಭಾರತಕ್ಕೆ ಹಸ್ತಾಂತರ ಪ್ರಕರಣದಲ್ಲಿ ಕಾನೂನು ಹೋರಾಟ ನಡೆಸುತ್ತಿದ್ದಾರೆ.
ಮಗ ಸಿದ್ಧಾರ್ಥ್ ಜೊತೆಗೆ ನ್ಯಾಯಾಲಯಕ್ಕೆ ಆಗಮಿಸಿದ ವಿಜಯ್ ಮಲ್ಯ, ತಮ್ಮ ವಿರುದ್ಧ ಸಿಬಿಐ ಹಾಗೂ ಜಾರಿ ನಿರ್ದೇಶನಾಲಯ ಮಾಡುತ್ತಿರುವ ಆರೋಪಗಳು ಸುಳ್ಳು ಎಂದು ವಾದ ಮಂಡಿಸಿದರು.
ಒಂದು ವೇಳೆ ಮಲ್ಯ ಅವರನ್ನು ಲಂಡನ್ ನಿಂದ ಹಸ್ತಾಂತರಿಸಿದ್ದರೆ ಅವರನ್ನು ಮುಂಬೈಯ ಅರ್ಥರ್ ರೋಡ್ ನಲ್ಲಿರುವ ಕಾರಾಗೃಹದಲ್ಲಿಡುವ ಸಾಧ್ಯತೆ ಇದೆ. ಈ ಕಾರಾಗೃಹದಲ್ಲಿನ ಬ್ಯಾರಕ್ 12ರ ಪೋಟೋಗಳನ್ನು ನೀಡುವಂತೆ ನ್ಯಾಯಾಧೀಶರು ಸೂಚಿಸಿದ್ದಾರೆ ಎಂದು ತಿಳಿದುಬಂದಿದೆ. ಮಾರ್ಚ್ 2016 ರಿಂದಲೂ ವಿಜಯ್ ಮಲ್ಯ ಲಂಡನ್‌ನಲ್ಲಿದ್ದು, ಕಳೆದ ವರ್ಷದ ಡಿಸೆಂಬರ್ 4 ರಿಂದಲೂ ಹಸ್ತಾಂತರ ಪ್ರಕರಣದ ವಿಚಾರಣೆ ನಡೆಯುತ್ತಿದೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.